ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜಂಟಿ ಸರ್ವೆಗೆ ಸಿಎಂ ಕಚೇರಿ ಅಡ್ಡಿ ’

ಶಾಸಕ ರಮೇಶ್‌ಕುಮಾರ್‌ ವಿರುದ್ಧದ ಭೂಕಬಳಿಕೆ ಆರೋಪ
Last Updated 20 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಬೆಂಗಳೂರು: ಶಾಸಕ ಕೆ.ಆರ್‌. ರಮೇಶ್‌ಕುಮಾರ್‌ ಅವರು ಒತ್ತುವರಿ ಮಾಡಿದ್ದಾರೆ ಎನ್ನಲಾದ ಅರಣ್ಯ ಜಮೀನಿನ ಜಂಟಿ ಸರ್ವೆಗೆ 2009ರಲ್ಲಿ ಆಗಿನ ಮುಖ್ಯಮಂತ್ರಿಯವರ ಕಚೇರಿ ಯೇ ಅಡ್ಡಿಪಡಿಸಿತ್ತು ಎಂದು ಆರೋಪಿಸಿದ ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್‌.ಆರ್‌.ಹಿರೇಮಠ, ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಬಿಡುಗಡೆ ಮಾಡಿದರು.

ಶ್ರೀನಿವಾಸಪುರ ತಾಲ್ಲೂಕಿನ ಜಿನಗಲಗುಂಟೆ ಹೋಬಳಿಯ ಹೊಸಹುಡ್ಯ ಗ್ರಾಮದಲ್ಲಿ ರಮೇಶ್‌ಕುಮಾರ್‌ ಅವರು ಒತ್ತುವರಿ ಮಾಡಿದ್ದಾರೆ ಎನ್ನಲಾದ ಜಮೀನನ್ನು ವಶಕ್ಕೆ ತೆಗೆದುಕೊಳ್ಳುವಂತೆ ಸ್ಥಳೀಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಆದೇಶ ಹೊರಡಿಸಿದ್ದರು. ಈ ಆದೇಶ ಪ್ರಶ್ನಿಸಿ ರಮೇಶ್‌ಕುಮಾರ್‌ ಅವರು ಬೆಂಗಳೂರು ವೃತ್ತದ ಅರಣ್ಯ ಸಂರಕ್ಷಣಾಧಿಕಾರಿಗೆ ಅರ್ಜಿ ಸಲ್ಲಿಸಿದ್ದರು. ವಿವಾದಿತ ಜಮೀನಿನ ಜಂಟಿ ಸರ್ವೆ ನಡೆಸಿ ವರದಿ ಸಲ್ಲಿಸುವಂತೆ ಶ್ರೀನಿವಾಸಪುರ ತಹಶೀಲ್ದಾರ್‌ ಮತ್ತು ವಲಯ ಅರಣ್ಯಾಧಿಕಾರಿಗೆ ಅರಣ್ಯ ಸಂರಕ್ಷಣಾಧಿಕಾರಿಯವರು ಆದೇಶಿಸಿದ್ದರು ಎಂದು ಹಿರೇಮಠ ಅವರು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘2009ರ ಡಿಸೆಂಬರ್‌ 12ರಂದು ವಿವಾದಿತ ಜಮೀನಿನ ಜಂಟಿ ಸರ್ವೆ ನಿಗದಿಯಾಗಿತ್ತು. ಸರ್ವೆ ಕಾರ್ಯದ ಸಂದರ್ಭ ದಲ್ಲಿ ಅನಿರೀಕ್ಷಿತ ಘಟನೆಗಳು ಸಂಭವಿಸಬಹುದು ಎಂಬ ಆತಂಕದಿಂದ ಕೋಲಾರ ಉಪ ಅರಣ್ಯ ಸಂರಕ್ಷಣಾಧಿಕಾರಿ­ಯವರು ಪೊಲೀಸ್‌ ಭದ್ರತೆಯನ್ನೂ ಕೋರಿದ್ದರು. ಆದರೆ, ಡಿಸೆಂಬರ್‌ 4ರಂದು ಆಗಿನ ಮುಖ್ಯಮಂತ್ರಿಯವರ ಜಂಟಿ ಕಾರ್ಯದರ್ಶಿಯವರು ಉಪ ಅರಣ್ಯ ಸಂರಕ್ಷಣಾಧಿಕಾರಿಗೆ ಕರೆ ಮಾಡಿ ಮುಂದಿನ ಆದೇಶದವರೆಗೆ ಜಂಟಿ ಸರ್ವೆ ನಡೆಸದಂತೆ ತಾಕೀತು ಮಾಡಿದ್ದರು. ಅದರ ಪ್ರಕಾರ ಸರ್ವೆ ಕಾರ್ಯವನ್ನು ಕೈಬಿಡಲಾಗಿತ್ತು’ ಎಂದರು. ಈ ಸಂಬಂಧ ಆಗಿನ ಉಪ ಅರಣ್ಯ ಸಂರಕ್ಷಣಾಧಿಕಾರಿಯವರು ಬೆಂಗಳೂರು ವೃತ್ತದ ಅರಣ್ಯ ಸಂರಕ್ಷಣಾಧಿಕಾರಿಗೆ ಬರೆದಿದ್ದ ಪತ್ರವನ್ನು ಪ್ರದರ್ಶಿಸಿದರು.

ತಮ್ಮ ವಿರುದ್ಧ ಆಧಾರರಹಿತ ಆರೋಪ ಮಾಡಲಾಗುತ್ತಿದೆ ಎಂದು ರಮೇಶ್‌ಕುಮಾರ್‌ ಪದೇ ಪದೇ ಹೇಳಿಕೆ ನೀಡು ತ್ತಿದ್ದಾರೆ. ಅವರ ಕೋರಿಕೆಯಂತೆಯೇ ಸಮಾಜ ಪರಿವರ್ತನಾ ಸಮುದಾಯವು ಎಲ್ಲ ದಾಖಲೆಗಳನ್ನು ಬಿಡುಗಡೆ ಮಾಡುತ್ತಿದೆ. ಮುಖ್ಯಮಂತ್ರಿಯವರ ಕಚೇರಿಯೇ ಒತ್ತುವರಿ ತೆರವು ಕಾರ್ಯಕ್ಕೆ ಅಡ್ಡಿಯಾಗಿತ್ತು ಎಂಬುದನ್ನು ದಾಖಲೆಗಳು ಸ್ಪಷ್ಟವಾಗಿ ಹೇಳುತ್ತಿವೆ. ಇದು ದುರ್ದೈವದ ಸಂಗತಿ ಎಂದರು.

‘ರಮೇಶ್‌ಕುಮಾರ್‌ ಅವರು ಪ್ರತಿ ಸಂದರ್ಭದಲ್ಲೂ ನಾನು ಖರೀದಿದಾರನೇ ಹೊರತು, ಒತ್ತುವರಿದಾರನಲ್ಲ ಎಂದು ಸಬೂಬು ಹೇಳುತ್ತಾರೆ. ಅವರು 61.39 ಎಕರೆ ಅರಣ್ಯ ಜಮೀನನ್ನು ಒತ್ತುವರಿ ಮಾಡಿದ್ದಾರೆ ಎಂಬುದಕ್ಕೆ ದಾಖಲೆಗಳ ಆಧಾರವಿದೆ. ಒತ್ತುವರಿ ತೆರವು ಮಾಡುವವರೆಗೂ ನಮ್ಮ ಹೋರಾಟ ಮುಂದುವರಿಯಲಿದೆ’ ಎಂದು ತಿಳಿಸಿದರು.

ಲಾಡ್‌ ಕುಟುಂಬದಿಂದ ಒತ್ತುವರಿ:
ಬಳ್ಳಾರಿಯಲ್ಲಿ ಲಾಡ್‌ ಕುಟುಂಬದ ರಜಿನಿ ಅಶೋಕ್‌ ಲಾಡ್‌ ಒಡೆತನದ ‘ಅಮೇಜಿಂಗ್‌ ವ್ಯಾಲಿ ರೆಸಾರ್ಟ್‌’ ಎಂಬ ಸಂಸ್ಥೆಯು ಸಂಡೂರು ತಾಲ್ಲೂಕಿನ ನಾರಿಹಳ್ಳದ ಬಳಿ 47.24 ಎಕರೆ ಅರಣ್ಯ ಜಮೀನನ್ನು ಒತ್ತುವರಿ ಮಾಡಿರುವುದು ಅರಣ್ಯ ಇಲಾಖೆ ನಡೆಸಿದ ವಿಚಾರಣೆಯಲ್ಲಿ ದೃಢಪಟ್ಟಿದೆ. ಈ ಪ್ರಕರಣ ವನ್ನು ಸಮಾಜ ಪರಿವರ್ತನಾ ಸಮುದಾಯ ಗಂಭೀರವಾಗಿ ಪರಿಗಣಿಸಿದ್ದು, ಒತ್ತುವರಿ ತೆರವು ಮತ್ತು ಅತಿಕ್ರಮಣದಾ­ರರನ್ನು ಶಿಕ್ಷಿಸಲು ಆಗ್ರಹಿಸಿ ಹೋರಾಟ ಆರಂಭಿಸಲಿದೆ ಎಂದು ಹಿರೇಮಠ ಪ್ರಕಟಿಸಿದರು.

‘ಬಳ್ಳಾರಿ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ­ಯಾಗಿದ್ದ ಪಿ.ಸಿ.ರೇ ಅವರು ಈ ಪ್ರಕರಣದಲ್ಲಿ ರಜಿನಿ ಲಾಡ್‌  ಪರವಾಗಿ ಕೆಲಸ ಮಾಡಿದ್ದರು. ಅರಣ್ಯ ಜಮೀನು ಒತ್ತುವರಿ ಪ್ರಕರಣವನ್ನು ಮುಚ್ಚಿಹಾಕಲು ಪ್ರಭಾವ ಬೀರಿರುವುದು ಪತ್ತೆಯಾಗಿದೆ. ಅವರ ವಿರುದ್ಧ ರಾಜ್ಯ ಸರ್ಕಾರ ತಕ್ಷಣವೇ ಕ್ರಮ ಜರುಗಿಸಬೇಕು’ ಎಂದು ಆಗ್ರಹಿಸಿದರು.

ಅಮೇಜಿಂಗ್‌ ವ್ಯಾಲಿ ರೆಸಾರ್ಟ್‌ ವಿರುದ್ಧ ಕ್ರಮ ಜರುಗಿಸುವಂತೆ ಸಮಾಜ ಪರಿವರ್ತನಾ ಸಮುದಾಯವು ಅರಣ್ಯ ಇಲಾಖೆಯ ಜಾಗೃತ ದಳಕ್ಕೆ ದೂರು ಸಲ್ಲಿಸಿದೆ. ಜಾಗೃತ ದಳದ ಮುಖ್ಯಸ್ಥರಾಗಿರುವ ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಜಿ.ವಿದ್ಯಾಸಾಗರ್‌ ಅವರು ಸ್ಥಳ ತಪಾಸಣೆ ನಡೆಸಿದ್ದು, ಭೂಕಬಳಿಕೆ ನಡೆದಿರುವುದನ್ನು ದೃಢಪಡಿಸಿದ್ದಾರೆ. ಸರ್ಕಾರ ತಕ್ಷಣವೇ ಮಧ್ಯಪ್ರವೇಶಿಸಿ ಒತ್ತುವರಿಯಾಗಿರುವ ಜಮೀನನ್ನು ಅರಣ್ಯ ಇಲಾಖೆಯ ಸ್ವಾಧೀನಕ್ಕೆ ಒಪ್ಪಿಸಬೇಕು ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT