ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ದಕ್ಷಿಣ’ದ ಆಧಿಪತ್ಯಕ್ಕೆ ಪ್ರತಿಷ್ಠಿತರ ಸೆಣಸಾಟ

Last Updated 10 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ಒಬ್ಬರು ಇದೇ ಕ್ಷೇತ್ರದಲ್ಲಿ ಆರನೇ ಬಾರಿ ಅದೃಷ್ಟ ಪರೀಕ್ಷೆಗೆ ಇಳಿದ ಅನುಭವಿ. ಮತ್ತೊಬ್ಬರು ರಾಜಕೀಯ ರಂಗಕ್ಕೆ ಈಗಷ್ಟೇ ಕಾಲಿರಿಸಿದ ಹೊಸ ಮುಖ. ರಾಜಕೀಯದ ಎಲ್ಲ ಪಟ್ಟುಗಳನ್ನೂ ಬಲ್ಲ ಬಿಜೆಪಿ ಅಭ್ಯರ್ಥಿ ಅನಂತಕುಮಾರ್‌ ಆರನೇ ಗೆಲುವಿಗೆ ಯತ್ನಿಸುತ್ತಿದ್ದರೆ, ರಾಜಕೀಯದ ಮೊದಲ ‘ಇನಿಂಗ್ಸ್‌’­ನಲ್ಲೇ ಅನುಭವಿ ಎದುರಾಳಿಯನ್ನು ‘ಚಿತ್‌’ ಮಾಡುವ ತವಕದಲ್ಲಿದ್ದಾರೆ ಕಾಂಗ್ರೆಸ್‌ನ  ನಂದನ್‌ ನಿಲೇಕಣಿ.

ಇದು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಚಿತ್ರಣ. 23 ಅಭ್ಯರ್ಥಿಗಳು ಕಣದಲ್ಲಿದ್ದರೂ ಈ ಇಬ್ಬರ ನಡುವೆಯೇ ನೇರ ಹಣಾಹಣಿ.
ನಿಲೇಕಣಿ ರಾಜಕೀಯ ಪ್ರವೇಶದ ಸುದ್ದಿಯಿಂದಾಗಿ ಚುನಾವಣೆ ಘೋಷಣೆಗೂ ಎರಡು ತಿಂಗಳ ಮೊದಲೇ ಈ ಕ್ಷೇತ್ರದಲ್ಲಿ ಸಂಚಲನ ಉಂಟಾಗಿತ್ತು. ಪ್ರಬಲ ಪ್ರತಿಸ್ಪರ್ಧೆಯ ಸುಳಿವು ಅರಿತ ಹಾಲಿ ಸಂಸದ ಅನಂತಕುಮಾರ್‌, ರಾಷ್ಟ್ರೀಯ ವಿಶಿಷ್ಟ ಗುರುತು ಸಂಖ್ಯೆ ಪ್ರಾಧಿಕಾರದ (ಆಧಾರ್) ಅಧ್ಯಕ್ಷ ಸ್ಥಾನದಲ್ಲಿದ್ದ ನಿಲೇಕಣಿ ವಿರುದ್ಧ ನೇರ ವಾಗ್ದಾಳಿಗೆ ಇಳಿದಿದ್ದರು. ಚುನಾವಣಾ ಅಖಾಡಕ್ಕೆ ಇಳಿದ ಮೇಲೆ ‘ಸಮರ’ ಜೋರಾಗಿಯೇ ನಡೆಯುತ್ತಿದೆ. ಮಾಡು ಇಲ್ಲವೇ ಮಡಿ ಎಂಬಂತಹ ಪರಿಸ್ಥಿತಿಯಲ್ಲಿ ಇಬ್ಬರೂ ಇದ್ದಾರೆ .

ಕಡೆ ಗಳಿಗೆಯಲ್ಲಿ ಜೆಡಿಎಸ್‌ ರೂತ್‌ ಮನೋರಮಾ ಅವರನ್ನು ಕಣಕ್ಕಿಳಿಸಿದ್ದರೆ, ಆಮ್‌ ಆದ್ಮಿ ಪಕ್ಷದಿಂದ ಮಕ್ಕಳ ಹಕ್ಕುಗಳ ಹೋರಾಟಗಾರ್ತಿ ನೀನಾ ಪಿ.ನಾಯಕ್‌ ಸ್ಪರ್ಧಿಸಿ­ದ್ದಾರೆ. ಬಿಜೆಪಿ ಸೇರ್ಪಡೆಯ ತಮ್ಮ ಯತ್ನ ತಡೆದ ಅನಂತ­ಕುಮಾರ್‌ ಅವರ ಗೆಲುವಿಗೆ ಅಡ್ಡಗಾಲು ಹಾಕುವ ಏಕೈಕ ಉದ್ದೇಶದಿಂದ ಶ್ರೀರಾಮಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್‌ ಇಲ್ಲಿಯೂ ಸ್ಪರ್ಧೆಯಲ್ಲಿದ್ದಾರೆ.

ಬಿಎಸ್‌ಪಿಯ ಆರ್‌.ಖಾನ್‌ ಅಬ್ದುಲ್, ಎಸ್‌ಯುಸಿಐನ ಎಂ.ಉಮಾದೇವಿ, ಪಿರಮಿಡ್‌ ಪಕ್ಷದ ಗಾಯತ್ರಿ, ಸಮಾಜ­ವಾದಿ ಪಕ್ಷದ ಟಿ.ರವಿಕುಮಾರ್, ಫಾರ್ವರ್ಡ್‌ ಬ್ಲಾಕ್‌ನ ಜಿ.ಆರ್‌.ಶಿವಶಂಕರ್, ಸಂಯುಕ್ತ ಜನತಾದಳದ ಸೈಯದ್‌ ಮೆಹಬೂಬ್, ಭಾರತೀಯ ಡಾ.ಬಿ.ಆರ್‌.ಅಂಬೇಡ್ಕರ್ ಪಕ್ಷದ  ಬಿ.ಎಂ.ಮಹದೇವಸ್ವಾಮಿ ಮತ್ತು 11 ಪಕ್ಷೇತರರು ಕಣದಲ್ಲಿದ್ದಾರೆ.

ವ್ಯಕ್ತಿ ಪ್ರತಿಷ್ಠೆ ಪಣಕ್ಕೆ: ಬಹುತೇಕ ಸುಶಿಕ್ಷಿತ ಮತದಾರರೇ ಇರುವ ಈ ಕ್ಷೇತ್ರದಲ್ಲಿ ಅನಂತಕುಮಾರ್‌ ಮತ್ತು ನಂದನ್‌ ನಿಲೇಕಣಿ ಅವರ ನಡುವೆಯೇ ಗೆಲುವಿಗಾಗಿ ಪೈಪೋಟಿ ಇದೆ. ಸ್ಪರ್ಧೆಯಲ್ಲಿರುವ ಇತರ ಕೆಲವರು, ಈ ಇಬ್ಬರ ಸೋಲು ಅಥವಾ ಗೆಲುವಿನ ಮೇಲೆ ಪರಿಣಾಮ ಬೀರುವಷ್ಟು ನಿರ್ಣಾಯ­ಕ­ರಾಗಬಹುದು. ಮತದಾರರ ಮನದಲ್ಲೂ ಇದು ನಿಚ್ಚಳವಾಗಿಯೇ ಇದ್ದಂತೆ ಕಾಣುತ್ತದೆ. ಕ್ಷೇತ್ರದ ಯಾವುದೇ ಮೂಲೆಗೆ ಹೋದರೂ ಚುನಾವಣೆಗೆ ಸಂಬಂಧಿಸಿದ ಚರ್ಚೆ ಇಬ್ಬರ ನಡುವಿನ ಹೋಲಿಕೆಗೆ ಸೀಮಿತವಾಗಿದೆ.

ಇಡೀ ಕ್ಷೇತ್ರ ನಗರ ಪ್ರದೇಶವೇ ಆಗಿರುವುದರಿಂದ ಅನಂತ­ಕುಮಾರ್‌ ‘ಮೋದಿ’ ಹೆಸರಿನಲ್ಲಿ ಮತಬುಟ್ಟಿ ತುಂಬಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಮಂಗಳವಾರವಷ್ಟೇ ಈ ಕ್ಷೇತ್ರದಲ್ಲಿ ಮೋದಿ ರ್‍ಯಾಲಿ ನಡೆದಿದೆ. ಇದು ಬಿಜೆಪಿ ಪಾಲಿಗೆ ವರದಾನ ಆಗಬಹುದು. ಕೇಂದ್ರದಲ್ಲಿ ಎನ್‌ಡಿಎ ಅಧಿಕಾರಕ್ಕೆ ಬಂದಲ್ಲಿ ಅನಂತಕುಮಾರ್ ಅವರು ಸಂಪುಟದಲ್ಲಿ ಮಹತ್ವದ ಸ್ಥಾನ ಪಡೆಯುತ್ತಾರೆ ಎಂಬ ಅಂಶವೂ ಅವರ ಬೆಂಬಲಕ್ಕೆ ಬರುವ ಸಾಧ್ಯತೆ ಇದೆ.

ಆದರೆ, ಐದು ಬಾರಿ ಅವಕಾಶ ನೀಡಿದರೂ ಕ್ಷೇತ್ರಕ್ಕಾಗಿ ಗುರುತಿಸುವಂತಹ ಕೆಲಸಗಳನ್ನು ಮಾಡಲಿಲ್ಲ ಮತ್ತು ಸುಲಭ­ವಾಗಿ ಜನರ ಸಂಪರ್ಕಕ್ಕೆ ಸಿಗುವುದಿಲ್ಲ ಎಂಬ ಅಸಹನೆಯೂ ಕೆಲವರಲ್ಲಿ ಇದೆ. ಚುನಾವಣಾ ಸಮಯಕ್ಕೆ ಮಾತ್ರ ಜನರ ಬಳಿ ಬರುತ್ತಾರೆ ಎಂಬ ಆಪಾದನೆಯೂ ಇದೆ. ನಿರಂತರವಾಗಿ ಅವರ ಬೆಂಬಲಕ್ಕೆ ನಿಂತ ಮತದಾರರು ಈ ಬಾರಿ ಅನ್ಯರತ್ತ ನೋಡಲು ಈ ಅಂಶ ಕಾರಣ ಆಗಬಹುದು.

ಯುವಕರು ಮತ್ತು ಉದ್ಯೋಗದ ಅವಕಾಶಕ್ಕಾಗಿ ಕಾದು ಕುಳಿತ ಮಧ್ಯಮ ವರ್ಗದ ಬೆಂಬಲ ಗಿಟ್ಟಿಸಲು ನಿಲೇಕಣಿ ಯತ್ನಿಸುತ್ತಿದ್ದಾರೆ. ಮಾಹಿತಿ ತಂತ್ರಜ್ಞಾನ ಉದ್ಯಮದ ದೈತ್ಯ ಸಂಸ್ಥೆ ಇನ್ಫೊಸಿಸ್‌ ಕಂಪೆನಿಯ ಸಂಸ್ಥಾಪಕರಲ್ಲಿ ಒಬ್ಬರಾಗಿ ನಗರದಲ್ಲಿ ಉದ್ಯೋಗ ಅವಕಾಶಗಳನ್ನು ಸೃಷ್ಟಿಸಿರುವುದನ್ನು ಅವರು ಪ್ರಚಾರದ ಅಸ್ತ್ರವಾಗಿ ಬಳಸಿಕೊಳ್ಳುತ್ತಿದ್ದಾರೆ. ದೇಶದ ಅತ್ಯಂತ ಶ್ರೀಮಂತ (₨ 7,700 ಕೋಟಿ ಆಸ್ತಿ) ಅಭ್ಯರ್ಥಿ­ಯಾಗಿದ್ದರೂ, ನಿತ್ಯವೂ ಪಾದಯಾತ್ರೆ ಮೂಲಕ ಜನರ ಸಂಪರ್ಕ ಸಾಧಿಸಿ  ಎದುರಾಳಿಯ ನಿದ್ದೆಗೆಡಿಸಿದ್ದಾರೆ.

ಆದರೆ, ಹತ್ತು ವರ್ಷಗಳ ಕಾಲ ಅಧಿಕಾರ ನಡೆಸಿದ ಕಾಂಗ್ರೆಸ್‌ ನೇತೃತ್ವದ ಯುಪಿಎ ಮೈತ್ರಿಕೂಟದ ವಿರುದ್ಧದ ಆಡ­ಳಿತ ವಿರೋಧಿ ಅಲೆ ನಿಲೇಕಣಿ ಪಾಲಿಗೆ ಬಿಸಿ ತುಪ್ಪ­ವಾಗ­ಬಹುದು. ‘ಆಧಾರ್‌’ ಯೋಜನೆ ಕುರಿತು ಸುಪ್ರೀಂ­ಕೋರ್ಟ್‌ ವ್ಯಕ್ತಪಡಿಸಿದ ಅಭಿಪ್ರಾಯ ಮತ್ತು ಅದರ ಬಗ್ಗೆ ಬಿಜೆಪಿ ನಾಯಕರು ನಡೆಸಿದ ವಾಗ್ದಾಳಿ ಒಂದಷ್ಟು ಜನರ ಮನಸ್ಸಿನ ಮೇಲೆ ಪ್ರಭಾವ ಬೀರಿದೆ. ಇದು ಕೂಡ ಅವರ ಪಾಲಿಗೆ ಪ್ರತಿಕೂಲ ಪರಿಣಾಮ ಬೀರಬಹುದು. ರಾಜಕೀಯ­ದಲ್ಲಿ ಅನನು­ಭವಿ ಎಂಬುದು ಅವರಿಗೆ ಇರುವ ಮತ್ತೊಂದು ತೊಡಕು.

ಪಕ್ಷಗಳ ಪೈಪೋಟಿ: ವ್ಯಕ್ತಿ ಪ್ರತಿಷ್ಠೆಯ ಕಣವಾಗಿರುವ ಈ ಕ್ಷೇತ್ರದ ಮೇಲಿನ ಹಿಡಿತಕ್ಕೆ ಪಕ್ಷಗಳ ಮಟ್ಟದಲ್ಲೂ ಹಣಾಹಣಿ ಇದೆ. ತನ್ನ ಭದ್ರಕೋಟೆಯನ್ನು ಉಳಿಸಿಕೊಳ್ಳಲು ಬಿಜೆಪಿ ನಾನಾ ಕಸರತ್ತುಗಳನ್ನು ಮಾಡುತ್ತಿದೆ. 23 ವರ್ಷಗಳ ಹಿಂದೆ ಕೈತಪ್ಪಿದ ಕ್ಷೇತ್ರವನ್ನು ಮತ್ತೆ ವಶಕ್ಕೆ ಪಡೆಯಲು ಖುದ್ದು ಕಾಂಗ್ರೆಸ್‌ ಹೈಕಮಾಂಡ್‌ ಆಸಕ್ತಿ ತಳೆದಿದೆ. ಅದಕ್ಕಾಗಿ ಕ್ಷೇತ್ರದಲ್ಲಿನ ಬೆಳವಣಿಗೆಗಳ ಮೇಲೆ ಕಾಂಗ್ರೆಸ್‌ ವರಿಷ್ಠರು ನೇರ ನಿಗಾ ಇಟ್ಟಿದ್ದಾರೆ.

ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಎಂಟು ವಿಧಾನಸಭಾ ಕ್ಷೇತ್ರಗಳಿವೆ. ತಲಾ ನಾಲ್ಕು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ಶಾಸಕರಿದ್ದಾರೆ. ಸಚಿವ ರಾಮಲಿಂಗಾ ರೆಡ್ಡಿ, ಶಾಸಕ­ರಾದ ಎಂ.ಕೃಷ್ಣಪ್ಪ, ಪ್ರಿಯಕೃಷ್ಣ ಮತ್ತು ಆರ್‌.ವಿ.ದೇವರಾಜ್‌ ಕಾಂಗ್ರೆಸ್‌ ಪರವಾಗಿ ತಾವೇ ಚುನಾವಣಾ ಕಣದಲ್ಲಿದ್ದಂತೆ ಓಡಾಡುತ್ತಿದ್ದಾರೆ. ಹೈಕಮಾಂಡ್‌ನ ಕೆಂಗಣ್ಣಿಗೆ ಗುರಿಯಾಗು­ವುದನ್ನು ತಪ್ಪಿಸಿಕೊಳ್ಳಲು ಕಾಂಗ್ರೆಸ್‌ನ ಎಲ್ಲ ಮುಖಂಡರೂ ನಿಲೇಕಣಿ ಗೆಲುವಿಗೆ ಬೆವರು ಸುರಿಸುತ್ತಿದ್ದಾರೆ. ಹಿಂದಿನ ಚುನಾವಣೆಗಳಲ್ಲಿ ಕಾಂಗ್ರೆಸ್‌ನಲ್ಲಿ ಕಾಣುತ್ತಿದ್ದ ಒಡಕು ಈ ಬಾರಿ ತುಸು ದೂರವಾದಂತಿದೆ.

ಬಿಜೆಪಿ ಶಾಸಕರಾದ ಆರ್‌.ಅಶೋಕ, ಸತೀಶ್‌ ರೆಡ್ಡಿ, ಬಿ.ಎನ್‌. ವಿಜಯಕುಮಾರ್‌, ಎಲ್‌.ಎ. ರವಿಸುಬ್ರಹ್ಮಣ್ಯ, ವಿಧಾನ ಪರಿಷತ್‌ ಸದಸ್ಯ ವಿ.ಸೋಮಣ್ಣ ಮತ್ತಿತರರು ತಮ್ಮ ಕ್ಷೇತ್ರಗಳಲ್ಲಿ ಪಕ್ಷಕ್ಕೆ ಮುನ್ನಡೆ ದೊರಕಿಸುವ ಹಟಕ್ಕೆ ಬಿದ್ದಿದ್ದಾರೆ.

ಜಾತಿ ಗಣಿತ: ಇಲ್ಲಿ ಒಕ್ಕಲಿಗರು ನಿರ್ಣಾಯಕರು. ಅವರ ಬೆಂಬಲ­ಕ್ಕಾಗಿ ಇಬ್ಬರ ನಡುವೆ ಪೈಪೋಟಿ. ರಾಜ್ಯಸಭಾ ಸದಸ್ಯ ಎಸ್‌.ಎಂ.ಕೃಷ್ಣ ಅವರ ಸಹಾಯದಿಂದ ಒಕ್ಕಲಿಗರ ಮತ ಗಿಟ್ಟಿಸಲು ನಿಲೇಕಣಿ  ಯತ್ನಿಸುತ್ತಿದ್ದಾರೆ. ಶಾಸಕ ಕೃಷ್ಣಪ್ಪ ಕೂಡ ಈ ಯತ್ನಕ್ಕೆ ಕೈಜೋಡಿಸಿದ್ದಾರೆ. ಅನಂತಕುಮಾರ್‌ ಒಕ್ಕಲಿಗ­ರನ್ನು ಸೆಳೆಯಲು ಅಶೋಕ ಅವರನ್ನು ನೆಚ್ಚಿಕೊಂಡಿದ್ದಾರೆ.

ಬ್ರಾಹ್ಮಣರ ಮತಗಳು ಚದುರದಂತೆ ಹಿಡಿದಿಡುವುದು ಬಿಜೆಪಿಗೆ ಈ ಬಾರಿ ಸವಾಲಿನ ಕೆಲಸವಾದಂತಿದೆ. ನಿಲೇಕಣಿ ಬಗ್ಗೆಯೂ ಆ ಸಮುದಾಯದಲ್ಲಿ ಒಳ್ಳೆಯ ಅಭಿಪ್ರಾಯ ಇರುವುದು ಇದಕ್ಕೆ ಕಾರಣ.  ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರಗಳಲ್ಲಿ ಹೆಚ್ಚು ಸಂಖ್ಯೆಯಲ್ಲಿರುವ ಕುರುಬ ಸಮುದಾಯದವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾರಣಕ್ಕಾಗಿ ‘ಕೈ’ ಹಿಡಿಯುವ ಸಾಧ್ಯತೆ ಇದೆ.
ಅಲ್ಪಸಂಖ್ಯಾತರ ಮತಗಳು ಕೂಡ ಕಾಂಗ್ರೆಸ್‌ನತ್ತ ವಾಲುವ ಸಾಧ್ಯತೆಯೇ ಜಾಸ್ತಿ. ಅನಿವಾರ್ಯವಾಗಿ ಕಾಂಗ್ರೆಸ್‌ಗೆ ಮತ ಹಾಕು­ವುದಾಗಿ ಹೇಳುವ ಅಲ್ಪಸಂಖ್ಯಾತ ಮತದಾರರು, ‘ಅನಿವಾರ್ಯ’ ಏನು ಎಂಬುದನ್ನು ಮಾತ್ರ ಬಿಚ್ಚಿ ಹೇಳುವುದಿಲ್ಲ. ಲಿಂಗಾಯತರ ಮತಗಳಿಗಾಗಿ ಎರಡೂ ಪಕ್ಷಗಳ ನಡುವೆ ಹಣಾಹಣಿ ಇದೆ.

ಮುತಾಲಿಕ್‌ ಮತ್ತು ಆರ್‌ಎಸ್‌ಎಸ್‌ ಮೂಲದ ಹನುಮೇಗೌಡ ಬಿಜೆಪಿಯ ಮತಗಳನ್ನು ಕಸಿಯುವ ಸಾಧ್ಯತೆ ಇದೆ. ಇತ್ತ ರೂತ್‌ ಮನೋರಮಾ ನಗರದ ಕೊಳೆಗೇರಿ ವಾಸಿಗಳ ಪರ ಹೋರಾಟ ಮಾಡಿದವರು. ಅವರ ಗಳಿಕೆ ಕಾಂಗ್ರೆಸ್‌ಗೆ ಪೆಟ್ಟು ಕೊಡಬಹುದು. ‘ಆಪ’ ಇಲ್ಲಿ ಹೆಚ್ಚು ಮತ ಕಸಿಯುವ ಸಾಧ್ಯತೆಯೇನೂ ಕಾಣುತ್ತಿಲ್ಲ.

ಎಲ್ಲಕ್ಕಿಂತಲೂ ಮುಖ್ಯವಾಗಿ ಈ ಬಾರಿ 1.59 ಲಕ್ಷ ಹೊಸ ಮತದಾರರು ಹಕ್ಕು ಚಲಾವಣೆಗೆ ಸಿದ್ಧರಾಗಿದ್ದಾರೆ. ಅವರೇ ಚುನಾವಣೆಯ ಫಲಿತಾಂಶವನ್ನು ಬದಲಾಯಿಸುವಂತೆ ಕಾಣು­ತ್ತಿದೆ. ಇನ್ನೊಂದೆಡೆ ಇಲ್ಲಿ ಯಾವ ರಾಜಕೀಯ ಅಭಿಪ್ರಾಯ­ಗಳೂ ಇಲ್ಲದ ಅದೃಶ್ಯ ಮತದಾರರ ಸಂಖ್ಯೆಯೂ ದೊಡ್ಡದಿದೆ. ಅವರನ್ನು ಯಾರು ಒಲಿಸಿಕೊಳ್ಳುತ್ತಾರೆ ಎಂಬುದೂ ಮುಖ್ಯವಾಗಲಿದೆ.

ಬಿಎಸ್‌ವೈ ಏನು ಮಾಡುತ್ತಾರೆ?
ಒಂದೇ ಪಕ್ಷದಲ್ಲಿದ್ದರೂ ಅನಂತಕುಮಾರ್‌ ಮತ್ತು ಬಿ.ಎಸ್‌.ಯಡಿಯೂರಪ್ಪ ಕಡು ವೈರಿಗಳಂತೆ ಇದ್ದಾರೆ. ದಕ್ಷಿಣ ಕ್ಷೇತ್ರದಲ್ಲಿ ಲಿಂಗಾಯತರ ಸಂಖ್ಯೆ ದೊಡ್ಡದಿದೆ. ಇಲ್ಲಿ ಯಡಿಯೂರಪ್ಪ ಬಂದು ಪ್ರಚಾರ ಮಾಡಿ ಹೋಗಿದ್ದಾರೆ. ಆದರೆ, ಅವರು ತೆರೆಮರೆಯಲ್ಲಿ ಯಾವ ಸಂದೇಶ ರವಾನಿಸುತ್ತಾರೆ ಎಂಬುದು ಇಲ್ಲಿನ ಫಲಿತಾಂಶದ ಮೇಲೆ ಪರಿಣಾಮ ಬೀರುತ್ತದೆ ಎಂಬ ಅಭಿಪ್ರಾಯವೂ ದಟ್ಟವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT