ವಿಶ್ವಸಂಸ್ಥೆ/ಇಸ್ಲಾಮಾಬಾದ್ (ಪಿಟಿಐ): ಭಯೋತ್ಪಾದನೆ ನಿಗ್ರಹಕ್ಕೆ ಡ್ರೋನ್ ವಿಮಾನ ಬಳಕೆ ಸೇರಿದಂತೆ ಇತರ ಮಾರ್ಗಗಳನ್ನು ಅನುಸರಿಸುವಾಗ ಅಂತರರಾಷ್ಟ್ರೀಯ ನಿಯಮಗಳನ್ನು ಪಾಲಿಸಬೇಕು ಎಂಬ ಗೊತ್ತುವಳಿಯನ್ನು ವಿಶ್ವಸಂಸ್ಥೆಯ ಮಹಾಸಭೆಯು ಅವಿರೋಧವಾಗಿ ಅಂಗೀಕರಿಸಿದೆ.
ಪಾಕಿಸ್ತಾನದ ಭಯೋತ್ಪಾಕರ ಅಡಗುತಾಣದ ಮೇಲೆ ಅಮೆರಿಕ ಡ್ರೋನ್ ದಾಳಿ ನಡೆಸಿದಾಗ ನಾಗರಿಕರೂ ಸತ್ತಿದ್ದಾರೆ. ಇದರಿಂದ ಮಾನವ ಹಕ್ಕು ಹಾಗೂ ಪಾಕಿಸ್ತಾನದ ಸಾರ್ವಭೌಮತ್ವದ ಉಲ್ಲಂಘನೆಯಾಗಿದೆ ಎಂಬ ಟೀಕೆ ವ್ಯಾಪಕವಾಗಿ ಕೇಳಿ ಬಂದಿದ್ದರ ಹಿನ್ನೆಲೆಯಲ್ಲಿ ಇದೇ ಮೊದಲ ಬಾರಿಗೆ ವಿಶ್ವಸಂಸ್ಥೆಯ ಮಹಾಸಭೆಯಲ್ಲಿ ವಿಸ್ತೃತ ಚರ್ಚೆ ನಡೆಯಿತು.
ಗೊತ್ತುವಳಿಯಲ್ಲಿ ‘ಡ್ರೋನ್’ ಪದವನ್ನು ಬಳಸುವ ಬಗ್ಗೆ ಪಾಕಿಸ್ತಾನವು ವಿಶೇಷ ಆಸಕ್ತಿ ವಹಿಸಿ ಮಿತ್ರ ರಾಷ್ಟ್ರಗಳ ಬೆಂಬಲ ಪಡೆಯುವಲ್ಲಿ ಯಶಸ್ವಿಯಾಗಿದೆ.
ಕಳೆದ ಸೆಪ್ಟೆಂಬರ್ 27ರಂದು ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಫ್ ಅವರು ವಿಶ್ವಸಂಸ್ಥೆಯ ಮಹಾಸಭೆಯಲ್ಲಿ ಡ್ರೋನ್ ದಾಳಿಯಿಂದ ತಮ್ಮ ದೇಶದ ಸಾರ್ವಭೌಮತ್ವಕ್ಕೆ ಧಕ್ಕೆಯಾಗಿದೆ ಎಂದು ತಿಳಿಸಿದ್ದರು.
ಭಯೋತ್ಪಾದಕರ ಅಡಗುತಾಣದ ಮೇಲೆ ದಾಳಿ ಮಾಡುವ ಸಂದರ್ಭದಲ್ಲಿ ಅನೇಕ ನಾಗರಿಕರೂ ಸತ್ತಿದ್ದಾರೆ ಎಂದು ಷರೀಫ್ ದೂರಿದ್ದರು. ಭಯೋತ್ಪಾದಕ ಚಟುವಟಿಕೆಗಳನ್ನು ದಮನ ಮಾಡುವ ಸಂದರ್ಭದಲ್ಲಿ ಮಾನವ ಹಕ್ಕುಗಳ ಕಾಯ್ದೆ, ಅಂತರರಾಷ್ಟ್ರೀಯ ಮಾನವೀಯತೆ ಕಾಯ್ದೆ ಮತ್ತು ಇತರ ನಿಯಮಗಳು ಉಲ್ಲಂಘನೆ ಆಗದಂತೆ ನೋಡಿಕೊಳ್ಳಬೇಕು ಎಂದು ಗೊತ್ತುವಳಿ ತಿಳಿಸಿದೆ. ಈ ಗೊತ್ತುವಳಿಗೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಸಮ್ಮತಿ ನೀಡಿದರೆ ಮಾತ್ರ ಅದಕ್ಕೆ ಬಲ ಬರುತ್ತದೆ ಎಂದು ವಿಶ್ಲೇಷಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.