ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ದೇಸೀ ವಿಮಾನ: ರಾಷ್ಟ್ರೀಯ ನೀತಿ ಅಗತ್ಯ’

Last Updated 23 ಸೆಪ್ಟೆಂಬರ್ 2013, 20:02 IST
ಅಕ್ಷರ ಗಾತ್ರ

ಬೆಂಗಳೂರು: ‘ದೇಸೀ ನಾಗರಿಕ ವಿಮಾನ ತಯಾರಿಕಾ ಕ್ಷೇತ್ರಕ್ಕೆ ಉತ್ತೇಜನ ನೀಡಲು ರಾಷ್ಟ್ರೀಯ ನೀತಿಯೊಂದನ್ನು ರಚಿಸುವ ಅಗತ್ಯವಿದೆ’ ಎಂದು ರಾಷ್ಟ್ರೀಯ ವೈಮಾನಿಕ ಪ್ರಯೋ ಗಾಲಯದ ಮಾಜಿ ನಿರ್ದೇಶಕ ಡಾ.ಟಿ.ಎಸ್‌. ಪ್ರಹ್ಲಾದ್ ಅಭಿಪ್ರಾಯಪಟ್ಟರು.

ಭಾರತೀಯ ಎಂಜಿನಿಯರ್‌ಗಳ ಸಂಸ್ಥೆಯ ರಾಜ್ಯ ಘಟಕ ಸೋಮವಾರ ಏರ್ಪಡಿಸಿದ್ದ ಪ್ರೊ. ಸತೀಶ್‌ ಧವನ್‌ ಸ್ಮರಣಾರ್ಥ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ‘ಭಾರತೀಯ ನಾಗರಿಕ ವಿಮಾನ ಅಭಿವೃದ್ಧಿ: ಮುಂದಿರುವ ಹಾದಿ’ ವಿಷಯವಾಗಿ ಮಾತನಾಡಿ, ‘ನಾಗರಿಕ ವಿಮಾನ ಕ್ಷೇತ್ರದಲ್ಲಿ ದೇಶದ ಇದುವರೆಗಿನ ಸಾಧನೆ ನಗಣ್ಯವಾದುದು. ಮಾರುಕಟ್ಟೆ ಅಗತ್ಯಗಳನ್ನು ಸರಿಯಾಗಿ ಮನಗಾಣದ ಕಾರಣ ‘ಹಂಸ’ ವಿಮಾನ ಜೀವ ಪಡೆಯಲಿಲ್ಲ. ಸಾರಸ್‌ ವಿಮಾನ 2003ರಲ್ಲೇ ಯಶಸ್ವಿಯಾಗಿ ಹಾರಾಟ ಮಾಡಿತು. ಆದರೆ, ಸುರಕ್ಷತೆ ಪ್ರಶ್ನೆಗಳನ್ನು ಹಾಗೇ ಉಳಿಸಿತು’ ಎಂದು ವಿವರಿಸಿದರು.

‘ಅಂತರರಾಷ್ಟ್ರೀಯ ಪ್ರಮಾಣ ಪತ್ರ ಪಡೆಯುವುದು, ಸುರಕ್ಷತೆ ಪ್ರಶ್ನೆಗಳನ್ನು ಸಮರ್ಥವಾಗಿ ಎದುರಿಸುವುದು, ಮಾರುಕಟ್ಟೆ ಸವಾಲುಗಳನ್ನು ಮೆಟ್ಟಿ ನಿಲ್ಲುವುದು, ಒಳ್ಳೆಯ ಬ್ರ್ಯಾಂಡ್‌ ಆಗಿ ಬೆಳೆಯುವುದು.. ಇವೇ ಮೊದಲಾದ ಸವಾಲುಗಳು ಭಾರತೀಯ ನಾಗರಿಕ ವಿಮಾನ ಕ್ಷೇತ್ರದ ಮುಂದಿವೆ’ ಎಂದು ಹೇಳಿದರು.

‘ಸರ್ಕಾರ ನಿರೀಕ್ಷಿತ ಪ್ರಮಾಣದಲ್ಲಿ ಈ ಕ್ಷೇತ್ರಕ್ಕೆ ಉತ್ತೇಜನ ನೀಡಿಲ್ಲ’ ಎಂದ ಅವರು, ‘ಸರ್ಕಾರ ಮತ್ತು ಖಾಸಗಿ ಸಹಭಾಗಿತ್ವದಿಂದ ಮಾತ್ರ ದೇಸೀ ವಿಮಾನ ತಯಾರಿಕಾ ಕ್ಷೇತ್ರ ಬೆಳವಣಿಗೆ ಹೊಂದಲು ಸಾಧ್ಯ’ ಎಂದು ತಿಳಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಅಧ್ಯಕ್ಷ ಡಾ.ಕೆ. ರಾಧಾಕೃಷ್ಣನ್‌, ‘ಅ. 28ರಂದು ಮಂಗಳನತ್ತ ಉಪಗ್ರಹವನ್ನು ಉಡಾವಣೆ ಮಾಡಲಾಗುತ್ತದೆ. 400 ಶತಕೋಟಿ  ಕಿ.ಮೀ ದೂರದಲ್ಲಿರುವ ಮಂಗಳ ಗ್ರಹದ ಕಕ್ಷೆಯನ್ನು ಈ ಉಪಗ್ರಹ 300 ದಿನಗಳಲ್ಲಿ ಸೇರಲಿದೆ. ಭಾರತದ ಇದುವರೆಗಿನ ದೊಡ್ಡ ಸಾಧನೆ ಇದಾಗಲಿದೆ’ ಎಂದು ಹೇಳಿದರು.

ಸಂಸ್ಥೆ ಅಧ್ಯಕ್ಷ ಡಾ.ಡಬ್ಲ್ಯು.ಪಿ. ಕೃಷ್ಣ, ಕಾರ್ಯದರ್ಶಿ ಡಾ.ಪಿ. ವಿಜಯಕುಮಾರ್‌, ಪ್ರೊ. ಆರ್‌.ಎಂ.ವಾಸಗಮ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT