ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬಿಬಿಎಂಪಿ-–ಜಲಮಂಡಲಿ–ಬೆಸ್ಕಾಂ ಮಧ್ಯೆ ಸಮನ್ವಯ ಇಲ್ಲ’

Last Updated 5 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಸುವರ್ಣಸೌಧ (ಬೆಳಗಾವಿ): ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ, ಜಲಮಂಡಲಿ ಹಾಗೂ ಬೆಸ್ಕಾಂ ನಡುವೆ ಸಮನ್ವಯದ ಕೊರತೆ ಇದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಎಂ.ಆರ್.ದೊರೆಸ್ವಾಮಿ ಅವರ ಪ್ರಶ್ನೆಗೆ ವಿಧಾನ ಪರಿಷತ್ತಿನಲ್ಲಿ ಲಿಖಿತ ಉತ್ತರ ನೀಡಿರುವ ಅವರು, ಇದರಿಂದಾಗಿ ಸಾರ್ವಜನಿಕರಿಗೆ ತೊಂದರೆ­ಯಾಗು­ತ್ತಿ­ರುವುದು ಸರ್ಕಾರದ ಗಮನಕ್ಕೆ ಬಂದಿದೆ ಎಂದು ತಿಳಿಸಿದ್ದಾರೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಜಲಮಂಡಳಿ ಮತ್ತು ಬೆಸ್ಕಾಂ ಅಧಿಕಾರಿಗಳ ಸಮನ್ವಯ ಸಮಿತಿ ರಚಿಸಲಾಗಿದೆ. ನಿಯಮಿತವಾಗಿ ಸಭೆ ಸೇರಿ ಸಾರ್ವಜನಿಕರಿಗೆ ಉಂಟಾಗುತ್ತಿರುವ ಅನಾನು­ಕೂಲತೆಯ ಬಗ್ಗೆ ಚರ್ಚಿಸಿ ನಿರ್ಣಯ ಕೈಗೊಳ್ಳಲು ಸೂಚಿಸಲಾಗಿದೆ. ಅಗತ್ಯ ಮೂಲಭೂತ ಸೌಲಭ್ಯ ಒದಗಿಸಲೂ ತಿಳಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಬೆಂಗಳೂರು ನಗರದಲ್ಲಿ ಫ್ಲೆಕ್ಸ್ ಹಾವಳಿ ಹೆಚ್ಚಾಗಿರುವುದು ಸರ್ಕಾರದ ಗಮನಕ್ಕೆ ಬಂದಿದ್ದು ಅವುಗಳನ್ನು ತಡೆಗಟ್ಟಲು ಕ್ರಮ ಕೈಗೊಳ್ಳಲಾಗಿದೆ ಎಂದು ಬಿ.ರಾಮಕೃಷ್ಣ ಅವರ ಪ್ರಶ್ನೆಗೆ ಉತ್ತರಿಸಿದ್ದಾರೆ.

ಈಗಾಗಲೇ ನಗರದಲ್ಲಿ ಒಂದು ವರ್ಷದ ಅವಧಿ­ಯಲ್ಲಿ ೧೭,೦೬೭ ಫ್ಲೆಕ್ಸ್, ೩,೯೦೫ ಬಂಟಿಂಗ್ಸ್ ತೆರವುಗೊಳಿಸಲಾಗಿದ್ದು  ೫೫ ಚಲನ­ಚಿತ್ರಗಳ ಪೋಸ್ಟರ್ ಹಚ್ಚಿದವರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.

‘ಕೆಲಸ-– ಆಟ– ವಸತಿ’ ಯೋಜನೆ: ಬೆಂಗಳೂರು ನಗರದ ಜನಸಂಖ್ಯೆ, ಸಂಚಾರ ದಟ್ಟಣೆ ಕಡಿಮೆ ಮಾಡಲು ಬೆಂಗಳೂರು ನಗರ ಪ್ರದೇಶಾಭಿವೃದ್ಧಿ ಪ್ರಾಧಿ­ಕಾರ ‘ಕೆಲಸ-– ಆಟ-– ವಸತಿ’ ಯೋಜನೆ ಜಾರಿಗೊಳಿ­ಸಲು ಮುಂದಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.

ದೊರೆಸ್ವಾಮಿ ಅವರ ಪ್ರಶ್ನೆಗೆ ಲಿಖಿತ ಉತ್ತರ­ದಲ್ಲಿ ತಿಳಿಸಿದ್ದಾರೆ. ಈ ಯೋಜನೆಯಡಿ ಬಿಡದಿ, ರಾಮನಗರ, ಸಾತ­ನೂರು, ಸೋಲೂರು, ನಂದಗುಡಿಗಳನ್ನು ಉಪನಗರ­ಗಳಾಗಿ ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದ್ದಾರೆ.

ಶಿಕ್ಷಕರೇ ಇಲ್ಲ!: ಬಿಬಿಎಂಪಿ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಶೇ ೨೦ರಷ್ಟು ಮಾತ್ರ ಕಾಯಂ ಶಿಕ್ಷಕರಿದ್ದಾರೆ ಎನ್ನುವುದನ್ನು ಮುಖ್ಯಮಂತ್ರಿ ಒಪ್ಪಿಕೊಂಡಿದ್ದಾರೆ.

ಬಿಜೆಪಿಯ ರಾಮಚಂದ್ರ ಗೌಡ ಅವರ ಪ್ರಶ್ನೆಗೆ ಲಿಖಿತ ಉತ್ತರ ನೀಡಿದ ಅವರು, ೧೪೯ ಪ್ರಾಥಮಿಕ ಶಾಲಾ ಶಿಕ್ಷಕರ ಪೈಕಿ ೪೭ ಮಂದಿ ಕಾಯಂ ಶಿಕ್ಷಕರಿದ್ದಾರೆ. ೩೪೩ ಪ್ರೌಢಶಾಲಾ ಶಿಕ್ಷಕರ ಪೈಕಿ ೮೮ ಕಾಯಂ ಶಿಕ್ಷಕರಿದ್ದಾರೆ.

ಹೊರ ಗುತ್ತಿಗೆ ಆಧಾರದಲ್ಲಿ ಪ್ರಾಥಮಿಕ ಶಾಲೆಗಳಲ್ಲಿ ೪೭, ಪ್ರೌಢಶಾಲೆಗಳಲ್ಲಿ ೨೩೬ ಶಿಕ್ಷಕರಿದ್ದಾರೆ. ಕಂಪ್ಯೂಟರ್ ಶಿಕ್ಷಕರು ೨೮ ಮಂದಿ ಇದ್ದಾರೆ ಎಂದು ತಿಳಿಸಿದ್ದಾರೆ. ಈ ಶಾಲೆಗಳಿಗೆ ೧೯೯೯ರಿಂದ ಕಾಯಂ ಶಿಕ್ಷಕರನ್ನು ನೇಮಕ ಮಾಡಿಲ್ಲ. ಶಿಕ್ಷಕರ ಹುದ್ದೆಗೆ ಸಂಬಂಧಿಸಿದ ವೃಂದ ಮತ್ತು ನೇಮಕಾತಿ ನಿಯಮಗಳಿಗೆ ತಿದ್ದುಪಡಿ ತಂದು ಖಾಲಿ ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಎಂದು ಭರವಸೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT