ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನಾನು ಸ್ಥಳೀಯ, ನಿಮಗೆ ಸದಾ ಲಭ್ಯ ’

ಜೆಡಿಎಸ್ ಅಭ್ಯರ್ಥಿ: ಗೂಳಿಹಟ್ಟಿ ಶೇಖರ್
Last Updated 12 ಏಪ್ರಿಲ್ 2014, 5:42 IST
ಅಕ್ಷರ ಗಾತ್ರ

* ಹೇಗಿದೆ ಮತದಾರರ ಒಲವು ?
ಒಂದು ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತೇನೆಂಬ ವಿಶ್ವಾಸವಿತ್ತು. ಹಾಗಾಗಿ ವಿಧಾನಪರಿಷತ್‌ಗೆ ನಡೆದ ಚುನಾವಣೆ ವೇಳೆ ತಾಲೀಮು ಆರಂಭಿಸಿದ್ದೆ. ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಸದಸ್ಯರನ್ನು ಸಂಪರ್ಕಿಸಿದ್ದೆ. ನಮ್ಮ ಪಕ್ಷಕ್ಕೆ ಬರಬೇಕಾದ ಮತಗಳನ್ನು ಭದ್ರವಾಗಿಸಿಕೊಂಡಿದ್ದೇನೆ. ಚುನಾವಣೆಗೆ ಮುನ್ನವೇ ಕ್ಷೇತ್ರ ಪ್ರವಾಸವನ್ನು ಮುಗಿಸಿದ್ದೆ. ಈಗ ಪ್ರಚಾರ ಸುಲಭವಾಗಿದೆ.

* ಏನು ಮುಂದಿಟ್ಟುಕೊಂಡು ಮತ ಯಾಚಿಸುತ್ತಿದ್ದೀರಿ ?
ಹಿಂದಿನ ಸಂಸದರು ಮತದಾರರ ಕೈಗೆ ಸಿಕ್ಕಿಲ್ಲ ಎಂಬ ಆರೋಪ ಇದೆ. ಆದರೆ ಮತದಾರರಲ್ಲಿ ‘ನಾನು ಸ್ಥಳೀಯ ಎಂಬ ’ ಪ್ರೀತಿಯಿದೆ. ಮತದಾರರಿಗೆ ತಕ್ಷಣ ಲಭ್ಯವಾಗುತ್ತೇನೆಂಬ ಭರವಸೆ ಇದೆ. ಸಚಿವರಾಗಿದ್ದಾಗ ಮಾಡಿದ ಅಭಿವೃದ್ಧಿ ಕಾರ್ಯಗಳಿವೆ. ಆ ಕಾಲಘಟ್ಟದಲ್ಲೇ ಸಂಪಾದಿಸಿದ ಯುವಕರ ಪಡೆ ಇದೆ. ಎಲ್ಲದಕ್ಕಿಂತ ಹೆಚ್ಚಾಗಿ ಸಾಂಪ್ರದಾಯಿಕ ಜೆಡಿಎಸ್ ಮತಗಳಿವೆ. ಗೆಲ್ಲುವುದಕ್ಕೆ ಇದಕ್ಕಿಂತ ಇನ್ನೇನು ಬೇಕು.

* ನೀವು ವಿಧಾನಸಭೆಯಲ್ಲಿ ಬಟ್ಟೆ ಹರಿದುಕೊಂಡ ಪ್ರಕರಣವೇ ಹೆಚ್ಚು ಚರ್ಚೆಯಾಗುತ್ತಿದೆ. ಇದು ನಿಮಗೆ   
    ಹಿನ್ನೆಡೆಯಾಗಿಲ್ಲವೇ ?

ಆ ದಿನ ನಾನು ಬಟ್ಟೆ ಹರಿದುಕೊಳ್ಳಲಿಲ್ಲ. ಮಾರ್ಷಲ್ ಗಳು ಎಳೆದಾಡಿದಾಗ ಬಟ್ಟೆ ಹರಿಯಿತು. ‘ಬಟ್ಟೆ ಹೇಗೆ ಹರಿದಿದ್ದಾರೆ ನೋಡಿ’ ಎಂದು ನನ್ನ ನೋವನ್ನು ವ್ಯಕ್ತಪಡಿಸಿದೆ. ಅದನ್ನು ತಪ್ಪಾಗಿ ಬಿಂಬಿಸಲಾಯಿತು. ಆದರೆ ಈ ಚುನಾವಣೆ ಪ್ರಚಾರದ ವೇಳೆ ಇಂಥ ವಿಚಾರ ಅಷ್ಟಾಗಿ ಚರ್ಚೆಗೆ ಬಂದಿಲ್ಲ. ಬಂದರೂ, ಅವರಿಗೆಲ್ಲ ಈ ವಿವರಣೆ ನೀಡಿದ್ದೇನೆ. ಜನ ಒಪ್ಪಿಕೊಂಡಿದ್ದಾರೆ.

* ‘ಗೆಳೆಯರೆಲ್ಲ ವಿರೋಧ ಪಕ್ಷದಲ್ಲಿದ್ದಾರೆ. ನೀವೇ ಗೆಲ್ಲಿಸಿದ ರಘು ಆಚಾರ್ ಕಾಂಗ್ರೆಸ್ ಸೇರಿದ್ದಾರೆ. ಬಲ ಕಡಿಮೆಯಾಗಲಿಲ್ಲವೇ ?
ಗೆಳೆತನವೇ ಬೇರೆ. ರಾಜಕೀಯವೇ ಬೇರೆ. ಆದರೆ ಈ ಚುನಾವಣೆಯಲ್ಲಿ ನಾನು ಯಾರ ಬೆಂಬಲವನ್ನೂ ಕೇಳಿಲ್ಲ. ಅವರನ್ನೆಲ್ಲ ನಂಬಿಕೊಂಡು ನಾನು ರಾಜಕೀಯಕ್ಕೆ ಇಳಿದಿಲ್ಲ. ವಿಧಾನಸಭೆ ಚುನಾವಣೆಯಲ್ಲಿ ಸೋತ ಕ್ಷಣದಿಂದಲೇ ಸಂಸತ್ತು ಚುನಾವಣೆಗೆ ನಿಲ್ಲಬೇಕು. ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಬೇಕೆಂದು ತೀಮಾರ್ನಿಸಿದ್ದೆ. ಆ ಪ್ರಕಾರ ಸ್ಪರ್ಧಿಸಿದ್ದೇನೆ. ಗೆದ್ದೇ ಗೆಲ್ಲುತ್ತೇನೆ. ನಮ್ಮ ಗೆಳೆತನ ಮುಂದುವರಿಯುತ್ತದೆ.

* ಒಂದೇ ಸಮುದಾಯದ ಇಬ್ಬರು ಅಭ್ಯರ್ಥಿಗಳಿದ್ದೀರಿ. ನಿಮ್ಮ ಜಾತಿಯ ಮತ ಹೇಗೆ ಸೆಳೆಯುತ್ತೀರಿ ?
ಐದು ವರ್ಷ ನಮ್ಮ ಸಮುದಾಯದ ಸಂಸದರನ್ನು ಜನರು ನೋಡಿದ್ದಾರೆ. ಈಗ ಇಡೀ ಭೋವಿ ಸಮುದಾಯದ ಶೇ 80ರಷ್ಟು ಮಂದಿ ನನ್ನೊಟ್ಟಿಗಿದ್ದಾರೆ. ಈ ಬಗ್ಗೆ ಅನೇಕ ಸುತ್ತಿನ ಚರ್ಚೆಯಾಗಿದೆ. ನಾನು ಹಟ್ಟಿ, ಕಾಲೊನಿ ಎಲ್ಲವನ್ನೂ ಸುತ್ತಾಡಿದ್ದೇನೆ. ‘ಹಿಂದೆ ಮಾಡಿದ ತಪ್ಪನ್ನು ಮತ್ತೆ ಮಾಡುವುದಿಲ್ಲ’ ಎಂಬ ಭರವಸೆ ನೀಡಿದೆ. ನಮ್ಮ ಸಮುದಾಯದ ಮಠಕ್ಕೆ ಹೋಗಿ ಗುರುಗಳ ಆಶಿರ್ವಾದ ಪಡೆದಿದ್ದೇನೆ. ಇದಕ್ಕಿಂತ ಇನ್ನೇನು ಬೇಕು.

* ಕ್ಷೇತ್ರದ ಬಗ್ಗೆ ಭವಿಷ್ಯದ ಕನಸು ಏನು ?
ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ತ್ವರಿತಗತಿಯಲ್ಲಾಗಬೇಕು. ಎಲ್ಲದಕ್ಕಿಂತ ಹೆಚ್ಚಾಗಿ ಜಿಲ್ಲೆಯ ಸಮಸ್ಯೆಗಳನ್ನು ಸಂಸತ್ತಿನಲ್ಲಿ ಪ್ರತಿಧ್ವನಿಸುವಂತೆ ಮಾಡಬೇಕು. ಆ ಮೂಲಕ ಸರ್ಕಾರದ ಗಮನ ಸೆಳೆಯಬೇಕು. ಹಿಂದೆ ಸಚಿವರಾಗಿದ್ದಾಗ ಜಿಲ್ಲೆಗೆ ಗಾರ್ಮೆಂಟ್ ಉದ್ದಿಮೆ ತರುವುದರ ಬಗ್ಗೆ ಚಿಂತಿಸಿದ್ದೆ. ಅದನ್ನು ಭವಿಷ್ಯದಲ್ಲಿ ಸಾಕಾರಗೊಳಿಸುತ್ತೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT