ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬಿಜೆಪಿ, ಕಾಂಗ್ರೆಸ್‌ಗೆ ಪರ್ಯಾಯ’

ಜೆಡಿಎಸ್‌ ರಾಜ್ಯ ಘಟಕದ ನೂತನ ಅಧ್ಯಕ್ಷರ ಪ್ರಮಾಣ
Last Updated 13 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: ‘ಕಾಂಗ್ರೆಸ್, ಬಿಜೆಪಿಗೆ ಪರ್ಯಾಯವಾಗಿ ಜೆಡಿಎಸ್‌ ಸಂಘಟಿಸಿ ಪಕ್ಷ ಅಧಿಕಾರಕ್ಕೆ ತರುವುದೇ ನನ್ನ ಗುರಿ’ ಎಂದು ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡ ಹೇಳಿದರು.

ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎ.ಕೃಷ್ಣಪ್ಪ ಶುಕ್ರವಾರ ಅಧಿಕಾರ ವಹಿಸಿಕೊಂಡ ಸಂದರ್ಭದಲ್ಲಿ ಮಾತನಾಡಿದ ಅವರು, ‘ತುಳಿತಕ್ಕೆ ಒಳಗಾಗಿರುವ ಸಮುದಾಯಗಳನ್ನು ಒಗ್ಗೂಡಿಸಿ ಪಕ್ಷ ಅಧಿಕಾರ ಹಿಡಿಯುವಂತೆ ಮಾಡುತ್ತೇನೆ. ಆ ನಂತರ ನಿವೃತ್ತಿಯ ಬಗ್ಗೆ ಯೋಚಿಸುತ್ತೇನೆ’ ಎಂದರು.

ವಿಶ್ವಾಸದ್ರೋಹ ಆಪಾದನೆಯನ್ನು ಜೆಡಿಎಸ್‌ ಮೇಲೆ ಹೊರಿಸಲಾಗಿದೆ. ಜನರ ಮುಂದೆ ಸತ್ಯಾಂಶ ಇಟ್ಟು ಅಗ್ನಿಪರೀಕ್ಷೆಗೆ ಒಳಗಾಗುತ್ತೇವೆ. ಜನರಲ್ಲಿ ಇರುವ ಸಂಶಯವನ್ನು ಹೋಗಲಾಡಿ­ಸುತ್ತೇವೆ ಎಂದರು.

ಇದೇ 16ರಿಂದ 19ರವರೆಗೆ ಕರಾವಳಿ ಭಾಗದ ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ಲೋಕಸಭಾ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸಲಾಗುವುದು ಎಂದು ತಿಳಿಸಿದರು.

ದೇಶ ದಿವಾಳಿ: ಕಾಂಗ್ರೆಸ್‌, ಬಿಜೆಪಿ ದೇಶವನ್ನು ದಿವಾಳಿ ಮಾಡಿವೆ. ಜೆಡಿಎಸ್‌ ಒಂದೇ ಜನರ ಆಶಾಕಿರಣ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪಕ್ಷವು 15 – 16 ಸ್ಥಾನಗಳನ್ನು ಗಳಿಸಲಿದೆ ಎಂದು ರಾಜ್ಯ ಘಟಕದ ಅಧ್ಯಕ್ಷ ಎ.ಕೃಷ್ಣಪ್ಪ ಹೇಳಿದರು.

ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬಂದಿರುವ ವಾಸನೆ ವಿಧಾನಸೌಧದಲ್ಲಿ ಕಾಣುತ್ತಿಲ್ಲ. ಕಾಳಸಂತೆಯಲ್ಲಿ ವರ್ಗಾವಣೆ ದಂಧೆ ನಡೆಯುತ್ತಿದೆ. ಮಧ್ಯವರ್ತಿಗಳು ಹೋಟೆಲ್‌ಗಳಲ್ಲಿ ಕುಳಿತು ಅಧಿಕಾರಿಗಳ ವರ್ಗಾವಣೆ ಮಾಡಿಸುತ್ತಿದ್ದಾರೆ ಎಂದು ಆರೋಪಿಸಿದರು.

  ಪಕ್ಷದ ರಾಷ್ಟ್ರೀಯ ಮಹಾ ಪ್ರಧಾನ ಕಾರ್ಯದರ್ಶಿ ಡ್ಯಾನಿಶ್‌ ಆಲಿ, ಪಕ್ಷದ ಮುಖಂಡರಾದ ಬಸನಗೌಡ ಪಾಟೀಲ ಯತ್ನಾಳ್‌, ಬಂಡೆಪ್ಪ ಕಾಶೆಂಪುರ, ಇಕ್ಬಾಲ್‌ ಅನ್ಸಾರಿ, ಬಿ.ಬಿ.ನಿಂಗಯ್ಯ ಅವರು ಮಾತನಾಡಿದರು. ಶಾಸಕರು, ಮುಖಂಡರು ಭಾಗವಹಿಸಿದ್ದರು.

ಹೋಮ, ಹವನ: ಪಕ್ಷದ ಕಚೇರಿಯಲ್ಲಿ ಹೋಮ, ಹವನ, ಪೂಜೆ ನೆರವೇರಿಸಿದ ನಂತರ ಬೆಳಿಗ್ಗೆ 10.15ಕ್ಕೆ ಸರಿಯಾಗಿ ಕೃಷ್ಣಪ್ಪ ಅವರು ಅಧ್ಯಕ್ಷ ಸ್ಥಾನದ ಕುರ್ಚಿಯಲ್ಲಿ ಕುಳಿತರು. ದೇವೇಗೌಡ, ಕೃಷ್ಣಪ್ಪ ಸೇರಿದಂತೆ ಪಕ್ಷದ ಮುಖಂಡರು ಪೂಜಾ ಕಾರ್ಯಗಳಲ್ಲಿ ಪಾಲ್ಗೊಂಡಿದ್ದರು.

‘ದಲಿತರಿಗೆ ಸ್ಥಾನ’
ಬೆಂಗಳೂರು: ಪಕ್ಷದ ಎಲ್ಲ ಶಾಸಕರು ಒಪ್ಪಿಗೆ ನೀಡಿದರೆ ದಲಿತ ಸಮುದಾ­ಯಕ್ಕೆ ಸೇರಿದವರಿಗೆ ವಿರೋಧ ಪಕ್ಷದ ನಾಯಕ ಸ್ಥಾನ ಬಿಟ್ಟು­ಕೊಡುವುದಾಗಿ ವಿಧಾನ­ಸಭೆಯ ವಿರೋಧ ಪಕ್ಷದ ನಾಯಕ ಎಚ್‌.­ಡಿ.­ಕುಮಾರಸ್ವಾಮಿ ತಿಳಿಸಿದರು.

1978ರಲ್ಲಿ ಎಚ್‌.ಡಿ.ದೇವೇಗೌಡ ನೇತೃತ್ವದಲ್ಲಿ 60 ಜನ ಶಾಸಕರು ಆಯ್ಕೆಯಾಗಿದ್ದರು. ಆದರೆ, ಐದು ವರ್ಷದ ಅವಧಿ ಮುಗಿಯುವ ವೇಳೆಗೆ ಕೇವಲ 12 ಜನ ಶಾಸಕರು ಉಳಿದಿದ್ದರು. ಆ ನಂತರ ನಡೆದ (1983) ಚುನಾವಣೆಯಲ್ಲಿ ಪಕ್ಷ ಅಧಿಕಾರಕ್ಕೆ ಬಂತು. ಹಾಗಾಗಿ ಯಾರೂ ಅಧೀರರಾಗಬಾರದು ಎಂದು ಕಿವಿ ಮಾತು ಹೇಳಿದರು.

ಎಚ್‌.ಡಿ.ರೇವಣ್ಣ ನೇತೃತ್ವದಲ್ಲಿ ಕೆಲವು ಶಾಸಕರು ಕಾಂಗ್ರೆಸ್‌ ಸೇರ­ಲಿದ್ದಾರೆ ಎಂದು ಕಾಂಗ್ರೆಸ್‌ನ ಡಿ.ಕೆ.­ಶಿವಕುಮಾರ್‌ ನೀಡಿರುವ ಹೇಳಿಕೆ­ಯನ್ನು ಕುಮಾರಸ್ವಾಮಿ ತಮ್ಮದೇ ಆದ ರೀತಿಯಲ್ಲಿ ವ್ಯಾಖ್ಯಾನಿಸಿದರು.

ಸಿದ್ದರಾಮಯ್ಯ ಅವರನ್ನು ಮುಖ್ಯ­ಮಂತ್ರಿ ಸ್ಥಾನದಿಂದ ತೆಗೆ­ಯುವ ಸಂದರ್ಭ ಬರಬಹುದು. ಆಗ ಸಿದ್ದರಾಮಯ್ಯ ಅವರಿಗೆ ಸಂಖ್ಯಾಬಲದ ಕೊರತೆ ಎದುರಾ­ಗಲಿದೆ. ಆ ಸಂದರ್ಭ­ದಲ್ಲಿ ಬೆಂಬಲ­ಕ್ಕಾಗಿ ರೇವಣ್ಣ ಅವರನ್ನು ರಾಜ­ಭವನಕ್ಕೆ ಕರೆದುಕೊಂಡು ಹೋಗಬ­ಹುದು. ಯಾವುದಕ್ಕೂ ಎಚ್ಚರಿಕೆ­ಯಿಂದ ಇರಬೇಕು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT