ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪ್ರಶಸ್ತಿ ಆಸೆ ಹುಟ್ಟಿಸಿ ಕೈಕೊಟ್ಟರು...’

ಹೊಸದುರ್ಗ: ಸೂರ್ಯಕಾಂತಿ ಬೆಳೆಗಾರನ ಅಳಲು
Last Updated 26 ಸೆಪ್ಟೆಂಬರ್ 2013, 6:20 IST
ಅಕ್ಷರ ಗಾತ್ರ

ಹೊಸದುರ್ಗ: ತಾಲ್ಲೂಕಿನ ಬಾಗೂರು ಗ್ರಾಮದ ರೇವಣ್ಣ ಅವರು ಬೆಳೆದಿದ್ದ ಸೂರ್ಯಕಾಂತಿ ಬೆಳೆಗೆ ಉತ್ತಮ ಬೆಳೆಗಾರ ಪ್ರಶಸ್ತಿ ನೀಡಲಾಗುವುದು ಎಂದು ಕೃಷಿ ಅಧಿಕಾರಿಗಳು ರೈತನಿಗೆ ಆಸೆ ಹುಟ್ಟಿಸಿ, ಆ ಆಸೆಗೆ ತಣ್ಣೀರೆರಚಿದ ಘಟನೆ ನಡೆದಿದೆ.

ರೇವಣ್ಣ ಅವರು ಈ ಬಾರಿ ಮುಂಗಾರು ಹಂಗಾಮಿನಲ್ಲಿ  15 ಎಕರೆ ಮಳೆ ಆಶ್ರಿತ ಖುಷ್ಕಿ ಜಮೀನಿಗೆ ಬೆಂಗಳೂರಿನ ಕಿಸಾನ್‌ ಕಾಲ್‌ ಸೆಂಟರ್‌ನ ಮಾರ್ಗದರ್ಶನದ ಮೇರೆಗೆ ` 5,500ಗಳ  ‘ಕೆಬಿಎಚ್ಎಸ್41’ ತಳಿಯ ಸೂರ್ಯಕಾಂತಿ ಬೀಜ ಬಿತ್ತನೆ ಮಾಡಿದ್ದರು. ಉತ್ತಮವಾಗಿ ಬೆಳೆ ಬಂದಿದ್ದರಿಂದ ಅತೀ ಕಡಿಮೆ ಖರ್ಚಿನಲ್ಲಿ ಸುಮಾರು ` 3 ಲಕ್ಷದಷ್ಟು ಆದಾಯ ಬರುವಷ್ಟು ಬೆಳೆ ಬಂದಿದೆ ಎಂದು ರೇವಣ್ಣ ಅವರ ಪುತ್ರ ವೆಂಕಟೇಶ್ ಬುಧವಾರ ಪ್ರಜಾವಾಣಿಗೆ ತಿಳಿಸಿದರು.

ಚಿತ್ರದುರ್ಗದ ಕೃಷಿ ಅಧಿಕಾರಿ ಕೃಷ್ಣಮೂರ್ತಿ, ತುಮಕೂರಿನ ಉಪ ಕೃಷಿ ನಿರ್ದೇಶಕಿ ರೂಪಾ, ಜಿಲ್ಲಾ ಸಾಂಖ್ಯಿಕ ಅಧಿಕಾರಿ ಚಂದ್ರಪ್ಪ, ಹಿರಿಯೂರಿನ ಕೃಷಿ ಅಧಿಕಾರಿ ಉಷಾರಾಣಿ, ಹೊಸದುರ್ಗದ ಕೃಷಿ ಅಧಿಕಾರಿ ಹಂಸವೇಣಿ ಅವರು ರೇವಣ್ಣರ ಆಗ್ರಹದ ಮೇರೆಗೆ
ಭೇಟಿ ನೀಡಿ, ಬೆಳೆ ವೀಕ್ಷಿಸಿ, ಉತ್ತಮ ಬೆಳೆಗಾರ ಪ್ರಶಸ್ತಿ ಕೊಡಿಸಲಾಗುವುದು ಎಂದು ಭರವಸೆ ಕೊಟ್ಟರು. ಅಧಿಕಾರಿಗಳ ಸಲಹೆಯಂತೆ ಬೆಂಗಳೂರಿನ ಕೃಷಿ ವಿಜ್ಞಾನ ಸಂಸ್ಥೆಗೆ ಪ್ರಶಸ್ತಿ ಶುಲ್ಕ ಕಳುಹಿಸಲಾಗಿತ್ತು.

‘ಬೆಳೆ ಕಟಾವು ಮಾಡುವ ಮೊದಲು ನಮ್ಮ ಗಮನಕ್ಕೆ ತನ್ನಿ ಎಂದು ಅಧಿಕಾರಿಗಳು ಸೂಚನೆ ನೀಡಿದರು. ಅದರಂತೆ ಬೆಳೆ ಕಟಾವಿಗೆ ಬರುವ ಒಂದು ವಾರ ಮುಂಚೆಯೇ ಅಂದರೆ ಸೆ. 1ರಂದು ಪಟ್ಟಣದ ಕೃಷಿ ಅಧಿಕಾರಿಗೆ ತಿಳಿಸಲಾಗಿತ್ತು. ಆಗ ಅವರು ಈಗ ಬರಲಿಕ್ಕೆ ಆಗುವುದಿಲ್ಲ. ಸೆ.12ರಂದು ಭೇಟಿ ನೀಡಲಾಗುವುದು ಎಂದರು.

ಆದರೆ, ಅಂದೂ ಸಹ ಕೃಷಿ ಅಧಿಕಾರಿಗಳು ಬರಲಿಲ್ಲ. ಕಷ್ಟಪಟ್ಟು ಬೆಳೆದ ಬೆಳೆ ಕೈಗೆ ಸಿಗದೆ ಹಾಳಾಗುತ್ತದೆ ಎಂಬ ಕಾರಣಕ್ಕಾಗಿ, ಮತ್ತೆ 4 ದಿನ ಅಧಿಕಾರಿಗಳಿಗಾಗಿ ಕಾದು ಸೆ. 16ರಂದು ಬೆಳೆ ಕಟಾವು ಮಾಡಲಾಗಿತ್ತು’ ಎನ್ನುತ್ತಾರೆ ವೆಂಕಟೇಶ್.

‘ಸೆ.17ರಂದು ಪಟ್ಟಣದ ಕೃಷಿ ಅಧಿಕಾರಿ ಭೇಟಿ ನೀಡಿ, ಪರಿಶೀಲಿಸಿ ನಮ್ಮ ಸೂಚನೆ ಪಾಲಿಸದೇ, ಬೆಳೆ ಕಟಾವು ಮಾಡಿರುವುದರಿಂದ ನಿಮಗೆ ಉತ್ತಮ ಬೆಳೆಗಾರ ಪ್ರಶಸ್ತಿ ಸಿಗುವುದಿಲ್ಲ ಎಂದಿದ್ದಾರೆ. ನಮ್ಮದಲ್ಲದ ತಪ್ಪಿಗೆ ಅನ್ಯಾಯ ಮಾಡುವುದು ಎಷ್ಟು ಸರಿ. ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡು ನ್ಯಾಯ ಒದಗಿಸಬೇಕು’ ಎಂದು ರೇವಣ್ಣ ಹಾಗೂ ವೆಂಕಟೇಶ್‌ ಆಗ್ರಹಿಸಿದ್ದಾರೆ.

ಅಧಿಕಾರಿ ಪ್ರತಿಕ್ರಿಯೆ: ‘ರೈತ ರೇವಣ್ಣ ಅವರಿಗೆ ಸೆ. 17ರಂದು ಬೆಳೆ ಕಟಾವು ಕಾರ್ಯ ಕೈಗೊಳ್ಳಿ ಎಂದು ಮುಂಚಿತವಾಗಿ ಮಾಹಿತಿ ನೀಡಿ, ಅಂದು ರಾಜ್ಯಮಟ್ಟದ ಕೃಷಿ ಪ್ರಶಸ್ತಿ ತಂಡದೊಂದಿಗೆ ಅವರ ಜಮೀನಿಗೆ ಭೇಟಿ ನೀಡಿದಾಗ, ಇಲಾಖೆ ಸೂಚನೆ ಪಾಲಿಸದೇ, ಅಧಿಕಾರಿಗಳು ಭೇಟಿ ನೀಡುವ ಮೊದಲೇ ಬೆಳೆ ಕಟ್ಟಾವು ಮಾಡಿರುವುದರಿಂದ ಉತ್ತಮ ಬೆಳೆಗಾರ ಪ್ರಶಸ್ತಿ ನೀಡಲು ಸಾಧ್ಯವಾಗುವುದಿಲ್ಲ’ ಎನ್ನುತ್ತಾರೆ ಪಟ್ಟಣದ ಕೃಷಿ ಅಧಿಕಾರಿ ಎ.ಸಿ.ಮಂಜು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT