ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಧಾರ್ಮಿಕತೆ–ದಾರ್ಶನಿಕತೆ ಬದುಕಾಗಲಿ’

‘ಮಹಾ ಸತ್ಸಂಗ’ದಲ್ಲಿ ಎಸ್‌.ಆರ್‌. ಹಿರೇಮಠ ಸಲಹೆ
Last Updated 6 ಜನವರಿ 2014, 5:43 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಧಾರ್ಮಿಕತೆ ಮತ್ತು ದಾರ್ಶನಿಕತೆ ಇದ್ದ­ವರು ಮಾತ್ರ ಸಾರ್ವಜನಿಕ ಜೀವನಕ್ಕೆ ಬರಬೇಕು. ಅಂಥವರು ತತ್ವ, ಸಿದ್ಧಾಂತವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಅನಾಚಾರ, ಅನೈತಿಕತೆ, ಭ್ರಷ್ಟಾಚಾರ ನೀತಿಯನ್ನು ಧಿಕ್ಕರಿಸುವ ಮನೋ­ಭಾವ ಬೆಳೆಸಿಕೊಳ್ಳಬೇಕು’
–ಅಕ್ರಮ ಗಣಿಗಾರಿಕೆ, ಭೂ ಕಬಳಿಕೆ, ಭ್ರಷ್ಟಾ­ಚಾರದ ವಿರುದ್ಧ ಸಮರ ಸಾರಿರುವ ಧಾರವಾಡ ಸಮಾಜ ಪರಿವರ್ತನಾ ಸಮು­ದಾಯದ ಮುಖ್ಯಸ್ಥ ಎಸ್‌.ಆರ್‌. ಹಿರೇಮಠ ರಾಜ­ಕೀಯದತ್ತ ಮುಖ ಮಾಡಿದವರಿಗೆ ನೀಡಿದ ಸಲಹೆ ಇದು.

ಗೋಕುಲ ರಸ್ತೆಯ ಚವ್ಹಾಣ್‌ ಗ್ರೀನ್‌ ಗಾರ್ಡನ್‌­ನಲ್ಲಿ ಶ್ರೀ ಗಣಪತರಾವ್ ಮಹಾರಾಜ ಸತ್ಸಂಗ ಸಮಿತಿ ಮತ್ತು ಭಾರತೀಯ ಸುರಾಜ್ಯ ಸಂಸ್ಥೆಯ ಆಶ್ರಯದಲ್ಲಿ ಭಾನುವಾರ ಜರುಗಿದ ಮಹಾ ಸತ್ಸಂಗದಲ್ಲಿ ‘ಭ್ರಷ್ಟಾಚಾರ ನಿರ್ಮೂಲನ– ಸಾರ್ವಜನಿಕ ಜವಾಬ್ದಾರಿ’ ವಿಷಯ ಕುರಿತು ವಿಶೇಷ ಉಪನ್ಯಾಸ ನೀಡಿದ ಹಿರೇಮಠ, ‘ಆರ್ಥಿಕ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ವಿಷಮತೆಗಳಿವೆ. ಆದರೆ ರಾಜಕೀಯದಲ್ಲಿ ಮಾತ್ರ ಸಮಾನತೆ ಇದೆ’ ಎಂದು ವ್ಯಂಗ್ಯವಾಗಿ ಹೇಳಿದರು.

‘ರಾಜಕೀಯ ಪ್ರವೇಶಿಸಿ ಅಧಿಕಾರ ಗದ್ದುಗೆ ಏರಿ, ಅಕ್ರಮ­ವಾಗಿ ಸಂಪಾದಿಸಿದ ಹಣದಲ್ಲಿ ಅರಮನೆ, ಮಾಲ್‌ಗಳನ್ನು ಕಟ್ಟಿಸಿಕೊಂಡಿರುವವರ ಅನೈತಿಕ ಚಟುವಟಿಕೆಗೆ ಕಡಿವಾಣ ಹಾಕಬೇಕಿದೆ. ಆಗ ಮಾತ್ರ ಆರ್ಥಿಕ, ಸಾಮಾಜಿಕ ಕ್ಷೇತ್ರದಲ್ಲಿ ಸಮಾನತೆ ಕಂಡುಕೊಳ್ಳಬಹುದು. ಪ್ರಜಾಪ್ರಭುತ್ವವನ್ನು ಸಶಕ್ತೀ­ಕರಣಗೊಳಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರಿಗೂ ಪಾಲಿದೆ’  ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮ ಉದ್ಘಾಟಿಸಿದ ಮೂರುಸಾವಿರ­ಮಠದ ಗುರುಸಿದ್ಧರಾಜ­ಯೋಗೀಂದ್ರ ಸ್ವಾಮೀಜಿ, ‘ಭಕ್ತರ ಹೃದಯ ಸಾಮ್ರಾಜ್ಯದಲ್ಲಿ ಕುಳಿತಿರುವ ಗಣಪತರಾವ್ ಮಹಾರಾಜರು ನಿಜವಾದ ಸದ್ಗುರು ಶ್ರೇಷ್ಠರು’ ಎಂದು ಬಣ್ಣಿಸಿದರು.

ಸುಪ್ರೀಂಕೋರ್ಟ್‌ ವಕೀಲ ಬೆಂಗಳೂರಿನ ಅಭಿನವ ರಮಾನಂದ ಮಾತನಾಡಿದರು. ಬೆಂಗಳೂರಿನ ಸಾಹಿತ್ಯ ಪರಿಚಾರಕ ಎಚ್‌.ಎಸ್‌. ಲಕ್ಷ್ಮೀ­ನಾರಾಯಣ ಭಟ್ಟ,  ಕೆ. ಹರೀಶ ಮಾತ­ನಾಡಿದರು. ಧಾರವಾಡ ಅಖಿಲ ಭಾರತ ಸೇವಾ ಅಭಿಯಾನದ ಸ್ವಾಮಿನಿ ಸ್ವಾತೃನಿಷ್ಠಾನಂದ ಸರಸ್ವತಿ ಅಧ್ಯಕ್ಷತೆ ವಹಿಸಿದ್ದರು. ಮುಧೋಳದ ಸಿದ್ಧಾರೂಡ ಮಠದ ಸಹಜಾನಂದ ಸ್ವಾಮೀಜಿ, ಸಮರ್ಥ ಸದ್ಗುರುಗಳ ಸಹೋದರ ದತ್ತಾತ್ರೇಯ ಶಿವರಾಮಪಂತ್‌ ಕನ್ನೂರ ಇತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT