ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬೇಡವಾಗಿದ್ದರೆ ‘ಕತ್ತಿ’ ಇನ್ನೆಲ್ಲಿಗಾದರೂ ಹೋಗಲಿ’

Last Updated 4 ಡಿಸೆಂಬರ್ 2013, 7:48 IST
ಅಕ್ಷರ ಗಾತ್ರ

ಧಾರವಾಡ: ‘ಮಾಜಿ ಸಚಿವ ಉಮೇಶ ಕತ್ತಿ ಪ್ರತ್ಯೇಕ ರಾಜ್ಯದ ಬಗ್ಗೆ ಮಾತನಾಡುತ್ತಿದ್ದಾರೆ. ಕರ್ನಾಟಕ ಒಂದುಗೂಡಿ ಇರುವುದು ಅವರಿಗೆ ಬೇಡವಾಗಿದ್ದರೆ ಅವರೇ ಬೇರೆ ಕಡೆ ಹೋಗಲಿ’ ಎಂದು ಹಿರಿಯ ಪತ್ರಕರ್ತ ಡಾ.ಪಾಟೀಲ ಪುಟ್ಟಪ್ಪ ಕಟುವಾಗಿ ಟೀಕಿಸಿದ್ದಾರೆ.

ಈ ಕುರಿತು ಮಂಗಳವಾರ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ‘ಕನ್ನಡ ಮಾತನಾಡುವ ಜನರು ಒಂದು ರಾಜ್ಯದಲ್ಲಿ ಸೇರಿದ್ದಾರೆ. ಕರ್ನಾಟಕದ ಏಕೀಕರಣ ಸಂದರ್ಭದಲ್ಲಿ ಭಾಗವಹಿಸದ ಕತ್ತಿ ಅವರು ಇಂದು ಪ್ರತ್ಯೇಕ ರಾಜ್ಯದ ಬಗ್ಗೆ ಮಾತನಾಡುತ್ತಿದ್ದಾರೆ. ಪ್ರತ್ಯೇಕ ರಾಜ್ಯದ ಬಗ್ಗೆ ಮಾತನಾಡಿರುವ ಕತ್ತಿಯವರ ಕಾಲ್ತುಳಿತಕ್ಕೆ ಸಿಕ್ಕು ಈ ಕರ್ನಾಟಕ ಹೋಳಾಗುವುದಕ್ಕೆ ನಾವು ಬಿಡುವುದಿಲ್ಲ. ಕರ್ನಾಟಕವನ್ನು ನಾವು ಒಂದಾಗಿ ಉಳಿಸಿಕೊಳ್ಳತ್ತೇವೆ’ ಎಂದು ತಿಳಿಸಿದ್ದಾರೆ.

‘ಉಮೇಶ ಕತ್ತಿ ಅವರು ಅಭಿವೃದ್ಧಿ ಬಗ್ಗೆ ಮಾತನಾಡುತ್ತಿದ್ದಾರೆ. ತಾವು ಮಂತ್ರಿಯಾಗಿದ್ದ ಸಂದಭರ್ದಲ್ಲಿ ತಮ್ಮ ಬ್ಯಾಂಕ್‌ ಖಾತೆಯನ್ನು ಅಭಿವೃದ್ಧಿಪಡಿಸಿಕೊಂಡರೇ ವಿನಾ ಉಳಿದ ಯಾವ ಅಭಿವೃದ್ಧಿ ಕಾರ್ಯಗಳನ್ನೂ ಅವರು ಕೈಗೆತ್ತಿಕೊಳ್ಳಲಿಲ್ಲ. ಕತ್ತಿ ಅವರು ಕನ್ನಡಿಗರಾಗಿ ಬೆಳಗಾವಿಯಲ್ಲಿ ಕನ್ನಡಕ್ಕೋಸ್ಕರ ಏನು ಮಾಡಿದ್ದಾರೆ? ಕನ್ನಡಕ್ಕೆ ಆಘಾತ ಉಂಟು ಮಾಡುವ ಘಟನೆಗಳು ಬೆಳಗಾವಿಯಲ್ಲಿ ನಡೆದಾಗಲೂ ಅವುಗಳ ವಿರುದ್ಧ ಕತ್ತಿ ಧ್ವನಿ ಎತ್ತಲಿಲ್ಲ. ಕನ್ನಡ ನಾಡಿನ ಏಕೀಕರಣಕ್ಕೋಸ್ಕರ ಕೆಲಸವನ್ನು  ಮಾಡದೇ ಇರುವ ಕತ್ತಿ ಇದೀಗ ರಾಜ್ಯವನ್ನು ವಿಭಜಿಸಿ ಎರಡು ಕರ್ನಾಟಕಗಳನ್ನು ಮಾಡಬೇಕೆಂದು ಉಡಾಫೆಯಿಂದ ಹೇಳತೊಡಗಿದ್ದಾರೆ. ಅದು, ಸಂಕೇಶ್ವರದ ಹಿರಣ್ಯಕೇಶಿ ಸಕ್ಕರೆ ಕಾರ್ಖಾನೆಯನ್ನು ಹಾಳು ಮಾಡುವಷ್ಟು ಸುಲಭವೆಂದು ತಿಳಿದಿದ್ದಾರೆಯೇ? ಎಂದು ಪಾಪು ಪ್ರಶ್ನಿಸಿದ್ದಾರೆ.

‘ಕರ್ನಾಟಕವೆಂದು ಹೇಳುವ ಪದವನ್ನು ಈ ಕತ್ತಿಯವರು ಎಂದು ಕಲಿತರು? ಕರ್ನಾಟಕ ಪ್ರದೇಶಗಳನ್ನು ಒಂದುಗೂಡಿಸುವ ಕೆಲಸದಲ್ಲಿ ಇವರು ಎಂದಾದರೂ ಭಾಗವಹಿಸಿದ್ದಾರೆಯೇ ಪ್ರಶ್ರಿಸಿದ್ದಾರೆ.

ಕತ್ತಿ ಅವರ ಬೆಲ್ಲದ ಬಾಗೇವಾಡಿ ಮನೆಯಲ್ಲಿ ಅದ್ಭುತ ಸಾಮರ್ಥ್ಯದ ಪದ್ಮಾವತಿ ಎಂಬ ಮಹಾನ್ ಮಹಿಳೆಯೊಬ್ಬಳು ಇದ್ದರು. ಅಂಥ ಮಹಿಳೆಯನ್ನು 20ನೇ ಶತಮಾನದ ಕರ್ನಾಟಕ ಇದೂವೆರೆಗೂ ಕಂಡಿಲ್ಲ. ಇಂತಹ ಮಹಿಳೆಯ ಬಗ್ಗೆ ಕತ್ತಿ ಅವರಿಗೂ ಗೊತ್ತಿಲ್ಲ. ತಮ್ಮ  ಮನೆಯಲ್ಲಿ ಇಂದಿನ ಕತ್ತಿಯಂಥ ಮನೆಮುರುಕ ವ್ಯಕ್ತಿಯೊಬ್ಬ ಜನ್ಮವೆತ್ತಿ ಬಂದಿದ್ದಾನೆಂದು, ಅವಳು ತಿಳಿದಿದ್ದರೆ ಇಂದಿನ ಕತ್ತಿಯನ್ನು ಅವರು ಹರಿದು ಚಿಂದಿಮಾಡಿ ಹಾಕುತ್ತಿದ್ದಳು. ಇಂಥ ಕತ್ತಿಯವರ ಕಾಲ್ತುಳಿತಕ್ಕೆ ಸಿಕ್ಕು ಈ ಕರ್ನಾಟಕ ಹೋಳಾಗುವುದಕ್ಕೆ ನಾವು ಬಿಡುವುದಿಲ್ಲ. ಅವರಿಗೆ ಕರ್ನಾಟಕ ಒಂದುಗೂಡಿ ಇರುವುದು ಬೇಡವಾಗಿದ್ದರೆ ಅವರು ಬೇರೆ ಇನ್ನೆಲ್ಲಿಗಾದರೂ ಹೋಗಲಿ. ಅವರಂಥ ಮನೆಮುರುಕರಿಗೆ ಇಲ್ಲಿ ಸ್ಥಳವಿಲ್ಲ. ಕರ್ನಾಟಕವನ್ನು ನಾವು ಒಂದಾಗಿ ಉಳಿಸಿಕೊಳ್ಳತ್ತೇವೆ. ಅದನ್ನು ಸುಂದರವಾಗಿ, ಸಮೃದ್ಧವಾಗಿ ಬೆಳೆಸುತ್ತೇವೆ’ ಎಂದು ಡಾ.ಪುಟ್ಟಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT