ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ತೆರಿಗೆ ವಂಚಕರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ’

ಕ್ಷಮಾದಾನ ಅವಧಿ: ತೆರಿಗೆ ಬಾಕಿ ಪಾವತಿಗೆ ಡಿ. 31 ಕೊನೆ ದಿನ
Last Updated 4 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಬೆಂಗಳೂರು: ಸೇವಾ ತೆರಿಗೆ ವಂಚಕರ ವಿರುದ್ಧ ಸರ್ಕಾರ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಿದೆ ಎಂದು ಪುನರು­ಚ್ಚರಿಸಿ­ರುವ ಕೇಂದ್ರ ಹಣಕಾಸು ಸಚಿವ ಪಿ. ಚಿದಂಬರಂ, ರೂ 50 ಲಕ್ಷಕ್ಕಿಂತ ಹೆಚ್ಚಿನ ಮೊತ್ತ ಬಾಕಿ ಉಳಿಸಿ­ಕೊಂಡ­ವರನ್ನು ಬಂಧಿಸಿ ಜೈಲಿಗೆ ಕಳು­ಹಿಸಲಾ­ಗುವುದು ಎಂದು ಎಚ್ಚರಿಕೆ ನೀಡಿದರು.

ಬುಧವಾರ ಇಲ್ಲಿ ನಡೆದ ಕೇಂದ್ರ ಅಬಕಾರಿ ಮತ್ತು ಸೇವಾ ತೆರಿಗೆ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಅವರು ಮಾತ ನಾಡಿದರು.
‘2007ರ ಅಕ್ಟೋಬರ್‌ 1ರಿಂದ  2012ರ ಡಿಸೆಂಬರ್‌ 31ರವರೆಗೆ ಯಾರು ಸೇವಾ ತೆರಿಗೆ ಪಾವತಿಸಿಲ್ಲವೋ ಅವರಿಗಾಗಿಯೇ ಸರ್ಕಾರ  ಸ್ವಯಂಪ್ರೇರಿ­ತವಾಗಿ ತೆರಿಗೆ ಪಾವತಿಸುವುದನ್ನು ಉತ್ತೇಜಿಸುವ ಯೋಜನೆ (ವಿಸಿಇಎಸ್‌) ಜಾರಿಗೆ ತಂದಿದೆ.

ಮೇ 10ರಿಂದ ಈ ‘ಕ್ಷಮಾದಾನ’ ಅವಧಿ ಯೋಜನೆ ಜಾರಿಗೆ ಬಂದಿದ್ದು ಡಿ. 31ರಂದು ಕೊನೆ­ಗೊಳ್ಳಲಿದೆ. ಬಾಕಿದಾರರಿಗೆ ಇದೊಂದು ಸುವರ್ಣ ಅವಕಾಶ.

16 ವರ್ಷಗಳ ನಂತರ ಸರ್ಕಾರ ಇಂಥ­ದೊಂದು ಯೋಜನೆ­ಯನ್ನು ಜಾರಿಗೊ­ಳಿಸಿದೆ.  ಇನ್ನು 20 ವರ್ಷಗಳವರೆಗೆ ಇಂತಹ ‘ಕ್ಷಮಾದಾನ’ ಯೋಜನೆ ಜಾರಿ­ಗೊಳ್ಳುವ ಸಾಧ್ಯತೆ ಕಡಿಮೆ. ಸೇವಾ ತೆರಿಗೆ ಬಾಕಿ ಉಳಿಸಿಕೊಂಡವರು ‘ವಿಸಿಇಎಸ್‌’ ಯೋಜನೆಯಡಿ ಆದಷ್ಟೂ ಬೇಗ ಬಾಕಿ ಪಾವತಿಸುವುದು ಒಳ್ಳೆಯದು. ಇಲ್ಲದಿದ್ದರೆ,  ಹಣಕಾಸು ಗುಪ್ತಚರ ಇಲಾಖೆ ಅಂತಹವರ ಬೆನ್ನುಹತ್ತಲಿದೆ.

ಪ್ರತಿಯೊಬ್ಬ ತೆರಿಗೆದಾರರ ವಿವರವೂ ತೆರಿಗೆ ಇಲಾಖೆ  ಬಳಿ ಇದ್ದು, ಯಾವುದೇ ಕಾರಣಕ್ಕೂ ತೆರಿಗೆ ವಂಚಿಸಲು ಸಾಧ್ಯವಿಲ್ಲ’ ಎಂದು ಎಚ್ಚರಿಸಿದರು.

‘ವಿಸಿಇಎಸ್‌’ ಯೋಜನೆಯಡಿ ಸ್ವಯಂಪ್ರೇರಿತವಾಗಿ ಸೇವಾ ತೆರಿಗೆ ಪಾವತಿಸಲು ಈವರೆಗೆ 17 ಲಕ್ಷ ಜನರು ಆನ್‌­ಲೈನ್‌­ನಲ್ಲಿ ನೋಂದಣಿ ಮಾಡಿಕೊಂಡಿ­ದ್ದಾರೆ. ಆದರೆ, ಇವರಲ್ಲಿ ತೆರಿಗೆ ಪಾವತಿಸಿರುವುದು 7 ಲಕ್ಷ ಜನ ಮಾತ್ರ. ಇನ್ನೂ 10 ಲಕ್ಷ ಜನ ತೆರಿಗೆ ಪಾವತಿಸಬೇಕಿದೆ.

ಯಾವುದೇ ದಂಡ ಇಲ್ಲದೆ, ಸುಲಭ ಕಂತುಗಳಲ್ಲಿ ತೆರಿಗೆ ಪಾವತಿಸಬಹುದಾದ  ಇಂತಹ ಅವಕಾ­ಶವನ್ನು ಯಾವುದೇ ದೇಶದ ಸರ್ಕಾರ ತೆರಿಗೆ ವಂಚಕರಿಗೆ ನೀಡು­ವುದಿಲ್ಲ’  ಎಂದು ಅವರು ಪ್ರಶ್ನೆಯೊಂ­ದಕ್ಕೆ ಉತ್ತರಿಸಿದರು.

3ನೇ ಸ್ಥಾನದಲ್ಲಿ ಬೆಂಗಳೂರು
‘ವಿಸಿಇಎಸ್‌’ ಯೋಜನೆಯಡಿ ಇದುವರೆಗೆ ಅತ್ಯಂತ ಹೆಚ್ಚು ಸೇವಾ ತೆರಿಗೆ ಸಂಗ್ರಹ­ವಾಗಿರುವ ವಲಯಗಳಲ್ಲಿ ಬೆಂಗಳೂರಿಗೆ ಮೂರನೇ ಸ್ಥಾನ ಲಭಿಸಿದೆ.  ಡಿ. 2ರವರೆಗೆ ಬೆಂಗಳೂರು ವಲಯ­ದಲ್ಲಿ 432 ಜನರು ಸ್ವಯಂ­ಪ್ರೇರಿ­ತವಾಗಿ ಸೇವಾ ತೆರಿಗೆ ಪಾವತಿಸಿದ್ದಾರೆ.

₨155.94 ಕೋಟಿ ತೆರಿಗೆ ಸಂಗ್ರಹವಾಗಿದೆ. ಕೊನೆಯ ದಿನದೊಳಗೆ (ಡಿ. 31) ಈ ಮೊತ್ತ ಇನ್ನಷ್ಟು ಹೆಚ್ಚುವ ನಿರೀಕ್ಷೆ ಇದೆ ಎಂದು ಕೇಂದ್ರ ಅಬಕಾರಿ ಇಲಾಖೆಯ ಬೆಂಗಳೂರು ವಲಯದ ಆಯುಕ್ತೆ ವನಜಾ ಎನ್‌.ಸರ್ನಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT