ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನೌಕರರಿಗೆ ಆಡಳಿತ ವರ್ಗದ ಕಿರುಕುಳ’

Last Updated 19 ಸೆಪ್ಟೆಂಬರ್ 2013, 6:36 IST
ಅಕ್ಷರ ಗಾತ್ರ

ದಾವಣಗೆರೆ: ಕೆಎಸ್‌ಆರ್‌ಟಿಸಿ ಚಾಲಕ, ನಿರ್ವಾಹಕರಿಗೆ ರಾತ್ರಿ ತಂಗಲು ವ್ಯವಸ್ಥೆ ಇಲ್ಲ... ಇರುವ ಕೋಣೆಯಲ್ಲಿ ನಿದ್ರೆಗೆ ಜಾರಿದರೆ ಸೊಳ್ಳೆ, ನೊಣಗಳ ಕಾಟ... ಕುಡಿಯಲು ನೀರಿಲ್ಲ... ಹೆಚ್ಚುವರಿ ಕೆಲಸ, ಮಹಿಳಾ ನೌಕರರಿಗೆ ಮೇಲಧಿಕಾರಿಗಳಿಂದ ಕಿರುಕುಳ, ನಮ್ಮನ್ನು ನಿಕೃಷ್ಟವಾಗಿ ಕಾಣುವ ಮೂಲಕ ಮಾನವ ಹಕ್ಕುಗಳ ಉಲ್ಲಂಘನೆ ಆಗುತ್ತಿದೆ...

ಇವು ನಗರದ ರೋಟರಿ ಬಾಲಭವನದಲ್ಲಿ ಬುಧವಾರ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ನೌಕರರ ಫೆಡರೇಷನ್‌ (ಸಿಐಟಿಯು) ಹಮ್ಮಿಕೊಂಡಿದ್ದ ಕೆಎಸ್‌ಆರ್‌ಟಿಸಿ ನಿಗಮದ ದಾವಣಗೆರೆ ವಿಭಾಗದ ಕಾರ್ಮಿಕರ ಸಮಾವೇಶದಲ್ಲಿ ಕೇಳಿಬಂದ ಆರೋಪಗಳು. ನಿಗಮದ ಆಡಳಿತಾಧಿಕಾರಿಗಳ ವಿರುದ್ಧ ನೌಕರರು ಕಿಡಿಕಾರಿದರು. ವೇದಿಕೆ ಮೇಲೆ ಗಣ್ಯರು ಆರೋಪ ಮಾಡುತ್ತಿದ್ದರೆ ಸಭಾಂಗಣದಲ್ಲಿದ್ದ ನೌಕರರು ದನಿಗೂಡಿಸುತ್ತಿದ್ದರು!

ಸಮಾವೇಶ ಉದ್ಘಾಟಿಸಿ ಮಾತನಾಡಿದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ನೌಕರರ ಫೆಡರೇಷನ್‌ ಗೌರವಾಧ್ಯಕ್ಷ  ಎಸ್‌.ಪ್ರಸನ್ನಕುಮಾರ್‌, ಕೆಎಸ್ಆರ್‌ಟಿಸಿ ಕೋಟ್ಯಂತರ ಪ್ರಯಾಣಿಕರಿಗೆ ನೆರವಾಗುತ್ತಿದೆ. ಅಂಕಿಅಂಶಗಳ ಪ್ರಕಾರ ನಿತ್ಯ 2 ಕೋಟಿ ಜನರು ಸಾರಿಗೆ ಬಸ್‌ ಸೇವೆ ಅವಲಂಬಿಸಿದ್ದಾರೆ. ಅವರನ್ನು ಸುಖಕರವಾಗಿ ತಲುಪಿಸುವುದು ಸಾರಿಗೆ ನೌಕರರ ಜವಾಬ್ದಾರಿ. ಆದರೆ,

ಚಾಲಕ, ನಿರ್ವಾಹಕ, ಮೆಕಾನಿಕ್‌ಗಳಿಗೇ ‘ನೆಮ್ಮದಿ’ ಇಲ್ಲವಾಗಿದೆ. ಇದೊಂದು ಪವಿತ್ರ ಕಾರ್ಯವೆಂದು ದುಡಿಯುತ್ತಿದ್ದಾರೆ. ದೇಶಪ್ರೇಮದ ಕೆಲಸ ಮಾಡುತ್ತಿದ್ದಾರೆ. ಹಗಲು, ರಾತ್ರಿ ಸೇವೆ ಮಾಡಿಸಿಕೊಳ್ಳುವ ಆಡಳಿತ ವರ್ಗ ನೌಕರರನ್ನು ಕೇವಲವಾಗಿ ಕಾಣುತ್ತಿದೆ ಎಂದು ಕಿಡಿಕಾರಿದರು.

ಆಡಳಿತ ವರ್ಗ, ಸರ್ಕಾರ ಗೌರವ ನೀಡುತ್ತಿಲ್ಲ. ವಿಶ್ರಾಂತಿಗೂ ಬಸ್‌ನಿಲ್ದಾಣಗಳಲ್ಲಿ ವ್ಯವಸ್ಥೆಯಿಲ್ಲ. ಸೊಳ್ಳೆ, ನೊಣಗಳು ಅವರಿಗೆ ಸ್ನೇಹಿತರು. ನಿಗಮದ ಕಾನೂನು ಪ್ರಕಾರ, ಚಾಲಕ– ನಿರ್ವಾಹಕರಿಗೆ ಮಂಚ, ಹಾಸಿಗೆ, ಸೊಳ್ಳೆ ಪರದೆ, ಶೌಚಾಲಯ ವ್ಯವಸ್ಥೆ ಕಡ್ಡಾಯವಾಗಿ ಇರಬೇಕು. ಆದರೆ, ವಿಶ್ರಾಂತಿ ಸ್ಥಳಗಳು ಇಲ್ಲದೇ ಮಾನವ ಹಕ್ಕುಗಳ ಉಲ್ಲಂಘನೆ ಆಗುತ್ತಿದೆ ಎಂದು ಆರೋಪಿಸಿದರು.

ಮಹಿಳಾ ಸಿಬ್ಬಂದಿಗೆ ಶೌಚಾಲಯ ಇಲ್ಲದ ಕಾರಣಕ್ಕೆ ಕೆಲಸದ ವೇಳೆ ಅವರು ನೀರು ಸಹ ಕುಡಿಯುವುದಿಲ್ಲ. ಅಂತಹ ಸ್ಥಿತಿಯಿದೆ. ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಸಿಬ್ಬಂದಿ ಕಿರುಕುಳಕ್ಕೆ ಒಳಗಾಗುತ್ತಿದ್ದಾರೆ. ದಕ್ಷಿಣ ಭಾರತದಲ್ಲಿ ಬಸ್‌ ದರ ಜಾಸ್ತಿಯಿದೆ. ಆದರೆ, ಇಲ್ಲಿ ನೌಕಕರಿಗೆ ಕೊಡುವ ಸಂಬಳ ಮಾತ್ರ ಕಡಿಮೆ. ಒಂದು ಡಿಪೋದಲ್ಲಿ 100 ಬಸ್‌ ಓಡಿದರೆ 950 ಸಿಬ್ಬಂದಿ ಕೆಲಸಕ್ಕೆ ಬೇಕು.

ಆದರೆ, ಇಲ್ಲಿರುವುದು 500 ಸಿಬ್ಬಂದಿ ಮಾತ್ರ. ಹೀಗಾಗಿ, ಕೆಲಸ ಒತ್ತಡವಿದೆ. ಸಿಬ್ಬಂದಿ ನೇಮಕಕ್ಕೂ ಸರ್ಕಾರ ಮೀನಾಮೇಷ ಎಣಿಸುತ್ತಿದೆ. ಸಣ್ಣಪುಟ್ಟ ತಪ್ಪುಗಳಿಗೂ ಕೆಲಸದಿಂದ ತೆಗೆದುಹಾಕಲಾಗುತ್ತಿದೆ. ಇದರಿಂದ ಕಾರ್ಮಿಕರ ನ್ಯಾಯಾಲಯದಲ್ಲಿ ಕೆಎಸ್‌ಆರ್‌ಟಿಸಿ ನೌಕರರ ದೂರುಗಳೇ ಹೆಚ್ಚಾಗಿವೆ ಎಂದು ನೊಂದು ನುಡಿದರು.

ಸಿಐಟಿಯು ಪ್ರಧಾನ ಕಾರ್ಯದರ್ಶಿ ಮಂಜುನಾಥ್‌ ಮಾತನಾಡಿ,  ತರಬೇತಿನಿರತ ಎಂದರೆ ಕೆಎಸ್‌ಆರ್‌ಟಿಸಿಯಲ್ಲಿ ‘ಜೀತಪದ್ಧತಿ’ ಇದ್ದಂತೆ ಎಂದರು. ಕಾರ್ಮಿಕ ಮುಖಂಡ ಕೆ.ಎಲ್‌.ಭಟ್‌, ದೇವರಾಜ್‌, ಲೋಕೇಶ್‌, ಎಚ್‌.ಡಿ.ರೇವಪ್ಪ ಮೊದಲಾದವರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT