ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ದೇವೇಗೌಡರು ಕ್ಷೇತ್ರ ನಿರ್ಲಕ್ಷ್ಯ ಮಾಡಿದ್ದೇ ನನಗೆ ವರದಾನ’

Last Updated 9 ಏಪ್ರಿಲ್ 2014, 7:20 IST
ಅಕ್ಷರ ಗಾತ್ರ

‘ನಾಲ್ಕು ಬಾರಿ ಈ ಕ್ಷೇತ್ರವನ್ನು ಪ್ರತಿನಿಧಿಸಿ, ಈಗಲೂ ಕ್ಷೇತ್ರದಲ್ಲಿ ಗಟ್ಟಿ ಹಿಡಿತ ಸಾಧಿಸಿರುವ ದೇವೇಗೌಡರನ್ನು ಸೋಲಿಸಲೇಬೇಕು' ಎಂದು ಕಾಂಗ್ರೆಸ್‌ ಮುಖಂಡರೆಲ್ಲ ಒಂದಾಗಿದ್ದಾರೆ. ಅಭ್ಯರ್ಥಿ ಮಂಜು ಹಗಲಿರುಳು ದುಡಿಯುತ್ತಿದ್ದಾರೆ. ತಮ್ಮ ಬಿಡುವಿರದ ಪ್ರಚಾರದ ನಡುವೆಯೇ ‘ಪ್ರಜಾವಾಣಿ’ ಅವರ ಜೊತೆ ನಡೆಸಿದ ಸಂದರ್ಶನದ ಮುಖ್ಯಾಂಶ ಇಲ್ಲಿದೆ.

*ಕೆಲವು ದಿನಗಳಿಂದ ಹಳ್ಳಿ ಹಳ್ಳಿ ಸುತ್ತುತ್ತಿದ್ದೀರಿ, ಜನರ ನಾಡಿಮಿಡಿತ ಸ್ವಲ್ಪಮಟ್ಟಿಗೆ ಅರ್ಥವಾಗಿರಬಹುದು ಅಲ್ಲವೇ?
ಹೌದು, ಜನರು ಬದಲಾವಣೆ ಬಯಸುತ್ತಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಯಾವ ಹಳ್ಳಿಗೆ ಹೋದರೂ ನಮಗೆ ರಾಜಕಾರಣ ಬೇಡ, ಅಭಿವೃದ್ಧಿ ಬೇಕು ಎನ್ನುತ್ತಿದ್ದಾರೆ. ನನ್ನನ್ನು ಆತ್ಮೀಯತೆಯಿಂದ ಬರಮಾಡಿಕೊಳ್ಳುತ್ತಿದ್ದಾರೆ. ಆದ್ದರಿಂದ ಗೆಲುವು ನೂರಕ್ಕೆ ನೂರು ನಿಶ್ಚಿತ ಎಂಬ ಭರವಸೆ ಮೂಡಿದೆ.

* ಯಾವ ವಿಚಾರಗಳನ್ನು ಮುಂದಿಟ್ಟು ಮತ ಯಾಚಿಸುತ್ತೀರಿ ? ನಿಮ್ಮ ಪಕ್ಷಕ್ಕೇ ಜನ ಯಾಕೆ ಮತ ನೀಡಬೇಕು?
ಜನರಲ್ಲಿ ವಿಶ್ವಾಸ ಮೂಡಿಸಲು ನಮ್ಮಲ್ಲಿ ನೂರು, ಸಾವಿರ ವಿಚಾರಗಳಿವೆ. ನನ್ನ ಪ್ರತಿಸ್ಪರ್ಧಿಯಾಗಿರುವ ದೇವೇಗೌಡರು ಕ್ಷೇತ್ರವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದಾರೆ. ಅವರ ಈ ನಿರ್ಲಕ್ಷ್ಯವೇ ನನಗೆ ವರವಾಗುತ್ತದೆ. ಜೊತೆಗೆ ಒಂದು ವರ್ಷಕ್ಕೂ ಕಡಿಮೆ ಅವಧಿಯಲ್ಲಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಮಾಡಿರುವ ಸಾಧನೆ ಜನರಿಗೆ ತೃಪ್ತಿ ತಂದಿದೆ. ಅದು ನಮಗೆ ಶ್ರೀರಕ್ಷೆಯಾಗುವುದರಲ್ಲಿ ಸಂದೇಹವಿಲ್ಲ.

* ನಾಲ್ಕು ಬಾರಿ ಈ ಕ್ಷೇತ್ರವನ್ನು ಪ್ರತಿನಿಧಿಸಿರುವ ದೇವೇಗೌಡರು ಅಭಿವೃದ್ಧಿ ಮಾಡಿಲ್ಲವೇ?
ಏನು ಮಾಡಿದ್ದಾರೆ ನೀವೇ ಹೇಳಿ? ಹೊಳೆನರಸೀಪುರ ಮತ್ತು ಪಡುವಲಹಿಪ್ಪೆ ಬಿಟ್ಟರೆ ಜಿಲ್ಲೆಯಲ್ಲಿ ಬೇರೆ ಯಾವ ಕ್ಷೇತ್ರದಲ್ಲಿ ಮೂಲಸೌಲಭ್ಯಗಳಿವೆ? ಅಭಿವೃದ್ಧಿ ಮಾಡಲು ಆಗದಿದ್ದರೆ ಆಕ್ಷೇಪವಿಲ್ಲ. ಆದರೆ, ಕ್ಷೇತ್ರದಲ್ಲಿ ದ್ವೇಷ ರಾಜಕಾರಣ ಜನರಿಗೆ ಬೇಸರ ತಂದಿದೆ.

* ದ್ವೇಷ ರಾಜಕಾರಣ ಅಂದರೆ ಯಾರ ಮೇಲೆ ದ್ವೇಷ?
ತಮಗೆ ಮತ ನೀಡದವರ ಮೇಲೆ, ಅವರ ಸಮುದಾಯದವರ ಮೇಲೆ ದ್ವೇಷ. ನಾವು ಹಳ್ಳಿಗಳಿಗೆ ಹೋದಾಗ ಜನರು ಇದನ್ನೇ ಹೇಳುತ್ತಾರೆ. ದೇವೇಗೌಡರು ಹಾಗೂ ಜೆಡಿಎಸ್‌ನ ಇತರ ಮುಖಂಡರ ದ್ವೇಷ ರಾಜಕಾರಣದಿಂದ ಜನರು ಬೇಸತ್ತಿದ್ದಾರೆ.

* ನಿಮ್ಮಲ್ಲಿ ಜನರು ಎಂಥ ಬೇಡಿಕೆ ಇಡುತ್ತಿದ್ದಾರೆ? ನೀವು ಏನು ಭರವಸೆ ಕೊಡುತ್ತಿದ್ದೀರಿ?
ನಮ್ಮ ಸರ್ಕಾರ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದೆ. ಜನರಿಗೆ ಈಗ ನೀರು, ಒಳ್ಳೆಯ ರಸ್ತೆ ಬೇಕಾಗಿದೆ. ನಮ್ಮ ಊರಿನ ಕೆರೆ ತುಂಬಿಸಲು ವ್ಯವಸ್ಥೆ ಮಾಡಿ, ಕುಡಿಯಲು ನೀರು ಕೊಡಿ, ರಸ್ತೆ ಸರಿಪಡಿಸಿ ಎಂದು ಜನರು ಕೇಳುತ್ತಿದ್ದಾರೆ. ನನ್ನನ್ನು ಆಯ್ಕೆ ಮಾಡಿದರೆ ಈ ಬೇಡಿಕೆಗಳನ್ನು ಈಡೇರಿಸುತ್ತೇನೆ.

* ಕ್ಷೇತ್ರದಲ್ಲಿ ಜಾತಿ ರಾಜಕಾರಣ ಪ್ರಬಲವಾಗಿದೆಯಲ್ಲ. ನೀವು ಯಾರನ್ನು ಓಲೈಸುವ ಪ್ರಯತ್ನ ಮಾಡುತ್ತೀರಿ?
ಜಾತಿ ರಾಜಕಾರಣ ಇಲ್ಲ ಎಂದು ನಾನು ಹೇಳುತ್ತಿಲ್ಲ. ಅದನ್ನು ಹುಟ್ಟುಹಾಕಿದವರು ದೇವೇಗೌಡರೇ. ಮುಂದೆ ತಮ್ಮ ಸುರಕ್ಷತೆಗಾಗಿ ಎಲ್ಲ ಸಮುದಾಯಗಳೂ ಈ ಜಾತಿ ರಾಜಕಾರಣದ ಆಶ್ರಯ ಪಡೆದಿವೆ. ಅದು ಮುಂದುವರಿದಿದೆ. ಆದರೆ, ನಾನು ಯಾವುದೇ ಒಂದು ಜಾತಿ–ಧರ್ಮವನ್ನು ನಂಬಿಕೊಂಡು ಕಣಕ್ಕೆ ಇಳಿದಿಲ್ಲ. ಎಲ್ಲ ವರ್ಗದ, ಎಲ್ಲ ಜಾತಿಯ ಜನರೂ ನಮ್ಮ ಜೊತೆಗೆ ಇದ್ದಾರೆ.

* ದೇವೇಗೌಡರು ಗೆದ್ದಿದ್ದರೂ ರಾಜ್ಯ ಮತ್ತು ಕೇಂದ್ರದಲ್ಲಿ ಬೇರೆ ಬೇರೆ ಸರ್ಕಾರ ಇದ್ದುದರಿಂದ ಮಲತಾಯಿ ಧೋರಣೆ ಆಗಿದೆ, ಅಭಿವೃದ್ಧಿ ಕುಂಠಿತವಾಗಿದೆ ಎಂದು ಜೆಡಿಎಸ್‌ ಮುಖಂಡರು ಹೇಳುತ್ತಿದ್ದಾರಲ್ಲ?
ಅದು ಹಾಸ್ಯಾಸ್ಪದ ಹೇಳಿಕೆ. ಅಧಿಕಾರ ಆಡಳಿತ ನಡೆಸಲು ಬೇಕೇ ವಿನಾ ಕೆಲಸ ಮಾಡಲು ಅಲ್ಲ. ಹಾಗಿದ್ದರೆ ಬೇರೆ ಪಕ್ಷದ ಸಂಸದರ ಕ್ಷೇತ್ರಗಳಲ್ಲಿ ಕೆಲಸವೇ ಆಗಿಲ್ಲವೇ? ಅಧಿಕಾರ ಅವರಲ್ಲೇ ಇದ್ದಾಗ ಮಾಡಿದ ಅಭಿವೃದ್ಧಿಯನ್ನಾದರೂ ಹೇಳಿಕೊಳ್ಳಲಿ. ಆಗಿನ ಸಾಧನೆಯೂ ಶೂನ್ಯವೇ. ದೇವೇಗೌಡರು ಎರಡು ದಶಕಗಳ ಕಾಲ ಅಧಿಕಾರ ಅನುಭವಿಸಿ ಆಯಿತು. ಅವರಿಗೆ ವಯಸ್ಸೂ ಆಗಿದೆ. ಈಗ ಅವರು ನಮ್ಮಂಥವರಿಗೆ ಅವಕಾಶ ಕೊಡಬೇಕು.

* ದೇವೇಗೌಡರ ಅನುಭವದ ಮುಂದೆ ಗೆಲುವು ಸುಲಭವೇ?
ನಾನೂ ರಾಜಕೀಯಕ್ಕೆ ಹೊಸಬನಲ್ಲ. ಮಾಜಿ ಸಚಿವ ಎಚ್‌.ಎನ್‌. ನಂಜೇಗೌಡ ಪರ ಪ್ರಚಾರ ಮಾಡಿದ್ದೆ, ನಂತರ ನಾನೇ ಕಣಕ್ಕೆ ಇಳಿದು ಹೋರಾಡಿದ್ದೇನೆ, ಇದು ನನಗೆ ಏಳನೇ ಚುನಾವಣೆ. ನನ್ನ ಅನುಭವವೂ ಕಮೆಯೇನಲ್ಲ.

* ಅಧಿಕಾರಿಗಳ ವಿರುದ್ಧ ಸಿಟ್ಟಾಗಿದ್ದೀರಲ್ಲ  ಯಾಕೆ?
ಜಿಲ್ಲೆಯಲ್ಲಿ ಅಧಿಕಾರ ನಡೆಸುತ್ತಿರುವವರು ಅಧಿಕಾರಿಗಳನ್ನು ಕಪಿಮುಷ್ಟಿಯಲ್ಲಿಟ್ಟು ಚುನಾವಣೆ ನಡೆಸಲು ಮುಂದಾಗಿದ್ದಾರೆ. ಅವರೇನೇ ಹೇಳಲಿ ಅಧಿಕಾರಿಗಳು ಅದಕ್ಕೆ ಕಿವಿಗೊಡಬಾರದು. ಪ್ರತಿದಿನವೂ ಭಾನುವಾರ ಆಗಿರುವುದಿಲ್ಲ ಎಂಬುದನ್ನು ಅರಿತು ತಮ್ಮ ಕರ್ತವ್ಯ ನಿರ್ವಹಿಸುವುದು ಅವರಿಗೂ ಒಳ್ಳೆಯದು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT