ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನೆರೊ’ ರಾತ್ರಿಯಲ್ಲಿ ಗಾನ ಬಜಾನಾ...

Last Updated 23 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಗಾಢ ನೀಲಿ ಬಣ್ಣದ ತುಂಡು ಚೆಡ್ಡಿ ಹಾಗೂ ಕಂಚುಕ ಕಾಣಿಸುವಂಥ ಕೆಂಪು ಬಣ್ಣದ ಬನಿಯನ್‌ ಧರಿಸಿದ್ದ ಹುಡುಗಿಯ ಕಣ್ಣುಗಳನ್ನು ಬಣ್ಣ ಬಣ್ಣದ ಮಿಣುಕು ಬೆಳಕು ಚೆಲ್ಲುವ ಕನ್ನಡಕ ಆವರಿಸಿತ್ತು. ಆ ಹುಡುಗಿಯ ಒಂದು ಕೈಯಲ್ಲಿ ಸ್ಮಿರ್ನ್‌ಆಫ್‌ ವೋಡ್ಕಾ ತುಂಬಿದ್ದ ದೊಡ್ಡ ಮಗ್‌ ಇತ್ತು. ಮತ್ತೊಂದು ಕೈಯಲ್ಲಿ ಸಿಗರೇಟು ಉರಿಯುತ್ತಿತ್ತು.

ಸಂಗೀತದ ಅಬ್ಬರ ಹೆಚ್ಚಿದಂತೆ ಆಕೆ ಭಾವೋದ್ವೇಗದಿಂದ ಒಂದು ಗುಟುಕು ವೋಡ್ಕಾ ಹೀರಿ, ದೀರ್ಘವಾಗಿ ಸಿಗರೇಟು ಎಳೆದು ಸುರುಳಿ–ಸುರುಳಿಯಾಗಿ ಹೊಗೆ ಬಿಡುತ್ತಿದ್ದಳು. ವೋಡ್ಕಾ ನಶೆ ಏರುತ್ತಿದ್ದಂತೆ ಸಂಗೀತದ ಅಬ್ಬರ ಆಕೆಯನ್ನು ಆವರಿಸಿಕೊಳ್ಳತೊಡಗಿತು. ಮತ್ತೊಂದು ಸಿಪ್‌ ವೋಡ್ಕಾ ಹೀರಿದ ಹುಡುಗಿ ಮಗ್‌ ಕೆಳಗಿಟ್ಟು ತಲೆಗೆ ಕಟ್ಟಿದ ಬ್ಯಾಂಡ್‌ ಕಿತ್ತೆಸೆದು, ಒಮ್ಮೆ ತಲೆಯನ್ನು ಜೋರಾಗಿ ಕೊಡವಿ ಸಂಗೀತಕ್ಕೆ ಅನುಗುಣವಾಗಿ ಮೈ ಕುಣಿಸತೊಡಗಿದಳು.
                      ***
ಡಿಜೆ ಕೇಳಿಸುತ್ತಿದ್ದ ಅಬ್ಬರದ ಸಂಗೀತಕ್ಕೆ ಉನ್ಮತ್ತಳಾದ ಹುಡುಗಿಯೊಬ್ಬಳು ಕುಣಿಯುವ ಗುಂಗಿನಲ್ಲಿ ತನ್ನ ಗೆಳೆಯನಿಗೆ ತುಟಿಬಟ್ಟಲು ಒಡ್ಡಿದ್ದಳು. ಕೆಂಪು ಲಿಪ್‌ಸ್ಟಿಕ್‌ ಮೆತ್ತಿಕೊಂಡಿದ್ದ ತುಟಿಗಳ ಸವಿಯನ್ನು ಆ ಹುಡುಗ ಸಂಗೀತಕ್ಕಿಂತಲೂ ಮಧುರವಾಗಿ ಆಸ್ವಾದಿಸುತ್ತಿದ್ದ. ಚುಂಬನದ ಸವಿ ಅನುಭವಿಸುತ್ತಿದ್ದ ಜೋಡಿಯ ಪಕ್ಕದಲ್ಲೇ ಮತ್ತೊಂದು ಹುಡುಗಿಯರ ಗುಂಪು ಕುಣಿಯುತ್ತಿತ್ತು. ಆ ಗುಂಪಿನಲ್ಲಿದ್ದ ದಢೂತಿ ಹುಡುಗಿಯೊಬ್ಬಳು ಚುಂಬನ ದೃಶ್ಯವನ್ನು ಲೈವ್‌ ಆಗಿ ನೋಡಿ ರೋಮಾಂಚಿತಳಾಗಿ, ತನ್ನೆದುರಿಗೆ ಕುಣಿಯುತ್ತಿದ್ದ ಹುಡುಗಿಯನ್ನು ತಬ್ಬಿಕೊಂಡು ಕೆನ್ನೆಗೆ ಮುತ್ತಿಕ್ಕಿದಳು. ಚುಂಬಿಸಿದ ಗುರುತಿಗೆ ಆ ಹುಡುಗಿಯ ಕೆನ್ನೆ ಮೇಲೆ ಲಿಪ್‌ಸ್ಟಿಕ್‌ನ ತುಟಿ ಮುದ್ರೆ ಬಿದ್ದಿತ್ತು.
                      ***
ಮೈ ನಡುಗಿಸುವ ಚಳಿಯಲ್ಲೂ ತುಂಡುಡುಗೆ ಧರಿಸಿ ಬಂದಿದ್ದ ಹುಡುಗಿಯರ ಮೈಗೆ ಕುಳಿರ್ಗಾಳಿ ಮುತ್ತಿಕ್ಕುತ್ತಿತ್ತು. ಮೈ ಕೊರೆಯುವ ಚಳಿಯನ್ನು ದೂರ ಓಡಿಸಲು ಅವರು ಸಿಗರೇಟಿನ ಮೊರೆಹೋಗಿದ್ದರು. ತುಟಿಗಳಿಗೆ ಗಾಢ ಬಣ್ಣದ ಲಿಪ್‌ಸ್ಟಿಕ್‌ ಮೆತ್ತಿಕೊಂಡು ಬಂದಿದ್ದ ಹುಡುಗಿಯರು ಸೇದಿ ಬಿಸಾಡಿದ ಸಿಗರೇಟಿನ ತುಂಡುಗಳ ಮೇಲೂ ಲಿಪ್‌ಸ್ಟಿಕ್‌ನ ರಂಗು ಇತ್ತು. ಗುಂಪಿನಲ್ಲಿ ಬಂದ ಎರಡು ಜೋಡಿಗಳು ಚಳಿ ನೀಗಿಸಿಕೊಳ್ಳಲು ಒಂದು ವೋಡ್ಕಾ ಮಗ್‌ಗೆ ಸ್ಟ್ರಾ ಇರಿಸಿಕೊಂಡು ಒಮ್ಮೆಲೆ ವೋಡ್ಕಾ ಗುಟುಕರಿಸತೊಡಗಿದರು. ವೋಡ್ಕಾ ಒಳಕ್ಕೆ ಇಳಿದಂತೆ ಅವರೆಲ್ಲರೂ ‘ಬಾರೋ ಬಾರೋ ನೆರೊ, ನೆರೊ’ ಎಂದು ಕಿರುಚತೊಡಗಿದರು. ಸಂಗೀತದ ಗುಂಗಿನಲ್ಲಿ ಮೈಮರೆತಿದ್ದವರೂ, ವೋಡ್ಕಾ ನಶೆಯಲ್ಲಿ ತೇಲುತ್ತಿದ್ದವರೂ ಒಮ್ಮೆ ಇವರತ್ತ ನೋಡಿ ನಕ್ಕು ಅವರೂ ಧ್ವನಿಗೂಡಿಸಿದರು.
                      ***
ಕಾರ್ಯಕ್ರಮ ಆರಂಭಗೊಳ್ಳುವುದಕ್ಕೂ ಮುನ್ನ ಮೈಕ್ ಕೈಗೆತ್ತಿಕೊಂಡ ಡಿಜೆ ನೆರೊ, ‘ಐ ಲವ್‌ ಬೆಂಗಳೂರು. ನಮ್ಮ ತಂಡ ಮೊದಲ ಸಲ ಭಾರತದ ನೆಲಕ್ಕೆ ಕಾಲಿರಿಸಿದೆ. ಈ ದೇಶದ ಮಣ್ಣಿನ ಪಾದಸ್ಪರ್ಶಕ್ಕಾಗಿ ನಾವು ತುಂಬ ದಿನಗಳಿಂದ ಕಾಯುತ್ತಿದ್ದೆವು. ನಮ್ಮ ಆಸೆ ಈವತ್ತು ಈಡೇರಿದೆ. ನಿಮ್ಮ ಮನಸ್ಸು ಅರಳುವಂತೆ ಸಂಗೀತ ನೀಡಲು ನಾವಂತೂ ಅಣಿಯಾಗಿದ್ದೇವೆ. ಆರ್ ಯು ರೆಡಿ...’ ಎಂದು ಹೇಳಿದಾಕ್ಷಣ ಕಿಕ್ಕಿರಿದು ಸೇರಿದ್ದ ಯುವಜನತೆಯ ಹರ್ಷೋದ್ಗಾರ ಮೇರೆ ಮೀರಿತು.

ಮಾನ್ಯತಾ ಟೆಕ್‌ಪಾರ್ಕ್‌ನ ಮ್ಯಾನ್ಫೋ ಕನ್ವೆನ್ಷನ್‌ ಸೆಂಟರ್‌ನಲ್ಲಿ ನಡೆದ ‘ಸ್ಮಿರ್ನ್‌ಆಫ್‌ ಎಕ್ಸ್‌ಪಿರೀಯೆನ್ಸ್‌’ನಲ್ಲಿ ಕಂಡು ಬಂದ ರಸವತ್ತಾದ ದೃಶ್ಯಗಳಿವು. ಖ್ಯಾತ ಡಿಜೆಗಳಾದ ನೆರೊ ಮತ್ತು ರುಸ್ಕೊ ನಡೆಸಿಕೊಟ್ಟ ಸಂಗೀತ ಸಾಮ್ರಾಜ್ಯದಲ್ಲಿ ಕುಡಿತ, ಕುಣಿತ, ಮೋಜು, ಮಸ್ತಿ ಎಲ್ಲವೂ ಮೇಳೈಸಿದ್ದವು. ಡಬ್‌ಸ್ಟೆಪ್ ಐಕಾನ್‌ಗಳಾದ ನೆರೊ ಮತ್ತು ರುಸ್ಕೊ ಅವರು ಬೆಂಗಳೂರಿನಲ್ಲಿ ನೀಡಿದ ಮೊದಲ ಪ್ರದರ್ಶನ ಯಶಸ್ವಿಯಾಗಿ ನಡೆಯಿತು.

ದೊಡ್ಡ ದೊಡ್ಡ ಕಲಾವಿದರ ಕಾರ್ಯಕ್ರಮಗಳಿಗೆ ವೇದಿಕೆ ನಿರ್ಮಾಣ ಮಾಡಿಕೊಡುವುದರಲ್ಲಿ ಪ್ರಸಿದ್ಧಿ ಪಡೆದಿರುವ ಅಲೆಕ್ಸ್ ಲೆಝರಸ್ ಮತ್ತು ಹೀಥರ್ ಷಾ ಅವರು ‘ಸ್ಮಿರ್ನ್‌ಆಫ್’ ಉತ್ಸವಕ್ಕೆಂದೇ ನಿರ್ಮಿಸಿದ್ದ ವಿಶೇಷ ಸ್ವರೂಪದ ವೇದಿಕೆ ಎಲ್ಲರ ಆಕರ್ಷಣೆಯ ಕೇಂದ್ರವಾಗಿತ್ತು. ಡಿಜೆಗಳಿಬ್ಬರ ಸಂಗೀತದಂತೆ ಈ ವೇದಿಕೆಯು ದೃಶ್ಯ ಕಲಾ ಮಾಧ್ಯಮದ ಎಲ್ಲ ಮಿತಿ ಹಾಗೂ ಅಂದಾಜುಗಳನ್ನೂ ಮೀರಿಸಿ ಕಾರ್ಯಕ್ರಮಕ್ಕೊಂದು ಸೌಂದರ್ಯದ ಚೌಕಟ್ಟು ಒದಗಿಸಿತ್ತು.  

ಗ್ರ್ಯಾಮಿ ಪ್ರಶಸ್ತಿ ವಿಜೇತ ತಾರೆ ನೆರೊ ಸಂಗೀತ ಪ್ರಪಂಚದಲ್ಲಿ ಹೊಸ ಹೊಸ ಪ್ರಯೋಗಗಳಿಗೆ ತಮ್ಮನ್ನು ಒಡ್ಡಿಕೊಂಡವರು. ಇದೇ ವರ್ಷ ಸ್ಕ್ರಿಲೆಕ್ಸ್‌ನ ‘ಪ್ರಾಮಿಸಸ್’ ಗಾಯನವನ್ನು ಭಿನ್ನ ಸ್ವರೂಪದಲ್ಲಿ ಮರು ಸೃಷ್ಟಿಸಿದ್ದಕ್ಕಾಗಿ ನೆರೊ ಅತ್ಯುತ್ತಮ ರೀಮಿಕ್ಸ್ ರೆಕಾರ್ಡಿಂಗ್ ವಿಭಾಗದಲ್ಲಿ ಗ್ರ್ಯಾಮಿ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಇಂತಿಪ್ಪ ನೆರೊ ಶನಿವಾರ ನಗರದಲ್ಲಿ ಹರಿಸಿದ ಸಂಗೀತದ ಝರಿಗೆ ಯುವ ಜನತೆ ಹುಚ್ಚೆದ್ದು ಕುಣಿಯಿತು. ಡಬ್‌ಸ್ಟೆಪ್‌ನ ಡಾನ್‌ ಎಂದೇ ಖ್ಯಾತರಾಗಿರುವ ರುಸ್ಕೊ ಕ್ರಿಸ್ಟೋಫರ್ ಅವರ ಪರವಶಗೊಳಿಸುವಂತಹ ಸಂಗೀತದ ಮಿಡಿತಗಳು, ರಾಗ ಸಂಯೋಜನೆಗಳು ಸಂಗೀತ ಪ್ರೇಮಿಗಳನ್ನು ನರ್ತಿಸುವಂತೆ ಮಾಡಿತು.

ಮೊದಲ ಸಲ ಭಾರತಕ್ಕೆ ಭೇಟಿ ನೀಡಿದ್ದ ನೆರೊ ಮತ್ತು ರುಸ್ಕೊ ಇಲ್ಲಿನವರಿಗಾಗಿಯೇ ಹೊಸ ಬಗೆಯ ಸಂಗೀತ ಕೇಳಿಸಿ ರೋಮಾಂಚನಗೊಳಿಸಿದರು. ಕಣ್ಣುಕುಕ್ಕುವ ವೇದಿಕೆಯಲ್ಲಿ ನಿಂತು ಮೈನವಿರೇಳಿಸುವ ಸಂಗೀತಸುಧೆ ಹರಿಸಿದ ‘ಸ್ಮಿರ್ನ್‌ಆಫ್’ ಉತ್ಸವದಲ್ಲಿ ಎಲ್ಲರೂ ಮನಸ್ಸು ತಣಿಯುವಷ್ಟು ಕುಣಿದರು.

ಡಿಜೆ ರುಸ್ಕೊ ಅವರ ‘ಸಂಬಡಿ ಟು ಲವ್’, ‘ಕಾಕ್ನಿ ಥಂಗ್’ ಮತ್ತು ನೆರೊ ಅವರ ಗ್ರ್ಯಾಮಿ ಪ್ರಶಸ್ತಿ ವಿಜೇತ ಟ್ರ್ಯಾಕ್ ‘ಪ್ರಾಮಿಸ್’ ಟ್ರ್ಯಾಕ್‌ಗಳಿಗೆ ಸಂಗೀತ ಪ್ರಿಯರು ಹುಚ್ಚೆದ್ದು ಕುಣಿದರು. ‘‘ನಮ್ಮ ಸಂಗೀತಕ್ಕೆ ಬೆಂಗಳೂರಿನಲ್ಲಿ ಸಿಕ್ಕ ಪ್ರತಿಕ್ರಿಯೆ ಅಚ್ಚರಿ ಮೂಡಿಸುವಂತಿದೆ. ‘ಸ್ಮಿರ್ನ್‌ಆಫ್‌’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ನಮಗೆ ಖುಷಿ ಕೊಟ್ಟಿದೆ. ಖಂಡಿತವಾಗಿಯೂ ಮತ್ತೊಮ್ಮೆ ಇಲ್ಲಿಗೆ ಬರುತ್ತೇವೆ’ ಎಂದ ರುಸ್ಕೊ ಮಾತಿಗೆ ಮೆಚ್ಚುಗೆ ಸೂಚಿಸುತ್ತಾ ಸಂಗೀತ ಪ್ರಿಯರು ಚದುರಿದರು. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT