ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬರಾಕ್ ಬೋಪರಾಕ್‌’ನ ತೆರೆಮರೆಯಲ್ಲಿ

Last Updated 1 ಫೆಬ್ರುವರಿ 2015, 19:30 IST
ಅಕ್ಷರ ಗಾತ್ರ

ಬರಾಕ್ ಒಬಾಮ ಅವರ ಭಾರತ ಯಾತ್ರೆಯಲ್ಲಿ ದೇಶಕ್ಕೆ ದೇಶವೇ ಸಂಭ್ರಮ­ದಲ್ಲಿ ಮುಳುಗೆದ್ದಿತು. ಅಥವಾ ಹಾಗೆಂದು ಮಾಧ್ಯಮಗಳು ಬಿತ್ತುತ್ತ ಬಂದವು. ಬರಾಕ್ ಬಂದರು. ಗಣರಾಜ್ಯೋತ್ಸವದ ಮಿಲಿಟರಿ ಪರೇಡ್ ನೋಡಿದರು. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಜೊತೆಗೂಡಿ ವ್ಯಾಪಾರಿ ಸಮುದಾಯಗಳ ಜೊತೆಗೆ ಚರ್ಚೆ ಮಾಡಿದರು. ಭಾರತ, ಅಮೆರಿಕ ದೇಶಗಳ ನಡುವಿನ ದ್ವಿಪಕ್ಷೀಯ ಮಾತುಕತೆಗಳ ಬಗ್ಗೆ ಮಾತನಾಡಿ­ದರು. ಮೇಕ್ ಇನ್ ಇಂಡಿಯಾದಿಂದ ಮೇಕ್ ಫಾರ್ ಇಂಡಿಯಾದ ವರೆಗೆ ಚರ್ಚೆಗಳಾದವು. ರೇಡಿಯೊದಲ್ಲಿ ಮನದ ಮಾತೂ ಆಯಿತು.

ಆದರೆ ಈ ಎಲ್ಲ ಸದ್ದು ಗದ್ದಲಗಳ ಮಧ್ಯೆ ನಡೆದ ಚರ್ಚೆಗಳು ಎಂಥವಿರಬಹುದು? ಆದ ಒಪ್ಪಂದಗಳು, ಬಿದ್ದ ಸಹಿಗಳು ಏನೇನಿರ­ಬಹುದು? ಸಾಲುಗಳ ನಡುವಿನ ಕಾಣದ ಅಕ್ಷರಗಳವು.

ಆದರೆ ಅಬ್ಬರದ ಸಂಭ್ರಮಾಚರಣೆಯ ಹಿಂದಿನ ಉದ್ದೇಶಗಳ ಬಗ್ಗೆ ಯೋಚಿಸಿದಾಗ ಕೆಲವರಿಗಂತೂ ಕಳವಳವಾಗುತ್ತದೆ. ಪರಮಾಣು ಒಪ್ಪಂದಗಳಂಥವು ದಿಗಿಲು ಹುಟ್ಟಿಸಿದರೆ, ನಮ್ಮ ಪೇಟೆಂಟ್ ಕಾಯಿದೆ, ಆಹಾರದ ಹಕ್ಕಿನ ಕಾಯಿದೆ, ಉದ್ಯೋಗದ ಹಕ್ಕಿನ ಕಾಯಿದೆಗಳಿಗೆ ಬೀಳುವ ಪೆಟ್ಟಿನ ಆತಂಕ ಇನ್ನೊಂದೆಡೆ. ಒಂದು ಕಾಲದಲ್ಲಿ ೧೯೭೦ರ ಭಾರತದ ಪೇಟೆಂಟ್ ಕಾಯಿದೆಗೆ  ಜಗತ್ತಿನಲ್ಲೆಲ್ಲ ಬಹಳ ಗೌರವಾದರ ಇತ್ತು. ಆ ಕಾಯಿದೆಯನ್ನು ಕಿತ್ತೊಗೆಸುವುದರಲ್ಲಿ ಈಗಾಗಲೇ ಅಮರಿಕ ಯಶ ಸಾಧಿಸಿದೆ.

ವಸ್ತುವಿನ ತಯಾರಿಕಾ ವಿಧಾನಕ್ಕಷ್ಟೇ ಪೇಟೆಂಟ್ ಇದ್ದರೆ ಸಾಕು ಎಂದು ಹಲವು ಬಗೆಯ ಅವಿಷ್ಕಾರಕ್ಕೆ ಸಾಧ್ಯತೆ ಮಾಡಿಕೊಟ್ಟಿದ್ದ ಭಾರತದ ಪೇಟೆಂಟ್ ಕಾನೂನು ವಿಶ್ವ ವ್ಯಾಪಾರ ಒಪ್ಪಂದಗಳ ಮಧ್ಯೆ ಕಳೆದುಹೋಯಿತು.  ಅಷ್ಟಾದರೂ ಅಮೆರಿಕ ಮಾದರಿಯ ಪೇಟೆಂಟ್ ಕಾಯಿದೆಯನ್ನು ತರುವಾಗ ಅದರೊಳಗೆ ಸೆಕ್ಷನ್ ೩(ಡಿ) ಎಂಬ ಅಂಶವೊಂದನ್ನು ನಮ್ಮ ಸರ್ಕಾರವು ಸೇರಿಸಿದೆ. ಶ್ರೀಮಂತ ದೇಶಗಳ ಬಹುರಾಷ್ಟ್ರೀಯ ಕಂಪೆನಿಗಳ ನಿದ್ದೆಗೆಡಿಸಿರುವ ಕಾಯಿದೆಯ ಪರಿಚ್ಛೇದವಿದು. ಈ ಪರಿಚ್ಛೇದದಿಂದಾಗಿ ಆರು ತಿಂಗಳ ಹಿಂದೆ ಕ್ಯಾನ್ಸರ್ ರೋಗದ ಔಷಧವೊಂದಕ್ಕೆ ಭಾರತದಲ್ಲಿ ಪೇಟೆಂಟ್ ಪಡೆಯಲು ಪ್ರಯತ್ನಿಸಿದ ನೊವಾರ್ಟಿಸ್ ಕಂಪೆನಿಯು ಸೋತಿತ್ತು. ಲಕ್ಷಾಂತರ ರೂಪಾಯಿಗೆ ತನ್ನ ಔಷಧವನ್ನು ಮಾರಲು ಹೊರಟಿದ್ದ ಆ ಕಂಪೆನಿಯು ಬೌದ್ಧಿಕ ಹಕ್ಕು ಸಿಗದಿದ್ದಾಗ ಅದಕ್ಕೆ ಕಾರಣವಾದ ಸೆಕ್ಷನ್ ೩(ಡಿ)ಯನ್ನೇ ತೆಗೆದು ಹಾಕಬೇಕೆಂದು ಕೋರ್ಟಿನಲ್ಲಿ ದಾವೆ ಹಾಕಿ ಮತ್ತೆ ಸೋತಿತ್ತು.

ಭಾರತದ ಪೇಟೆಂಟ್ ಕಾಯಿದೆಯ ಸೆಕ್ಷನ್ ೩(ಡಿ) ಏನು ಹೇಳುತ್ತದೆ? ಯಾವುದೇ ವಸ್ತುವಿಗೆ ಈಗಾಗಲೇ ಪೇಟೆಂಟ್ ಇದ್ದು, ಪೇಟೆಂಟ್ ಅವಧಿ ಮುಗಿಯುವ ವೇಳೆಗೆ ಆ ವಸ್ತುವಿನ ಸ್ವರೂಪ ಬದಲಾಯಿಸಿ, ಮತ್ತೆ ಪೇಟೆಂಟ್‌ಗೆ ಅರ್ಜಿ ಹಾಕಿದರೆ, ಆ ವಸ್ತುವಿನ ಗುಣಮಟ್ಟದಲ್ಲಿ ಹೆಚ್ಚಿನದೇನೂ ಕಾಣಲಿಲ್ಲವೆಂದರೆ ಪೇಟೆಂಟ್ ಕೊಡಲು ಬರುವುದಿಲ್ಲ ಎಂದು. ಈ ಪರಿಚ್ಛೇದದ ಮೇಲೆ ಬಹುತೇಕ ಬಹುರಾಷ್ಟ್ರೀಯ ಔಷಧ ಕಂಪೆನಿಗಳ ಕಣ್ಣು, ಉರಿಗಣ್ಣು.

ಬರಾಕ್ ಬೋಪರಾಕ್ ಮಧ್ಯೆ ಔಷಧಗಳ ಸುದ್ದಿ ಯಾಕೆ? ಸಂಭ್ರಮದ ಮಧ್ಯೆ ಅದರ ನೆನಪು ಬಂದಿದ್ದೇಕೆಂದರೆ ಮತ್ತೆ ಇನ್ನೊಂದು ಕಂಪೆನಿಯು ಇದೇ ತರಹ ಹೆಪಟೈಟಿಸ್ ಸಿ ಕಾಯಿಲೆಗೆ ಔಷಧಕ್ಕೆ ಪೇಟೆಂಟ್ ಪಡೆಯಲು ಹೋಗಿ ಸೋತಿದೆ. ಹಿಂದಿನದು ಸ್ವಿಟ್ಜರ್‌ಲೆಂಡಿನ ಕಂಪೆನಿಯಾದರೆ ಈಗಿನದು ಅಮೆರಿಕದ ಕಂಪೆನಿ. ಬರಾಕ್ ಬರುವ ಸ್ವಲ್ಪ ಮೊದಲು ಘಟಿಸಿದ್ದು.

ಹೆಪಟೈಟಿಸ್ ಸಿ, ಮನುಷ್ಯನ ಪಿತ್ತಕೋಶಕ್ಕೆ ಎರಗುವ ಒಂದು ಭೀಕರ ಕಾಯಿಲೆ. ಪಿತ್ತಕೋಶಕ್ಕೆ ಸೋಂಕು ತಗುಲಿತೆಂದರೆ ಸುಧಾರಿಸಿಕೊಳ್ಳುವುದು ಬಲು ಕಷ್ಟದ ಕೆಲಸ. ಪಿತ್ತಕೋಶದ ಸಿರೋಸಿಸ್ ಅಥವಾ ಕ್ಯಾನ್ಸರಿಗೆ ಅದು ಎಡೆಮಾಡಿಕೊಡುತ್ತದೆ. ಭಾರತದಲ್ಲಿ ಶೇಕಡ ೧.೫ರಷ್ಟು ಜನರಿಗೆ ಅದು ತಗುಲಿದ್ದರೆ ಜಗತ್ತಿನಲ್ಲಿ ಶೇ ೩.೩ರಷ್ಟು ಜನರಿಗೆ ತಗುಲಿದೆ. ಹೆಚ್ಚಾಗಿ ಮಾದಕ ಔಷಧಗಳ ಚಟಕ್ಕೆ ಬಿದ್ದವರು ಒಂದೇ ಸೂಜಿಯಿಂದ ಹೆಚ್ಚೆಚ್ಚು ಜನರು ಇಂಜೆಕ್ಷನ್ ತೆಗೆದುಕೊಳ್ಳುವುದರಿಂದ ಈ ರೋಗ ಹರಡುತ್ತದೆ. ರಕ್ತನಾಳದೊಳಗೆ ಇಂಜೆಕ್ಷನ್ ಕೊಡುವುದರಿಂದಲೂ, ಸೂಜಿಗೆ ಸೋಂಕು ತಗುಲಿದ್ದರೆ, ಮತ್ತು ರೋಗಿಗೆ ರಕ್ತ ಹಾಕುವಾಗಲೂ ಆ ರಕ್ತದ ಮೂಲಕ ರೋಗ ಒಬ್ಬರಿಂದೊಬ್ಬರಿಗೆ ಹರಡುತ್ತದೆ.

ಹೆಪಟೈಟಿಸ್ ಸಿ ರೋಗ ಬಂತೆಂದರೆ ಚಿಕಿತ್ಸೆಯೇ ದೊಡ್ಡ ಸವಾಲಾಗಿತ್ತು. ವಿಪರೀತ ದುಬಾರಿ, ಅಡ್ಡ ಪರಿಣಾಮಗಳು ಅನೇಕ ಮತ್ತು ಫಲ ಸಿಗುವುದೆಂಬ ಖಾತರಿ ಇಲ್ಲ. ಇಂಥ ಭಯಂಕರ ಹೆಪಟೈಟಿಸ್ ಸಿ ರೋಗ ಗುಣ ಮಾಡುವಂಥ ಔಷಧ ಬಂದಿದೆ. ಸೋಫೋಸ್‌ಬ್ವಿಯರ್ ಎಂಬ ಈ ಔಷಧವು ಸಾಕಷ್ಟು ಸುರಕ್ಷಿತ, ಕ್ಯಾನ್ಸರ್ ಅಥವಾ ಇನ್ನಾವುದೇ ಎಚ್.ಐ.ವಿ./ಏಡ್ಸ್‌ಗೆ ಕೊಡುವ ಔಷಧಗಳಿಗಿಂತ ಭಿನ್ನವಾಗಿದ್ದು ಜೀವನ ಪೂರ್ತಿ ಇದನ್ನು ತೆಗೆದುಕೊಳ್ಳಬೇಕಾಗಿಲ್ಲ.

ಆದರೇನು? ಔಷಧದ ಪೇಟೆಂಟ್ ಇಟ್ಟುಕೊಂಡಿರುವ ಅಮೆರಿಕದ ಗಿಲಾಡ್ ಕಂಪೆನಿಯು ಒಂದು ಮಾತ್ರೆಗೆ ೧೦೦೦ ಡಾಲರು ಅಂದರೆ ಸುಮಾರು ₨೬೦,೦೦೦ ಬೆಲೆ ಇಟ್ಟಿದೆ. ಅಂದರೆ ೧೨ ವಾರಗಳ ಚಿಕಿತ್ಸೆಗೆ ೮೪೦೦೦ ಡಾಲರ್ ಅಥವಾ ₨೫೦ ಲಕ್ಷ  ಖರ್ಚಾಗುತ್ತದೆ.
ಇದು ಪೇಟೆಂಟಿನ ಶಕ್ತಿ. ಬೌದ್ಧಿಕ ಸ್ವಾಮ್ಯಹಕ್ಕು ತನ್ನ ಕೈಯಲ್ಲಿ ಇರುವುದರಿಂದ ಒಂದು ಕಂಪೆನಿಯು ಔಷಧದ ಬೆಲೆಯನ್ನು ತನ್ನ ಮನಬಂದಂತೆ ಹೆಚ್ಚಿಗೆ ಇರಿಸಬಹುದು.

ಯಾರು ಅದನ್ನು ಮರು ತಯಾರಿಸಬಹುದು, ಯಾರು ತಯಾರಿಸುವಂತಿಲ್ಲ, ಎಲ್ಲಿ ಮಾರಬಹುದು, ಎಲ್ಲಿ ಮಾರುವಂತಿಲ್ಲ, ಮಾರಿದರೆ ತನಗೆ ಎಷ್ಟು ರಾಯಧನ ಕೊಡಬೇಕು ಎನ್ನುವುದನ್ನೆಲ್ಲ ಪೂರ್ತಿಯಾಗಿ ತನ್ನ ನಿಯಂತ್ರಣದಲ್ಲೇ ಇಟ್ಟುಕೊಳ್ಳಬಹುದು. ೨೦ ವರ್ಷಗಳ ಕಾಲ ಪೇಟೆಂಟ್ ಇಟ್ಟುಕೊಂಡು ದುಡ್ಡನ್ನು ಬಾಚಿಕೊಳ್ಳುವ ಕಂಪೆನಿಗಳು ಮತ್ತೂ ಮತ್ತೂ ಹಣ ಮಾಡುವುದಕ್ಕಾಗಿ ಔಷಧದಲ್ಲಿ ಚಿಕ್ಕ ಪುಟ್ಟ ಬದಲಾವಣೆ ಮಾಡಿ ಮತ್ತೆ ಪೇಟೆಂಟಿಗಾಗಿ ಅರ್ಜಿ ಹಾಕುತ್ತವೆ. ಇಂಥ ವಂಚನೆಯ ದಂಧೆಯನ್ನು ಭಾರತದ ಪೇಟೆಂಟ್ ಕಾಯಿದೆಯ ಸೆಕ್ಷನ್ ೩(ಡಿ)ಯು ತಡೆಹಿಡಿಯುತ್ತದೆ. ಹೀಗಾಗಿ ಕಾಯಿದೆಯಿಂದ ಸೆಕ್ಷನ್ (ಡಿ)ಯನ್ನೇ ಕಿತ್ತು ಹಾಕುವ ಇರಾದೆ ಅಮೆರಿಕದ ಬಹುರಾಷ್ಟ್ರೀಯ ಔಷಧ ಕಂಪೆನಿಗಳದ್ದು.  

ಚೀನಾ, ಇಂಡೊನೇಷಿಯಾ, ಇಸ್ರೇಲ್ ಸಮೇತ ೧೭ ದೇಶಗಳಲ್ಲಿ ಗಿಲಾಡ್ ಈ ಔಷಧಕ್ಕೆ ಪೇಟೆಂಟ್ ಪಡೆದುಕೊಂಡಿದೆ. ಹಿಂದೆ ನೊವಾರ್ಟಿಸ್ ಕಂಪೆನಿ ಮಾಡಿದ್ದಂತೆಯೇ ಅದು ತನ್ನ ಸೊಫೋಸ್‌ಬ್ವಿಯರ್ ಔಷಧದಲ್ಲಿ ಸಣ್ಣ ಪುಟ್ಟ ಬದಲಾವಣೆ ಮಾಡಿ ಭಾರತದಲ್ಲೂ ಸ್ವಾಮ್ಯ ಹಕ್ಕಿಗಾಗಿ ಅರ್ಜಿ ಹಾಕಿತ್ತು. ಆದರೆ ಕೋಲ್ಕತ್ತದ ಪೇಟೆಂಟ್ ಕಚೇರಿಯು ಕಾನೂನಿನ ಸೆಕ್ಷನ್ ೩(ಡಿ)ಯನ್ವಯ ಅರ್ಜಿಯನ್ನು ತಿರಸ್ಕರಿಸಿದೆ.

ಇದರ ಫಲವಾಗಿ ಹೆಚ್ಚೆಚ್ಚು ಕಂಪೆನಿಗಳು ಈ ಔಷಧವನ್ನು ತಯಾರಿಸಬಹುದು, ಮಾರುಕಟ್ಟೆಗೆ ತರಬಹುದು, ತನ್ಮೂಲಕ ಔಷಧದ ಬೆಲೆ ಕಡಿಮೆ ಆಗಬಹುದು. ಆದರೆ ಅದೆಲ್ಲ ಅಷ್ಟು ಸುಲಭವಾಗಿ ನಾವಂದುಕೊಂಡಂತೆ ಆಗಲು ಔಷಧ ಕಂಪೆನಿ ಬಿಟ್ಟೀತೇ? ತನ್ನ ಜನೆರಿಕ್ ಔಷಧ ಕಂಪೆನಿಗಳಿಂದಾಗಿ ಇಡೀ ಜಗತ್ತಿನ ೧೮೦ಕ್ಕೂ ಹೆಚ್ಚು ದೇಶಗಳಿಗೆ ಕಡಿಮೆ ಬೆಲೆಯಲ್ಲಿ ಔಷಧಗಳನ್ನು ಸರಬರಾಜು ಮಾಡುವ ಭಾರತವನ್ನು ಅಭಿವೃದ್ಧಿಶೀಲ ರಾಷ್ಟ್ರಗಳ ಔಷಧಂಗಡಿ ಎಂದು ಕರೆಯುತ್ತಾರೆ.  ಪೇಟೆಂಟ್ ಕಾಯಿದೆ ಬದಲಾದ ನಂತರ ಜನೆರಿಕ್ ಕಂಪೆನಿಗಳ ಆಶಾಕಿರಣ ಕೇವಲ ಈ ಸೆಕ್ಷನ್ (ಡಿ). ಅದನ್ನು ತೆಗೆಯುವುದರ ಮೂಲಕ ಜನೆರಿಕ್ ಉದ್ದಿಮೆಯನ್ನೇ ಹೊಸಕಿ ಹಾಕುವ ಪ್ರಯತ್ನ ಗಿಲಾಡ್ ಮುಂತಾಗಿ ಅಮೆರಿಕದ ಔಷಧ ಕಂಪೆನಿಗಳದ್ದು.

ಈಗ ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ ಗಿಲಾಡ್. ಇತ್ತ ಬಾರಾಕ್ ಬಂದಾಗಲೂ ಇದರದೇ ಚರ್ಚೆ. ಭಾರತದ ಪೇಟೆಂಟ್ ಕಾಯಿದೆ ಇರಬಹುದು, ಆಹಾರ ಭದ್ರತಾ ಕಾಯಿದೆ ಇರಬಹುದು. ದೇಶವಾಸಿಗಳಿಗೆ ಕಲ್ಯಾಣವಾಗುವಂತೆ ರೂಪಿಸಿರುವ ಯಾವುದೇ ಕಾಯಿದೆಯ ರಕ್ಷಣಾ ಗೋಡೆಯನ್ನು ಒಡೆಯಿರಿ ಎನ್ನುವುದೇ ಅಮೆರಿಕದ ಅಧ್ಯಕ್ಷರ ಭೇಟಿಯ ಹಿಂದಿರುವ ಉದ್ದೇಶ, ಗುರಿ. ಬೋಪರಾಕ್ ಎನ್ನುವ ಅಬ್ಬರದಲ್ಲಿ ಆ ಪಿಸುಮಾತುಗಳು, ಕಿರು ಅಕ್ಷರಗಳು ಕೇಳುವುದೂ ಇಲ್ಲ, ಕಾಣುವುದೂ ಇಲ್ಲ. ಗದ್ದಲದ ಮಧ್ಯೆ ಉದ್ದೇಶ ಸಾಧನೆ ಮಾತ್ರ ಆಗಿರುತ್ತದೆ ಅಷ್ಟೇ.

ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT