ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬೆಂಬಲಿಸಿದವರು ಜೈಲಿಗೆ ಬರಲಿಲ್ಲ!’

Last Updated 12 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: ‘ಚಿತ್ರನಟ ಸಂಜಯ್ ದತ್‌ ಅವರು ಜೈಲು ಶಿಕ್ಷೆಗೆ ಗುರಿಯಾದಾಗ, ಕೆಲವು ನಟ–ನಟಿಯರು ಅವರಲ್ಲಿಗೆ ತೆರಳಿ, ನಿಮ್ಮ ಜೊತೆ ನಾವಿದ್ದೇವೆ ಎಂಬ ಮಾತು ಹೇಳಿದ್ದರು. ಆದರೆ ದತ್‌ ಜೊತೆ ಅವರಲ್ಲಿ ಯಾರಾದರೂ ಜೈಲಿಗೆ ಹೋದರಾ?’ ಎಂದು ಹೈಕೋರ್ಟ್ ಗುರುವಾರ ಮೌಖಿಕವಾಗಿ ಪ್ರಶ್ನಿಸಿದೆ.

ನಿವೃತ್ತ ಐಎಎಸ್‌ ಅಧಿಕಾರಿ ಎನ್‌. ವಿಶ್ವನಾಥನ್‌ ಸಲ್ಲಿಸಿರುವ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎನ್. ಆನಂದ ಅವರು, ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದ ಪ್ರಕರಣದಲ್ಲಿ ಈಗ ನ್ಯಾಯಾಂಗ ವಶದಲ್ಲಿರುವ ಐಎಎಸ್‌ ಅಧಿಕಾರಿ ಯೊಬ್ಬರ ಪರ ರಾಜ್ಯ ಐಎಎಸ್‌ ಅಧಿಕಾರಿಗಳ ಸಂಘ ಬೆಂಬಲ ಸೂಚಿಸಿರುವುದಕ್ಕೆ ಅಚ್ಚರಿ ವ್ಯಕ್ತ­ಪಡಿಸಿದರು.

‘ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದ ಪ್ರಕರಣ­ದಲ್ಲಿ ಐಎಎಸ್‌ ಅಧಿಕಾರಿ­ಯೊಬ್ಬರು ಸಿಬಿಐ ಪೊಲೀಸರಿಂದ ಬಂಧನಕ್ಕೆ ಒಳಗಾಗಿದ್ದಾರೆ. ನಂತರ ಅವರು  ಜಾಮೀನು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುತ್ತಾರೆ. ಈ ಸಂದರ್ಭದಲ್ಲಿ ತುರ್ತು ಸಭೆ ನಡೆಸುವ ಸಂಘ, ಆ ಅಧಿಕಾರಿಗೆ ಬೆಂಬಲ ಸೂಚಿಸುತ್ತದೆ. ಅಧಿಕಾರಿ ಪ್ರಾಮಾಣಿಕ ವ್ಯಕ್ತಿ ಎಂಬ ನಿರ್ಣಯವನ್ನೂ ಸಂಘ ಕೈಗೊಳ್ಳುತ್ತದೆ.

ಪ್ರಕರಣವೊಂದು ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿರುವ ವೇಳೆ, ಸಂಘ ಈ ರೀತಿ ಅಭಿಪ್ರಾಯ ವ್ಯಕ್ತಪಡಿಸುವುದು ಸರಿಯೇ?’ ಎಂದು ನ್ಯಾಯಮೂರ್ತಿಗಳು ಮೌಖಿಕವಾಗಿ ಪ್ರಶ್ನಿಸಿದರು. ನಿವೃತ್ತ ಐಎಎಸ್ ಅಧಿಕಾರಿ ಶಮೀಂ ಬಾನು ಅವರನ್ನು ಬೆಂಬಲಿಸಲು ಸಂಘ ನಿರ್ಣಯ ಕೈಗೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಬಾನು ಜಾಮೀನು ಅರ್ಜಿ : ಇಂದು ವಿಚಾರಣೆ
ಬೆಂಗಳೂರು
: ಡೆಕ್ಕನ್‌ ಮೈನಿಂಗ್‌ ಸಿಂಡಿಕೇಟ್ ನಡೆಸಿದ ಅಕ್ರಮ ಗಣಿಗಾರಿಕೆಯಲ್ಲಿ ಶಾಮೀಲಾದ ಆರೋಪ ಎದುರಿಸುತ್ತಿರುವ ನಿವೃತ್ತ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಶಮೀಂ ಬಾನು ಅವರ ಜಾಮೀನು ಅರ್ಜಿಯ ವಿಚಾರಣೆಯನ್ನು ಸಿಬಿಐ ವಿಶೇಷ ನ್ಯಾಯಾಲಯ ಶುಕ್ರವಾರಕ್ಕೆ ಮುಂದೂಡಿದೆ.

ಶಮೀಂ ಅವರ ಜಾಮೀನು ಅರ್ಜಿಗೆ ಸಿಬಿಐ ವಕೀಲರು ಮಂಗಳವಾರ ಆಕ್ಷೇಪಣೆ ಸಲ್ಲಿಸಿದ್ದರು. ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ವಿ.ಶ್ರೀಶಾನಂದ ಅವರು ಗುರುವಾರ ಅರ್ಜಿಯ ವಿಚಾರಣೆ ನಡೆಸಿದರು. ಡೆಕ್ಕನ್‌ ಮೈನಿಂಗ್‌ ಸಿಂಡಿಕೇಟ್‌ ಪ್ರಕರಣದಲ್ಲಿ ಶಮೀಂ ಬಾನು ಅವರು ತಪ್ಪು ಮಾಡಿಲ್ಲ. ಈ ಪ್ರಕರಣದಲ್ಲಿ ಜಾಮೀನು ಪಡೆಯಲು ಅವರು ಅರ್ಹರಾಗಿದ್ದಾರೆ ಎಂದು ಅರ್ಜಿದಾರರ ಪರ ವಕೀಲರು ವಾದಿಸಿದರು. ಅರ್ಜಿದಾರರ ಪರ ವಾದ ಆಲಿಸಿದ ನ್ಯಾಯಾಧೀಶರು ಪ್ರಕರಣದ ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT