ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬದುಕಿನಲ್ಲಿ ಸಾಧನೆ ಬಗ್ಗೆ ಚಿಂತಿಸಬೇಡಿ’

‘ನಿರಂಜನ’ ಪ್ರಶಸ್ತಿ ಸ್ವೀಕರಿಸಿದ ಕೆ.ಟಿ.ಗಟ್ಟಿ ಅಭಿಮತ
Last Updated 14 ಡಿಸೆಂಬರ್ 2013, 7:02 IST
ಅಕ್ಷರ ಗಾತ್ರ

ಪುತ್ತೂರು: ‘ನನ್ನ ಕೃತಿಗಳನ್ನು ಕೇವಲ ವಿದ್ವಾಂಸರು, ವಿಮರ್ಶಕರಷ್ಟೇ ಓದುವಂತಾಗಬಾರದು. ಸಮಾಜದ ವಿವಿಧ ಸ್ತರದವರು ಓದುವಂತಾಗಬೇಕೆಂಬ ಆಶಯ ಹೊಂದಿದ್ದೇನೆ. ಓದುಗನೊಂದಿಗೆ ಕೃತಿಯ ಮೂಲಕ ಚರ್ಚಿಸುವಂತಾಗಬೇಕೆಂಬ ಕನಸು ನನ್ನದು. ಬದುಕಿ­ನಲ್ಲಿ ಸಾಧನೆ, ಸಫಲತೆಯ ಬಗೆಗೆ ಚಿಂತಿಸ­ಬಾರದು. ಇರುವಷ್ಟು ದಿನ ಸಂತೋಷದಿಂದ ಬದುಕಬೇಕೆಂಬ ಸಿದ್ಧಾಂತ ನನ್ನದು’ ಎಂದು ಹಿರಿಯ ಸಾಹಿತಿ ಕೆ.ಟಿ.ಗಟ್ಟಿ ಅವರು ಹೇಳಿದರು.

ಪುತ್ತೂರಿನ ವಿವೇಕಾನಂದ ಕಾಲೇಜಿನ ಶಿವರಾಮ ಕಾರಂತ ಅಧ್ಯಯನ ಕೇಂದ್ರ ಹಾಗೂ ಕಾಲೇಜಿನ ಕನ್ನಡ ಸಂಘದ ಆಶ್ರಯದಲ್ಲಿ ಶುಕ್ರವಾರ ನಡೆದ ಕಾರ್ಯ­ಕ್ರಮದಲ್ಲಿ ‘ನಿರಂಜನ’ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು. ‘ಆರಂಭದಲ್ಲಿ ಕಥೆ, ಕವನಗಳ ಮೇಲೆ ಆಸಕ್ತಿ ಹೊಂದಿದ್ದ ನಾನು ಕ್ರಮೇಣ ಕಾದಂಬರಿ ಬರೆಯುವು­ದರ ಕಡೆಗೆ ಹೊರಳಿದೆ. ಅನೇಕರು ಇಂಥದ್ದನ್ನೇ ಬರೆಯ­ಬೇಕು ಎಂದು ನನ್ನನ್ನು ಒತ್ತಾಯಿಸಿದ್ದು, ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ತೊಡಗುವುದಕ್ಕೆ ಸಾಧ್ಯ­ವಾಯಿತು. ಎಲ್ಲ ಹಿರಿಯ ಬರಹಗಾರರನ್ನು ಗುರು­ಗಳಾಗಿ ಸ್ವೀಕರಿಸಿ ಬರೆಯುತ್ತಾ ಹೋದೆ’ ಎಂದರು.

ಅಭಿನಂದನಾ ಭಾಷಣ ಮಾಡಿದ ಉಜಿರೆಯ ಎಸ್.ಡಿ.ಎಂ.ಕಾಲೇಜಿನ ಕನ್ನಡ ಉಪನ್ಯಾಸಕ ಡಾ.ಬಿ.­ರಾಜೇಶ್ ಅವರು ಕೆ.ಟಿ.ಗಟ್ಟಿ ಗ್ರಾಮೀಣ ಪ್ರದೇಶ­ದಲ್ಲಿದ್ದು, ತನ್ನ ಸಾಧನೆಯ ಕಂಪನ್ನು ಎಲ್ಲೆಡೆ ಬೀರಿದ­ವರು. ಅವರ ಕವನಗಳಲ್ಲಿ ನೋವಿನಿಂದ ಹುಟ್ಟುವ ಬಂಡಾಯದ ಗುಣ ಎದ್ದು ಕಾಣುತ್ತದೆ. ಅವರ ಎಲ್ಲ ಬರಹಗಳಲ್ಲಿ ಗಟ್ಟಿತನವನ್ನು ಕಾಣಬಹುದು ಎಂದರು. 

ಗಟ್ಟಿಯವರು ಎಂದೂ ಪ್ರಶಸ್ತಿಯ ಬೆನ್ನು ಬಿದ್ದವ­ರಲ್ಲ. ಈವರೆಗೆ ಸುಮಾರು 46 ಕಾದಂಬರಿಗಳನ್ನು ಸಾರ­­ಸ್ವತ ಲೋಕಕ್ಕೆ ನೀಡಿದವರು. ವೈಚಾರಿಕ ಚಿಂತನೆ­ಗಳ ಅಗ್ರಗಣ್ಯರಾಗಿ ಗಟ್ಟಿಯವರು ಕಾಣಿಸಿಕೊಂಡರೂ ಸಮ­ಕಾಲೀನ ವಿಮರ್ಶಾ ಲೋಕ ಅವರನ್ನು ಸಾಕಷ್ಟು ಪರಿ­ಗಣಿಸದೇ ಇರುವುದು ನಿಜಕ್ಕೂ ಖೇದಕರ ವಿಷಯ ಎಂದರು.

ಡಾ.ಶಿವರಾಮ ಕಾರಂತ ಅಧ್ಯಯನ ಕೇಂದ್ರದ ಕಾರ್ಯಾಧ್ಯಕ್ಷ ಡಾ.ತಾಳ್ತಜೆ ವಸಂತ ಕುಮಾರ ಅವರು ಅಧ್ಯಕ್ಷತೆ ವಹಿಸಿದ್ದರು. ನಿರಂಜನ ಪ್ರಶಸ್ತಿ ಅರ್ಹ ವ್ಯಕ್ತಿಗಳನ್ನು ಅರಸಿಕೊಂಡು ಹೋಗುತ್ತಿರುವುದು ಸಂತಸ­ದ ಸಂಗತಿ. ದೊಡ್ಡ ಸಾಹಿತಿಗಳೆನಿಸಿಕೊಂಡು ವಿವಿಧ ಫರ್ಮಾನು ಹೊರಡಿಸುವವರು, ಕೀಳು ರಾಜಕೀಯದೊಂದಿಗೆ ತಳಕು ಹಾಕಿಕೊಂಡವರು, ರಾಜಕಾರಣಿಗಳಿಗೆ ಜ್ಯೂಸ್ ಕುಡಿಸುವ ಸಾಹಿತಿಗಳು ನಮ್ಮ ನಡುವೆ ಇದ್ದಾರೆ.

ಇಂದಿನ ಸಾಹಿತ್ಯದ ವಿದ್ಯಾರ್ಥಿ­ಗಳಿಗೂ ಅಂತಹ ಸಾಹಿತಿಗಳ ಬಗೆಗೇ ಹೇಳ ಬೇಕಾದ ಸ್ಥಿತಿಯೂ ಶಿಕ್ಷಣ ಕ್ಷೇತ್ರದಲ್ಲಿದೆ. ನಿಜವಾದ ಸಾಹಿತ್ಯ ಪ್ರೀತಿಯಿಂದ ಸಾಹಿತ್ಯಕ್ಕಾಗಿ ಮಾತ್ರ ಕೆಲಸ ಮಾಡಿದ ಸಾಹಿತಿಗಳ ಬಗೆಗೆ ಯುವಜನತೆ ಅರಿಯಬೇಕು. ಅಂತಹವರನ್ನು ಗೌರವಿಸಬೇಕು ಎಂದು ನುಡಿದರು.

ವಿವೇಕಾನಂದ ವಿದ್ಯಾವರ್ಧಕ ಸಂಘದ ಆಡಳಿತಾ­ಧಿಕಾರಿ ಪ್ರೊ.ಎ.ವಿ.ನಾರಾಯಣ, ಕಾಲೇಜು ಆಡಳಿತ ಮಂಡಳಿ ಸಂಚಾಲಕ ಎಂ.ಟಿ.ಜಯರಾಮ ಭಟ್, ಕಾಲೇಜಿನ ಪ್ರಾಚಾರ್ಯ ಡಾ.ಎಚ್.ಮಾಧವ ಭಟ್, ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಶ್ರೀಧರ ಎಚ್.ಜಿ., ಉಪನ್ಯಾಸಕಿ ಗೀತಾ ಕುಮಾರಿ, ವಿದ್ಯಾರ್ಥಿನಿ ಮೇಘ ಕುಕ್ಕುಜೆ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT