ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಧೂಮಕೇತು’ ಅಪರೂಪದ ಅದ್ಭುತ

Last Updated 7 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

‘ಐಸಾನ್’ ಇದೇ ಡಿಸೆಂಬರ್ 15ರಿಂದ 30ರವರೆಗೆ ತನ್ನ ಗರಿಷ್ಠ ಕಾಂತಿಯ, ಪರಿಪೂರ್ಣ ವೈಭವದ ದಿವ್ಯ ದರ್ಶನ ನೀಡಲಿರುವ ಧೂಮಕೇತು ಇದು (ಚಿತ್ರ–1). ಕಳೆದ ಒಂದು ಶತಮಾನಕ್ಕೂ ಅಧಿಕ ಅವಧಿಯ ಗರಿಷ್ಠ ಪ್ರಕಾಶದ ಧೂಮಕೇತು ಎಂಬ ದಾಖಲೆಯನ್ನು ಸೃಜಿಸಲಿರುವ ಐಸಾನ್‌ ವಾಸ್ತವವಾಗಿ ಇತ್ತೀಚಿನ (1997) ‘ಹೇಲ್‌–ಬಾಪ್‌’ ಧೂಮಕೇತುವಿಗಿಂತ (ಚಿತ್ರ–3) ಬಹಳ ಹೆಚ್ಚು ಕಾಂತಿಯುಕ್ತವಾಗಿ, ಇರುಳಿನಾಗಸದ ಅತ್ಯಂತ ಉಜ್ವಲ ಕಾಯಗಳಾದ ಶುಕ್ರ ಮತ್ತು ಚಂದ್ರರಿಗಿಂತ (ಚಿತ್ರ–2) ಅಧಿಕ ಕಾಂತಿಯ ಕಾಯವಾಗಿ ಆಗಸದಲ್ಲಿ ಕಂಗೊಳಿಸಲಿದೆ. ‘ಇಂಟರ್‌ ನ್ಯಾಶನಲ್‌ ಸೈಂಟಿಫಿಕ್‌ ಆಫ್ಟಿಕಲ್‌ ನೆಟ್‌ವರ್ಕ್‌’ ಸಂಸ್ಥೆಯ ವಿಜ್ಞಾನಿಗಳಿಂದ ಪತ್ತೆಯಾಗಿ, ಹಾಗಾಗಿ ಆ ಸಂಸ್ಥೆಯ ಹ್ರಸ್ವನಾಮವನ್ನೇ (ಐ.ಎಸ್‌.ಒ.ಎಸ್‌.) ಅಭಿದಾನವನ್ನಾಗಿ ಪಡೆದಿರುವ ಐಸಾನ್‌ನ ಆಗಮನದ ಸಂದರ್ಭದಲ್ಲಿ ಧೂಮಕೇತುಗಳ ಪರಿಚಯದ ಕೆಲ ಮೂಲಭೂತ ಪ್ರಶ್ನೆಗಳು – ಉತ್ತರಗಳು:

1) ಧೂಮಕೇತು – ಅದೆಂಥ ಕಾಯ?
*ನಕ್ಷತ್ರ, ಗ್ರಹ ಉಪಗ್ರಹಗಳಂತೆಯೇ ಧೂಮಕೇತುವೂ ಒಂದು ಆಕಾಶಕಾಯ. ಭೂಮಿಯಂತೆಯೇ ಧೂಮಕೇತುವೂ ಸೂರ್ಯನ ಗುರುತ್ವದಲ್ಲೇ ಇರುವ, ನಮ್ಮ ಸೌರವ್ಯೂಹಕ್ಕೆ ಸೇರಿದ ಸದಸ್ಯ (ಚಿತ್ರ–5). ಒಂದು ತಲೆ, ಅದರ ಹಿಂದೆ ದಟ್ಟ ಹೊಗೆಯ ನಿರ್ಮಿತಿಯಂತೆ ಚಾಚಿದ ಬಾಲ– ಇದು ಅದರ ರೂಪ (ಚಿತ್ರ–4, 6). ಆದರೆ ತಾರೆಗಳಂತೆ ಸ್ವಯಂಪ್ರಭೆಯಾಗಲೀ, ಗ್ರಹ–ಉಪಗ್ರಹಗಳಂತೆ ಸ್ಥಿರ ರೂಪವಾಗಲೀ ಧೂಮಕೇತುಗಳಿಗೆ ಇಲ್ಲ. ಧೂಮಕೇತು ಅನಿಷ್ಟಕಾರಕವಲ್ಲ, ದುರಂತದ ದ್ಯೋತಕವಲ್ಲ. ಬರಲಿರುವ ವಿಪತ್ತುಗಳ ಸೂಚಕವೂ ಅಲ್ಲ. ಹಾಗಾಗಿ ಧೂಮಕೇತು ಕುರಿತ ಜ್ಯೋತಿಷಿಗಳ ಕಲ್ಪನಾ ಭಾಷಣಗಳಿಗೆ ಕಿವಿಗೊಡುವ ಅಗತ್ಯ ಕಿಂಚಿತ್ತೂ ಇಲ್ಲ.

2) ಧೂಮಕೇತುಗಳು ಅಪರೂಪ ಏಕೆ?
*ಧೂಮಕೇತುಗಳು ಖಂಡಿತ ಅಪರೂಪವಲ್ಲ. ವಿಸ್ಮಯ ಏನೆಂದರೆ ನಮ್ಮ ಸೌರವ್ಯೂಹದಲ್ಲಿರುವ ಧೂಮಕೇತುಗಳ ಒಟ್ಟು ಸಂಖ್ಯೆ ಸುಮಾರು ಒಂದು ಲಕ್ಷ ಕೋಟಿ! ಈವರೆಗೆ ಭೂಮಿಯಿಂದ ದೂರದರ್ಶಕಗಳ ಮೂಲಕ ಗುರುತಿಸಲ್ಪಟ್ಟಿರುವ ಧೂಮಕೇತುಗಳು 950. ಈಗಂತೂ ಪ್ರತಿ ವರ್ಷ ಕನಿಷ್ಠ ಮೂವತ್ತು ಹೊಸ ಧೂಮಕೇತುಗಳು ಪತ್ತೆಯಾಗುತ್ತಿವೆ. ಆದರೆ ಭೂ ಸನಿಹಕ್ಕೇ ಬಂದು ಉಜ್ವಲ ರೂಪ ತಳೆದು ಬರಿಗಣ್ಣಿಗೆ ಗೋಚರಿಸುವ ಧೂಮಕೇತುಗಳು ಬಹಳ ವಿರಳ– ಆದ್ದರಿಂದ ಸಾರ್ವತ್ರಿಕವಾಗಿ ಅವುಗಳ ದರ್ಶನ ಅಪರೂಪ.

3) ಸೌರವ್ಯೂಹದಲ್ಲಿ ಧೂಮಕೇತುಗಳ ನೆಲೆ ಎಲ್ಲಿದೆ?
*ಸೌರವ್ಯೂಹದಲ್ಲಿ ಧೂಮಕೇತು ಸಾಮ್ರಾಜ್ಯ ಎರಡು ಭಿನ್ನ ಭಿನ್ನ ಪ್ರದೇಶಗಳಲ್ಲಿ ನೆಲೆಗೊಂಡಿದೆ. ಅವುಗಳಲ್ಲಿ ಮೊದಲಿನ ನೆಲೆ ‘ಕ್ಯುಯಿಪರ್‌ ಬೆಲ್‌್ಟ’ (ಚಿತ್ರ–8). ನೆಪ್ಚೂನ್‌ ಗ್ರಹದ ಪಥದಿಂದ ಆರಂಭವಾಗಿ ಪ್ಲೂಟೋದ (ಅದು ಈಗ ಗ್ರಹಸ್ಥಾನದಲ್ಲಿಲ್ಲ) ಪಥದಾಚೆಗೂ ಹರಡಿರುವ ಬಹಳ ವಿರಳ ದ್ರವ್ಯದ ಈ ಪ್ರದೇಶವೇ ಸಕಲ ‘ಹ್ರಸ್ಪ ಅವಧಿಯ’ ಧೂಮಕೇತುಗಳ ತವರು. ಸೂರ್ಯನಿಂದ ಒಂದು ಜ್ಯೋತಿರ್ವರ್ಷ ದೂರದಲ್ಲಿ ಇಡೀ ಸೌರವ್ಯೂಹವನ್ನೇ ಆವರಿಸಿ ಹರಡಿರುವ ಮತ್ತೊಂದು ಬೃಹತ್‌ ಶೇಷ ದ್ರವ್ಯ ಸಾಮ್ರಾಜ್ಯ ಇದೆ. ‘ಊರ್ಟ್‌ ಮೋಡ’ ಎಂಬ ಆ ದ್ರವ್ಯರಾಶಿ ಎಲ್ಲ ‘ದೀರ್ಘ ಅವಧಿಯ’ ಧೂಮಕೇತುಗಳ ನೆಲೆ (ಚಿತ್ರ–7).

4) ಧೂಮಕೇತುಗಳಲ್ಲಿನ ದ್ರವ್ಯ ಏನು?
8ಧೂಮಕೇತುಗಳಲ್ಲಿನ ಪ್ರಧಾನ ದ್ರವ್ಯ ಇಂಗಾಲದ ಮಾನಾಕ್ಸೈಡ್‌, ಅಮೋನಿಯಾ, ಮೀಥೇನ್‌ ಮತ್ತು ನೀರು – ಇವುಗಳ ಘನೀಕೃತ ತುಣುಕುಗಳ ದಟ್ಟ ಮಿಶ್ರಣ. ಜೊತೆಗೆ ಕಬ್ಬಿಣ, ನಿಕ್ಕಲ್‌, ಮೆಗ್ನೀಸಿಯಂಗಳಂಥ ಲೋಹಾಂಶಗಳು ಮತ್ತು ರಾಶಿ ರಾಶಿ ಧೂಳು.
ಇಲ್ಲೊಂದು ಮುಖ್ಯ ವಿಷಯ: ನಾಸಾದ ‘ಸ್ಟಾರ್‌ ಡಸ್ಟ್’ ವ್ಯೋಮನೌಕೆ 2004ರಲ್ಲಿ ಹೊರಟು ‘ವೈಲ್ಡ್–2’ ಧೂಮಕೇತುವಿನ ಒಳಹೊಕ್ಕು (ಚಿತ್ರ–13) ಒಂದಷ್ಟು ದ್ರವ್ಯವನ್ನು ದೋಚಿ ತಂದು 2006ರಲ್ಲಿ ತಲುಪಿಸಿದೆ. 2005ರಲ್ಲಿ ‘ಡೀಪ್‌ ಇಂಪಾಕ್ಟ್’ ನೌಕೆ ‘ಟೆಂಪ್ಲ್–1’ ಧೂಮಕೇತುವನ್ನು ಸಮೀಪಿಸಿ ಚಿತ್ರೀಕರಿಸಿ ಕಡೆಗೆ ಅದರ ತಲೆಗೇ ಡಿಕ್ಕಿ ಹಾಕಿ ಅದರ ಸಂರಚನಾ ಮಾಹಿತಿಗಳನ್ನು ಒದಗಿಸಿದೆ (ಚಿತ್ರ–9).

5) ಧೂಮಕೇತುವಿಗೆ ಬಾಲ ಏಕೆ?
*ವಾಸ್ತವವಾಗಿ ಧೂಮಕೇತುವಿನ ಬಾಲ ಅದರ ಜನ್ಮಜಾತ, ಶಾಶ್ವತ, ಲಕ್ಷಣ ಅಲ್ಲ. ಮೂಲತಃ ಎಲ್ಲ ಧೂಮಕೇತುಗಳೂ ಅತ್ಯಂತ ಶೀತಲ, ಸಾಂದ್ರ, ‘ಕೊಳೆ ಬೆರೆತ ಹಿಮದ ಬೃಹತ್‌ ಉಂಡೆ’ಗಳಂತೆ ಅವತರಿಸುತ್ತವೆ. ಸನಿಹದ ಗ್ರಹಗಳ ಅಥವಾ ಕ್ಷೀರಪಥದ ಇತರ ನಕ್ಷತ್ರಗಳು ಗುರುತ್ವದಿಂದ ವಿಚಲನೆಗೊಂಡು ತಮ್ಮ ನೆಲೆಯಿಂದ ಹೊರಬಿದ್ದು ಸೂರ್ಯನ ಸುತ್ತಲಿನ ಪಥ ಹಿಡಿದು ಪಯಣ ಹೊರಡುತ್ತವೆ. ಸೂರ್ಯನ ಬಿಸಿ ಮುಟ್ಟುವಷ್ಟು ಸಮೀಪ ಬಂದೊಡನೆ ಧೂಮಕೇತುವಿನ ದ್ರವ್ಯ ಅನಿಲ ರೂಪ ತಾಳಿ ಹಿಗ್ಗತೊಡಗುತ್ತದೆ; ತಲೆ ಬೃಹದಾಕಾರ ತಾಳತೊಡಗುತ್ತದೆ. ಜೊತೆ ಜೊತೆಗೇ ಸೂರ್ಯನಿಂದ ಹೊಮ್ಮುವ ಶಕ್ತಿಯ ಅಲೆಗಳಿಂದಾಗಿ ಅದೇ ಅನಿಲ ರಾಶಿ ತಲೆಯ ಹಿಂಬದಿಯಲ್ಲಿ ಚಾಚಿಕೊಳ್ಳತೊಡಗುತ್ತದೆ (ಚಿತ್ರ–11). ಅದೇ ಧೂಮಕೇತುವಿನ ಬಾಲ.
ಸಹಜವಾಗಿಯೇ ಸೂರ್ಯನನ್ನು ಸಮೀಪಿಸಿದಂತೆಲ್ಲ ಉದ್ದುದ್ದವಾಗುತ್ತ, ಸೂರ್ಯನಿಂದ ಹಿಂದೆ ಸರಿದಂತೆಲ್ಲ ಕುಗ್ಗುತ್ತ ಕಡೆಗೆ ಮಾಯವಾಗುತ್ತದೆ (ಚಿತ್ರ–11ರಲ್ಲಿ ಗಮನಿಸಿ).

6) ಧೂಮಕೇತುಗಳ ಗಾತ್ರ ಎಷ್ಟು?
* ಧೂಮಕೇತುಗಳದು ನಿಜವಾಗಿ ಕಲ್ಪನಾತೀತ ಗಾತ್ರ. ಧೂಮಕೇತುಗಳ ಸರಾಸರಿ ದ್ರವ್ಯ ರಾಶಿ ಒಂದು ಕೋಟಿ ಟನ್‌. ಗ್ರಹ–ಉಪಗ್ರಹಗಳಿಗೆ ಹೋಲಿಸಿದರೂ ಇದು ಭಾರೀ ಪ್ರಮಾಣ ಏನಲ್ಲ.
ಆದರೂ, ದ್ರವ್ಯ ರಾಶಿ ಇಷ್ಟೇ ಆದರೂ, ಧೂಮಕೇತುವೊಂದು ಸೂರ್ಯನ ಶಕ್ತಿಗಳ ಪ್ರಭಾವಕ್ಕೆ ಸಿಲುಕಿದಾಗ ಅದರ ಗಾತ್ರ. ಅಪಾರವರ್ಧನೆ ಗಳಿಸುತ್ತದೆ. ಅದರ ಶಿರದ ಗಟ್ಟಿ ಭಾಗ (ನ್ಯೂಕ್ಲಿಯಸ್‌) ಒಂದರಿಂದ ಹತ್ತು ಕಿ.ಮೀ.ನಷ್ಟೇ ವ್ಯಾಸ ಹೊಂದಿದ್ದರೂ ಸೂರ್ಯನ ತಾಪದಿಂದ ಹಿಗ್ಗಿ, ಸೌರಮಾರುತದ ಒತ್ತಡದಿಂದ ಮೈದಾಳುವ ‘ಕೋಮಾ’ ಮತ್ತು ‘ಬಾಲ’ದ ಅಳತೆಗಳು ಊಹಾತೀತ. ಧೂಮಕೇತುವಿನ ನ್ಯೂಕ್ಲಿಯಸ್‌ ಆವರಿಸುವ ಕೋಮಾದ ವ್ಯಾಸ ಹತ್ತಾರು ಲಕ್ಷ ಕಿ.ಮೀ. ಮುಟ್ಟುತ್ತದೆ. ಬಾಲದ ಉದ್ದವಂತೂ ಮೂವ್ವತ್ತೈದು ಕೋಟಿ ಕಿ.ಮೀ. ಅನ್ನೂ ಮೀರಿದ ದಾಖಲೆಗಳಿವೆ.

7) ಧೂಮಕೇತುಗಳ ಆಯುಷ್ಯ ಎಷ್ಟು?
*ಮೂಲಭೂತವಾಗಿ ಧೂಮಕೇತುವೊಂದರ ಆಯುಷ್ಯ ಅದರ ಆರಂಭಿಕ ದ್ರವ್ಯದಾಸ್ತಾನು ಹಾಗೂ ಸೂರ್ಯನಿಂದ ಅದರ ಚಲನೆಯ ದೂರ– ಇವುಗಳನ್ನು ಅವಲಂಬಿಸಿದೆ. ಪ್ರತಿ ಬಾರಿ ಸೂರ್ಯನ ಬಳಿ ಬಂದು ಹಿಂದಿರುಗುವಾಗಲೂ ಧೂಮಕೇತುವಿನ ಕೋಮಾದಿಂದ ಮತ್ತು ಬಾಲದಿಂದ ಒಂದಷ್ಟು ದ್ರವ್ಯ ಚದರಿ ಹೋಗಿ ಕಳೆದು ಹೋಗುತ್ತದೆ. ಬೃಹತ್‌ ದ್ರವ್ಯದ ಧೂಮಕೇತುಗಳು ಇಂಥ ನಷ್ಟ ಸಹಿಸಿ ಹಲವಾರು ಬಾರಿ ಸೂರ್ಯನನ್ನು ಸುತ್ತುತ್ತವೆ. ಅಲ್ಪ ದ್ರವ್ಯದವು ಸೂರ್ಯನ ಬಳಿ ಬಂದ ಮೊದಲ ಬಾರಿಯೇ ಎಲ್ಲ ದ್ರವ್ಯವನ್ನೂ ಕಳೆದುಕೊಂಡು ಕಣ್ಮರೆಯಾಗಬಹುದು.

ತಮ್ಮ ಪಯಣದ ಹಾದಿಯಲ್ಲಿ ಧೂಮಕೇತುಗಳು ಮಾರಣಾಂತಿಕ ಆಕಸ್ಮಿಕಗಳಿಗೂ ಒಳಗಾಗಬಹುದು. ಪ್ರತಿ ಸೆಕೆಂಡ್‌ಗೆ 40–50 ಕಿ.ಮೀ. ವೇಗದಲ್ಲಿ ಧಾವಿಸಿ ಬರುವ ಧೂಮಕೇತುಗಳು ತಮ್ಮ ಪಥದ ಸನಿಹದ ಯಾವುದಾದರೂ ಗ್ರಹದ ಗುರುತ್ವದಿಂದ ವಿಚಲನೆಗೊಂಡು ಅಂತಹ ಗ್ರಹಕ್ಕೇ ಡಿಕ್ಕಿ ಹಾಕಿ ನಿರ್ನಾಮವಾಗಿರುವ ಸಂದರ್ಭಗಳು ದಾಖಲಾಗಿವೆ. ಈಗ್ಗೆ 65 ದಶಲಕ್ಷ ವರ್ಷ ಹಿಂದೆ ನಮ್ಮ ಭೂಮಿಗೆ, ಇಸವಿ 1994ರಲ್ಲಿ ಗುರುಗ್ರಹಕ್ಕೆ (ಚಿತ್ರ–12) ಡಿಕ್ಕಿ ಹಾಕಿ ಧೂಮಕೇತುಗಳು (ಚಿತ್ರ–10) ವಿನಾಶಗೊಂಡಿವೆ. ತಮ್ಮ ಮೊದಲ ಪಯಣದಲ್ಲೇ ಸೂರ್ಯನಿಗೇ ಎರಗಿ ಅಂತ್ಯ ಕಂಡಿರುವ ಧೂಮಕೇತುಗಳು ಬಹಳ ಇವೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT