ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜಾಗೋ ಭಾರತ್’ ವಿದ್ಯಾರ್ಥಿಗಳ ರ‍್ಯಾಲಿ

Last Updated 12 ಸೆಪ್ಟೆಂಬರ್ 2013, 7:18 IST
ಅಕ್ಷರ ಗಾತ್ರ

ಕುಶಾಲನಗರ: ಸ್ವಾಮಿ ವಿವೇಕಾನಂದ ಅವರ 150ನೇ ವರ್ಷಾಚರಣೆ ಅಂಗವಾಗಿ ಪಟ್ಟಣದಲ್ಲಿ ಬುಧವಾರ ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳು ಜಾಗೋ ಭಾರತ್‌  ರ‍್ಯಾಲಿ ನಡೆಸಿದರು.

ಸ್ವಾಮಿ ವಿವೇಕಾನಂದ ಜನ್ಮಾದಿನಾಚರಣೆ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ  ರ‍್ಯಾಲಿಯಲ್ಲಿ ಪಟ್ಟಣದ ವಿವಿಧ ಶಾಲಾ ಕಾಲೇಜುಗಳ ಸಾವಿರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಪಟ್ಟಣದ ಬೈಚನಹಳ್ಳಿ, ಕೋಣಮಾರಿಯಮ್ಮ ಮತ್ತು ಕೃಷಿ ಮಾರುಕಟ್ಟೆ ಸಮಿತಿ ಕಚೇರಿ ಸೇರಿದಂತೆ ಮೂರು ಕಡೆಗಳಿಂದಲೂ ಒಂದೇ ಬಾರಿ ಮೆರವಣೆಗೆ ಆರಂಭಿಸಲಾಯಿತು.

ಈ ಸಂದರ್ಭ ವಿದ್ಯಾರ್ಥಿಗಳು ‘ಯುವಕರೇ ಎದ್ದೇಳಿ, ಗುರಿ ಮುಟ್ಟುವವರೆಗೆ ನಿಲ್ಲದಿರಿ, ದೇಶ ರಕ್ಷಣೆಗಾಗಿ ಮುನ್ನುಗ್ಗಿ’ ಮುಂತಾದ ಹತ್ತಾರು ಘೋಷಣೆಗಳನ್ನು ಕೂಗುತ್ತಾ ಸಾಗುವ ಮೂಲಕ ಪಟ್ಟಣದ ನಾಗರಿಕರ ಗಮನ ಸೆಳೆದರು.

ಮೂರು ಕಡೆಗಳಿಂದ  ರ‍್ಯಾಲಿ ನಡೆಸಿದ ಸಾವಿರಾರು ವಿದ್ಯಾರ್ಥಿಗಳು ನಂತರ ಪಟ್ಟಣದ ಮಾರ್ಷಲ್ ಕಾರ್ಯಪ್ಪ ವೃತ್ತದಲ್ಲಿ ಒಂದೆಡೆ ಸೇರಿದರು.

ಈ ವೇಳೆ ಉಪನ್ಯಾಸಕ ಪ್ರಕಾಶ್ ಮಾತನಾಡಿ, ವಿದ್ಯಾರ್ಥಿಗಳಿಗೆ ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ತಿಳಿಸಿಕೊಟ್ಟರು. ವಿವೇಕಾನಂದ ಜನ್ಮಾದಿನಾಚರಣೆ ಸಮಿತಿ ಪ್ರಮುಖರಾದ ಲಕ್ಷ್ಮಿ ನಾರಾಯಣ, ಜಿ.ಎಲ್. ನಾಗರಾಜು, ಸೇರಿದಂತೆ ವಿವಿಧ ಶಾಲಾ ಕಾಲೇಜುಗಳ ಶಿಕ್ಷಕ ಮತ್ತು ಉಪನ್ಯಾಸಕರು ಭಾಗವಹಿಸಿದ್ದರು.

ಮಡಿಕೇರಿ: ದೇಶದೆಲ್ಲಡೆ ವ್ಯಾಪಿಸಿರುವ ಭ್ರಷ್ಟಾಚಾರವನ್ನು ತೊಲಗಿಸಲು ಯುವ ಶಕ್ತಿ ಮುಂದಾಗಬೇಕು ಎಂದು ಸ್ವಾಮಿ ವಿವೇಕಾನಂದ 150ನೇ ಜನ್ಮ ವರ್ಷಾಚರಣೆ ಸಮಿತಿಯ ಸಂಚಾಲಕ ಧನಂಜಯ್ ಕರೆ ನೀಡಿದರು.

ಕೊಡಗು ಜಿಲ್ಲೆ ಸ್ವಾಮಿ ವಿವೇಕಾನಂದ 150ನೇ ಜನ್ಮ ವರ್ಷಾಚರಣೆ ಸಮಿತಿ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಭಾರತ್ ಜಾಗೋ ದೌಡ್ (ದಿಗ್ವಿಜಯ ದಿನ) ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸ್ವಾತಂತ್ರ್ಯ ಪೂರ್ವದಲ್ಲಿಯೇ ದೇಶ ಪ್ರೇಮ ಮೆರೆದ ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ಮೈಗೂಡಿಸಿಕೊಳ್ಳುವ ಜೊತೆಗೆ ಯುವ ಶಕ್ತಿ ದೇಶದಲ್ಲಿರುವ ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸಬೇಕಿದೆ ಎಂದು ಹೇಳಿದರು.

ದೇಶದಲ್ಲಿ ಭ್ರಷ್ಟಾಚಾರ ಹೆಚ್ಚಾಗುತ್ತಿದ್ದು, ಇದರಿಂದ ಸಾಮಾನ್ಯ ಜನತೆ ತತ್ತರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಯುವ ಶಕ್ತಿ ದೇಶದ ಉಳಿವಿಗಾಗಿ ಹೋರಾಟ ನಡೆಸುವಂತೆ ಅವರು ಸಲಹೆ ಮಾಡಿದರು. 

ಕಾರ್ಯಕ್ರಮಕ್ಕೂ ಮುನ್ನ ನಗರದ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಏಕಲವ್ಯ ಪ್ರಶಸ್ತಿ ವಿಜೇತ ಎಸ್.ವಿ. ಸುನೀಲ್ ಅವರು ಮೆರವಣಿಗೆ ಜಾಥಾಗೆ ಚಾಲನೆ ನೀಡಿದರು. ನಂತರ ನಗರದ ಪ್ರಮುಖ ರಸ್ತೆಯಲ್ಲಿ ಮೆರವಣಿಗೆ ಹೊರಟು, ಗಾಂಧಿ ಮೈದಾನದಲ್ಲಿ ಸಮಾವೇಶಗೊಂಡಿತು.

ಮಡಿಕೇರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಭಾಗೀರಥಿ, ರೋಟರಿ ಮಿಸ್ಟಿಹಿಲ್ಸ್ ಅಧ್ಯಕ್ಷರು ಡಾ.ಸಿ.ಆರ್. ಪ್ರಶಾಂತ್, ರೋಟರಿ ಸಂಸ್ಥೆಯ ಅಧ್ಯಕ್ಷ ದೇವಣಿ ಎಂ. ಕಿರಣ್, ಸ್ವಾಮಿ ವಿವೇಕಾನಂದ 150ನೇ ಜನ್ಮ ವರ್ಷಾಚರಣೆ ಸಮಿತಿಯ ಸದಸ್ಯ ಮುಳಿಯ ಕೇಶವ ಪ್ರಸಾದ್ ಭಾಗವಹಿಸಿದ್ದರು.

‘ಸ್ವಾಭಿಮಾನ ಬಡಿದೆಬ್ಬಿಸಿದ ಸನ್ಯಾಸಿ’: ಸೋಮವಾರಪೇಟೆ: ಪ್ರಪಂಚಕ್ಕೆ ಸಹೋದರತೆಯ ಸತ್ವವನ್ನು ಸಾರಿದ ಸ್ವಾಮಿ ವಿವೇಕಾನಂದ ಅವರು ಭಾರತೀಯರ ಸ್ವಾಭಿಮಾನವನ್ನು ಬಡಿದೆಬ್ಬಿಸಿದ ಅಪ್ರತಿಮ ಸನ್ಯಾಸಿ. ಸ್ವಾಮಿ ವಿವೇಕಾನಂದ ಅವರ ತತ್ವಾದರ್ಶಗಳು ಯುವ ಜನಾಂಗಕ್ಕೆ ಸ್ಫೂರ್ತಿದಾಯಕವಾಗಿವೆ ಎಂದು ವಿವೇಕಾನಂದ ಜನ್ಮದಿನಾಚರಣಾ ಸಮಿತಿ ಸಂಚಾಲಕ ಕೆ.ಎಸ್. ಪದ್ಮನಾಭ್ ಅಭಿಪ್ರಾಯಪಟ್ಟರು.

ಸ್ವಾಮಿ ವಿವೇಕಾನಂದ ಜನ್ಮದಿನಾಚರಣಾ ಸಮಿತಿಯ ಆಶ್ರಯದಲ್ಲಿ ಸೋಮವಾರಪೇಟೆಯ ಜೇಸಿ ವೇದಿಕೆಯಲ್ಲಿ ಆಯೋಜಿಸಲಾಗಿದ್ದ ಭಾರತ್ ದೌಡ್ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಭಾಗವಹಿಸಿ ಮಾತನಾಡಿದರು.

ಪ್ರಪಂಚಕ್ಕೆ ಸಹೋದರತೆಯ ಸತ್ವವನ್ನು ಸಾರಿದ ಸ್ವಾಮಿ ವಿವೇಕಾನಂದ ಅವರು ಭಾರತೀಯರ ಸ್ವಾಭಿಮಾನವನ್ನು ಬಡಿದೆಬ್ಬಿಸಿ ಪ್ರಪಂಚದ ದೃಷ್ಟಿ ಸೆಳೆಯಲು ಕಾರಣಕರ್ತರಾದರು. ಇಂತಹ ಅನುಪಮ ಮಾನವತಾವಾದಿಯ ಆದರ್ಶಗಳನ್ನು ಮೈಗೂಡಿಸಿಕೊಂಡು ಯುವ ಜನಾಂಗ ರಾಷ್ಟ್ರ ಪ್ರೇಮವನ್ನು ಮೈಗೂಡಿಸಿಕೊಂಡು ದೇಶ ರಕ್ಷಣೆಗೆ ಮುಂದಾಗಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್. ಮಹೇಶ್ ವಹಿಸಿದ್ದರು. ಸಮಿತಿಯ ಪದಾಧಿಕಾರಿಗಳಾದ ಎಸ್.ಆರ್. ಸೋಮೇಶ್, ದಿವಾಕರ್ ಉಪಸ್ಥಿತರಿದ್ದರು.

ಸಭಾ ಕಾರ್ಯಕ್ರಮಕ್ಕೂ ಮುನ್ನ ಇಲ್ಲಿನ ವಿವೇಕಾನಂದ ವೃತ್ತದಲ್ಲಿರುವ ಸ್ವಾಮಿ ವಿವೇಕಾನಂದ ಪ್ರತಿಮೆಗೆ ಲಯನ್ಸ್ ಅಧ್ಯಕ್ಷ ಜೆ.ಸಿ. ಶೇಖರ್ ಮಾಲಾರ್ಪಣೆ ಮಾಡಿ ಮ್ಯಾರಾಥಾನ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಮಡಿಕೇರಿ ರಸ್ತೆ, ಬಸವೇಶ್ವರ ದೇವಾಲಯ ರಸ್ತೆ, ಮುಖ್ಯರಸ್ತೆ ಮೂಲಕ ಸಾಗಿದ ಮ್ಯಾರಾಥಾನ್, ಇಲ್ಲಿನ ಜೇಸಿ ವೇದಿಕೆಯಲ್ಲಿ ಸಮಾಪನಗೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT