ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬಿಜೆಪಿ–ಕಾಂಗ್ರೆಸ್ ಒಂದೇ ನಾಣ್ಯದ ಮುಖಗಳು’

Last Updated 25 ಸೆಪ್ಟೆಂಬರ್ 2013, 7:02 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಜಾತ್ಯತೀತ ನಿಲುವು, ಬಂಡವಾಳಶಾಹಿ ಸಿದ್ಧಾಂತ ಇತ್ಯಾದಿ­ಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ಒಂದೇ ನಾಣ್ಯದ ಎರಡು ಮುಖಗಳಂತೆ ವರ್ತಿಸುವ ಪಕ್ಷಗಳು. ಒಬ್ಬರನ್ನೊಬ್ಬರು ಬೈಯುತ್ತ ತಮ್ಮ ಬೇಳೆ ಬೇಯಿಸಿ­ಕೊಳ್ಳುತ್ತಿರುವ ಈ ಎರಡು ಪಕ್ಷಗಳಿಗೆ ಪರ್ಯಾಯ ರಾಜಕೀಯ ಶಕ್ತಿ ಸೃಷ್ಟಿ­ಯಾಗಬೇಕು’ ಎಂದು  ಸಿಪಿಐ ರಾಷ್ಟ್ರೀಯ ಮಂಡಳಿ ಸದಸ್ಯ ಡಾ. ಸಿದ್ದನ­ಗೌಡ ಪಾಟೀಲ ಆಶಿಸಿದರು.

ಅಕ್ಟೋಬರ್‌ ಎಂಟರಂದು ಬೆಂಗ­ಳೂರಿ­ನಲ್ಲಿ ನಡೆಯಲಿರುವ ಎಡಪಕ್ಷಗಳ ರಾಲಿ ಅಂಗವಾಗಿ ಭಾರತೀಯ ಕಮ್ಯುನಿಸ್ಟ್‌ ಪಕ್ಷದ (ಮಾರ್ಕ್ಸ್‌ವಾದಿ) ಜಿಲ್ಲಾ ಸಂಘಟನಾ ಸಮಿತಿ ಮತ್ತು ಭಾರತ ಕಮ್ಯುನಿಸ್ಟ್‌ ಪಕ್ಷದ ಜಿಲ್ಲಾ ಮಂಡಳಿ ನಗರದ ಮುನ್ಸಿಪಲ್ ಎಂಪ್ಲಾಯಿಸ್‌ ಹಾಲ್‌ನಲ್ಲಿ ಮಂಗಳ­ವಾರ ಹಮ್ಮಿಕೊಂಡಿದ್ದ ಎಡಪಕ್ಷಗಳ ಜಿಲ್ಲಾ ಮಟ್ಟದ ರಾಜಕೀಯ ಸಮಾವೇಶ ಉದ್ಘಾಟಿಸಿದ ಅವರು ಮಾತನಾಡಿದರು.

‘ದೇಶದ ಅಭಿವೃದ್ಧಿ ವಿಷಯದಲ್ಲಿ ಯಾವುದೇ ವ್ಯಕ್ತಿ ಅಥವಾ ಪಕ್ಷ ಮುಖ್ಯವಾಗಬಾರದು. ಸರಿಯಾದ ರಾಜಕೀಯ ನೀತಿಗಳೇ ಇಂದಿನ ಅಗತ್ಯ. ರಾಹುಲ್‌ ಗಾಂಧಿ ಮತ್ತು ನರೇಂದ್ರ ಮೋದಿ ಅವರನ್ನು ಬಿಂಬಿಸುತ್ತಿರುವ ಕಾಂಗ್ರೆಸ್‌ ಮತ್ತು ಬಿಜೆಪಿ ಪರಸ್ಪರ ದೂರುತ್ತಾ ಜನರನ್ನು ತಪ್ಪು ದಾರಿಗೆ ಕೊಂಡೊಯ್ಯುತ್ತಿವೆ. ಆದರೆ ದೇಶಕ್ಕೆ ಒದಗಿರುವ ಸಮಸ್ಯೆಗಳನ್ನು ಪರಿಹರಿಸು­ವವರು ಯಾರು ಎಂಬ ಪ್ರಶ್ನೆಗೆ ಉತ್ತರ ಯಾರೂ ನೀಡುತ್ತಿಲ್ಲ’ ಎಂದು ಅವರು ಹೇಳಿದರು.

‘ದೇಶದ ಸದ್ಯದ ಸ್ಥಿತಿಗತಿಯ ಹಿನ್ನೆಲೆಯಲ್ಲಿ ಎಡಪಕ್ಷಗಳು 10 ಅಂಶಗಳ ಪರ್ಯಾಯ ರಾಜಕೀಯ ಧೋರಣೆಯನ್ನು ಜನರ ಮುಂದಿಟ್ಟಿವೆ. ಇದನ್ನು ಜಾರಿಗೆ ತರಲು ಸಾಧ್ಯವಾದರೆ ಸಮಸ್ಯೆಗಳು ಪರಿಹಾರವಾಗಬಹುದು. ಅದು ಯುಪಿಎ ಮತ್ತು ಎನ್‌ಡಿಎಗೆ ಪರ್ಯಾಯ ಶಕ್ತಿಯೊಂದನ್ನು ಬೆಳೆಸಲು ನೆರವಾಗಬಹುದು’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

‘ಶ್ರೀಮಂತರಿಗೆ ಅನುಕೂಲ ಮಾಡಿಕೊಡುವ ಪಕ್ಷವಾದ ಕಾಂಗ್ರೆಸ್‌ ಭ್ರಷ್ಟಾಚಾರದಲ್ಲಿ ದಾಖಲೆಯನ್ನೇ ಮುರಿದಿದೆ. ಇದನ್ನು ವಿರೋಧಿಸಿ ಮಾತ­ನಾಡಲು ಬಿಜೆಪಿಗೆ ಸಾಧ್ಯವಾಗಲಿಲ್ಲ. ಯಾಕೆಂದರೆ ಆ ಪಕ್ಷದಲ್ಲೂ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ. ಪಕ್ಷದ ಅಧ್ಯಕ್ಷ­ರಾಗಿದ್ದ ಬಂಗಾರು ಲಕ್ಷ್ಮಣ ಹಾಗೂ ನಿತಿನ್‌ ಗಡ್ಕರಿ ಕೂಡ ಭ್ರಷ್ಟಾಚಾರಿ­ಗಳಾಗಿದ್ದರು.

ರಾಜ್ಯದಲ್ಲೂ ಬಿಜೆಪಿ ಮುಖಂಡರು ಸಾಲುಗಟ್ಟಿ ಜೈಲಿಗೆ ಹೋಗುತ್ತಿದ್ದಾರೆ. ಜಾತ್ಯತೀತವಾದದ ಹೆಸರಿನಲ್ಲಿ ಕಾಂಗ್ರೆಸ್‌ ಮತ್ತು ಧರ್ಮದ ಹೆಸರಿನಲ್ಲಿ ಬಿಜೆಪಿ ಜನರ ದಾರಿ ತಪ್ಪಿಸುತ್ತಿದೆ. ಪರಸ್ಪರ ದೂರುವುದಕ್ಕಾಗಿ ಈ ಎರಡು ಪಕ್ಷಗಳಿಗೆ ವಿರೋಧಿಗಳ ನೀತಿ ಅಗತ್ಯ ಎಂಬ ಸ್ಥಿತಿ ಬಂದಿದೆ.

ಹೀಗಾಗಿ ಇದೊಂದು ದೊಡ್ಡ ನಾಟಕ’ ಎಂದು ಸಿದ್ದನಗೌಡ ಪಾಟೀಲ ಹೇಳಿದರು.
‘ಭೂಸುಧಾರಣೆ ನೀತಿಯನ್ನು ಕಂಡ ನಾವು ಇಂದು ಭೂ ಕಬಳಿಕೆಯನ್ನು ನೋಡುತ್ತಿದ್ದೇವೆ. ಪೋಸ್ಕೋದಂಥ ಕಂಪೆನಿಗೆ ಭೂಮಿ ಮಾರಲು ಮುಂದಾದ ಬಿಜೆಪಿಯವರು ಮುಂದೊಂದು ದಿನ ಕಂಪೆನಿ ಕೃಷಿ ಹೆಸರಿನಲ್ಲಿ ರೈತರನ್ನು ಜಮೀನಿನಿಂದ ಓಡಿಸಲು ಮುಂದಾಗುವರು. ಇಂಥ ಕಪಟ ರಾಜಕಾರಣಿಗಳನ್ನು ನಂಬಬಾರದು. ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಸಂಸದರಾಗುವ ವ್ಯಕ್ತಿಗೆ ಓಟು ಹಾಕಬೇಡಿ, ರಾಜಕೀಯ ನೀತಿಯನ್ನು ಬೆಂಬಲಿಸಿ’ ಎಂದು ಅವರು ಸಲಹೆ ನೀಡಿದರು.

ಸಿಪಿಐ ಜಿಲ್ಲಾ ಘಟಕದ ಕಾರ್ಯ­ದರ್ಶಿ ಬಾಲಚಂದ್ರ ಗಂಗೂರ ಅಧ್ಯಕ್ಷತೆ ವಹಿಸಿದ್ದರು. ಸಿಪಿಐ (ಎಂ) ಜಿಲ್ಲಾ ಘಟಕದ ಕಾರ್ಯದರ್ಶಿಬಿ.ಎನ್‌. ಸೊಪ್ಪಿನ ಪ್ರಾಸ್ತಾವಿಕವಾಗಿ ಮಾತನಾಡಿ­ದರು.

ಸಿಪಿಐ (ಎಂ) ರಾಜ್ಯ ಕಾರ್ಯ­ದರ್ಶಿ ಮಂಡಳಿ ಸದಸ್ಯ ನಿತ್ಯಾನಂದ ಸ್ವಾಮಿ, ಜಿಲ್ಲಾ ಸಂಚಾಲನಾ ಸಮಿತಿ ಮುಖಂಡ ಆರ್‌.ಎಚ್‌.ಆಯಿ, ಸಿಪಿಐ ಜಿಲ್ಲಾ ಸಮಿತಿ ಖಜಾಂಚಿ ಶಿವಯೋಗಿ ಪ್ಯಾಟಿಶೆಟ್ಟರ, ಸಿಪಿಐ ಜಿಲ್ಲಾ ಸಮಿತಿ ಸದಸ್ಯೆ ಗೀತಾ ಕಟಗಿ, ಬಿ.ಎ.ಮುಧೋಳ, ಪ್ರಭಾಕರ ಬಿಡ್ನಾಳ ಮತ್ತಿತರರು ಉಪಸ್ಥಿತರಿದ್ದರು. ಮಹೇಶ ಪತ್ತಾರ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT