ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜ್ಞಾನಪೀಠ ಜನಮಾನಸಕ್ಕೆ ಸಂದ ಗೌರವ’

Last Updated 15 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಕವಿ, ಲೇಖಕನನ್ನು ಸೃಷ್ಟಿಸುವುದು ಜನಮಾನಸ. ಜನಮಾನಸದ ದನಿಯನ್ನು ಕವಿ ಕಾವ್ಯವಾಗಿಸುತ್ತಾನೆ. ಹೀಗಾಗಿ, ಕನ್ನಡ ಸಾಹಿತಿಗಳಿಗೆ ಸಂದಿರುವ ಜ್ಞಾನಪೀಠ ಪ್ರಶಸ್ತಿಯ ಗೌರವ ನಿಜವಾಗಿ ಕನ್ನಡ ಜನಮಾನಸಕ್ಕೆ ಸಂದ ಗೌರವ’ ಎಂದು ಹಿರಿಯ ಸಾಹಿತಿ ಡಾ.ಚಂದ್ರಶೇಖರ ಕಂಬಾರ ಅಭಿಪ್ರಾಯ ಪಟ್ಟರು.

ಕನ್ನಡ ಸಾಹಿತ್ಯ ಪರಿಷತ್ತು ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಭಾನುವಾರ ಆಯೋಜಿಸಿದ್ದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಕುರಿತ ಮೂರು ದಿನಗಳ ವಿಚಾರ ಸಂಕಿರಣದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಕನ್ನಡ ಜನಮಾನಸ ಸಾಹಿತ್ಯಕವಾಗಿ ಶ್ರೀಮಂತವಾದುದು. ಜನವಾಣಿ ಬೇರು, ಕವಿವಾಣಿ ಹೂವು ಎಂದು ಬಿಎಂಶ್ರೀ ಬಹಳ ಹಿಂದೆಯೇ ಹೇಳಿದ್ದಾರೆ. ಕನ್ನಡಕ್ಕೆ ಸಿಕ್ಕಿರುವ ಎಂಟು ಜ್ಞಾನಪೀಠ ಪ್ರಶಸ್ತಿಗಳು ಕನ್ನಡಿಗರಿಗೆ ಸಂದಿರುವ ಗೌರವ’ ಎಂದು ಹೇಳಿದರು.

‘ಕನ್ನಡ ಭಾಷೆ ಸಾಕಷ್ಟು ಬೆಳೆದಿದೆ. ಆದರೆ, ಶಾಸ್ತ್ರಭಾಷೆಯಾಗಿ ಕನ್ನಡ ಬಳಕೆಯಾಗುತ್ತಿಲ್ಲ. ಶಾಸ್ತ್ರಭಾಷೆಯಾಗಿ ಇಂಗ್ಲಿಷ್‌ ಭಾಷೆಯನ್ನು ಬಳಸುತ್ತಿದ್ದೇವೆ. ಶಾಸ್ತ್ರಭಾಷೆಯಾಗುವ ಅರ್ಹತೆಯಿದ್ದರೂ ಕನ್ನಡವನ್ನು ಬಳಸುತ್ತಿಲ್ಲ. ಶಾಸ್ತ್ರಭಾಷೆಯಾಗಿ ಬಳಕೆಯಾಗದೇ ಹೋದರೆ ಕನ್ನಡ ಸಮಗ್ರವಾದ ಭಾಷೆಯಾಗಿ ಬೆಳೆಯಲು ಸಾಧ್ಯವಿಲ್ಲ’ ಎಂದು ತಿಳಿಸಿದರು.

ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪ, ‘ಜ್ಞಾನಪೀಠ ಪ್ರಶಸ್ತಿಗೆ ತನ್ನದೇ ಆದ ಘನತೆಯಿದೆ. ಕನ್ನಡಕ್ಕೆ ಎಂಟು ಜ್ಞಾನಪೀಠ ಪ್ರಶಸ್ತಿಗಳು ಬಂದಿರಬಹುದು. ಆದರೆ, ಈ ಪ್ರಶಸ್ತಿಯನ್ನು ಪಡೆಯುವ ಅರ್ಹತೆಯುಳ್ಳ ಹಲವು ಸಾಹಿತಿಗಳಿದ್ದಾರೆ. ಪ್ರಶಸ್ತಿ  ಎಂಬುದು ಸಾಂಕೇತಿಕವಾದುದು’ ಎಂದು ಹೇಳಿದರು.

‘ಕುವೆಂಪು ಆದಿಯಾಗಿ ಇತ್ತೀಚೆಗೆ ಚಂದ್ರಶೇಖರ ಕಂಬಾರರಿಗೆ ಜ್ಞಾನಪೀಠ ಪ್ರಶಸ್ತಿ ಬಂದಾಗ ಇಡೀ ನಾಡು ಸಂಭ್ರಮಿಸಿತು. ಪ್ರಶಸ್ತಿಗಳಿವೆ ಎಚ್ಚರಿಕೆ ಎಂಬಂಥ ಕಾಲದಲ್ಲೂ ಜ್ಞಾನಪೀಠ ಪ್ರಶಸ್ತಿ ತನ್ನ ಘನತೆಯನ್ನು ಕಾಯ್ದುಕೊಂಡಿದೆ. ಆರಂಭದಿಂದಲೂ ಈ ಪ್ರಶಸ್ತಿ ಆಯ್ಕೆಯ ಪ್ರಕ್ರಿಯೆ ಪ್ರಶಸ್ತಿಯ ಬಗ್ಗೆ ಗೌರವ ಮೂಡಿಸುವಂತಿದೆ’ ಎಂದರು.

‘ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು ತಮ್ಮ ಸ್ಥಾನದ ಕಾರಣಕ್ಕೆ ಈ ಗೌರವಕ್ಕೆ ಭಾಜನರಾದವರಲ್ಲ. ತಮ್ಮ ಸಾಹಿತ್ಯ ಕೃಷಿಯಿಂದಾಗಿ ಪ್ರಶಸ್ತಿಗೆ ಆಯ್ಕೆಯಾದವರು. ಕನ್ನಡದ ಎಂಟು ಮಂದಿ ಜ್ಞಾನಪೀಠ ಪುರಸ್ಕೃತರು ತಮಗೆ ತಾವೇ ಚಳವಳಿಗಳಿದ್ದಂತೆ. ಪಕ್ಷ ರಾಜಕೀಯವನ್ನು ಮೀರಿದ ರಾಜಕೀಯ ಪ್ರಜ್ಞೆ ಈ ಸಾಹಿತಿಗಳಲ್ಲಿದೆ’ ಎಂದು ತಿಳಿಸಿದರು.

‘ಜನರೇ ಒಬ್ಬ ಸಾಹಿತಿಯನ್ನು ವಿಮರ್ಶೆ ಮಾಡುವುದು ಜನಮೂಲ ವಿಮರ್ಶೆ. ಸಾಹಿತಿಯ ಜನ್ಮಮೂಲವನ್ನು ಆಧಾರವಾಗಿಟ್ಟುಕೊಂಡು ವಿಮರ್ಶೆ ಮಾಡುವುದು ಜನ್ಮಮೂಲ ವಿಮರ್ಶೆ. ಜನ್ಮಮೂಲ ವಿಮರ್ಶೆಯ ಮೊದಲ ಬಲಿಪಶು ಕುವೆಂಪು. ಕುವೆಂಪು ಮಹಾಕವಿಯೇ ಅಲ್ಲ ಎಂದು ಸಾಧಿಸುವ ಹುನ್ನಾರಗಳೂ ಬಹಳ ನಡೆದಿವೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಮಹಾಕಾವ್ಯಗಳಿಗೆ ಕುಟುಂಬ ಯೋಜನೆ ತರಬೇಕೇನೋ ಎನ್ನುವಷ್ಟು ಮಹಾಕಾವ್ಯಗಳು ಇಂದು ಬರುತ್ತಿವೆ. ಆದರೆ, ಕುವೆಂಪು ‘ಶ್ರೀರಾಮಾಯಣ ದರ್ಶನಂ’ ಮಹಾಕಾವ್ಯ ರಚಿಸಿದ ಸಂದರ್ಭದಲ್ಲಿ ಅದೊಂದು ಪ್ರಯೋಗವಾಗಿತ್ತು. ಹೊಟ್ಟೆಯ ಕಿಚ್ಚೇ ವಿಮರ್ಶೆ ಎಂದಾದಾಗ ಪ್ರಾಮಾಣಿಕ ವಿಮರ್ಶೆಯೂ ಹಲವು ಬಾರಿ ಹಿನ್ನೆಲೆಗೆ ಬಂದು ಬಿಡಬಹುದು’ ಎಂದು ಹೇಳಿದರು.

ಅನಾರೋಗ್ಯದ ಕಾರಣದಿಂದಾಗಿ ಹಿರಿಯ ಸಾಹಿತಿ ಯು.ಆರ್‌.ಅನಂತಮೂರ್ತಿ ಕಾರ್ಯಕ್ರಮದಲ್ಲಿ ಭಾಗವಹಿಸಿರಲಿಲ್ಲ. ಅವರ ಪರವಾಗಿ ಅವರ ಪತ್ನಿ ಎಸ್ತರ್‌ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT