ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜಲಾನಯನ ಅಧಿಕಾರಿಯಿಂದ ಜನಪ್ರತಿನಿಧಿ ನಿರ್ಲಕ್ಷ್ಯ’

Last Updated 21 ಡಿಸೆಂಬರ್ 2013, 4:46 IST
ಅಕ್ಷರ ಗಾತ್ರ

ಕಾರ್ಕಳ : ಜಲಾನಯನ ಇಲಾಖೆಯ ಅಧಿಕಾರಿ ತಮ್ಮಷ್ಟಕ್ಕೆ ತಾವೇ ನಿರ್ಧಾರಗಳನ್ನು ಕೈಗೊಳ್ಳುತ್ತಾರೆ. ಇಲಾಖೆಯ ಮಾಹಿತಿಯನ್ನು ತಿಳಿಸುವುದಾಗಲಿ, ಜನಪ್ರತಿನಿಧಿಯನ್ನು ಭೇಟಿ ಮಾಡಿ ಚರ್ಚಿಸುವುದಾಗಲಿ ಮಾಡುತ್ತಿಲ್ಲ ಎಂದು ಶಾಸಕ ವಿ.ಸುನಿಲ್ ಕುಮಾರ್ ಆರೋಪಿಸಿದರು.

ಇಲ್ಲಿನ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ನಡೆದ ತಾಲ್ಲೂಕು ತ್ರೈಮಾಸಿಕ ಕೆಡಿಪಿ ಅಭಿವೃದ್ಧಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಇಲಾಖಾವಾರು ಅಭಿವೃದ್ಧಿ ಕಾಮಗಾರಿಗಳು ಆದಷ್ಟು ಶೀಘ್ರ ಮುಗಿಯುವಂತಾಗಬೇಕು. ಎಲ್ಲ ಅಭಿವೃದ್ಧಿ ಕಾಮಗಾರಿ ಟೆಂಡರ್ ಪ್ರಕ್ರಿಯೆ ಫೆಬ್ರವರಿ ೧೫ರ ಒಳಗೆ ಮುಗಿಸಬೇಕು. ಲೋಕಸಭಾ ಚುನಾವಣೆ ಸಮೀಪ ಬರುವುದರಿಂದ ಚುನಾವಣಾ ನೀತಿ ಸಂಹಿತೆ ಜಾರಿಗೊಂಡು ನಂತರ ಕಾಮಗಾರಿಗಳು ಸ್ಥಗಿತವಾಗುವಂತೆ ಆಗಬಾರದು ಎಂದು ಮುನ್ನೆಚ್ಚರಿಕೆ ನೀಡಿದರು.

ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಜನವರಿ ತಿಂಗಳಲ್ಲಿ ಟೆಂಡರ್ ಕರೆಯಬೇಕು ಎಂದು ಜಿಲ್ಲಾ ಪಂಚಾಯಿತಿ ಎಂಜಿನಿಯರ್‌ಗೆ ಶಾಸಕರು ತಿಳಿಸಿದರು. ನಗರೋತ್ಪನ್ನ ಯೋಜನೆಯಡಿ ಪಟ್ಟಣದ ಮುಖ್ಯರಸ್ತೆ ಕಾಮಗಾರಿ ವಿಳಂಬವಾಗುತ್ತಿದೆ ಎಂದು ಸಭೆಯಲ್ಲಿ ದೂರುಗಳು ಕೇಳಿಬಂದವು. ಅದಕ್ಕೆ ಉತ್ತರಿಸಿದ ಮುಖ್ಯಾಧಿಕಾರಿ ಜಾಗದ ಮಾಲೀಕರು ಜಾಗ ಬಿಟ್ಟುಕೊಡದ ಕಾರಣ ವಿಳಂಬವಾಗುತ್ತಿದೆ. ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸಬೇಕಾಗಿದೆ. ಮುಂದಿನ ಎರಡು ದಿನಗಳಲ್ಲಿ ಕಾಮಗಾರಿ ಆರಂಭವಾಗಲಿವೆ ಎಂದರು.

ಅದಕ್ಕೆ ಪ್ರತಿಕ್ರಿಯಿಸಿದ ಶಾಸಕರು ಜಾಗದ ಮಾಲೀಕರಿಗೆ ನೀಡಲಾಗುವ ಪರಿಹಾರ ಧನವನ್ನು ಬಹಿರಂಗವಾಗಿ ತಿಳಿಸಿಬಿಡಿ ಆಗ ಜಾಗ ಬಿಟ್ಟುಕೊಡುತ್ತಾರೆ ಎಂದರು.

ಪಟ್ಟಣದ ಬಾಹುಬಲಿ ವಿಗ್ರಹದ ಮಹಾಮಸ್ತ­ಕಾಭಿಷೇಕ ಹತ್ತಿರ ಬರುವುದರಿಂದ ವಿಶೆಷ ಸಭೆ ಕರೆಯಲಾಗುವುದು. ಸಭೆಯಲ್ಲಿ ಹೆಚ್ಚಿನ ಅನುದಾನ ಕೋರಿ ಸರ್ಕಾರ ಪ್ರಸ್ತಾವ ಕಳಿಸಬೇಕಾಗಿದೆ ಎಂದರು. ತಾಲ್ಲೂಕಿನಲ್ಲಿ ೧೦ಕ್ಕೂ ಅಧಿಕ ಅಕ್ರಮ ಮದ್ಯ ಮಾರಾಟದ ಅಡ್ಡೆಗಳು ಕಾರ್ಯಾಚರಿಸುತ್ತಿವೆ. ಆರೋಪಿಗಳನ್ನು ಪತ್ತೆ ಹಚ್ಚಲು ತೆರಳುವಾಗ ಮಾಹಿತಿ ಸೋರಿ ವಿಫಲರಾಗುತ್ತಿದ್ದೇವೆ. ಹೆಚ್ಚು ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕಾಗಿದೆ ಎಂದು ಅಬಕಾರಿ ಇಲಾಖೆಯ ಅಧಿಕಾರಿ ತಿಳಿಸಿದರು.

ಅಂಡಾರು -ಕಾಡುಹೊಳೆ ರಸ್ತೆ ಉದ್ಘಾಟನೆಗೆ ಮೊದಲೇ ಹಾಳಾಗಿದ್ದು, ತೇಪೆ ಕಾರ್ಯಾಚರಣೆ ನಡೆಯುತ್ತಿದೆ. ನಂದಳಿಕೆ ರಸ್ತೆ ಎರಡು ವರ್ಷಗಳಲ್ಲೇ ದುಸ್ಥಿತಿಗೆ ಬಂದಿದೆ. ಲೋಕಾಯುಕ್ತರಿಗೆ ದೂರು ಸಲ್ಲಿಸುವ ನಿರ್ಧಾರ ಕೈಗೊಳ್ಳೋಣ ಎಂದಾಗ ತಾವೇ ಅದರ ಉಸ್ತುವಾರಿ ನೋಡಿಕೊಂಡು ಸರಿಪಡಿಸು­ವುದಾಗಿ ಅಧಿಕಾರಿ ತಿಳಿಸಿದರು.

ಸ್ಥಾಯಿ ಸಮಿತಿಯ ಪ್ರವೀಣ ಸಾಲ್ಯಾನ್, ಕಾರ್ಯನಿರ್ವಹಣಾಧಿಕಾರಿ ಚೆನ್ನಪ್ಪ ಮೊಯಿಲಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ರಶ್ಮಿ ಶೆಟ್ಟಿ, ಉಪಾಧ್ಯಕ್ಷ ಜಯವರ್ಮ ಜೈನ್, ತಹಶೀಲ್ದಾರ್ ಬಾಬು ದೇವಾಡಿಗ, ಜಿಲ್ಲಾ ಪಂಚಾಯಿತಿ ಸದಸ್ಯ ಉದಯ ಎಸ್.ಕೋಟ್ಯಾನ್, ಪುರಸಭಾಧ್ಯಕ್ಷೆ ರೆಹಮತ್ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT