ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜನಪ್ರತಿನಿಧಿ ವಾಪಸ್‌ ಕರೆಸುವ ಅಧಿಕಾರ ನೀಡಿ’

Last Updated 23 ಡಿಸೆಂಬರ್ 2013, 20:16 IST
ಅಕ್ಷರ ಗಾತ್ರ

ಬೆಂಗಳೂರು: ‘ಪ್ರತಿಯೊಬ್ಬ ಚುನಾ­ಯಿತ ಪ್ರತಿನಿಧಿಗೆ ಹಕ್ಕುಗಳ ಜತೆಗೆ ತನ್ನ ಜವಾಬ್ದಾರಿಯನ್ನು ತಿಳಿಸುವ ಕಾನೂನು ಜಾರಿಯಾಗ­ಬೇಕು’  ಎಂದು ನಿವೃತ್ತ ಲೋಕಾಯುಕ್ತ ನ್ಯಾಯ­ಮೂರ್ತಿ ಎನ್.ಸಂತೋಷ್ ಹೆಗ್ಡೆ ಹೇಳಿದರು. ಜನ ಸಂಗ್ರಾಮ ಪರಿಷತ್‌ ಮತ್ತು ಬೆಂಗಳೂರು ಪ್ರೆಸ್‌ಕ್ಲಬ್‌ ನಗರದಲ್ಲಿ ಆಯೋಜಿಸಿದ್ದ ‘ಚುನಾವಣಾ ಸುಧಾ­ರಣೆ­ಗಳು ಮತ್ತು ರಾಜ­ಕಾರಣದ ಜನತಂತ್ರೀಕರಣ’ ಕುರಿತ ರಾಜ್ಯಮಟ್ಟದ ಕಾರ್ಯಾಗಾರದ ಎರಡನೇ ದಿನವಾದ ಸೋಮವಾರ ಅವರು ಮಾತ­ನಾಡಿದರು.

‘ಚುನಾವಣಾ ಕಾಯ್ದೆಯಲ್ಲಿ ತಿದ್ದುಪಡಿ­ಗಳಾಗಬೇಕು ಎಂದು ಹಲವು ದಶಕಗಳಿಂದ ಚರ್ಚೆ ನಡೆಯುತ್ತಿದೆ. ಆದರೆ, ಜನಪ್ರತಿನಿಧಿಗಳು ಈ ಬಗ್ಗೆ ಗಮನ ಹರಿಸಿಲ್ಲ’ ಎಂದರು. ‘ಅಭ್ಯರ್ಥಿಯು ತಾನು ಚುನಾ­ವಣೆಗೆ ಖರ್ಚು ಮಾಡುವ ಹಣವನ್ನು ಚುನಾವಣಾ ಆಯೋಗದಲ್ಲಿ ಠೇವಣಿ ಇಡಬೇಕು. ಆ ಹಣವನ್ನೇ ಪ್ರಚಾರ ಮತ್ತಿತರ ಚುನಾವಣಾ ಕಾರ್ಯಗಳಿಗೆ ಬಳಸಬೇಕು. ಅದಕ್ಕಿಂತ ಹೆಚ್ಚು ಹಣ­ವನ್ನು ಬಳಸಿದರೆ, ಆ ಅಭ್ಯರ್ಥಿಯನ್ನು ಚುನಾವಣೆಯಲ್ಲಿ ಸ್ಪರ್ಧಿಸಲು ಅನರ್ಹ­ಗೊಳಿಸುವ ಕಾನೂನು ಜಾರಿಯಾಗಬೇಕು’ ಎಂದರು.

‘ಜನ ಪ್ರತಿನಿಧಿಗಳು ಜನಪರ ಕಾರ್ಯ­ಗಳನ್ನು ಸಮರ್ಪಕವಾಗಿ ನಿರ್ವಹಿಸದಿದ್ದರೆ, ಅವರನ್ನು ವಾಪಸ್‌ ಕರೆಸಿ­ಕೊಳ್ಳುವ ಅಧಿಕಾರವನ್ನು ಪ್ರಜೆ­ಗಳಿಗೆ ನೀಡಬೇಕು’ ಎಂದು ಅವರು ಹೇಳಿದರು. ‘ಪ್ರತಿ ವರ್ಷ ನಡೆಯುವ ಸಂಸತ್‌ ಕಲಾಪದಲ್ಲಿ ಯಾವ ಜನ ಪ್ರತಿ­ನಿಧಿಯು ಯಾವ ವಿಚಾರದ ಕುರಿತು ಚರ್ಚೆ ನಡೆಸಿದ್ದಾರೆ, ಎಷ್ಟು ಬಾರಿ ಮಾತನಾಡಿದ್ದಾರೆ, ತಮ್ಮ ಕ್ಷೇತ್ರದ ಅಭಿವೃದ್ಧಿಯ ಬಗೆಗೆ ಏನು ಪ್ರಶ್ನೆಗಳನ್ನು ಕೇಳಿದ್ದಾರೆ ಎಂಬ ವರದಿಯನ್ನು ಸಂಸತ್ತಿನ ಕಾರ್ಯದರ್ಶಿ ಬಿಡುಗಡೆ ಮಾಡಬೇಕು’ ಎಂದರು.

‘ಈ ವರದಿಯ ಆಧಾರದ ಮೇಲೆ ಜನ ಪ್ರತಿನಿಧಿಯ ಕಾರ್ಯ ತೃಪ್ತಿ­ದಾಯಕ­ವಾಗಿಲ್ಲ ಎಂದು ಆ ಕ್ಷೇತ್ರದ ಜನ ನಿರ್ಧರಿಸಿದರೆ ಆತನನ್ನು ವಾಪಸ್‌ ಕರೆಸಿಕೊಳ್ಳುವ ಹಕ್ಕನ್ನು ಕ್ಷೇತ್ರದ ಜನತೆಗೆ ನೀಡಬೇಕು. ಈ ರೀತಿ ಜನ ಪ್ರತಿನಿಧಿಗಳನ್ನು ವಾಪಸ್‌ ಕರೆಸಿಕೊಳ್ಳುವ ವಿಚಾರದ ಬಗ್ಗೆ ಸರಿಯಾದ ಚರ್ಚೆ ನಡೆಸಿ ಕಾನೂನನ್ನು ಜಾರಿಗೆ ತರಬೇಕಾಗಿದೆ’ ಎಂದು ಹೇಳಿದರು.

‘ಸುಪ್ರೀಂ ಕೋರ್ಟ್‌ ನೀಡಿರುವ ಮತ ತಿರಸ್ಕರಿಸುವ ಹಕ್ಕನ್ನು ಶೀಘ್ರವಾಗಿ ಜಾರಿಗೆ ತರಬೇಕು. ಭ್ರಷ್ಟಾಚಾರ, ಅಪರಾಧ ಪ್ರಕರಣಗಳಿರುವ ಹಾಗೂ ಎರಡು  ವರ್ಷಗಳಿಗಿಂತ ಹೆಚ್ಚು ಕಾಲ ಜೈಲು ಶಿಕ್ಷೆ ಅನುಭವಿಸಿದ ಜನ ಪ್ರತಿನಿಧಿ ಅಧಿಕಾರದಲ್ಲಿ ಮುಂದುವರೆಯಲು ಅವಕಾಶ ನೀಡಬಾರದು’ ಎಂದರು.

ಮಾಜಿ ಸಚಿವ ಬಿ.ಸೋಮಶೇಖರ್‌ ಮಾತನಾಡಿ, ‘ಜಾತಿ ನಿರ್ಮೂಲನೆ­ಯಾದಾಗ ಮಾತ್ರ ಚುನಾವಣಾ ಸುಧಾ­ರಣೆ ಸಾಧ್ಯ. ಇಂದಿನ ಆಡಳಿತ­ದಲ್ಲಿ ನೈತಿಕತೆಯೇ ಇಲ್ಲವಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯು ಇಂದು ಸ್ವಾರ್ಥ ಸಾಧನೆಗೆ ಬಳಕೆಯಾಗುತ್ತಿದೆ’ ಎಂದು ವಿಷಾದಿಸಿದರು.

ಪತ್ರಕರ್ತ ಎಂ.ಕೆ.ಭಾಸ್ಕರರಾವ್‌ ಮಾತನಾಡಿ, ‘ಪರ್ಯಾಯ ರಾಜ­ಕಾರಣ ಸಾಧ್ಯವಿಲ್ಲ ಎನ್ನುವಂಥ ಪರಿಸ್ಥಿತಿ ಸದ್ಯ ನಿರ್ಮಾಣವಾಗಿದೆ. ಪ್ರಜಾ­ಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರ ವಹಿಸಬೇಕಾಗಿದ್ದ ವಿವಿಧ ಸಂಘಟನೆಗಳು ಹಾಗೂ ಚಳವಳಿಗಳು ಒಡೆದು ಹೋಳಾಗಿವೆ’ ಎಂದರು. ‘ಚುನಾವಣಾ ವ್ಯವಸ್ಥೆ ಬದಲಾವಣೆ ಆಗಬೇಕು. ಆದರೆ, ಈ ವಿಚಾರದಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಅವುಗಳಿಗೆ ಪರಿಹಾರವನ್ನು ಕಂಡುಕೊಳ್ಳದೆ ಬದಲಾವಣೆ ಎನ್ನುವುದು ಸಾಧ್ಯವಿಲ್ಲ’ ಎಂದು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT