ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪೌರಕಾರ್ಮಿಕರ ಮಕ್ಕಳಿಗೆ ಶಿಕ್ಷಣ ಅನಿವಾರ್ಯ’

Last Updated 26 ಸೆಪ್ಟೆಂಬರ್ 2013, 9:31 IST
ಅಕ್ಷರ ಗಾತ್ರ

ಮೈಸೂರು: ‘ತಲೆ ತಲಾಂತರದಿಂದ ಪೌರ ಕಾರ್ಮಿಕರು ಇದೇ ಕೆಲಸ ಮಾಡುತ್ತಿದ್ದಾರೆ. ಮುಂದಿನ ತಲೆಮಾರಾದರೂ ಈ ಕೆಲಸ ಬಿಟ್ಟು ಬೇರೆ ವೃತ್ತಿಗಳತ್ತ ಹೋಗಬೇಕು. ಅದಕ್ಕೆ ಅವರ ಮಕ್ಕಳಿಗೆ ಶಿಕ್ಷಣ ಅನಿವಾರ್ಯ’ ಎಂದು ಪೌರ ಕಾರ್ಮಿಕ ಸಂಘದ ರಾಜ್ಯಾಧ್ಯಕ್ಷ ನಾರಾಯಣ ಹೇಳಿದರು.

ಮಹಾನಗರ ಪಾಲಿಕೆಯು ನಗರದ ದಸರಾ ವಸ್ತು ಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪೌರಕಾರ್ಮಿಕರ ದಿನಾಚರಣೆಯಲ್ಲಿ ಅವರು ಮಾತನಾಡಿದರು.

ವರ್ಷಕ್ಕೊಮ್ಮೆ ಉಚಿತ ಆರೋಗ್ಯ ತಪಾಸಣೆ ಮಾಡಲಾಗುತ್ತದೆ. ನಂತರ ಪೌರಕಾರ್ಮಿಕರತ್ತ ಯಾರೂ ತಿರುಗಿಯೂ ನೋಡುವುದಿಲ್ಲ. ಅದಕ್ಕಾಗಿ ಅವರಿಗೆ ‘ಆರೋಗ್ಯ ಕಾರ್ಡ್’ಗಳನ್ನು ವಿತರಿಸಬೇಕೆಂದು ಅವರು ಆಗ್ರಹಿಸಿದರು.

ಪಾಲಿಕೆ ಮೇಯರ್ ಮಾತನಾಡಿ, ‘ಮೈಸೂರು ದೇಶದಲ್ಲೇ 2ನೇ ನಿರ್ಮಲ ನಗರ ಎಂದು ಹೆಸರು ಬರುವುದಕ್ಕೆ ಪೌರ ಕಾರ್ಮಿಕರೇ ಮೂಲ ಕಾರಣ. ಅವರ ಕಲ್ಯಾಣಕ್ಕೆ ಪಾಲಿಕೆ ಹಾಗೂ ಸರ್ಕಾರ ಹಲವು ಯೋಜನೆಗಳನ್ನು ರೂಪಿಸಿದೆ. ಅದರ ಸದುಪಯೋಗಪಡೆದುಕೊಳ್ಳಬೇಕು’ ಎಂದು ಅವರು ಕರೆ ನೀಡಿದರು.

ಉಪ ಮೇಯರ್ ವಿ. ಶೈಲೇಂದ್ರ ಮಾತನಾಡಿ, ‘ನಗರ ಸ್ವಚ್ಛವಾಗಿರುವುದಕ್ಕೆ ಪೌರ ಕಾರ್ಮಿಕರ ಶ್ರಮವೇ ಕಾರಣ. ಅವರಿಲ್ಲದೆ ಬೇರೆ ಯಾರೂ ಈ ಕೆಲಸ ಮಾಡಲು ಸಮರ್ಥರಿಲ್ಲ. ಹಾಗೆಂದು ನಿಮ್ಮ ಮುಂದಿನ ತಲೆಮಾರು ಇದೇ ವೃತ್ತಿ ಮಾಡಬೇಕು ಎಂಬುದು ತಪ್ಪು. ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ’ ಎಂದು ಸಲಹೆ ಮಾಡಿದರು.

ಉತ್ತಮವಾಗಿ ಕಾರ್ಯನಿರ್ವಹಿಸಿದ ಪೌರಕಾರ್ಮಿಕರನ್ನು ಇದೇ ವೇಳೆ ಮೇಯರ್ ಹಾಗೂ ಉಪ ಮೇಯರ್ ಸನ್ಮಾನಿಸಿ ದರು. ಇತ್ತೀಚೆಗೆ ನಗರದಲ್ಲಿ ನಡೆದ ಪೌರಕಾರ್ಮಿಕರ ಕ್ರೀಡಾ ಕೂಟದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿದರು.

ಕಾರ್ಯಕ್ರಮದಲ್ಲಿ ಪೌರಕಾರ್ಮಿಕರಿಗಾಗಿ ‘ಉಚಿತ ಆರೋಗ್ಯ ತಪಾಸಣಾ ಶಿಬಿರ’ವನ್ನು ಹಮ್ಮಿಕೊಳ್ಳಲಾಗಿತ್ತು. ಪಾಲಿಕೆ ಆಯುಕ್ತ ಪಿ.ಜಿ. ರಮೇಶ್, ಪೌರಕಾರ್ಮಿಕರ ಸಂಘದ ಹೈಕಮಾಂಡ್ ಅಧ್ಯಕ್ಷ ಎನ್. ಮಾರ, ಪೌರ ಕಾರ್ಮಿಕರ ಸಂಘದ ಪದಾಧಿಕಾರಿಗಳಾದ ಎನ್.ಆರ್. ರಮೇಶ್, ಶ್ರೀನಿವಾಸ, ಮಂಚಯ್ಯ ಹಾಗೂ ಪಾಲಿಕೆ ಸದಸ್ಯರು ಸಮಾರಂಭದಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT