ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬೆಂಗಳೂರು ಬ್ಲೂ’ ದ್ರಾಕ್ಷಿ ರೈತರಿಗೆ ಹುಳಿ

Last Updated 14 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ‘ಬೆಂಗಳೂರು ಬ್ಲೂ’ ತಳಿಯ ದ್ರಾಕ್ಷಿ ಬೆಲೆ ನೆಲಕಚ್ಚಿದ್ದು ತಾಲ್ಲೂಕಿನ ದ್ರಾಕ್ಷಿ ಬೆಳೆಗಾರರು ಕಂಗಾಲಾಗಿದ್ದಾರೆ. ಬೆಳೆ ಬೆಳೆಯಲು ಸುರಿದಿದ್ದ ಬಂಡವಾಳ ವಾಪಸಾಗುತ್ತದೆಯೋ ಇಲ್ಲವೋ ಎನ್ನುವ ಚಿಂತೆಯಲ್ಲಿದ್ದಾರೆ.
ಆಂಧ್ರದ ವಿಭಜನೆಯ ತೆಲಂಗಾಣ ಹೋರಾಟವು ತಾಲ್ಲೂಕಿನ ‘ಬೆಂಗಳೂರು ಬ್ಲೂ’ ದ್ರಾಕ್ಷಿ ಬೆಳೆಗಾರರ ಮೇಲೆ ಗಂಭೀರ ಪರಿಣಾಮವನ್ನೇ ಬೀರಿದೆ.

ನೆರೆಯ ಆಂಧ್ರಪ್ರದೇಶದ ಗ್ರಾಹಕರು  , ವೈನ್‌ ತಯಾರಕರು ಹಾಗೂ ಜ್ಯೂಸ್ ಸೆಂಟರ್‌ನವರು ಬ್ಲೂ ದ್ರಾಕ್ಷಿಯನ್ನು ಈ ಪ್ರದೇಶದಿಂದ ಯಥೇಚ್ಛವಾಗಿ ಖರೀದಿಸುತ್ತಿದ್ದರು. ಆದರೆ ಈ ಬಾರಿ ಆಂಧ್ರ ವಿಭಜನೆಯ ಹೋರಾಟದ ಫಲವಾಗಿ ದ್ರಾಕ್ಷಿ ಖರೀದಿಸಲು ಅಲ್ಲಿನ ಜನರು ಇತ್ತ ಸುಳಿಯುತ್ತಿಲ್ಲ. ಈ ತಳಿಗೆ ನಮ್ಮಲ್ಲಿ ಮಾರುಕಟ್ಟೆ ವ್ಯವಸ್ಥೆಯೂ ಇಲ್ಲ. ಹೀಗಾಗಿ ದ್ರಾಕ್ಷಿ ಬೆಳೆಗಾರರು ದಿಢೀರನೆ  ಎದುರಾದ ಸಂಕಷ್ಟಕ್ಕೆ ಉತ್ತರವಿಲ್ಲದೆ ಒದ್ದಾಡುತ್ತಿದ್ದಾರೆ. 

‘ದ್ರಾಕ್ಷಿ ಬೆಲೆ ಕುಸಿದಿದೆ. ದೂರ ಪ್ರದೇಶಗಳಿಗೆ ಮಾರಾಟ ಮಾಡಲು ಸಾಗಾಣಿಕೆಯ ವೆಚ್ಚ ಹೆಚ್ಚು. ಹೀಗಾಗಿ ಫಸಲನ್ನು ಕೀಳದೆ ತೋಟದಲ್ಲಿಯೇ ಬಿಟ್ಟಿದ್ದೇವೆ’ ಎಂದು ಅಳಲು ತೋಡಿಕೊಳ್ಳುತ್ತಾರೆ ಸ್ಥಳೀಯ ದ್ರಾಕ್ಷಿ ಬೆಳೆಗಾರ ಅಶೋಕ್.
‘ದ್ರಾಕ್ಷಿ ಬೆಲೆ ಕೆ.ಜಿ.ಗೆ  ೫ ರಿಂದ ೬ ರೂಪಾಯಿಗೆ ಇಳಿದಿದೆ.   ಬೆಳೆಯನ್ನು ಕೇಳುವವರೇ ಇಲ್ಲ. ಬೆಳೆದ ದ್ರಾಕ್ಷಿ ಯೆಲ್ಲಾ ಗಿಡದಲ್ಲಿಯೇ ಕೆಟ್ಟು ಹೋಗುತ್ತಿದೆ. ಬ್ಯಾಂಕ್‌ನಲ್ಲಿ ೫ ಲಕ್ಷ ರೂಪಾಯಿ ಸಾಲ ಮಾಡಿದ್ದೇನೆ. ಇಂತಹ ಪರಿಸ್ಥಿತಿಯಲ್ಲಿ ಬೆಳೆ ಸಾಲ ಹೇಗೆ ತೀರಿಸಬೇಕೋ ಗೊತ್ತಾಗುತ್ತಿಲ್ಲ’ ಎಂದು ಅವರು ತಮ್ಮ ಅಸಹಾಯಕತೆ ವ್ಯಕ್ತಪಡಿಸುತ್ತಾರೆ.

ಗುಂಡಸಂದ್ರ ಗ್ರಾಮದ ರೈತ ಕದರಯ್ಯ ಅವರದ್ದೂ ಇದೇ ಗೋಳು. ‘೨.೫ ಎಕರೆ ತೋಟದಲ್ಲಿ ಬೆಳೆದಿರುವ ದ್ರಾಕ್ಷಿಗೆ ಬೆಲೆ ಇಲ್ಲ. ಕೊಳವೆ ಬಾವಿಯಲ್ಲಿ ನೀರಿಲ್ಲದಿದ್ದರೂ ಬದಲಿ ವ್ಯವಸ್ಥೆ ಮಾಡಿ ಕಷ್ಟಪಟ್ಟು ದ್ರಾಕ್ಷಿ ಬೆಳೆದಿದ್ದೇನೆ. ಆದರೆ ಬೆಳೆಯನ್ನು ಮಾರಾಟ ಮಾಡಲು ಆಗುತ್ತಿಲ್ಲ. ಬ್ಯಾಂಕ್‌ನಲ್ಲಿ ಲಕ್ಷಾಂತರ ರೂಪಾಯಿ ಸಾಲ ಇದೆ. ಸಾಲ ತೀರಿಸುವುದು ಹೇಗೆ ಎಂಬುದು ತಿಳಿಯುತ್ತಿಲ್ಲ’ ಎನ್ನುತ್ತಾರೆ ಅವರು. 

ಸರ್ಕಾರ ಹಾಪ್‌ಕಾಮ್ಸ್ ಮೂಲಕ ‘ಬೆಂಗಳೂರು ಬ್ಲೂ’ ದ್ರಾಕ್ಷಿ ತಳಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಿ ರೈತರಿಗೆ ನೆರವಿಗೆ ಮುಂದಾಗಬೇಕು ಎಂದು ತಾಲ್ಲೂಕಿನ ದ್ರಾಕ್ಷಿ ಬೆಳೆಗಾರರು ಒತ್ತಾಯಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT