ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪಾರಂಪರಿಕ ಕಟ್ಟಡ ಅಡವು ಇಡುವುದಿಲ್ಲ’

ಅಡವು ಇಡುವುದು ತಿಳಿದಿರಲಿಲ್ಲ: ಮೇಯರ್‌ – ಕೌನ್ಸಿಲ್‌ ಸಭೆ ಅಧಿಕಾರ ನೀಡಿದೆ: ಆಯುಕ್ತರು
Last Updated 3 ಜನವರಿ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಸಾಲ ಪಡೆಯುವ ಉದ್ದೇಶಕ್ಕಾಗಿ ಯಾವುದೇ ಪಾರಂಪರಿಕ ಕಟ್ಟಡವನ್ನೂ ಅಡವು ಇಡಲು ಅವಕಾಶ ನೀಡುವು­ದಿಲ್ಲ’ ಎಂದು ಮೇಯರ್‌ ಬಿ.ಎಸ್‌. ಸತ್ಯನಾರಾಯಣ ಹೇಳಿದರು.

ಪತ್ರಿಕಾ ಗೋಷ್ಠಿಯಲ್ಲಿ ಶುಕ್ರವಾರ ಅವರು ಮಾತನಾಡಿದರು. ‘ಪುರಭವನ ಕಟ್ಟಡವನ್ನು ಅಡವು ಇಡುವ ವಿಷಯ ಸಾಮಾನ್ಯ ಸಭೆ ಇಲ್ಲವೆ ಸ್ಥಾಯಿ ಸಮಿತಿ ಗಮನಕ್ಕೆ ಬಂದಿರಲಿಲ್ಲ. ಮಾಧ್ಯಮಗಳಲ್ಲಿ ವರದಿ ಬರುವವರೆಗೆ ನನಗೂ ಸಹ ಈ ಸಂಗತಿ ಗೊತ್ತಿರಲಿಲ್ಲ’ ಎಂದು ಹೇಳಿದರು.

‘ಪಾರಂಪರಿಕ ಕಟ್ಟಡ­ಗಳನ್ನು ಅಡವು ಇಡುವ ಪ್ರಸ್ತಾವ­ವನ್ನು ಯಾರೇ ತಂದ­ರೂ ಕೌನ್ಸಿಲ್‌ ಸಭೆ­ಯಲ್ಲಿ ಅದನ್ನು ತಿರಸ್ಕರಿಸ­ಲಾಗುವುದು’ ಎಂದು ಸ್ಪಷ್ಟವಾಗಿ ತಿಳಿಸಿದರು. ‘ಕೌನ್ಸಿಲ್‌ ಗಮನಕ್ಕೆ ತಾರದೆ ಕೈಗೊಂಡ ನಿರ್ಣಯದ ಕುರಿತು ಆಯುಕ್ತರನ್ನು ಪ್ರಶ್ನಿಸಲಿಲ್ಲವೇ’ ಎಂದು ಕೇಳಿದಾಗ, ‘ಆಯುಕ್ತರು ಬೆಳಿಗ್ಗೆ ಸಿಕ್ಕಿದ್ದರು. ಅವರ ಜತೆ ಮಾತನಾಡಿದ್ದೇನೆ’ ಎಂದು ಉತ್ತರಿಸಿದರು.

‘ಬಿಬಿಎಂಪಿ ಸುಮಾರು ರೂ. 3,000 ಕೋಟಿ ಸಾಲದ ಹೊರೆಯಿಂದ ಬಳಲುತ್ತಿದೆ. ಅಭಿವೃದ್ಧಿ ಕೆಲಸಗಳನ್ನು ಕೈಗೊಂಡಿದ್ದರಿಂದ ರೂ. 1,600 ಕೋಟಿ ಬಾಕಿಯನ್ನು ಗುತ್ತಿಗೆದಾರರಿಗೆ ನೀಡಬೇಕಿದೆ. ಹಣಕಾಸಿನ ಸ್ಥಿತಿ ಕೆಟ್ಟದಾಗಿದ್ದು, ಕಾಮಗಾರಿಗಳಿಗೆ ಹಣವೇ ಇಲ್ಲವಾಗಿದೆ’ ಎಂದು ಹೇಳಿದರು.

‘ಬಿಬಿಎಂಪಿ ಸಾಲದ ಬಲೆಯಿಂದ ಹೊರಬರಲು ರಾಜ್ಯ ಸರ್ಕಾರವೇ ಪ್ರತಿ ವರ್ಷ ರೂ1,000 ಕೋಟಿ ವಿಶೇಷ ಅನುದಾನ ನೀಡಬೇಕು’ ಎಂದು ಒತ್ತಾಯಿಸಿ­ದರು. ‘ಬಜೆಟ್‌ನಲ್ಲಿ ಘೋಷಿಸಿದ ಯೋಜನೆಗಳಿಗೂ ಸರ್ಕಾರ ಹಣ ಬಿಡುಗಡೆ ಮಾಡಬೇಕಿದೆ’ ಎಂದು ತಿಳಿಸಿದರು.
‘ಕೆಲಸ ಮಾಡದಿದ್ದರೂ ಬಿಬಿಎಂಪಿಯಿಂದ ಹೆಚ್ಚಿನ ಬಡ್ಡಿ ದರದಲ್ಲಿ ಸಾಲ ಪಡೆಯಲಾಗಿದೆ ಎಂದು ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರಲ್ಲ’ ಎಂದು ಕೇಳಿದಾಗ, ‘ಹಾಗೇನಿಲ್ಲ, ನಗರದಲ್ಲಿ ಅಭಿವೃದ್ಧಿ ಕೆಲಸಗಳು ಆಗಿವೆ’ ಎಂದು ಪ್ರತಿಕ್ರಿಯಿಸಿದರು.

‘ಶಾಲೆ, ಕೆರೆ, ಉದ್ಯಾನ, ರಸ್ತೆ, ಫುಟ್‌ಪಾತ್‌ಗಳ ನಿರ್ವಹಣೆಗೆ ಖಾಸಗಿ ಸಹಭಾಗಿತ್ವದಲ್ಲಿ ‘ನಮ್ಮ ಬೆಂಗಳೂರು, ನಮ್ಮ ಕೊಡುಗೆ’ ಯೋಜನೆ ರೂಪಿಸಲು ಉದ್ದೇಶಿಸಲಾಗಿದೆ. ಒಪ್ಪಂದ ಮಾಡಿಕೊಳ್ಳಲು ಒಂದು ತಿಂಗಳೊಳಗೆ ಕೈಗಾರಿಕೆಗಳು ಮತ್ತು ಐಟಿ ಉದ್ದಿಮೆಗಳ ಮುಖ್ಯಸ್ಥರ ಸಭೆ ನಡೆಸಲಾಗುತ್ತದೆ’ ಎಂದು ವಿವರಿಸಿದರು.

‘ಪಾಲಿಕೆ ಆವರಣ ಮತ್ತು ಗಾಂಧಿನಗರದಲ್ಲಿ ಪ್ರಾಯೋಗಿಕವಾಗಿ ಸ್ವಯಂಚಾಲಿತ ಕಾರು ಪಾರ್ಕಿಂಗ್‌ ವ್ಯವಸ್ಥೆಯನ್ನು ಕಲ್ಪಿಸಲು ಉದ್ದೇಶಿಸಲಾಗಿದೆ. ನಗರದ ವಿವಿಧೆಡೆ 40 ಬಸ್‌ ಶೆಲ್ಟರ್‌ ಹಾಗೂ 100 ಶೌಚಾಲಯಗಳನ್ನು ಖಾಸಗಿ ನಿರ್ಮಿಸಲು ನಿರ್ಧರಿಸ­ಲಾಗಿದೆ’ ಎಂದು ಹೇಳಿದರು. ‘ತಿಂಗಳಾಂತ್ಯದಲ್ಲಿ ಸಿಎನ್‌ಆರ್‌ ಸರ್ಕಲ್‌ ಕೆಳಸೇತುವೆ ಸಂಪೂರ್ಣವಾಗಿ ಸನ್ನದ್ಧವಾಗಲಿದೆ’ ಎಂದು ಸ್ಪಷ್ಟಪಡಿಸಿದರು.

ಪುರಭವನ ಅಡವು ಇಡುವ ವಿಷಯವನ್ನು ಕೌನ್ಸಿಲ್‌ ಸಭೆ ಇಲ್ಲವೆ ಮೇಯರ್‌ ಅವರ ಗಮನಕ್ಕೆ ತಾರದಿರುವ ಕುರಿತು ಕೇಳಿಬಂದಿರುವ ದೂರಿಗೆ ಪ್ರತಿಕ್ರಿಯಿಸಿರುವ ಆಯುಕ್ತರು, ‘ಸಾಲ ಪಡೆಯುವುದಕ್ಕಾಗಿ ಅಗತ್ಯವಾದ ಪ್ರಕ್ರಿಯೆಗಳನ್ನು ನಡೆಸಲು ಕಳೆದ ಅಕ್ಟೋಬರ್‌ನಲ್ಲಿ ನಡೆದ ಕೌನ್ಸಿಲ್‌ ಸಭೆ ಆಯುಕ್ತರಿಗೆ ಅಧಿಕಾರ ನೀಡಿ ತೀರ್ಮಾನ ಕೈಗೊಂಡಿದೆ. ಕೌನ್ಸಿಲ್‌ ತೀರ್ಮಾನದಂತೆ ನಡೆದುಕೊಂಡಿದ್ದೇನೆ’ ಎಂದು ಹೇಳಿದ್ದಾರೆ.
***
‘ಇದುವರೆಗೆ ಬಿಬಿಎಂಪಿಯಿಂದ ಸಾಲಕ್ಕೆ ಅಡವು ಇಟ್ಟ ಯಾವುದೇ ಆಸ್ತಿಯೂ ಋಣಮುಕ್ತವಾಗಿಲ್ಲ. ಪುರಭವನ ನಗರದ ಹೆಮ್ಮೆಯ ಪಾರಂಪರಿಕ ಕಟ್ಟಡ. ಅದಕ್ಕೆ ದೊಡ್ಡ ಇತಿಹಾಸವೂ ಇದೆ. ಅದನ್ನು ಸಾಲದ ಭದ್ರತೆಗಾಗಿ ಒದಗಿಸಲು ಸಾಧ್ಯವಿಲ್ಲ’
 –ಬಿ.ಎಸ್‌. ಸತ್ಯನಾರಾಯಣ, ಮೇಯರ್‌


ಸಾಲಕ್ಕೆ ಅಡವಿಟ್ಟ ಆಸ್ತಿಗಳು
ಕೆ.ಆರ್. ಮಾರುಕಟ್ಟೆ, ಮಲ್ಲೇಶ್ವರ ಮಾರುಕಟ್ಟೆ, ಜಯನಗರ 4ನೇ ಬ್ಲಾಕ್‌ ಮಾರುಕಟ್ಟೆ, ಪಬ್ಲಿಕ್‌ ಯುಟಿಲಿಟಿ ಬಿಲ್ಡಿಂಗ್‌, ದಾಸಪ್ಪ ಆಸ್ಪತ್ರೆ, ಕೆಂಪೇಗೌಡ ಮ್ಯೂಸಿಯಂ, ಮೆಯೋಹಾಲ್‌ ಸುತ್ತಲಿನ ಪ್ರದೇಶ, ವೆಸ್ಟರ್ನ್ ರೇಂಜರ್ಸ್‌ ಕಟ್ಟಡ, ಕಲಾಸಿಪಾಳ್ಯ ಮಾರುಕಟ್ಟೆ, ರಾಜಾಜಿನಗರ ಮಾರುಕಟ್ಟೆ ಮತ್ತು ಟ್ಯಾನರಿ ರಸ್ತೆ ವಧಾಗಾರ. ಈ ಎಲ್ಲ ಆಸ್ತಿಗಳನ್ನು ವಿವಿಧ ಬ್ಯಾಂಕ್‌ಗಳ ಸಾಲಕ್ಕೆ ಅಡವು ಇಡಲಾಗಿದೆ. ಇದುವರೆಗೆ ಯಾವುದನ್ನೂ ಋಣಮುಕ್ತವನ್ನಾಗಿ ಮಾಡಲಾಗಿಲ್ಲ.

ಗುತ್ತಿಗೆ ನೀಡಿದ ಆಸ್ತಿ ಮಾರಾಟ: ಚಿಂತನೆ
ನಗರದ ಹಲವೆಡೆ ದೀರ್ಘಾವಧಿಗೆ ಗುತ್ತಿಗೆ ನೀಡಿದ ತನ್ನ ಆಸ್ತಿಗಳನ್ನು ಮಾರಾಟ ಮಾಡಲು ಬಿಬಿಎಂಪಿ ಚಿಂತನೆ ನಡೆಸಿದೆ. ಸ್ವತಃ ಮೇಯರ್‌ ಬಿ.ಎಸ್‌. ಸತ್ಯನಾರಾಯಣ ಈ ಮಾಹಿತಿ ನೀಡಿದರು.

‘ಹಲವು ವರ್ಷಗಳ ಅವಧಿಗೆ ಗುತ್ತಿಗೆ ನೀಡಿದ ಆಸ್ತಿಗಳನ್ನು ಗುತ್ತಿಗೆ ಪಡೆದವರು ವಾಣಿಜ್ಯ ಉದ್ದೇಶಕ್ಕಾಗಿ ಬಳಕೆ ಮಾಡುತ್ತಿದ್ದಾರೆ. ಇದರಿಂದ ಬಿಬಿಎಂಪಿಗೆ ಯಾವುದೇ ಆದಾಯ ಇಲ್ಲ. ಆಸ್ತಿ ಕೂಡ ಸುಪರ್ದಿಯಲ್ಲಿಲ್ಲ. ಆದ್ದರಿಂದಲೇ ಮಾರುಕಟ್ಟೆ ದರಕ್ಕೆ ತಕ್ಕಂತೆ ಮಾರಾಟ ಮಾಡುವ ಉದ್ದೇಶವಿದೆ’ ಎಂದು ಹೇಳಿದರು.

‘ಗುತ್ತಿಗೆಗೆ ನೀಡಲಾದ ಆಸ್ತಿಗಳ ಮಾಹಿತಿಯನ್ನು ನೀಡುವಂತೆ ಈಗಾಗಲೇ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಮಾಹಿತಿ ಸಿಕ್ಕ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಕೌನ್ಸಿಲ್‌ ಸಭೆ ಒಪ್ಪಿಗೆ ನೀಡಿದರೆ ಮಾರಾಟ ಪ್ರಕ್ರಿಯೆ ನಡೆಸಲಾಗುವುದು. ಸಾಲ ತೀರಿಸಲು ಈ ಹಣವನ್ನು ಬಳಸಬಹುದು’ ಎಂದು ಅವರು ತಿಳಿಸಿದರು.

‘ಪೂರ್ವ ವಲಯದಲ್ಲಿ 160, ಪಶ್ಚಿಮ ವಲಯದಲ್ಲಿ 122 ಮತ್ತು ದಕ್ಷಿಣ ವಲಯದಲ್ಲಿ 112  ಸೇರಿದಂತೆ ಒಟ್ಟು 394 ಆಸ್ತಿಗಳನ್ನು ಗುತ್ತಿಗೆ ನೀಡಲಾಗಿದೆ ಎಂದು ಬಿಬಿಎಂಪಿ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT