ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜಾತಿಗಳ ಗುಮ್ಮಟ’ದಲ್ಲಿ ಗೆದ್ದಿದ್ದ ದುಬೆ

Last Updated 25 ಮಾರ್ಚ್ 2014, 15:20 IST
ಅಕ್ಷರ ಗಾತ್ರ

ವಿಜಾಪುರ: ಇದು ಲಿಂಗಾಯತ ಪ್ರಾಬಲ್ಯದ ಕ್ಷೇತ್ರ. ಪರಿಶಿಷ್ಟ ಜಾತಿಗೆ ಮೀಸಲಾಗುವ ಮುನ್ನ ನಡೆದ 14 ಚುನಾವಣೆ­ಗಳಲ್ಲಿ 10 ಬಾರಿ ಲಿಂಗಾಯತರೇ ಗೆಲುವು ಸಾಧಿಸಿದ್ದಾರೆ.  ಆದರೂ, ಈ ‘ಜಾತಿಗಳ ಗುಮ್ಮಟ’ದಲ್ಲಿ ಉತ್ತರ ಪ್ರದೇಶ ಮೂಲದ ರಾಜಾರಾಮ ದುಬೆ ಎರಡು ಬಾರಿ ಲೋಕಸಭೆಗೆ ಆಯ್ಕೆಯಾಗಿದ್ದರು.

ದುಬೆ ಉತ್ತರ ಪ್ರದೇಶದ ಉನ್ನಾಬ್‌ ಗ್ರಾಮದವರು. ಅವರ ಸಹೋದರಿ ತುಳಜಾಬಾಯಿ ಇಲ್ಲಿ ವಾಸವಾಗಿದ್ದರಿಂದ ವಿಜಾಪುರಕ್ಕೆ ವಲಸೆ ಬಂದರು. ಸ್ವಾತಂತ್ರ್ಯ ಚಳವಳಿಯಲ್ಲಿ ಧುಮುಕಿ, ಮೂರೂವರೆ ವರ್ಷ ಜೈಲುವಾಸ ಅನುಭವಿಸಿದ್ದರು.

ಸ್ವಾತಂತ್ರ್ಯ ಚಳವಳಿಯ ಸಮಯದಲ್ಲಿ ಕಾಂಗ್ರೆಸ್‌ನ ಉನ್ನತ ನಾಯಕರೊಂದಿಗೆ ಉತ್ತಮ ಒಡನಾಟ ಬೆಳೆಸಿಕೊಂಡಿದ್ದರಿಂದ ಸಹಜವಾಗಿಯೇ ಈ ಭಾಗದಲ್ಲಿ ಪಕ್ಷದ ಪ್ರಭಾವಿ ನಾಯಕ­ರಾಗಿದ್ದರು. 1952ರಲ್ಲಿ ಲೋಕಸಭೆಗೆ ನಡೆದ ಪ್ರಥಮ ಚುನಾವಣೆ­ಯಲ್ಲಿ ಶೇ 67ರಷ್ಟು ಮತ ಪಡೆದು ಆಯ್ಕೆ­ಯಾದರು. 1957ರ ಚುನಾವಣೆಯ ಹೊತ್ತಿಗೆ ‘ಜಾತಿ’ ಎಂಬ ತೊರೆಗಳು ಏಳಲಾರಂಭಿಸಿದವು. ಆ ಚುನಾವಣೆಯಲ್ಲಿ ಸೋತರೂ, 1962ರಲ್ಲಿ ಮತ್ತೆ ಗೆಲುವು ಸಾಧಿಸಿದರು.

ದುಬೆ ಉತ್ತರ ಪ್ರದೇಶದ ‘ಕನೌಜ್‌ ಬ್ರಾಹ್ಮಣ’  ಸಮುದಾಯಕ್ಕೆ ಸೇರಿದವರು. ಆಗ ಇಡೀ ವಿಜಾಪುರ ಜಿಲ್ಲೆ­ಯಲ್ಲಿ ಈ ಸಮುದಾಯಕ್ಕೆ ಸೇರಿದ ಮತ್ತೊಂದು ಕುಟುಂಬ ಇರಲಿಲ್ಲ!

ದುಬೆ ಅಂದಿನ ಪ್ರಧಾನಿ ಜವಾಹರಲಾಲ್‌ ನೆಹರೂ ಅವರ ಸಂಸದೀಯ ಕಾರ್ಯದರ್ಶಿಯಾಗಿದ್ದರು. ನೆಹರೂ, ಇಂದಿರಾ ಗಾಂಧಿ, ಮೊರಾರ್ಜಿ ದೇಸಾಯಿ 1956ರಲ್ಲಿ ದುಬೆ ಅವರ ಸ್ಥಳೀಯ ನಿವಾಸಕ್ಕೆ ಭೇಟಿ ನೀಡಿದ್ದರು.

ಎರಡು ಬಾರಿ ಸಂಸದ, ಒಮ್ಮೆ ವಿಧಾನ ಪರಿಷತ್‌ ಸದಸ್ಯ­ರಾಗಿದ್ದರೂ ಅವರು ಪಿಂಚಣಿ ಪಡೆಯಲಿಲ್ಲ. ಪ್ರಾಮಾಣಿಕತೆ­ಯನ್ನೇ ಮೈಗೂಡಿಸಿಕೊಂಡಿದ್ದ ಅವರ ಕುಟುಂಬದವರು ಕೂಡ ಅವರ ನಿಧನದ ನಂತರವೂ ಪಿಂಚಣಿ ಪಡೆಯಲಿಲ್ಲ. ಕೆಲ ವರ್ಷಗಳ ಹಿಂದೆ ರಾಜಾರಾಮ ಅವರ ಮಗ ಅನಿಲ್‌ ದುಬೆ ನಿಧನರಾದರು. ಕುಟುಂಬ ಆರ್ಥಿಕ ಸಂಕಷ್ಟಕ್ಕೆ ಸಿಲುಕಿತು. ಕೆಲ ಹಿತೈಷಿಗಳು ಪ್ರಯತ್ನದ ಫಲವಾಗಿ  2011ರಿಂದ ಈ ಪಿಂಚಣಿಯನ್ನು ರಾಜಾರಾಮ ಅವರ ಪತ್ನಿ ನಿರ್ಮಲಾ ಪಡೆಯುತ್ತಿದ್ದಾರೆ!

ಚಿನ್ನ ಕೊಟ್ಟರೂ ಮತ ಕೊಡಲಿಲ್ಲ: 1962ರ ಚೀನಾ ಯುದ್ಧದ ನಾಲ್ಕು ವರ್ಷದ ನಂತರ (1966) ಜನ ಇಂದಿರಾ ಗಾಂಧಿ ಹಾಗೂ ಅಂದಿನ ಮುಖ್ಯಮಂತ್ರಿ ಎಸ್‌. ನಿಜಲಿಂಗಪ್ಪ ಅವರನ್ನು ವಿಜಾಪುರಕ್ಕೆ ಆಹ್ವಾನಿಸಿ ಅವರಿಗೆ ಚಿನ್ನದಲ್ಲಿ ತುಲಾ­ಭಾರ ಮಾಡಿದರು. ಅವರಿಬ್ಬರ ತೂಕದ 122 ಕೆ.ಜಿ. ಚಿನ್ನ­ವನ್ನು ರಾಷ್ಟ್ರ ರಕ್ಷಣಾ ನಿಧಿಗೆ ಸಮರ್ಪಿಸಿದರು. ಆದರೆ  ಅದೇ ಜನ 1967ರ ಲೋಕಸಭೆಯ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯನ್ನು ಸೋಲಿಸಿ ಪಕ್ಷೇತರ ಅಭ್ಯರ್ಥಿ ಜೆ.ಡಿ. ಪಾಟೀಲ (ಚಾಂದಕವಟೆ) ಅವರನ್ನು ಗೆಲ್ಲಿಸಿದರು!

ಸಾಮಾಜಿಕ ನ್ಯಾಯ: ಜಾತಿಪ್ರೀತಿ ತೋರಿದರೂ ಇಲ್ಲಿಯ  ಮತ­ದಾರರು ಯಾವುದೇ ಒಂದು ಪಕ್ಷಕ್ಕೆ ಜೋತು ಬಿದ್ದವ­ರಲ್ಲ. ಕಾಂಗ್ರೆಸ್‌ ಅಭ್ಯರ್ಥಿ­ಗಳನ್ನು ಏಳು ಬಾರಿ ಗೆಲ್ಲಿಸಿದ್ದರೂ, ಪಕ್ಷೇತರ ಮತ್ತು ಜನತಾ ಪರಿ­ವಾರಕ್ಕೆ ತಲಾ ಎರಡು ಬಾರಿ ಮಣೆ ಹಾಕಿದವರು. ಕಳೆದ ಮೂರು ಅವಧಿಯಲ್ಲಿ ಬಿಜೆಪಿ­ಯನ್ನು ಗೆಲ್ಲಿಸಿದವರು.

ವಾಜಪೇಯಿ ಸಂಪುಟದಲ್ಲಿ ಬಸನಗೌಡ ಪಾಟೀಲ ಯತ್ನಾಳ ಆರಂಭದಲ್ಲಿ ಜವಳಿ, ನಂತರ ರೈಲ್ವೆ ಖಾತೆ ರಾಜ್ಯ ಸಚಿವರಾಗಿದ್ದರು. ದುಬೆ ಮತ್ತು ಯತ್ನಾಳರನ್ನು ಹೊರತು ಪಡಿಸಿದರೆ ಈ ಕ್ಷೇತ್ರ ಪ್ರತಿನಿಧಿಸಿದವರಿಗೆ ಕೇಂದ್ರದಲ್ಲಿ ಸ್ಥಾನಮಾನ ದೊರೆತಿಲ್ಲ.

ಈ ವರೆಗಿನ 15 ಚುನಾವಣೆಗಳಲ್ಲಿ 57 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಅವರಲ್ಲಿ ಮಹಿಳೆಯರ ಸಂಖ್ಯೆ ಕೇವಲ ಮೂರು. 1984ರಲ್ಲಿ ಲಕ್ಷ್ಮಿಬಾಯಿ ಅನ್ನಯ್ಯ ದೀಕ್ಷಿತ್‌, 1999ರಲ್ಲಿ ಕಾಂಗ್ರೆಸ್‌ನಿಂದ ಲಕ್ಷ್ಮಿಬಾಯಿ ಗುಡದಿನ್ನಿ ಹಾಗೂ 2009ರಲ್ಲಿ ನಿರ್ಮಲಾ ಅರಕೇರಿ ಸ್ಪರ್ಧಿಸಿದ್ದರು.

ಹಾಲಿ ಸಂಸದ ರಮೇಶ ಜಿಗಜಿಣಗಿ ಈ ಸಲ ಬಿಜೆಪಿ ಅಭ್ಯರ್ಥಿ. ಮಾಜಿ ಕ್ರಿಕೆಟಿಗ ಪ್ರಕಾಶ ರಾಠೋಡ ಅವರಿಗೆ ಕಾಂಗ್ರೆಸ್‌ ಟಿಕೆಟ್‌ ನೀಡಿದೆ. ಇನ್ನು ಜೆಡಿಎಸ್‌ ಕೋಲಾರದ ನಿವೃತ್ತ ಕೆ.ಎ.ಎಸ್‌. ಅಧಿಕಾರಿ ಚಿಕ್ಕವೆಂಕಟಪ್ಪ ಅವರನ್ನು ಕಣಕ್ಕಿಳಿಸಲು ಮುಂದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT