ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ದಲಿತರು, ರೈತರ ಭದ್ರತೆಗೆ ಬಿಎಸ್‌ಪಿ ಹೋರಾಟ’

Last Updated 12 ಏಪ್ರಿಲ್ 2014, 10:08 IST
ಅಕ್ಷರ ಗಾತ್ರ

ಬಾಗಲಕೋಟೆ: ಚುನಾವಣೆ ಬಂದಾಗ ಮಾತ್ರ ಕ್ಷೇತ್ರದಲ್ಲಿ ಸುತ್ತಾಡುವ ಬಿಎಸ್‌ಪಿಯ ‘ಆನೆ’ ಉಳಿದ ಸಂದರ್ಭದಲ್ಲಿ ಎಲ್ಲಿಯೂ ಕಾಣಸಿಗುವುದಿಲ್ಲ. ಹೀಗಾಗಿ ಅಪರೂಪಕ್ಕೆ ಕಾಣಿಸಿಕೊಳ್ಳುವ ಉತ್ತರಪ್ರದೇಶದ ಅಪರಿಚಿತ ‘ಆನೆ’ಯ ಹತ್ತಿರ ಹೋಗಲು ಹಿಂಜರಿಯುತ್ತಿರುವ ಮುಳುಗಡೆ ಜಿಲ್ಲೆಯ ದಲಿತ, ಅಲ್ಪಸಂಖ್ಯಾತ ಮತದಾರರು ದೂರದಲ್ಲೆ ನಿಂತು ‘ಕೈ’ ಮುಗಿಯುತ್ತಿದ್ದಾರೆ.

ಕ್ಷೇತ್ರದಲ್ಲಿ ಅಭ್ಯರ್ಥಿಗಳ ಸೋಲು–ಗೆಲುವಿನಲ್ಲಿ ನಿರ್ಣಯಕ ಪಾತ್ರ ವಹಿಸುವಷ್ಟು ಸಂಖ್ಯೆಯಲ್ಲಿರುವ ದಲಿತರು ಮತ್ತು ಅಲ್ಪಸಂಖ್ಯಾತರ ವೋಟಿನ ಮೇಲೆ ಕಣ್ಣಿಟ್ಟಿರುವ ಬಿಎಸ್‌ಪಿ ಪ್ರಸ್ತುತ ಲೋಕಸಭಾ ಚುನಾವಣೆಗೆ ಯುವ ಮುಖಂಡ, ದಲಿತ ಪರ ಹೋರಾಟಗಾರ ವೈ.ಸಿ.ಕಾಂಬಳೆ ಅವರನ್ನು ಸ್ಪರ್ಧೆಗಳಿಸಿದೆ.

ಚುನಾವಣೆ ಹಿನ್ನೆಲೆಯಲ್ಲಿ ‘ಪ್ರಜಾವಾಣಿ’ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ವೈ.ಸಿ.ಕಾಂಬಳೆ ಅವರು ಪ್ರಸ್ತುತ ಚುನಾವಣೆಯಲ್ಲಿ ಪಕ್ಷ ವಹಿಸುವ ಪಾತ್ರದ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

* ಜನತೆಗೆ ನೀವು ನೀಡುವ ಭರವಸೆ ಏನು?
ಬಿಎಸ್‌ಪಿಯು ಬೇರೆ ಪಕ್ಷಗಳಂತೆ ಚುನಾವಣಾ ಪ್ರಣಾಳಿಕೆಯಲ್ಲಿ ಆಶ್ವಾಸನೆಗಳನ್ನು ಕೊಟ್ಟು ಅಧಿಕಾರಕ್ಕೆ ಬಂದ ನಂತರ ಮತದಾರರನ್ನು ವಂಚಿಸುವ ಕೆಲಸ ಮಾಡುವುದಿಲ್ಲ. ಬದಲಾಗಿ ಸಂವಿಧಾನ ಆಶಯಗಳನ್ನು ಜಾರಿಗೆ ತರುವುದೇ ನಮ್ಮ ಭರವಸೆಯಾಗಿದೆ.
ಖಾಸಗಿಕರಣದಿಂದ ಸರ್ಕಾರಿ ನೌಕರಿಗಳು ಕಣ್ಮರೆಯಾಗುತ್ತಿರುವ ಹಿನ್ನೆಲೆಯಲ್ಲಿ ಎಸ್‌ಸಿ, ಎಸ್‌ಟಿ, ಹಿಂದುಳಿದ ವರ್ಗಗಳು, ಬಡಕುಟುಂಬಗಳ ಯುವಕರಿಗೆ ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿಯನ್ನು ಕಲ್ಪಿಸಲು ಬಿಎಸ್‌ಪಿ ಪ್ರತಿಜ್ಞೆ ಮಾಡಿದೆ. ದೇಶಾದ್ಯಂತ ಬಾಕಿ ಇರುವ ಬ್ಯಾಕ್‌ ಲಾಗ್‌ ಹುದ್ದೆಗಳ ಭರ್ತಿ ಮತ್ತು ಬಡ್ತಿ ಮೀಸಲಾತಿ ಮಸೂದೆಯನ್ನು ಬಿಎಸ್‌ಪಿ ಜಾರಿಮಾಡಲು ಬದ್ಧವಾಗಿದೆ.
ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕುಡಚಿ–ಬಾಗಲಕೋಟೆ ರೈಲು ಮಾರ್ಗ ಪೂರ್ಣಗೊಳಿಸಲು ಹಾಗೂ ಬಾಗಲಕೋಟೆ–ರಾಯಚೂರು ಹೊಸ ರೈಲು ಮಾರ್ಗ ಪ್ರಾರಂಭಕ್ಕೆ ಆದ್ಯತೆ, ಕ್ಷೇತ್ರದ ಜನತೆಗೆ ಶುದ್ಧ ಕುಡಿಯುವ ನೀರು, ಸಮರ್ಪಕ ರಸ್ತೆ, ನೀರಾವರಿ ಸೌಲಭ್ಯ ಒದಗಿಸಲು ಮತ್ತು ದಲಿತರ ಮೇಲಿನ ದೌರ್ಜನ್ಯ ತಡೆಯಲು ಹೆಚ್ಚಿನ ಆದ್ಯತೆ ನೀಡುತ್ತೇನೆ. ಸಂಸತ್‌ಗೆ ಜನತೆ ನನ್ನನ್ನು ಆರಿಸಿ ಕಳುಹಿಸಿದರೆ ಕ್ಷೇತ್ರವನ್ನು ಸಮರ್ಥವಾಗಿ ಪ್ರತಿನಿಧಿಸಿ ಎಲ್ಲ ಯೋಜನೆಗಳನ್ನು ಕ್ಷೇತ್ರಕ್ಕೆ ತರುತ್ತೇನೆ.

* ಕ್ಷೇತ್ರಕ್ಕೆ ನಿಮ್ಮ ಕೊಡುಗೆ ಏನು?
ಜಿಲ್ಲೆಯಲ್ಲಿ ದಲಿತರು, ರೈತರ ಭದ್ರತೆಗಾಗಿ ಮತ್ತು ನ್ಯಾಯ ಒದಗಿಸುವುದಕ್ಕಾಗಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದೇನೆ. ಜಿಲ್ಲೆಯಲ್ಲಿ ಈ ಹಿಂದೆ ಬಹಿಷ್ಕಾರದಂತಹ ಅಮಾನವೀಯ ಘಟನೆಗಳು ನಡೆದಾಗ ದಲಿತರ ಪರ ಹೋರಾಟ ನಡೆಸಿದ್ದೇನೆ. ಬಾದಾಮಿ ತಾಲ್ಲೂಕಿನ ಯರಗೊಪ್ಪದಲ್ಲಿ ದಲಿತರ ಬಹಿಷ್ಕಾರ ನಡೆದಾಗ 45 ಕಿ.ಮೀ.ಪಾದಯಾತ್ರೆ ನಡೆಸಿದ್ದೇನೆ. ಜಿಲ್ಲೆಯ­ಲ್ಲಿರುವ 500ಕ್ಕೂ ಅಧಿಕ ಬಗರ್‌ಹುಕುಂ ಸಾಗುವಳಿದಾರರ ಪರವಾಗಿ ಹೋರಾಟ ನಡೆಸಿದ್ದೇನೆ. ಇದರಿಂದ ಈಗಾಗಲೇ 32 ರೈತರಿಗೆ ಬಗರ್‌ಹುಕುಂ ಭೂಮಿ ಸಕ್ರಮವಾಗಿದೆ.
ಕೆರೂರು–ನರೇನೂರ ವ್ಯಾಪ್ತಿಯಲ್ಲಿ ಬೃಹತ್‌ ಕೈಗಾರಿಕೆ ಸ್ಥಾಪನೆಗಾಗಿ 3,209 ಎಕರೆ ಬಡ ರೈತರ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಬಿಜೆಪಿ ಸರ್ಕಾರದ ಅವಧಿಯಲ್ಲಿ ಮುಂದಾದಾಗ ರೈತರೊಂದಿಗೆ ಹೋರಾಟ ನಡೆಸಿದ್ದೇನೆ. ಹೋರಾಟ ಸಮಿತಿಯ ಕಾರ್ಯಾಧ್ಯಕ್ಷನಾಗಿ ರೈತರ ಭೂಮಿ ಸ್ವಾಧೀನವಾಗದಂತೆ ತಡೆದಿದ್ದೇನೆ. ಅಲ್ಲದೇ, ಇನ್ನೂ ಹತ್ತು ಹಲವಾರು ಸಮಸ್ಯೆಗಳ ನಿವಾರಣೆಯಲ್ಲಿ ಮುಖ್ಯ  ಪಾತ್ರ ವಹಿಸಿರುವ ನನ್ನನ್ನು ಜನತೆ ಗುರುತಿಸಿದ್ದಾರೆ. ಮತದಾರರೇ ₨ 1ಲಕ್ಷ ದೇಣಿಗೆ ಸಂಗ್ರಹಿಸಿ ಚುನಾವಣೆಗೆ ನೀಡಿದ್ದಾರೆ.

* ಈ ಚುನಾವಣೆಯಲ್ಲಿ ಪಕ್ಷದ ಪಾತ್ರವೇನು?
ಬಾಗಲಕೋಟೆ ಲೋಕಸಭೆ ಚುನಾವಣೆಯಲ್ಲಿ ಬಿಎಸ್‌ಪಿ ನಿರ್ಣಯಕ ಪಾತ್ರ ವಹಿಸಲಿದೆ, ಕ್ಷೇತ್ರದಲ್ಲಿ ಪಕ್ಷ ಮತ್ತು ನನ್ನ ಪರ ಮತದಾರರಲ್ಲಿ ಒಳ್ಳೆಯ ಅಭಿಪ್ರಾಯವಿದೆ. ಜನತೆ ಬಿಎಸ್‌ಪಿಯನ್ನು ಬೆಂಬಲಿಸಲಿದ್ದಾರೆ.

10 ವರ್ಷ ಸಂಸದರಾಗಿದ್ದ ಬಿಜೆಪಿ ಅಭ್ಯರ್ಥಿ ಹಾಗೂ ಈಗಾಗಲೆ ಸಚಿವರಾಗಿ ಮತ್ತು ಸಂಸದರಾಗಿ ಕಾರ್ಯನಿರ್ವಹಿಸಿರುವ ಕಾಂಗ್ರೆಸ್ ಅಭ್ಯರ್ಥಿಗಳ ಕೊಡುಗೆ ಜಿಲ್ಲೆಗೆ ಶೂನ್ಯವಾಗಿದೆ. ಎರಡೂ ಪಕ್ಷಗಳ ಅಭ್ಯರ್ಥಿಗಳು ಜಿಲ್ಲೆಯಲ್ಲಿ ಯಾವೊಂದು ಪ್ರಮುಖ ಹೋರಾಟದಲ್ಲೂ ಭಾಗವಹಿಸಿಲ್ಲ. ಅವರಿಗೆ ಜನಪರವಾದ ಕಾಳಜಿ ಇಲ್ಲ. ಜಿಲ್ಲೆಯ ಮತದಾರರು ಈ ಎರಡೂ ಪಕ್ಷಗಳ ಆಡಳಿತಕ್ಕೆ ಬೇಷತ್ತುಹೋಗಿದ್ದಾರೆ. ಬಿಎಸ್‌ಪಿ ಪರ ಜನರ ಒಲವಿದೆ. ಸೋಲು–ಗೆಲುವನ್ನು ಬಿಎಸ್‌ಪಿ ನಿರ್ಧರಿಸಲಿದೆ.

*ಕಾಂಗ್ರೆಸ್‌, ಬಿಜೆಪಿ ಬಗ್ಗೆ ಬಿಎಸ್‌ಪಿ ನಿಲುವೇನು?
63 ವರ್ಷಗಳಿಂದ ಜನರಿಂದ ಆಯ್ಕೆಯಾಗಿ ಆಳಿದ ಕಾಂಗ್ರೆಸ್‌, ಬಿಜೆಪಿ ಮುಂತಾದ ಮನುವಾದಿ ಸರ್ಕಾರಗಳ ದುರಾಡಳಿತದಿಂದ ದೇಶದ ರಾಜಕೀಯ ಮತ್ತು ಆರ್ಥಿಕ ಸಾರ್ವಭೌಮತೆಗೆ ಅಪಾಯ ಬಂದೊದಗಿದೆ. ಭ್ರಷ್ಟಾಚಾರ, ಬಡತನ, ಬೆಲೆ ಏರಿಕೆ, ಜಾತಿ ಮತ್ತು ಕೋಮುಗಲಭೆಗಳಂತಹ ಅಭಿವೃದ್ಧಿ ವಿರೋಧಿ ಸಮಸ್ಯೆಗಳನ್ನು ಸೃಷ್ಟಿ ಮಾಡಿರುವ ಕಾಂಗ್ರೆಸ್‌, ಬಿಜೆಪಿ ಪಕ್ಷಗಳ ಜೆಂಡಾ ಮಾತ್ರ ಬೇರೆ, ಅಜೆಂಡಾ ಒಂದೆಯಾಗಿದೆ.

ನಿರುದ್ಯೋಗ, ಬಡತನ, ಅಪೌಷ್ಠಿಕತೆ, ಅನಕ್ಷರತೆ, ಭ್ರಷ್ಟಾಚಾರದಂತಹ ಸಮಸ್ಯೆಗಳನ್ನು ಪರಿಹಾರ ಮಾಡದೇ ಸ್ವಾರ್ಥ ರಾಜಕಾರಣ ಮಾಡಿಕೊಂಡು, ದೇಶದ ನೈಸರ್ಗಿಕ ಸಂಪತ್ತನ್ನು ಲೂಟಿ ಮಾಡುತ್ತಿರುವ ಪಟ್ಟಭದ್ರ ಹಿತಾಶಕ್ತಿಗಳಿಗೆ ಕಾಂಗ್ರೆಸ್‌ ಮತ್ತು ಬಿಜೆಪಿ ಬೆಂಬಲವಾಗಿ ನಿಂತಿವೆ. ಈ ಪಕ್ಷಗಳಿಗೆ ಮತ್ತೊಮ್ಮೆ ಅಧಿಕಾರ ನೀಡಿದರೆ ಈ ದೇಶದ ಜನ ಮತ್ತಷ್ಟು ಸಂಕಷ್ಟಗಳಿಗೆ ಗುರಿಯಾಗಬೇಕಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT