ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪ್ರಕಾಶ’ಮಾನವಾಗದ ಸೌಲಭ್ಯಗಳು!

Last Updated 3 ಡಿಸೆಂಬರ್ 2013, 9:05 IST
ಅಕ್ಷರ ಗಾತ್ರ

ಗಜೇಂದ್ರಗಡ: ಅಂಗವಿಕಲರ ಕಲ್ಯಾಣ­ಕ್ಕಾಗಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಸಾಕಷ್ಟು ಮಹತ್ವಾಕಾಂಕ್ಷಿ ಯೋಜನೆಗಳನ್ನು ಜಾರಿಗೊಳಿಸಿವೆ, ಆದರೆ ಆಯೋಜನೆಗಳು ನೈಜ ಫಲಾನು­ಭವಿಗಳಿಗೆ ತಲುಪುತ್ತಿಲ್ಲ. ಅದಕ್ಕೆ  ಸರ್ಕಾರದ ಕನಿಷ್ಠ ಯೋಜನೆ­ಗಳಿಂದ ವಂಚಿತ­ಗೊಂಡು ಬಾಲಕನೊಬ್ಬ ನರಕ ಸದೃಶ ಜೀವನ ಸಾಗಿಸುತ್ತಿರುವುದೇ ಇದಕ್ಕೆ ಉದಾಹರಣೆ.

ರೋಣ ತಾಲ್ಲೂಕಿನ ರಾಜೂರ ಗ್ರಾಮದ ಪ್ರಕಾಶ ದೇವಪ್ಪ ಸುಣಗಾರ ಎಂಬ ಆರು ವರ್ಷದ ನತದೃಷ್ಟ ಅಂಗವಿ­ಕಲನ ಕಣ್ಣೀರ ಕತೆ ಹೇಳತೀರದು.

ರಾಜೂರ ಗ್ರಾಮದ ದೇವಪ್ಪ ಹಾಗೂ ನೀಲವ್ವ ಎಂಬ ಬಡ ದಂಪತಿ­ಯ  ಮಗು ಪ್ರಕಾಶನನ್ನು ಅಂಗ­ವೈಕಲ್ಯ ಹಿಂಡಿ ಹಿಪ್ಪೆಯನ್ನಾಗಿಸಿದೆ. ಆರು ವರ್ಷ­ಗಳ ಹಿಂದೆ ದಂಪತಿಗಳಿಗೆ ಮುದ್ದಾದ ಗಂಡು ಮಗು ಜನಿಸಿದ ಸಂಭ್ರಮದಲ್ಲಿದ್ದ ಈ ಕುಟುಂಬಕ್ಕೆ ಮಗು ಕಾಲುಗಳ ಸ್ವಾಧೀನ ಕಳೆದುಕೊಂಡಿರುವ ಸಂಗತಿ ಸಹಜವಾಗಿಯೇ ಆಘಾತವನ್ನುಂಟು ಮಾಡಿತ್ತು.

ಮಗು ಪ್ರಕಾಶನನ್ನು ವೈಕಲ್ಯದಿಂದ ಮುಕ್ತಿ­­ಗೊಳಿಸಲು ಕುಟುಂಬಸ್ಥರು ಸಾಕಷ್ಟು ಶ್ರಮಿಸಿದರು. ಆದರೆ ಬೆನ್ನಿ­ನಲ್ಲಿನ ನರಗಳು ಒಂದೆಡೆ ಸೇರಿ ಗಂಟಾಗಿ­ದ್ದರಿಂದ ಎರಡು ಕಾಲುಗಳು ಸ್ವಾಧೀನ ಕಳೆದುಕೊಂಡಿವೆ. ‘ಶಸ್ತ್ರ ಚಿಕಿತ್ಸೆ ಮಾಡಿದರೆ ಮಗು ಬದುಕುಳಿಯುವ ಸಾಧ್ಯ­ತೆಗಳು ತೀರಾ ವಿರಳ’ ಎಂಬ ತಜ್ಞ ವೈದ್ಯರ ಸಲಹೆಯಿಂದ ಬಾಲಕ ಪ್ರಕಾಶನಿಗೆ ವೈಕಲ್ಯ ಶಾಶ್ವತ ಎಂಬ ನಿರ್ಧಾ­ರಕ್ಕೆ ಕುಟುಂಬಸ್ಥರು ಬದ್ಧರಾದರು.

ಇಷ್ಟೆಲ್ಲ ಬೆಳವಣಿಗೆಗಳ ಮಧ್ಯೆಯೂ ಸದ್ಯ ಬಾಲಕ ಪ್ರಕಾಶನಿಗೆ ಆರು ವರ್ಷಗಳು ಪೂರ್ಣಗೊಂಡಿವೆ. ದಿನಗಳು ಉರುಳಿದಂತೆ ಬಾಲಕ ಪ್ರಕಾಶನ ದೇಹದ ಗಾತ್ರ ದೊಡ್ಡ­ದಾಗುತ್ತಿದೆ. ನಿತ್ಯ ಕರ್ಮಾದಿಗಳಿಗೆ ಬೇರೊಬ್ಬರ ಆಸರೆ ಅನಿವಾರ್ಯ­ವಾಗಿದೆ. ಇದರ ಮಧ್ಯೆಯೂ ಮಗನಿಗೆ ಶಾಪವಾಗಿ ಪರಿಣಮಿಸಿರುವ ಅಂಗವಿಕಲತೆಯನ್ನು ನಿವಾರಿಸುವು­ದಕ್ಕಾಗಿ ಇನ್ನಿಲ್ಲದ ಕಸರತ್ತು ನಡೆಸಿರುವ ಬಡ ದಂಪತಿಗೆ ಬಡತನ ಅಡಿಯನ್ನುಂಟು ಮಾಡಿದೆ.

ಸುಣ್ಣ ತಯಾರಿಕೆಯನ್ನೇ ಬದುಕಿಗೆ ಆಸರೆಯನ್ನಾಗಿಸಿಕೊಂಡು ತುತ್ತಿನ ಚೀಲ ತುಂಬಿಸಿಕೊಳ್ಳುತ್ತಿರುವ ಈ ಕುಟುಂಬಕ್ಕೆ ಸದ್ಯ ಮಗನಿಗೆ ಅಂಟಿಕೊಂಡಿರುವ ವೈಕಲ್ಯ ನಿವಾರಿಸುವುದು ಕಷ್ಟ ಸಾಧ್ಯ­ವಾಗಿದೆ. ದಿನದ ದುಡಿಮೆಯಲ್ಲಿ ಕುಟುಂಬ ನಿರ್ವಹಣೆಯೇ ಕಷ್ಟ ಸಾಧ್ಯ­ವಾಗಿರುವಾಗ ದೊಡ್ಡ ಮೊತ್ತದ ಹಣ ಖರ್ಚು ಮಾಡಿ ಮಗನನ್ನು ವೈಕಲ್ಯ­ದಿಂದ ಮುಕ್ತಿ ಕೊಡಿಸುವುದು ಹೇಗೆ ಸಾಧ್ಯ? ಎಂಬ ಚಿಂತೆ ಪಾಲಕರಿದ್ದಾರೆ.

ಸರ್ಕಾರ ‘ಬಾಲ ಸಂಜೀವಿನಿ’, ‘ಸುವರ್ಣ ಆರೋಗ್ಯ ಚೈತನ್ಯ’ ಸೇರಿದಂತೆ ಹತ್ತು–ಹಲವು ಮಹತ್ವಾ­ಕಾಂಕ್ಷಿ ಯೋಜನೆಗಳನ್ನು ಜಾರಿಗೊಳಿ­ಸಿದೆ. ಆದರೆ ವಿಕಲ ಚೇತನ ಬಾಲಕ ಪ್ರಕಾಶನ ವೈದ್ಯಕೀಯ ವೆಚ್ಚ ಭರಿಸಲು ಸಂಪೂರ್ಣ ವಿಫಲವಾಗಿದೆ. ಬದುಕಿನಲ್ಲಿ ಹತ್ತಾರು ಕನಸುಗಳನ್ನು ಹೊಂದಿ ಭರವಸೆಯ ಬದುಕು ಸಾಧಿಸಬೇಕು ಎಂಬ ಬಾಲಕನ ಹಾಗೂ ಪಾಲಕರ ಕನಸಿಗೆ ಅಂಗವೈಕಲ್ಯ ಅಡ್ಡಿಯನ್ನುಂಟು ಮಾಡಿ­ರುವುದು ವಿಪರ್ಯಾಸವೇ ಸರಿ.

ಅಂಗವಿಕಲರ ಬಾಳು ಹಸನಾಗಿಸಲು ಸರ್ಕಾರಗಳು ಮಹತ್ವದ ಯೋಜನೆಗಳನ್ನು ಜಾರಿಗೊಳಿಸುತ್ತಳೇ ಇವೆ. ಅಂಗವಿಕಲರ ಬಾಳಿನಲ್ಲಿ ಮಾತ್ರ ಹೊಂಬೆಳಕು ಮೂಡುತ್ತಿಲ್ಲ. ಸರ್ಕಾರಿ ಯೋಜನೆಗಳ ಅಸಮರ್ಪಕ ಅನುಷ್ಠಾನದಿಂದಾಗಿ ಅಸಂಖ್ಯಾತ ವಿಕಲ ಚೇತನರು ತಮ್ಮದಲ್ಲದ ತಪ್ಪಿಗಾಗಿ ಪರಾವಲಂಬಿಗಳಾಗಿ ದಯನೀಯ ಬದುಕು ಸಾಗಿಸುವಂತಾಗಿದೆ. ಬಾಲಕನ ಕುಟುಂಬದ ಸಂಪರ್ಕ ಸಂಖ್ಯೆ 9611672199.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT