ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನಿರ್ಮಲ’ ಪುರಸ್ಕಾರದ ಊರಲ್ಲಿ ಅನೈರ್ಮಲ್ಯ

Last Updated 7 ಜನವರಿ 2014, 8:34 IST
ಅಕ್ಷರ ಗಾತ್ರ

ಕುಷ್ಟಗಿ: ತಾಲ್ಲೂಕಿನ ದೋಟಿಹಾಳದ ‘ನಿರ್ಮಲ ಗ್ರಾಮ ಯೋಜನೆಯ ರಾಷ್ಟ್ರೀಯ ಪುರಸ್ಕಾರಕ್ಕೆ ಪಾತ್ರವಾಗಿದೆ. ಬಯಲು ಮಲವಿಸರ್ಜನೆ ಇಲ್ಲದಿರುವುದು ಹಾಗೂ ಮಾಲಿನ್ಯ ಮುಕ್ತ ಗ್ರಾಮ ಎಂಬುದಕ್ಕೆ ಈ ಪ್ರಶಸ್ತಿ ಸಂದಿದೆ. ಆದರೆ, ಸದ್ಯದ ಪರಿಸ್ಥಿತಿ ತದ್ವಿರುದ್ಧವಾಗಿದೆ.

ಊರಿಗೆ ಕಾಲಿಡುತ್ತಿದ್ದಂತೆ ರಾಶಿರಾಶಿ ಕಸ, ನಿಂತಲ್ಲೇ ಮಡುಗಟ್ಟಿದ ಚರಂಡಿಗಳು, ಕೆಸರು ಗುಂಡಿಯಂತಿರುವ ರಸ್ತೆ, ಶಾಲಾ ಆವರಣ, ಗ್ರಾಮದ ಒಳಗಿನ ರಸ್ತೆ, ಬಯಲು ಪ್ರದೇಶ ಗಳೆಲ್ಲ ಬಯಲು ಶೌಚಾಲಯಗಳು ಕಣ್ಣಿಗೆ ರಾಚುತ್ತವೆ. ಮಾಲಿನ್ಯ ಕಂಡ  ಊರಿನ ಜನ, ನಿರ್ಮಲಗ್ರಾಮ ಪುರಸ್ಕಾರ ಪ್ರಶಸ್ತಿಯ ಮಾನದಂಡ ಪ್ರಶ್ನಿಸುತ್ತಾರೆ.

ಗ್ರಾಮೀಣ ಅಭಿವೃದ್ಧಿ, ಉದ್ಯೋಗ ಖಾತ್ರಿ, 13ನೇ ಹಣಕಾಸು, ರಾಜ್ಯ, ಕೇಂದ್ರದ ಯೋಜನೆ ಗಳ ಅಡಿ ಅಪಾರ ಅನುದಾನ ಬಂದರೂ ಊರು ಅಭಿವೃದ್ಧಿಯಾಗಲಿಲ್ಲ ಎಂಬ ಕೊರಗು ಗ್ರಾಮಸ್ಥರದು.

ಸುವರ್ಣಗ್ರಾಮ ಯೋಜನೆಯಲ್ಲಿ ನಿರ್ಮಾಣ ಗೊಂಡ ಕಾಂಕ್ರಿಟ್‌ ರಸ್ತೆಗಳು ಅವೈಜ್ಞಾನಿಕ ವಾಗಿವೆ. ತಾಂತ್ರಿಕ ಪರಿಣಿತಿ ಸುಳಿವೇ ಇಲ್ಲದ ಸ್ಥಳೀಯ ಗುತ್ತಿಗೆದಾರರೇ ಅವುಗಳನ್ನು ನಿರ್ವಹಿ ಸಿದ್ದಾರೆ. ಅಗತ್ಯ ಇರುವಲ್ಲಿ ಚರಂಡಿಗಳಿಲ್ಲ, ಚರಂಡಿ ಇರುವಲ್ಲಿ ಕೊಳಚೆ ಮುಂದೆ ಹರಿಯದೇ ರಸ್ತೆ ಚರಂಡಿ ಒಂದೇ ಎಂಬಂತಾ ಗಿವೆ. ಊರ ಮಧ್ಯದಲ್ಲಿರುವ ರಾಜ್ಯ ಹೆದ್ದಾರಿ ಯಲ್ಲಿ ಹೊಂಡಗಳು ನಿರ್ಮಾಣಗೊಂಡಿವೆ. ಪ್ರಮುಖ ಸ್ಥಳಗಳಲ್ಲಿನ ಕಸ ವಿಲೇವಾರಿಯಾ ಗಿಲ್ಲ. ಮಾಲಿನ್ಯದಿಂದಾಗಿ ಡೆಂಗೆ ಮತ್ತಿತರೆ ರೋಗಗಳಿಂದ ಜನ ತೊಂದರೆಗೆ ಒಳಗಾಗು ತ್ತಿದ್ದಾರೆ ಎಂದು ಗ್ರಾಮಸ್ಥರು ದೂರುತ್ತಾರೆ.

ದೊಡ್ಡ ಗ್ರಾಮವಾಗಿದ್ದರೂ ಸಫಾಯಿ ಕರ್ಮಚಾರಿಗಳನ್ನು ನೇಮಕ ಮಾಡಿಕೊಂಡಿಲ್ಲ. ತುರ್ತು ಸಂದರ್ಭದಲ್ಲಿ ಕೆಲಸ ಮಾಡುವವರೂ ಕಾಯಂ ಕೆಲಸಕ್ಕೆ ಒತ್ತಾಯಿಸಿ ಕೆಲಸ ನಿಲ್ಲಿಸಿದ್ದಾರೆ. ಹಾಗಾಗಿ ಘನತ್ಯಾಜ್ಯ, ಚರಂಡಿ ಕಸ ವಿಲೇವಾರಿ ಮಾಡಲು ಸಾಧ್ಯವಾಗಿಲ್ಲ. ಇದನ್ನು ಮೇಲಧಿಕಾರಿಗಳ ಗಮನಕ್ಕೆ ತಂದಿದ್ದೇವೆ ಎಂದು ಪಿಡಿಒ ಗೀತಾ ಅಯ್ಯಪ್ಪ ಹೇಳಿದರು.

ಗ್ರಾ.ಪಂ ಪ್ರತಿನಿಧಿಗಳು ಮತ್ತು ಸಿಬ್ಬಂದಿ ಮಧ್ಯೆ ಹೊಂದಾಣಿಕೆ ಇಲ್ಲ. ತಮಗೆ ಅನುಕೂಲ ಇಲ್ಲವೆಂದರೆ ಸಾಕು ಇಲ್ಲದ ನೆಪದಿಂದ ಸಭೆ ನಡೆಯದಂತೆ ನೋಡಿಕೊಳ್ಳುವ ಕೆಲ ಪಟ್ಟಭದ್ರ ಜನಪ್ರತಿನಿಧಿಗಳು ಇಲ್ಲಿದ್ದಾರೆ. ಜನರ ಸಮಸ್ಯೆಗಳಿಗಿಂತ ವೈಯಕ್ತಿಕ ಹಿತಾಸಕ್ತಿಗಳೇ ಮುಖ್ಯವಾಗುತ್ತವೆ. ಇಲ್ಲಿಗೆ ಬರುವ ಕೆಲ ಪಿಡಿಒಗಳು ಮತ್ತು ಪ್ರಮುಖ ಸದಸ್ಯರು ಅಪವಿತ್ರ ಮೈತ್ರಿ ಮಾಡಿಕೊಂಡು ಲಕ್ಷಾಂತರ ಹಣ ಗುಳುಂ ಮಾಡಿದ್ದಾರೆ. ಅಭಿವೃದ್ಧಿ ವಿಷಯ ಒತ್ತಟ್ಟಿಗಿರಲಿ ಈ ಪಂಚಾಯಿತಿ ಪ್ರತಿನಿಧಿಗಳೇ ಸಮಸ್ಯೆಯಾಗಿದ್ದಾರೆ. ಪ್ರಭಾವಿ ರಾಜಕಾರಣಿ ಗಳ ಕುಮ್ಮಕ್ಕು ಇದೆ ಎಂದು ಹೆಸರು ಪ್ರಕಟಿಸಲು ಇಚ್ಛಿಸದ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ಮಳಿಗೆ ಮತ್ತಿತರ ಮೂಲಗಳಿಂದ ಬರುವ ಶುಲ್ಕ, ಬಾಡಿಗೆ ವಸೂಲಿ ಮಾಡುತ್ತಿಲ್ಲ, ಬಸ್‌ ತಂಗುದಾಣಕ್ಕೆ ಬರುವ ಮಹಿಳೆಯರಿಗೆ ಶೌಚಾ ಲಯದ ಅನುಕೂಲವಿಲ್ಲ. ಊರ ಮಧ್ಯದ ಮತ್ತು ಹೊರವಲಯದ ಶಾಲೆ, ಪ್ರೌಢಶಾಲೆ, ಕಾಲೇಜು ಮೈದಾನಗಳು ಸಾರ್ವಜನಿಕರ ಮಲ ವಿಸರ್ಜನೆ ತಾಣಗಳಾದರೂ ಪಂಚಾಯಿತಿ ಗಮನಹರಿಸಿಲ್ಲ. ಕುಡಿಯುವ ನೀರಿನ ವ್ಯವಸ್ಥೊ ಸಮರ್ಪಕವಾಗಿಲ್ಲ ಎಂಬ ದೂರು ಸಾಮಾನ್ಯ.

ಗ್ರಾಮಸ್ಥರು ಏನಂತಾರೆ?

ಚಿಂತನೆ ಪ್ರಾಮಾಣಿಕವಾಗಿರಲಿ
ಹಳ್ಳಿಗಳ ಅಭಿವೃದ್ಧಿಗೆ ಸರ್ಕಾರ ಸಾಕಷ್ಟು ಅನುದಾನ ನೀಡುತ್ತಿದೆ. ಆದರೆ, ಅದನ್ನು ವಿನಿಯೋಗ ಮಾಡಿಕೊಳ್ಳುವಲ್ಲಿ ಸದಸ್ಯರು ಮತ್ತು ಸಿಬ್ಬಂದಿ ಪ್ರಾಮಾಣಿಕ ಚಿಂತನೆ ನಡೆಸಿದರೆ ಮಾತ್ರ ಊರು ಅಭಿವೃದ್ಧಿಯಾಗುತ್ತದೆ.
ಲಚ್ಚಪ್ಪ ಲಾಳಿ, ಹಿರಿಯ ನಾಗರಿಕ

‘ಹೆಣ್ಮಕ್ಳಿಗೆ ಮರ್ಯಾದೆ ಇಲ್ಲ’
ಊರಾಗಿನ ರೋಡು ಕೆಸರಿನ ಹೊಂಡಾಗಾವ್ರಿ, ಬಸ್ಟ್ಯಾಂಡಿನ್ಯಾಗ ಪಾಯಿಖಾನಿ, ಮೂತ್ರಾಲಯ ಇಲ್ದಕ್ಕ ಹೆಣ್ಮಕ್ಕಳಿಗೆ ಇಲ್ಲಿ ಮರ್ಯಾದೆ ಇಲ್ದಂಗಾಗೇತ್ರಿ.
- ಶರಣಮ್ಮ ಹೂಗಾರ, ಹೂವು ವ್ಯಾಪಾರಿ.

‘ಹಣ ದೋಚುವುದೇ ಅಭಿವೃದ್ಧಿ’
ಊರು, ಪರಿಶಿಷ್ಟರ ಕಾಲೊನಿ ನೋಡಿದರೆ ಅಭಿವೃದ್ಧಿ ಹೇಗಿದೆ ಎಂಬುದು ಗೊತ್ತಾಗುತ್ತದೆ. ಅಭಿವೃದ್ಧಿ ಎಂದರೆ ಪಂಚಾಯಿತಿ ಸದಸ್ಯರ ಪ್ರಕಾರ  ಹಣ ಬಾಚಿಕೊಳ್ಳುವುದು. ಸರ್ಕಾರ ನೀಡಿದ ಅನುದಾನ ಕೆಲವರ ಪಾಲಾಗುತ್ತಿದೆ. ಅಭಿವೃದ್ಧಿ ಕೆಲಸದ ಮೇಲೆ ವಿನಿಯೋಗ ಆಗುತ್ತಿಲ್ಲ.
- ಹನುಮಂತ ಪೂಜಾರಿ, ದಸಂಸ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT