ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ದೈಹಿಕ ಸಾಮರ್ಥ್ಯಕ್ಕೆ ಕ್ರೀಡೆ ಅವಶ್ಯ’

ಜಿಲ್ಲಾ ಪೊಲೀಸ್‌ ಕ್ರೀಡಾಕೂಟ ಮುಕ್ತಾಯ
Last Updated 1 ಜನವರಿ 2014, 6:49 IST
ಅಕ್ಷರ ಗಾತ್ರ

ಹಾವೇರಿ: ‘ಸಿಟಿ ಮತ್ತು ಲಾಠಿ ಹಿಡಿದು ಸದಾ ಒತ್ತಡದಲ್ಲಿ ಕರ್ತವ್ಯ ನಿರ್ವಹಿಸುವ ಪೊಲೀಸ್‌ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗೆ ದೈಹಿಕ ಮತ್ತು ಮಾನಸಿಕ ಸಾಮರ್ಥ್ಯ ಹೆಚ್ಚಿಸುವಲ್ಲಿ ಕ್ರೀಡೆಗಳು ಅಗತ್ಯವಾಗಿವೆ’ ಎಂದು ಬೆಳಗಾವಿ ಉತ್ತರ ವಲಯದ ಪೊಲೀಸ್‌ ಮಹಾನಿರೀಕ್ಷಕ ಭಾಸ್ಕರ್‌ರಾವ್‌ ಹೇಳಿದರು.

ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಜಿಲ್ಲಾ ಪೊಲೀಸ್‌ ಇಲಾಖೆಯ ಜಿಲ್ಲಾ ಮಟ್ಟದ ವಾರ್ಷಿಕ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಸ್ಪರ್ಧೆಯಲ್ಲಿ ವಿಜೇತ ಕ್ರೀಡಾಪಟುಗಳಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು. ಕ್ರೀಡೆಗಳು ದೈಹಿಕ ಮತ್ತು ಮಾನಕವಾಗಿ ಬಳಲಿದ ವ್ಯಕ್ತಿಗೆ ಉಲ್ಲಾಸ, ನವ ಚೈತನ್ಯ ತುಂಬುತ್ತದೆ. ಆದ್ದರಿಂದ ಇಲಾಖೆಯ ಅಧಿಕಾರಿಗಳು ಕರ್ತವ್ಯದ ಜತೆಗೆ ಕ್ರೀಡೆಗಳಲ್ಲಿಯೂ ಭಾಗವಹಿಸಬೇಕು ಎಂದು ಹೇಳಿದರು.

ಪೊಲೀಸ್‌ ಇಲಾಖೆಯ ಕುಟುಂಬದ ಸದಸ್ಯರು ಕ್ರೀಡಾಕೂಟದಲ್ಲಿ ಪಾಲ್ಗೊಂಡು ಕ್ರೀಡಾ ಹಬ್ಬವನ್ನಾಗಿ ಆಚರಿಸಿರುವುದು ಸಂತಸ ತಂದಿದೆ ಎಂದ ಅವರು, ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಪಿಟ್‌ನೆಸ್‌ ಕಾಯ್ದುಕೊಳ್ಳಲು ಇಂತಹ ಕ್ರೀಡೆಗಳು ಸಹಕಾರಿಯಾಗಿವೆ ಎಂದರು.
ಇದೇ ಸಂದರ್ಭದಲ್ಲಿ ಏಕಲವ್ಯ ಪ್ರಶಸ್ತಿ ಪಡೆದ ಪೊಲೀಸ್‌ ಇಲಾಖೆಯ ಶ್ವೇತಾ ನಾಯ್ಡು ಅವರನ್ನು ಸನ್ಮಾನಿಸಲಾಯಿತಲ್ಲದೇ, ಕ್ರೀಡಾಕೂಟದಲ್ಲಿ ಭಾಗವಹಿಸಿ ವಿಜೇತಾರದ ಪೊಲೀಸ್‌ ಕ್ರೀಡಾಪಟುಗಳಿಗೆ ಬಹುಮಾನ ಹಾಗೂ ಪ್ರಶಸ್ತಿ ಪತ್ರ ವಿತರಿಸಲಾಯಿತು.

ಸಮಾರಂಭದಲ್ಲಿ ಹೆಚ್ಚವರಿ ಪೊಲೀಸ್‌ ವರಿಷ್ಠಾಧಿಕಾರಿ ಜಗಮೈನವರ, ನಿವೃತ್ತ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಆರ್‌.ಕುಲಕರ್ಣಿ, ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಭಾಗವಹಿಸಿದ್ದರು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎನ್‌.ಶಶಿಕುಮಾರ ಸ್ವಾಗತಿಸಿದರು. ಶಿಕ್ಷಕ ಜಗದೀಶ ಚೌಟಗಿ ನಿರೂಪಿಸಿದರು. ಪೊಲೀಸ್‌ ಅಧಿಕಾರಿ ಎಸ್‌.ಎಚ್‌.ಗಡಾದ ವಂದಿಸಿದರು.

ಗಮನ ಸೆಳೆದ ಪಟಾಕಿ: ಕ್ರೀಡಾಕೂಟದ ಬಹುಮಾನ ವಿತರಣಾ ಸಮಾರಂಭದ ನಂತರ ಚಿತ್ತಾಕರ್ಷದ ಪಟಾಕಿಗಳನ್ನು ಸಿಡಿಸಿದರು. ವೆಲ್‌ಕಮ್‌, ಹಾವೇರಿ ಡಿಸ್ಟ್ರಿಕ್ಟ್‌ ಪೊಲೀಸ್‌, ಥ್ಯಾಂಕ್ಯೂ ಎನ್ನುವ ಚಿತ್ತಾರ ಪಟಾಕಿಗಳು ಜನರ ಗಮನ ಸೆಳೆದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT