ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬೆಳೆಗಾರರ ಕಂಪೆನಿ ಸ್ಥಾಪನೆಗೆ ಮುಂದಾಗಿ’

Last Updated 7 ಡಿಸೆಂಬರ್ 2013, 9:11 IST
ಅಕ್ಷರ ಗಾತ್ರ

ಶಿರಸಿ: ಮಧ್ಯವರ್ತಿಗಳ ಹಾವಳಿಯಿಂದ ಮುಕ್ತ­ರಾಗಿ ಶ್ರಮಕ್ಕೆ ತಕ್ಕ ಪ್ರತಿಫಲ ಪಡೆಯಲು ರೈತರು ಬೆಳೆಗಾರರ ಕಂಪೆನಿ ಸ್ಥಾಪಿಸಿಕೊಂಡು ಕಾರ್ಯ ಚಟುವಟಿಕೆ ನಡೆಸಬೇಕು ಎಂದು ಬಾಗಲಕೋಟ ತೋಟಗಾರಿಕಾ ವಿಶ್ವವಿದ್ಯಾಲಯದ ಕುಲಪತಿ ಡಾ.ಎಸ್‌.ಬಿ.ದಂಡಿನ್‌ ಕರೆ ನೀಡಿದರು.

ನಗರದ ಹೊರವಲಯದಲ್ಲಿರುವ ತೆರಕನಳ್ಳಿ ತೋಟಗಾರಿಕಾ ಸಂಶೋಧನಾ ಕೇಂದ್ರದಲ್ಲಿ ಶುಕ್ರವಾರ ಆಯೋಜಿಸಿದ್ದ ಕಾಳುಮೆಣಸು ಬೆಳೆ ಅಭಿವೃದ್ಧಿ ಕುರಿತು ಬೆಳೆಗಾರರೊಂದಿಗೆ ಚರ್ಚೆ ಹಾಗೂ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ರೈತರು ಬೆಳೆದ ಬೆಳೆಗಳಿಗೆ ಉತ್ತಮ ಬೆಲೆ ಸಿಗುತ್ತಿಲ್ಲ. ರೈತರಿಗೆ ಸಿಗುವ ಲಾಭ ಮಧ್ಯವರ್ತಿಗಳ ಪಾಲಾಗುತ್ತಿದೆ. ಇದನ್ನು ತಪ್ಪಿಸಲು ಬೆಳೆಗಾರರೆಲ್ಲ ಸೇರಿ ಉತ್ಪಾದಕರ ಕಂಪನಿ ಪ್ರಾರಂಭಿಸಬೇಕು. ರೈತರೇ ನಡೆಸುವ ಕಂಪೆನಿಗೆ ಸರ್ಕಾರದ ಹಂಗಿರುವುದಿಲ್ಲ ಎಂದರು.

1963ರ ಪ್ರೊಡ್ಯೂಸರ್ಸ್ ಕಂಪೆನಿ ಕಾನೂನಿಗೆ ಕೇಂದ್ರ ಸರ್ಕಾರ 2002ರಲ್ಲಿ ತಿದ್ದುಪಡಿ ತಂದಿದೆ. ಒಂದು ಕಂಪೆನಿ ಪ್ರಾರಂಭಿಸಲು ಸರ್ಕಾರದಿಂದ ₨ 34 ಲಕ್ಷ ಸಹಾಯಧನ ದೊರೆಯುತ್ತದೆ. ಈ ಭಾಗದಲ್ಲಿ ಅಡಿಕೆ, ಕಾಳುಮೆಣಸು, ಅನಾನಸ್‌ ಬೆಳೆಗಾರರ ಕಂಪನಿ ಸ್ಥಾಪನೆಗೆ ಅವಕಾಶವಿದೆ. ಉತ್ಪಾದಕರ ಸಹಕಾರದಲ್ಲಿ ಕಂಪೆನಿ ಮೂಲಕ ವ್ಯವಹಾರ ನಡೆಸುವುದರಿಂದ ರೈತರ ನಡುವೆ ಪರಸ್ಪರ ವಿಶ್ವಾಸ, ಒಗ್ಗಟ್ಟು ಬೆಳೆಯುತ್ತದೆ. ತಮಿಳುನಾಡಿನಲ್ಲಿ ಪ್ರಸ್ತುತ 600ಕ್ಕೂ ಹೆಚ್ಚು ಬೆಳೆಗಾರರ ಕಂಪನಿಗಳು ಯಶಸ್ವಿ ಕಾರ್ಯ ನಿರ್ವಹಣೆ ಮಾಡುತ್ತಿವೆ ಎಂದರು.

ಭೂಮಿ, ನೀರು, ಗಾಳಿ ಸೇರಿದಂತೆ ಪಂಚಮಹಾಭೂತಗಳನ್ನು ದುರುಪಯೋಗ ಮಾಡಿಕೊಂಡ ಪರಿಣಾಮ ವಾತಾವರಣದಲ್ಲಿ ವೈಪರೀತ್ಯ ಉಂಟಾಗಿದೆ. ಅಭಿವೃದ್ಧಿಯ ವೇಗದಲ್ಲಿ ಅನಾಹುತಗಳು ಉಂಟಾಗುತ್ತಿವೆ. ಶುದ್ಧ ಆಮ್ಲಜನಕ ಪಡೆಯಲು ಕೃತಕ ಕೇಂದ್ರಗಳಿಗೆ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಇಂಥ ವಿಷಮ ಪರಿಸ್ಥಿತಿಯಲ್ಲಿ ರೈತರು ಸೃಷ್ಟಿಯ ಜೊತೆಗೆ ಸಂಘರ್ಷ ಮಾಡಿಕೊಳ್ಳದೆ ಸ್ನೇಹದಿಂದ ಬದುಕಬೇಕು ಎಂದರು.

ಸಹ ಸಂಶೋಧನೆ ಮತ್ತು ವಿಸ್ತರಣಾ ನಿರ್ದೇಶಕ ಎಸ್‌.ಐ.ಅಥಣಿ ಮಾತನಾಡಿ, ವಿಯಟ್ನಾಂ, ಇಂಡೋನೇಶಿಯದಂತಹ ದೇಶಗಳಲ್ಲಿ ಕಾಳುಮೆಣಸಿನ ಎಕರೆವಾರು ಉತ್ಪಾದನೆ ಹೆಚ್ಚಿದ್ದು, ಅಲ್ಲಿನ ತಾಂತ್ರಿಕತೆ ಅಳವಡಿಸಿಕೊಂಡು ಉತ್ಪಾದನೆ ಹೆಚ್ಚಿಸುವ ಕುರಿತಂತೆ ವಿಶ್ವವಿದ್ಯಾಲಯ ಮಟ್ಟದಲ್ಲಿ ಸಂಶೋಧನೆಗಳು ನಡೆಯುತ್ತವೆ ಎಂದರು.

ವಿಶ್ವವಿದ್ಯಾಲಯದ ಸಂಶೋಧನಾ ನಿರ್ದೇಶಕ ಡಾ. ವೆಂಕಟೇಶ್‌ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯ್ತಿ ಸದಸ್ಯ ಚಂದ್ರಪ್ಪ ಚೆನ್ನಯ್ಯ, ತೋಟ­ಗಾರಿಕಾ ಕಾಲೇಜಿನ ಡೀನ್ ಡಾ. ಬಸವರಾಜ್‌, ಸಹ ಸಂಶೋಧನಾ ಮತ್ತು ವಿಸ್ತರಣಾ ನಿರ್ದೇಶಕ ಡಾ. ಎಸ್.ಐ. ಅಥಣಿ, ಪ್ರಗತಿಪರ ಕೃಷಿಕರಾದ ಪೂರ್ಣಾನಂದ ಭಟ್ಟ, ಅಬ್ದುಲ್ ರವೂಫ್ ಶೇಖ್, ತೋಟಗಾರಿಕೆ ಇಲಾಖೆ ಅಧಿಕಾರಿ ಗಣೇಶ ಹೆಗಡೆ, ಕೃಷಿ ವಿಜ್ಞಾನ ಕೇಂದ್ರದ ರೂಪಾ ಪಾಟೀಲ್ ಉಪಸ್ಥಿತರಿದ್ದರು. ತೋಟಗಾರಿಕೆ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ. ನಾಗೇಶ ನಾಯ್ಕ ಸ್ವಾಗತಿಸಿದರು. ವಿಷಯ ತಜ್ಞರಾದ ಡಾ.ಟಿ.ಬಿ. ಅಳ್ಳೊಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT