ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ತ್ಯಾಗ ಮನೋಭಾವ ಮೈಗೂಡಿಸಿಕೊಳ್ಳಿ’

Last Updated 25 ಸೆಪ್ಟೆಂಬರ್ 2013, 5:24 IST
ಅಕ್ಷರ ಗಾತ್ರ

ದಾವಣಗೆರೆ: ಸಂಪಾದನೆ ಮಾಡುವುದು ದೊಡ್ಡದಲ್ಲ. ತ್ಯಾಗವೇ ದೊಡ್ಡ ಸಾಧನೆ. ಹೀಗಾಗಿ, ಇತರರಿಗೆ ಬಿಡುವುದನ್ನು ಕಲಿಯಬೇಕು ಎಂದು ಶ್ರೀಕ್ಷೇತ್ರ ಕನಕಗಿರಿಯ ಭುವನಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ ಸಲಹೆ ನೀಡಿದರು.

ಮಹಾವೀರ ಸಂಘದ ವತಿಯಿಂದ ನಗರದ ಎಂಸಿಸಿ ‘ಬಿ’ ಬ್ಲಾಕ್‌ನಲ್ಲಿರುವ ಆದಿನಾಥ ದಿಗಂಬರ ಜಿನಮಂದಿರದಲ್ಲಿ ಮಂಗಳವಾರ ಆಯೋಜಿಸಿದ್ದ ‘ಕ್ಷಮಾವಳಿ’ ಕಾರ್ಯಕ್ರಮ ಹಾಗೂ ‘ಶ್ರೀಮುಖ’ ಪತ್ರಿಕೆ ಬಿಡುಗಡೆ ಸಮಾರಂಭದ ನೇತೃತ್ವ ವಹಿಸಿ ಅವರು ಮಾತನಾಡಿದರು.

ತ್ಯಾಗ, ಶಾಂತಿಗೆ ಮಹತ್ವ ಕೊಡುವುದು ಜೈನ ಧರ್ಮ. ಬಿಡುವುದನ್ನು ಕಲಿಯಬೇಕು ಎಂಬುದೇ ಧರ್ಮದ ಉಪದೇಶ. ತ್ಯಾಗ ಮಾಡಿ ಜೀವನ ಗೆದ್ದ ಬಾಹುಬಲಿ ಇಡೀ ಸಮಾಜಕ್ಕೆ ಆದರ್ಶವಾಗಿದ್ದಾರೆ ಎಂದರು.

ಭಾರತೀಯ ಪರಂಪರೆಯಲ್ಲಿ ಪರ್ವಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಆಧ್ಯಾತ್ಮಿಕ ಪ್ರಪಂಚದಲ್ಲಿ ಪರ್ವಕ್ಕೆ ಹೆಚ್ಚಿನ ಪ್ರಾಮುಖ್ಯತೆ; ಲೌಕಿಕ ಜಗತ್ತಿನಲ್ಲಿ ಪರ್ವತಕ್ಕೆ ಪ್ರಾಮುಖ್ಯತೆ ಇದೆ. ಆತ್ಮವನ್ನು ತಪಸ್ಸು, ಸಾಧನೆಯ ಮೂಲಕ ಎತ್ತರಕ್ಕೆ ಬೆಳೆಸಿಕೊಳ್ಳಬೇಕು. ಹೀಗಾಗಿ, ಪರ್ವಗಳ (ಧಾರ್ಮಿಕ ಹಬ್ಬ) ಆಚರಣೆ ಮಾಡಬೇಕು ಎಂದು ಹೇಳಿದರು.

ತತ್ವದ ಬಗ್ಗೆ ಪ್ರೀತಿ ಇದ್ದರೆ, ಭಕ್ತಿ, ಜ್ಞಾನ ಬರುತ್ತದೆ. ಇಂದ್ರಿಯಗಳು ತಮ್ಮ ಇಚ್ಛೆ ಬಿಟ್ಟು ಸ್ಥಿರವಾಗುತ್ತವೆ. ಜಗತ್ತಿಗೆ ಭಕ್ತಿ, ಜ್ಞಾನ, ಚಾರಿತ್ರ್ಯ ಕೊಟ್ಟಿರುವ ಭಾರತದ ಪಾರಂಪರಿಕ ಪದ್ಧತಿಗಳ ಆಚರಣೆಯನ್ನು ಬಿಡಬಾರದು. ಆತ್ಮ ಸಾಧನೆ ಮಾಡುವ ಉದ್ದೇಶದಿಂದ ಪರ್ವಗಳನ್ನು ಆಚರಿಸಬೇಕು ಎಂದು ತಿಳಿಸಿದರು.

ಎಲ್ಲ ವಿದ್ಯೆಯಲ್ಲಿಯೂ ಧರ್ಮ ಇರಬೇಕು. ಇಲ್ಲವಾದರೆ ಅದು ಗುರಿ ಇಲ್ಲದ ವಿದ್ಯೆಯಾಗುತ್ತದೆ. ಇಂದ್ರಿಯಗಳ  ಅಪೇಕ್ಷೆ ಮೀರಿ ನಿಲ್ಲಬೇಕು. ಅಗ, ಮನೋಬಲ ಸಾಧ್ಯವಾಗುತ್ತದೆ. ಶುಭದ ಬಗ್ಗೆ ಯೋಚಿಸಿದರೆ ಪುಣ್ಯ; ಅಶುಭದ ಬಗ್ಗೆ ಯೋಚಿಸಿದರೆ ಪಾಪ ಪ್ರಾಪ್ತಿಯಾಗುತ್ತದೆ. ಇಂದ್ರಿಯಗಳ ಅಪೇಕ್ಷೆಯಿಂದ ದೂರ ಇರಬೇಕಾದರೆ ಮನೆ ಬಿಟ್ಟು ಮಂದಿರಗಳಿಗೆ ಬರಬೇಕು ಎಂದು ಸಲಹೆ ನೀಡಿದರು.

ಶ್ರೀಕ್ಷೇತ್ರ ಸೋಂದೆಯ ಭಟ್ಟಾಕಲಂಕ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಮಾಜಿ ಶಾಸಕ ಇಲ್ಕಲ್‌ ವಿಜಯಕುಮಾರ್‌, ಕರ್ನಾಟಕ ಜೈನ ಸಂಘದ ಇಲ್ಕಲ್‌ ಅಜ್ಜಪ್ಪ, ಮಹಾವೀರ ಸಂಘದ ಪದಾಧಿಕಾರಿಗಳು ಹಾಜರಿದ್ದರು.

ಪ್ರಸನ್ನ ಚಂದ್ರಪ್ರಭಾ ಹಾಗೂ ಚೇತನಾ ಪ್ರಾರ್ಥಿಸಿದರು. ಮಹಾವೀರ ಸಂಘದ ಮಾಜಿ ಅಧ್ಯಕ್ಷ ಎಸ್‌.ಆದಿನಾಥ್‌ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT