ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜಾನಪದ ವಿ.ವಿ. ಉದ್ಯೋಗ ಸೃಷ್ಟಿಸುವ ತಾಣ’

ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಬೋರಲಿಂಗಯ್ಯ ಶ್ಲಾಘನೆ
Last Updated 17 ಸೆಪ್ಟೆಂಬರ್ 2013, 6:09 IST
ಅಕ್ಷರ ಗಾತ್ರ

ಶಿಗ್ಗಾವಿ: ‘ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಕೇವಲ ಪದವಿಗಳನ್ನು ನೀಡದೆ ಜ್ಞಾನ ಮತ್ತು ಉದ್ಯೋಗ ಸೃಷ್ಟಿಸುವ ತಾಣವಾಗಿದ್ದು, ಇದ­ರಿಂದ ಗ್ರಾಮೀಣರ ಬದುಕಿನ ಕನಸು ನನಸಾ­ಗಲು ಸಾಧ್ಯ’ ಎಂದು ಹಂಪಿ ಕನ್ನಡ ವಿಶ್ವ­ವಿದ್ಯಾಲಯದ ಕುಲಪತಿ ಪ್ರೊ.ಹಿ.ಜಿ.­ಬೋರ­ಲಿಂಗಯ್ಯ ಅಭಿಪ್ರಾ­ಯಪಟ್ಟರು.

ತಾಲ್ಲೂಕಿನ ಗೊಟಗೋಡಿ ಜಾನಪದ ವಿಶ್ವವಿ­ದ್ಯಾಲಯದ ಆವರಣದಲ್ಲಿ ಸೋಮ ವಾರ ನಡೆದ ‘ಪುಸ್ತಕಗಳ ಬಿಡುಗಡೆ ಸಮಾರಂಭದಲ್ಲಿ’ ಅವರು ಮಾತನಾಡಿದರು.

‘ಗ್ರಾಮೀಣರ ಬದುಕನ್ನು ವೈಭವಿಕರಿಸುವ ಕಾಲ ಮುಗಿದಿದ್ದು, ಗ್ರಾಮೀಣರ ಆಚಾರ, ವಿಚಾ­ರಗಳನ್ನು ವಿಶ್ಲೇಷಿಸಿ ಅವುಗಳನ್ನು ಪುನಃ ಆಚ­ರಣೆಗೆ ತರುವುದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಕರ್ನಾಟಕ ಜಾನಪದ ವಿವಿ ಉತ್ತಮ ಯೋಜ­ನೆಗಳನ್ನು ಹಮ್ಮಿಕೊಂಡಿದೆ’ ಎಂದರು.

’ಇತ್ತೀಚಿನ ದಿನಗಳಲ್ಲಿ ಕೃಷಿ ಬಗ್ಗೆ ಗ್ರಾಮೀಣ ಜನರ ಒಲವು ಕುಂಠಿತವಾಗುತ್ತಿದೆ. ಗ್ರಾಮೀಣ ಜೀವನ ಕುರಿತು ನಿರ್ಲಕ್ಷ್ಯ ತೋರಿ ನಗರ ಪ್ರದೇಶ­ಗಳತ್ತ ವಲಸೆ ಪ್ರಮಾಣ ಹೆಚ್ಚಿತ್ತಿದೆ’ ಎಂದು ಕಳವಳ ವ್ಯಕ್ತಪಡಿಸಿದ ಬೋರಲಿಂಗಯ್ಯ, ’ಗ್ರಾಮೀ­ಣರ ಬದುಕನ್ನು ಪುನಃ ಸ್ಥಾಪಿಸಲು ಮತ್ತು ಜಾಗೃತಗೊಳಿ್ಳಸಲು ಬರಹಗಳ ಮೂಲಕ ಅರಿವು ಮೂಡಿಸುವ ಕಾರ್ಯವನ್ನು ಜಾನಪದ ವಿಶ್ವವಿದ್ಯಾಲಯ ಮಾಡುತ್ತಿದೆ’ ಎಂದು ಶ್ಲಾಘಿಸಿದರು.

ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಅಂಬಳಿಕೆ ಹಿರಿಯಣ್ಣ ಮಾತನಾಡಿ, ‘ದೇಶೀಯ ಜಾನಪದ ಕಲೆ, ಸಾಹಿತ್ಯ ಉಳಿಸಿ, ಬೆಳೆಸಲು ವಿಶ್ವವಿದ್ಯಾಲಯ ಸಾಕಷ್ಟು ಶ್ರಮಿಸುತ್ತಿದೆ.  ಅಲ್ಲದೆ ಸಂಶೋಧನೆಗೆ ಹೆಚ್ಚಿನ ಪ್ರೇರಣೆ ನೀಡುವ ಜೊತೆಗೆ ಪುಸ್ತಕ ಸಂಸ್ಕೃತಿ ಬೆಳವಣಿಗೆಗೆ ಅವಕಾಶ ಕಲ್ಪಿಸಿದೆ. ಗ್ರಾಮೀಣರ ಜೀವನ ವಿಧಾನ ತಿಳಿಸಲು ವಿವಿಧ ಮಗ್ಗಲುಗಳನ್ನು ಅರ್ಥೈಸುವ ಗ್ರಂಥಗಳನ್ನು ಪ್ರಕಟಿಸಲಾಗುತ್ತಿದೆ. ಮೌಖಿಕ ವಿಚಾರಗಳನ್ನು ಬರವಣಿಗೆ ಮೂಲಕ ಪ್ರಸ್ತುತ ಪಡಿಸುವ ಕಾರ್ಯ ಮಾಡಲಾಗುತ್ತಿದ್ದು, ಇದಕ್ಕೆ ಪ್ರತಿ­ಯೊಬ್ಬರ ಸಹಕಾರ ಅಗತ್ಯವಾಗಿದೆ’ ಎಂದರು.

ಇದೇ ಸಂದರ್ಭದಲ್ಲಿ ಪ್ರೊ.ಸ.ಚಿ.ರಮೇಶ ಬರೆದ ‘ಜಾನಪದ ವಸ್ತುಕೋಶ’, ಡಾ.ಕೆ.­ಪ್ರೇಮಕುಮಾರ ಬರೆದ ‘ಬುರ್ರಕಥಾ ಜಯಮ್ಮ’, ಡಾ.ಪಾಲ್ತಾಡಿ ರಾಮಕೃಷ್ಣ ಆಚಾರ್ ಬರೆದ ‘ತುಳುನಾಡಿನ ಜನಪದ ಕಥೆಗಳು’, ಡಾ.ಕೆ.­ಕಮಲಾಕ್ಷ ಬರೆದ ‘ಕೇರಳದ ಜನಪದ ವೀರ ತಜ್ಜೋಳಿ ಒದೇನನ್‌’, ಎನ್‌.ಮೋಹನ­ಕುಮಾರ ಬರೆದ ‘ಕಾಡುಗೊಲ್ಲರ ಕೋಲಾಟದ ಪದಗಳು’ ಪುಸ್ತಕಗಳನ್ನು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಪ್ರೊ.ಚಂದ್ರಶೇಖರ ಕಂಬಾರ ಬಿಡುಗಡೆ ಮಾಡಿದರು.

ಕಾರ್ಯಕ್ರಮದಲ್ಲಿ ಪ್ರೊ.ಹಿ.ಚಿ.­ಬೋರ­ಲಿಂ­ಗಯ್ಯ ಹಾಗೂ ಪ್ರೊ.ಚಂದ್ರಶೇಖರ ಕಂಬಾರ ಅವರನ್ನು ವಿಶ್ವವಿದ್ಯಾಲಯದ ವತಿಯಿಂದ ಸನ್ಮಾನಿಸಲಾಯಿತು.

ಸಾಹಿತಿ ಸತೀಶ ಕುಲಕರ್ಣಿ, ಎಸ್‌.ವಿ.­ಕಂಬಾಳಿಮಠ, ಕರ್ನಾಟಕ ವಿ.ವಿ. ಶಾಂತಾ ನಾಯಕ ಮತ್ತಿತರರು ಉಪಸ್ಥಿತರಿದ್ದರು.
ಎನ್‌.ಮೋಹನಕುಮಾರ ಸಂಗಡಿಗರು ಪ್ರಾರ್ಥಿಸಿದರು. ಕುಲಸಚಿವ ಡಾ.ಡಿ.ಬಿ.ನಾಯಕ ಸ್ವಾಗತಿಸಿದರು. ಮೌಲ್ಯಮಾಪನ ಕುಲಸಚಿವ ಪ್ರೊ.ಸ.ಚಿ.ರಮೇಶ ಪ್ರಾಸ್ತಾವಿಕವಾಗಿ ಮಾತ­ನಾಡಿದರು. ಸಹಾಯಕ ಪ್ರಾಧ್ಯಾಪಕಿ ಎಂ.ಬಿ.­ಶ್ವೇತಾ ನಿರೂಪಿಸಿದರು. ಹಿರಿಯ ಸಂಶೋಧನಾ ಅಧಿಕಾರಿ ಡಾ.ಕೆ.ಪ್ರೇಮಕುಮಾರ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT