ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜನರ ನಿರೀಕ್ಷೆ ಹುಸಿ’

Last Updated 24 ಡಿಸೆಂಬರ್ 2013, 9:40 IST
ಅಕ್ಷರ ಗಾತ್ರ

ಬೆಳಗಾವಿ: ‘ಕಾಂಗ್ರೆಸ್‌ ಪಕ್ಷದಲ್ಲಿರುವ ಕಾಲೆಳೆಯುವ ಸಂಸ್ಕೃತಿಯಿಂದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸರಿಯಾಗಿ ಆಡಳಿತ ನಡೆಸಲು ಆಗು­ತ್ತಿಲ್ಲ. ಈ ಸರ್ಕಾರದ ಮೇಲೆ ಇಟ್ಟಿದ್ದ ಜನರ ನಿರೀಕ್ಷೆಗಳು ಹುಸಿಯಾಗಿವೆ’ ಎಂದು ಮಾಜಿ ಸಚಿವ ಅರವಿಂದ ಲಿಂಬಾವಳಿ ಹೇಳಿದರು.

ಇಲ್ಲಿನ ಮಹಾಂತ ಭವನದಲ್ಲಿ ಸೋಮವಾರ ನಡೆದ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಸಿದ್ದರಾಮಯ್ಯ ಜನಪರ ಆಡಳಿತ ಮಾಡದೇ ಮತ ಬ್ಯಾಂಕ್ ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಸಿದ್ದರಾಮಯ್ಯ ಸರ್ಕಾರ ಹೊಸ ಕಾರ್ಯಕ್ರಮ ಜಾರಿಗೆ ತರದೇ ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಜನಪರ ಕಾರ್ಯಕ್ರಮಗಳನ್ನೂ ಮುಂದುವರಿಸ­ಲಿಲ್ಲ. ಅಭಿವೃದ್ಧಿ ಕಾರ್ಯಗಳಿಗೆ ಈ ಸರ್ಕಾರದಲ್ಲಿ ಹಣ ಇಲ್ಲ. ಕಾಂಗ್ರೆಸ್ ಸರ್ಕಾರ ವರ್ಗಾವಣೆ ಹೆಸರಿನಲ್ಲಿ ಹಣ ಲೂಟಿ ಮಾಡುತ್ತಿದೆ. ಈ ಹಿಂದೆ ಇದೇ ವಿಷಯಕ್ಕೆ ಬಿಜೆಪಿ ಸರ್ಕಾರವನ್ನು ಟೀಕಿಸಿದ್ದ ಕಾಂಗ್ರೆಸ್ ವರ್ಷಪೂರ್ತಿ ವರ್ಗಾವಣೆ ಮಾಡುತ್ತಿದೆ ಎಂದರು. 

ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಹೊಸ ಕಾರ್ಯಕ್ರಮ ಘೋಷಣೆ ಮಾಡುವದು, ಅದು ವಿವಾದಕ್ಕೆ ಗುರಿಯಾದ ನಂತರ ಹಿಂದಕ್ಕೆ ಪಡೆಯುವದು ಸಾಮಾನ್ಯವಾಗಿದೆ. ಸಿಇಟಿ ವಿಷಯದಲ್ಲೂ ಇದೇ ರೀತಿಯ ಗೊಂದಲ ಉಂಟುಮಾಡಿದೆ. ನಮ್ಮ ಸರ್ಕಾರವಿದ್ದಾಗ ಬಡ ವರ್ಗದ ವಿದ್ಯಾರ್ಥಿಗಳಿಗೆ ಕೆಲವು ಸ್ಥಾನಗಳನ್ನು ಮೀಸಲಿಟ್ಟಿದ್ದೆವು. ಆದರೆ, ನಮ್ಮ ಕಾನೂನಿನಲ್ಲಿ ಕೆಲವು ತಪ್ಪುಗಳಾಗಿತ್ತು. ಈ ಸರ್ಕಾರ ನಾವು ಮಾಡಿದ ತಪ್ಪುಗಳನ್ನು ಸರಿಮಾಡಿ ಹೊಸ ಕಾನೂನನ್ನು ಜಾರಿಮಾಡಲಿ ಎಂದು ಹೇಳಿದರು.

ಕಾಂಗ್ರೆಸ್‌ ಸರ್ಕಾರದ ದುರಾಡಳಿತದ ಬಗ್ಗೆ ಜನತೆಗೆ ತಿಳಿಸಬೇಕು. ಈ ಕಾರ್ಯವನ್ನು ಕಾರ್ಯಕರ್ತರು ಇಂದಿ­ನಿಂದಲೇ ಆರಂಭ ಮಾಡಬೇಕು ಎಂದ ಅವರು, ಮುಂಬರುವ ಲೋಕಸಭೆ ಚುನಾವಣೆ ನಮಗೆ ಪ್ರತಿಷ್ಠೆಯಾಗಿದೆ. ದಕ್ಷಿಣ ಭಾರತದಲ್ಲಿ ಬಿಜೆಪಿಗೆ ಶಕ್ತಿ ತಂದುಕೊಟ್ಟಿದ್ದು ಕರ್ನಾಟಕ, ಈಗ ಮತ್ತೆ ಅದನ್ನು  ಪುನರಾವರ್ತನೆ ಮಾಡುವ ಕಾಲ ಬಂದಿದೆ. ರಾಜ್ಯದ ಎಲ್ಲ 28 ಲೋಕಸಭಾ ಸ್ಥಾನಗಳನ್ನು ಗೆಲ್ಲುವ ವಿಶ್ವಾಸ ತಮಗಿದೆ ಎಂದರು.

‘ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರು ವ್ಯವಸ್ಥಿತವಾಗಿ ಹಣ ಲೂಟಿ ಮಾಡುತ್ತಿದ್ದಾರೆ. ಆಮ್‌ ಆದ್ಮಿ ಪಕ್ಷ­ವನ್ನು ಹುಟ್ಟಿಹಾಕಿದ್ದು ಕಾಂಗ್ರೆಸ್‌ ಪಕ್ಷ. ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಅರವಿಂದ ಕೇಜ್ರಿವಾಲ್‌ ಅವರು ಈಗ ಕಾಂಗ್ರೆಸ್‌ ಜೊತೆಗೆ ಕೈಜೋಡಿಸಿರುವು­ದರ ಬಗ್ಗೆ ಜನತೆಗೆ ಉತ್ತರ ನೀಡಲಿ’ ಎಂದು ಒತ್ತಾಯಿಸಿದರು.

ಸಂಸದ ಸುರೇಶ ಅಂಗಡಿ ಮಾತನಾಡಿ, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಜನ ವಿರೋಧಿ ಮತ್ತು ಉತ್ತರ ಕರ್ನಾಟಕ ವಿರೋಧಿ ನೀತಿ ಅನುಸರಿಸುತ್ತಿದೆ. ಈ ಭಾಗದ ಯಾವುದೇ ಅಭಿವೃದ್ಧಿ ಕಾರ್ಯಗಳಿಗೆ ಸರ್ಕಾರ ಹಣ ಬಿಡುಗಡೆ ಮಾಡುತ್ತಿಲ್ಲ. ಮುಖ್ಯಮಂತ್ರಿಗಳಿಗೆ ಬೆಳಗಾವಿ ಜಿಲ್ಲೆ ಸಂಪೂರ್ಣ ನೀರಾವರಿಯಾಗುವುದು ಬೇಕಿಲ್ಲ. ಇಲ್ಲಿ ಅಭಿವೃದ್ಧಿ ಮಾಡಿದರೆ ಜನ ಪ್ರಬುದ್ಧರಾಗುತ್ತಾರೆ. ರಾಜಕೀಯವಾಗಿ ಶಕ್ತಿಶಾಲಿಗಳಾಗುತ್ತಾರೆ ಎಂಬ ಭಯ ಅವರಿಗಿದೆ. ಇದೇ ಕಾರಣದಿಂದ ಅನುದಾನ ಬಿಡುಗಡೆ ಮಾಡುತ್ತಿಲ್ಲ. ಇಂತಹ ಸರ್ಕಾರದ ಜನ ವಿರೋಧಿ ಆಡಳಿತವನ್ನು ಜನತೆಗೆ ಮನವರಿಕೆ ಮಾಡಿಕೊಡಬೇಕು ಎಂದು ಹೇಳಿದರು.

ಶಾಸಕರಾದ ಆನಂದ ಮಾಮನಿ, ಸಂಜಯ ಪಾಟೀಲ, ಬಿಜೆಪಿ ಜಿಲ್ಲಾ ಅಧ್ಯಕ್ಷ ಈರಣ್ಣ ಕಡಾಡಿ, ಮಾಜಿ ಶಾಸಕರಾದ ಶ್ರೀಕಾಂತ ಕುಲಕರ್ಣಿ, ಅಭಯ ಪಾಟೀಲ, ಮಹದೇವಪ್ಪ ಯಾದವಾಡ ಇತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT