ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನೃತ್ಯವೇ ಸರ್ವಸ್ವ’

ಸೋನಾಲ್ ಮಾನ್‌ಸಿಂಗ್ ಸಂದರ್ಶನ
Last Updated 12 ಜನವರಿ 2015, 19:39 IST
ಅಕ್ಷರ ಗಾತ್ರ

*ನೀವು ರಂಗಪ್ರವೇಶ ಮಾಡಿದ ಕಾಲಕ್ಕೂ, ಈ ಹೊತ್ತಿನ ಕಲಾ ಪ್ರಪಂಚಕ್ಕೂ ಕಾಣುವ ವ್ಯತ್ಯಾಸವೇನು?
ವ್ಯತ್ಯಾಸ ಎನ್ನುವುದಕ್ಕಿಂತ ದೊಡ್ಡ ಕಂದರವೇ ನಿರ್ಮಾಣವಾಗಿದೆ ಎನ್ನಬಹುದು. ನಾನು ರಂಗಪ್ರವೇಶ ಮಾಡಿದ ಕಾಲಕ್ಕೆ ಗುರುಗಳ ಮೇಲೆ ಭಕ್ತಿಯ ಜತೆಗೆ ಭಯವೂ ಇತ್ತು. ಗುರುಗಳನ್ನು ದೇವರಂತೆ ಕಾಣುತ್ತಿದ್ದೆವು. ಆದರೆ, ಇಂದು ‘ಗುರು’ ಎಂಬ ಪದವೇ ನಾನಾರ್ಥ ಪಡೆದುಕೊಂಡಿದೆ.

ಫ್ಯಾಷನ್ ಗುರು, ರೈಡಿಂಗ್ ಗುರು, ಫುಡ್ ಗುರು, ಸ್ಪೈಕ್ ಗುರು– ಹೀಗೆ ‘ಗುರು’ಗಳು ಹೆಚ್ಚಾಗಿದ್ದಾರೆ. ಗುರು ಎಂದರೆ ಸಾಕ್ಷಾತ್ ಪರಬ್ರಹ್ಮ ಎಂಬ ಪೂಜನೀಯ ಭಾವ ಇಂದಿನ ಬಹುತೇಕರಲ್ಲಿ ಇಲ್ಲ. ಗುರುಗಳು ಕೇವಲ ತರಬೇತುದಾರರಾದಾಗ ಇಂಥ ಅಂತರ ಹೆಚ್ಚುತ್ತಾ ಹೋಗುತ್ತದೆ.

*ಶಾಸ್ತ್ರೀಯ ನೃತ್ಯದ ಸಾಧನೆಗಿಂತ ರಿಯಾಲಿಟಿ ಷೋಗಳ ಪ್ರದರ್ಶನಕ್ಕೆ ತಕ್ಕಷ್ಟು ಕಲಿಯುವ ಪರಿಪಾಠ ಹೆಚ್ಚಾದ ಪರಿಣಾಮವೇ ಇದು?
ಹೌದು. ಪ್ರದರ್ಶನಕ್ಕೆ ತಕ್ಕಷ್ಟು ಕಲಿತು ಬಹುಮಾನ ಬಾಚಿಕೊಳ್ಳಬೇಕೆಂಬ ಮನೋಭಾವ ಇಂದಿನ ಪೀಳಿಗೆಯಲ್ಲಿ ಹೆಚ್ಚಾಗಿದೆ. ರಿಯಾಲಿಟಿ ಷೋಗಳಿಗೆ ಎಷ್ಟು ಬೇಕೋ ಅಷ್ಟು ಕಲಿಸುವ ‘ಗುರು’ಗಳೂ ಹೆಚ್ಚಾಗಿದ್ದಾರೆ.

*ನಿಮ್ಮ ಪ್ರಕಾರ ನೃತ್ಯ ಎಂದರೆ?
ನೃತ್ಯ ಎಂದರೆ ನನ್ನ ಪಾಲಿಗೆ ಎಲ್ಲ. ನೃತ್ಯವೇ ನನ್ನ ಉಸಿರು, ನೃತ್ಯವೇ ನನ್ನ ಆಹಾರ, ನೃತ್ಯವೇ ನನ್ನ ಧ್ಯಾನ. ನೃತ್ಯದ ಹೊರತಾಗಿ ನನ್ನ ಅಸ್ತಿತ್ವವಿಲ್ಲ. ನೃತ್ಯ ಎಂದರೆ ಕೇವಲ ಕುಣಿಯುವ ಕ್ರಿಯೆಯಷ್ಟೇ ಅಲ್ಲ, ಅದು ನಟರಾಜನ ಪೂಜೆ, ತಪಸ್ಸು.

*ಟಿ.ವಿ, ಸಿನಿಮಾದ ಅಬ್ಬರದಲ್ಲಿ ಶಾಸ್ತ್ರೀಯ ನೃತ್ಯಕ್ಕೆ ಹಿನ್ನಡೆಯಾಗುತ್ತಿದೆ ಎನಿಸುತ್ತದಯೇ?
ಹಿನ್ನಡೆ ಆಗುತ್ತಿಲ್ಲ, ಹಿಂದಕ್ಕೆ ತಳ್ಳಲಾಗುತ್ತಿದೆ. ಇಂದು ಮಾಧ್ಯಮಲೋಕ ದೊಡ್ಡದಾಗಿದೆ. ನೂರಾರು ಟಿ.ವಿ ಚಾನೆಲ್ಗಳಿವೆ, ನೂರಾರು ಪತ್ರಿಕೆಗಳಿವೆ. ಆದರೆ, ಮಾಧ್ಯಮದಲ್ಲಿ ಬಾಲಿವುಡ್ ಸೇರಿದಂತೆ ಎಲ್ಲ ‘ವುಡ್’ಗಳಿಗೆ ಸಿಗುವ ಪ್ರಚಾರ ಸಾಂಪ್ರದಾಯಿಕ ನೃತ್ಯಕ್ಕೆ ಸಿಗುತ್ತಿಲ್ಲ. ಡಿಡಿ ಭಾರತಿ ಹಾಗೂ ದೂರದರ್ಶನದ ಪ್ರಾದೇಶಿಕ ಚಾನೆಲ್ ಗಳನ್ನು ಬಿಟ್ಟರೆ ಉಳಿದ ಚಾನೆಲ್ ಗಳು ಸಾಂಪ್ರದಾಯಿಕ ನೃತ್ಯಕ್ಕೆ ಹೆಚ್ಚು ಪ್ರೋತ್ಸಾಹ ನೀಡುತ್ತಿಲ್ಲ.

*ಭಯೋತ್ಪಾದನೆ, ಲೈಂಗಿಕ ದೌರ್ಜನ್ಯದಂಥ ಇಂದಿನ ಸಮಸ್ಯೆಗಳಿಗೆ ನೃತ್ಯ ಪ್ರಕಾರದ ಮೂಲಕ ಪ್ರತಿಕ್ರಿಸುವ ಬಗೆ ಹೇಗೆ?
ಇಂಡೊ-ಗ್ರೀಕ್ ಕಲಾವಿದರು ಸೇರಿ ‘when the gods meet’ ಎಂಬ ನೃತ್ಯ ನಾಟಕ ಪ್ರದರ್ಶಿಸಿದ್ದೆವು. ಭಾರತೀಯ ದೇವತೆಗಳು ಗ್ರೀಕ್ ದೇವತೆಗಳನ್ನು ಭೇಟಿ ಮಾಡುವಂಥ ಪ್ರಸಂಗ ಅದು. ಭಯೋತ್ಪಾದನೆ ಯಾರ ಹೆಸರಿನಲ್ಲಿ ನಡೆಯುತ್ತಿದೆ? ದೇವರ ಹೆಸರಲ್ಲಿ. ದೇವತೆಗಳೇ ಭೇಟಿಯಾದಾಗ ಭಯೋತ್ಪಾದನೆಯ ಬಗ್ಗೆ ಅವರಿಂದ ಮಾತನಾಡಿಸಬಹುದು.

ಭಯೋತ್ಪಾದನೆಯನ್ನು ನೃತ್ಯದ ಮೂಲಕ ಪ್ರತಿಭಟಿಸಲು ಸಾಧ್ಯವಿದೆ. ‘ದ್ರೌಪದಿ’ ನೃತ್ಯ ನಾಟಕದ ಮೂಲಕ ಮಹಿಳೆಯರ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸಲು ಸಾಧ್ಯವಾಗಿದೆ. ಶ್ರೀ ಕೃಷ್ಣ ಕಾಳಿಂಗ ಮರ್ದನ ಪ್ರಸಂಗವನ್ನು ಸೂಕ್ಷ್ಮವಾಗಿ ಗಮನಿಸಿದರೆ ಅಲ್ಲಿ ಮಾಲಿನ್ಯದ ವಿರುದ್ಧದ ಸಂದೇಶವಿರುವುದನ್ನು ಕಾಣಬಹುದು. ನೃತ್ಯದ ಮೂಲಕ ಈ ಪ್ರಸಂಗ ಪ್ರಸ್ತುತ ಪಡಿಸುವಾಗ ಪರಿಸರ ಮಾಲಿನ್ಯದ ವಿರುದ್ಧ ಜಾಗೃತಿ ಮೂಡಿಸಬಹುದು.

ನದಿಯನ್ನು ಮಲಿನಗೊಳಿಸುತ್ತಿದ್ದ ಆ ಕಾಳಿಂಗನನ್ನು ಬಗ್ಗು ಬಡಿದು ಬುದ್ಧಿ ಹೇಳಿದ್ದ ಕೃಷ್ಣ. ಆದರೆ, ಇಂದು ಸಾವಿರಾರು ಕಾಳಿಂಗರು ಕಾರ್ಖಾನೆಗಳ ಚಿಮಣಿ, ಮಲಿನ ನೀರಿನ ಪೈಪುಗಳ ರೂಪದಲ್ಲಿ ಪರಿಸರವನ್ನು ಮಲಿನಗೊಳಿಸುತ್ತಿದ್ದಾರೆ. ಸಾಂಪ್ರದಾಯಿಕ ನೃತ್ಯದ ಮೂಲಕ ಈ ಎಲ್ಲ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸಲು ಸಾಧ್ಯವಿದೆ. ನಮ್ಮ ನೃತ್ಯದಲ್ಲಿ ಎಲ್ಲವೂ ಇದೆ. ಅದನ್ನು ಸರಿಯಾಗಿ ಬಳಸಿಕೊಳ್ಳುವ ಮನಸ್ಸು ಮಾಡಬೇಕಷ್ಟೆ.

*ಶಾಸ್ತ್ರೀಯ ಹಾಗೂ ಜನಪದ ನೃತ್ಯ ಪ್ರಕಾರಗಳ ನಡುವಿನ ಅಂತರ ಹಾಗೂ ಈ ನೃತ್ಯ ಪ್ರಕಾರಗಳ ಭವಿಷ್ಯವೇನು?
ಶಾಸ್ತ್ರೀಯ– ಜನಪದ ಎನ್ನುವುದಕ್ಕಿಂತ ಇದನ್ನು ಮಾರ್ಗ-, ದೇಸಿ ಎಂದು ಕರೆಯಬಹುದು. ಮಾರ್ಗ ರಾಷ್ಟ್ರೀಯ ಹೆದ್ದಾರಿ, ದೇಸಿ ನಮ್ಮ ಬಡಾವಣೆಯ ಬೀದಿ ಇದ್ದಂತೆ. ನಮ್ಮ ಬಡಾವಣೆಯ ಬೀದಿಯಲ್ಲಿ ನಾವು ಸ್ವಚ್ಛಂದವಾಗಿ ಓಡಾಡಬಹುದು. ಆದರೆ, ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುವಾಗ ಕೆಲವೊಂದು ನಿಮಯಗಳನ್ನು ಕಡ್ಡಾಯವಾಗಿ ಪಾಲಿಸಬೇಕಾಗುತ್ತದೆ. ಶಾಲಾ ಪಠ್ಯದಲ್ಲಿ ನೃತ್ಯದ ವಿಷಯಗಳನ್ನು ಸೇರಿಸಿ ನಮ್ಮ ನೃತ್ಯ ಪ್ರಕಾರಗಳ ಬಗ್ಗೆ ಹೊಸ ಪೀಳಿಗೆಗೆ ತಿಳಿವಳಿಕೆ ಮೂಡಿಸಬೇಕು. ಇದಕ್ಕಾಗಿ ಕಲಾವಿದರ, ಸಾಹಿತಿಗಳ, ಪತ್ರಕರ್ತರ ಸಾಂಘಿಕ ಪ್ರಯತ್ನ ಅಗತ್ಯ.

*ಭಾರತೀಯ ಶಾಸ್ತ್ರೀಯ ನೃತ್ಯಗಳ ಕೇಂದ್ರ (ಸಿಐಸಿಡಿ) ಹೇಗೆ ಕಾರ್ಯನಿರ್ವಹಿಸುತ್ತಿದೆ?
ಸಿಐಸಿಡಿ ಈಗ 37 ವರ್ಷಗಳನ್ನು ಪೂರೈಸಿದೆ. ಅಲ್ಲಿ ನೃತ್ಯ ಕಲಿತ ಬಹುತೇಕರು ಪ್ರಪಂಚದ ವಿವಿಧ ಕಡೆಗಳಲ್ಲಿ ಭಾರತೀಯ ನೃತ್ಯ ಪ್ರಕಾರಗಳನ್ನು ಬೆಳೆಸುತ್ತಿದ್ದಾರೆ. ನಮ್ಮ ಕೇಂದ್ರದ ಮೂಲಕ ಭಾರತದ ವಿವಿಧ ಭಾಗಗಳ ಸಾಂಪ್ರದಾಯಿಕ ನೃತ್ಯ ಪ್ರಕಾರಗಳನ್ನು ಪ್ರಪಂಚಕ್ಕೆಲ್ಲಾ ಪಸರಿಸಿದ್ದೇವೆ.

*ಬೆಂಗಳೂರಿನೊಂದಿಗೆ ನಿಮ್ಮ ನಂಟು?
ಬೆಂಗಳೂರು ನನಗೆ ತವರು ಮನೆ ಇದ್ದಂತೆ. ಬೆಂಗಳೂರಿನ ಜತೆಗೆ ನನ್ನ ಸಂಬಂಧ ತುಂಬಾ ಹಳೆಯದ್ದು ಮತ್ತು ಭಾವುಕವಾದದ್ದು. ನನ್ನ ರಂಗಪ್ರವೇಶವಾಗಿದ್ದು 1961ರಲ್ಲಿ ಬೆಂಗಳೂರಿನ ರಾಜಭವನದಲ್ಲಿ. ಗುರು ಪ್ರೊ.ಯು.ಎಸ್.ಕೃಷ್ಣರಾವ್, ಚಂದ್ರಭಾಗಾದೇವಿ, ಮೈಸೂರಿನ ಅಂದಿನ ಮಹಾರಾಜ ಜಯಚಾಮರಾಜೇಂದ್ರ ಒಡೆಯರ್, ಎಸ್.ನಿಜಲಿಂಗಪ್ಪ, ಬಿ.ವಿ.ಕೆ.ಶಾಸ್ತ್ರಿ, ರೋರಿಕ್ ಮೊದಲಾದವರು ಆ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದು ಈಗಲೂ ನೆನಪಿದೆ. ನನ್ನ ಅಜ್ಜ ಕೆಲಕಾಲ ಮೈಸೂರು ಸಂಸ್ಥಾನದ ಆಡಳಿತದಲ್ಲಿದ್ದರು. ಬೆಂಗಳೂರಿನಲ್ಲಿ ನನಗೆ ಬಹಳಷ್ಟು ಹಳೆಯ ಸ್ನೇಹಿತರಿದ್ದಾರೆ.

*ಕನ್ನಡ ಮಾತನಾಡಲು ಬರುತ್ತದೆಯೇ?
ಸ್ವಲ್ಪ ಸ್ವಲ್ಪ. ‘ಊಟ ಬೇಕು’, ‘ಚೆನ್ನಾಗಿದೆ’ ಇನ್ನು ಕೆಲವು ಪದಗಳನ್ನು ಮಾತನಾಡುತ್ತೇನೆ. ನನಗೆ ಭಾರತದ ಬಹುತೇಕ ಭಾಷೆಗಳೆಲ್ಲವೂ ಸ್ವಲ್ಪಸ್ವಲ್ಪ ಗೊತ್ತು. ಆ ದೃಷ್ಟಿಯಲ್ಲಿ ನಾನು ಅಪ್ಪಟ ಭಾರತೀಯಳು. ಜರ್ಮನ್ ಸೇರಿದಂತೆ ಕೆಲವು ವಿದೇಶಿ ಭಾಷೆಗಳೂ ಬರುತ್ತವೆ, ಆದ್ದರಿಂದ ನಾನು ವಿಶ್ವಮಾನವಳೂ ಹೌದು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT