ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬೆಂಕಿಯನ್ನೇ ಬೆಳಕೆಂಬ ವೈರುಧ್ಯ ಸ್ಥಿತಿ’

ರಾಮಕೃಷ್ಣ ಹೆಗಡೆ ಪ್ರಶಸ್ತಿ ಪ್ರದಾನ
Last Updated 12 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: ‘ದೇಶದಲ್ಲಿ ಬೆಂಕಿಯನ್ನೇ ಬೆಳಕು ಎಂಬ ಬಿಂಬಿಸುವ ವೈರುಧ್ಯದ ಸ್ಥಿತಿ ನಿರ್ಮಾಣವಾಗಿದೆ. ಜನರಲ್ಲಿ ವೈರು­ಧ್ಯದ ಕನಸುಗಳನ್ನು ಬಿತ್ತಿ ದೇಶವನ್ನು ಅಧೋಗತಿಗೆ ತಳ್ಳಲಾಗುತ್ತಿದೆ’ ಎಂದು ಕಿರುತೆರೆ ನಿರ್ದೇಶಕ ಟಿ.ಎನ್‌.­ಸೀತಾರಾಮ್‌ ಕಳವಳ ವ್ಯಕ್ತಪಡಿಸಿದರು.

ಭಾರತ ಯಾತ್ರಾ ಕೇಂದ್ರ, ರಾಜ­ಕೀಯ ಚಿಂತಕರ ವೇದಿಕೆ ಹಾಗೂ ಕರ್ನಾಟಕ ಚಿತ್ರಕಲಾ ಪರಿಷತ್‌ ಆಶ್ರಯ­ದಲ್ಲಿ ಚಿತ್ರಕಲಾ ಪರಿಷತ್‌ ಆವರಣದಲ್ಲಿ ಗುರುವಾರ ನಡೆದ ರಾಮಕೃಷ್ಣ ಹೆಗಡೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.

‘ದೇಶದ ಎರಡು ಪ್ರಮುಖ ರಾಜ­ಕೀಯ ಪಕ್ಷಗಳ ನಡುವೆ ಯಾವುದೇ ವ್ಯತ್ಯಾಸ ಇಲ್ಲ. ಎರಡೂ ಪಕ್ಷಗಳೂ ಅಮೆರಿಕದ ಅಡಿಯಾಳುಗಳು. ಈಗ ಮಧ್ಯಮ ವರ್ಗದ ಜನರ ಮನಸ್ಸನ್ನು ವಿಭಜಿಸಿ ಅಮೆರಿಕದ ಕನಸು ಬಿತ್ತುವ ಆಡಳಿತ ಇದೆ. ಜಾಗತೀಕರಣದ ಪ್ರಭಾವ­ದಿಂದ ನಮ್ಮ ಆಡಳಿತ ವ್ಯವಸ್ಥೆ ಮಧ್ಯಮ ವರ್ಗದ ಜನರನ್ನು ಎರಡು ಭಾಗವನ್ನಾಗಿ ಮಾಡಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ಬಡವರಿಗೆ ರೂ1ಕ್ಕೆ 1 ಕೆ.ಜಿ. ಅಕ್ಕಿ ನೀಡಿದರೆ ಕೂಲಿ ಕಾರ್ಮಿಕರು ಸಿಗುವು­ದಿಲ್ಲ ಎಂದು ಹುಯಿಲೆಬ್ಬಿಸಲಾಗುತ್ತದೆ. ಅಂಬಾನಿ 27 ಅಂತಸ್ತಿನ ಮನೆ ಕಟ್ಟಿದಾಗ ಗುಟ್ಟಾಗಿ ಶಹಬ್ಬಾಸ್‌ಗಿರಿ ನೀಡುತ್ತೇವೆ. ಇಂತಹ ವಿರೋಧಾ­ಭಾಸ-­ದಲ್ಲಿ ಬದು­ಕು­ತ್ತಿದ್ದೇವೆ. ಸಾಮಾನ್ಯ ಜನರು ಚುನಾ­ವಣೆಗೆ ಸ್ಪರ್ಧಿಸುವ ಸ್ಥಿತಿ ಇಲ್ಲ. ಬಡವ ಮತ್ತು ಶ್ರೀಮಂತರ ನಡುವೆ ಅಂತರ ಹೆಚ್ಚಾಗುತ್ತಿದೆ’ ಎಂದರು.

‘ದೇಶದಲ್ಲಿ ಕೃಷಿಕರಿಗೆ ಬಡ್ಡಿರಹಿತ ಸಾಲ ಸಿಗುತ್ತಿಲ್ಲ. ಕಾರು ಖರೀದಿಗೆ ಸೊನ್ನೆ ಬಡ್ಡಿಯಲ್ಲಿ ಸಾಲ ಸಿಗುತ್ತದೆ. ಕಾರು ಪೆಟ್ರೋಲ್‌ ಬಯಸುತ್ತದೆ. ಪೆಟ್ರೋಲ್‌ ಡಾಲರಿಗೆ ಉತ್ತೇಜನ ನೀಡುತ್ತದೆ. ಶಾಸಕರಿಗೆ ಆರ್ಥಿಕ ನೀತಿ ಗೊತ್ತಿಲ್ಲ. ದೇಶದ ಜನರ ಸಮಸ್ಯೆಗಳಿಗೆ ಮೊದಲ ಆದ್ಯತೆ ನೀಡುವ ನಾಯಕ ಇದ್ದರೆ ಡಾಲರ್‌ ಮೌಲ್ಯ ರೂ 66 ಆಗುತ್ತಿರಲಿಲ್ಲ’ ಎಂದು ವಿಶ್ಲೇಷಿಸಿದರು.

‘1999ರಲ್ಲಿ ಲೋಕಶಕ್ತಿ ಪಕ್ಷದಿಂದ ಚುನಾವಣೆಗೆ ಸ್ಪರ್ಧಿಸುವಂತೆ ಹೆಗಡೆ ಅವರು ವಿನಂತಿಸಿಕೊಂಡರು. ನಾನು ಒಪ್ಪಿರಲಿಲ್ಲ. ರಾಜಕೀಯಕ್ಕೆ ಸಾಂಸ್ಕೃತಿಕ ಸ್ಪರ್ಶ ನೀಡಲು ನಿಮ್ಮನ್ನು ಕಣಕ್ಕೆ ಇಳಿಸುತ್ತಿದ್ದೇನೆ ಎಂದು ಮನವೊಲಿಸಿ­ದ್ದರು. ಕಳೆದ ಚುನಾವಣೆಯಲ್ಲಿ ಸಾಹಿತಿಯೊಬ್ಬರನ್ನು ಕಣಕ್ಕೆ ಇಳಿಸುವಂತೆ ಪಕ್ಷವೊಂದರ ಪ್ರಮುಖರಲ್ಲಿ ವಿನಂತಿ­ಸಿದೆ. ಅವರಲ್ಲಿ ಹಣ ಇಲ್ಲ ಹಾಗೂ ಪ್ರಬಲ ಜಾತಿಗೆ ಸೇರಿದವರಲ್ಲ ಎಂಬ ಕಾರಣಕ್ಕೆ ನಿರಾಕರಿಸಿದರು’ ಎಂದರು.

ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಪ್ರಶಸ್ತಿ ಪ್ರದಾನ ಮಾಡಿ, ‘ಹೆಗಡೆ ಅವರು ನನ್ನ ಆತ್ಮೀಯ ಸ್ನೇಹಿತರು ಆಗಿದ್ದರು. ನಾವಿಬ್ಬರು ಒಂದೇ ರಾಜಕೀಯ ಪಕ್ಷದ ಚೌಕಟ್ಟಿಗೆ ಬರಲಿಲ್ಲ. ಚೌಕಟ್ಟಿಗೆ ಬರಲು ಸಾಧ್ಯವಾಗದ ರಾಜಕೀಯ ಪರಿಸ್ಥಿತಿ ಅಂದು ಇತ್ತು. 1969ರಲ್ಲಿ ಅವರು ಹಣಕಾಸು ಸಚಿವರಾಗಿದ್ದಾಗ ಕಾಂಗ್ರೆಸ್‌ ಸೇರುವಂತೆ ನನ್ನನ್ನು ಆಹ್ವಾನಿಸಿದ್ದರು. ಕಾಂಗ್ರೆಸ್ಸಿನಲ್ಲಿ ಸೈದ್ಧಾಂತಿಕ ಬದಲಾವಣೆ ಕಾಣುವ ತನಕ ಪಕ್ಷ ಸೇರುವುದಿಲ್ಲ ಎಂದು ನಿರಾಕರಿಸಿದ್ದೆ’ ಎಂದು ನೆನಪಿಸಿ­ಕೊಂಡರು.

ಹಿರಿಯ ಕವಿ ಡಾ.ಎಚ್‌.ಎಸ್‌. ಶಿವಪ್ರಕಾಶ್, ‘ಜನರ ದೈನಂದಿನ ಸಮಸ್ಯೆ, ನಿತ್ಯ ಜೀವನದ ಅನೇಕ ಸಮಸ್ಯೆ­ಗಳ ಬಗ್ಗೆ ಮನಸ್ಸು ಮಿಡಿಯುವಂತೆ ಸೀತಾರಾಮ್‌ ಅವರು ಧಾರಾವಾಹಿ ನಿರ್ಮಾಣ ಮಾಡುತ್ತಿದ್ದಾರೆ. ದೇಶದಲ್ಲಿ ಅವರಿಗೆ ಸಂವಾದಿಯಾದ ನಿರ್ದೇಶಕ ಇಲ್ಲ’ ಎಂದು ಬಣ್ಣಿಸಿದರು.
ಭಾರತ ಯಾತ್ರಾ ಕೇಂದ್ರದ ಅಧ್ಯಕ್ಷ ಬಿ.ಎಲ್‌.ಶಂಕರ್ ಅಧ್ಯಕ್ಷತೆ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT