ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಭಗವದ್ಗೀತೆ ಧಾರ್ಮಿಕ ಗ್ರಂಥವಲ್ಲ; ಆಧ್ಯಾತ್ಮಿಕ ಗ್ರಂಥ’

Last Updated 16 ಡಿಸೆಂಬರ್ 2013, 6:21 IST
ಅಕ್ಷರ ಗಾತ್ರ

ಶಿರಸಿ: ‘ಭಗವದ್ಗೀತೆ ಧಾರ್ಮಿಕ ಗ್ರಂಥವಲ್ಲ. ಇದರಲ್ಲಿ ಧರ್ಮ ಗ್ರಂಥಗಳಲ್ಲಿ ಇರುವ ಪೂಜಾ ವಿಧಾನ, ಉತ್ಸವ, ಉಪಾಸ್ಯ ದೇವರ ಪ್ರಾರ್ಥನೆಗಳ ಪಾಠವಿಲ್ಲ. ಧರ್ಮದ ಮೂಲವಾದ ಅಧ್ಯಾತ್ಮದ ವಿವರಣೆ ಗೀತೆಯಲ್ಲಿದೆ. ಹೀಗಾಗಿ ಇದು ಧಾರ್ಮಿಕ ಗ್ರಂಥಕ್ಕಿಂತ ವಿಶೇಷವಾಗಿ ಆಧ್ಯಾತ್ಮಿಕ ಗ್ರಂಥವಾಗಿದೆ’ ಎಂದು ಸ್ವರ್ಣವಲ್ಲಿ ಮಠಾಧೀಶ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ನುಡಿದರು.

ಸ್ವರ್ಣವಲ್ಲಿ ಸಂಸ್ಥಾನ ನೇತೃತ್ವದಲ್ಲಿ ಒಂದು ತಿಂಗಳ ಕಾಲ ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆದ ಭಗವದ್ಗೀತಾ ಅಭಿಯಾನದ ಮಹಾಸಮರ್ಪಣೆ ಅಂಗವಾಗಿ ಭಾನುವಾರ ಇಲ್ಲಿ ಆಯೋಜಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಗೀತೆಯಲ್ಲಿ ಭಗವಂತ ಉಪದೇಶಿಸಿರುವ ಕರ್ಮಯೋಗವೇ ಕ್ರಿಯಾಶೀಲತೆಯಾಗಿದೆ. ಆದರೆ ಸಮಾಜದಲ್ಲಿ ಕ್ರಿಯಾಶೀಲತೆ ಕಡಿಮೆಯಾಗಿ ನಿಷ್ಕ್ರಿಯತೆ ಆವರಿಸಿದೆ. ದುಡಿಮೆ ಸುಖಕ್ಕಿಂತ ರಜೆಯ ಸುಖ ಜನರನ್ನು ಆಕರ್ಷಿಸುತ್ತಿದೆ. ರಜಾನಿಷ್ಠೆ ತೊಲಗಿ ರಾಜನಿಷ್ಠೆ ಜನರಲ್ಲಿ ಬರಬೇಕಾಗಿದೆ ಎಂದರು.

‘ಸಮಾಜದ ಚಿತ್ರಣ ಇಂದು ಬದಲಾಗಿದೆ. ಧರ್ಮದ ಉಳಿವಿಗೆ ಹಿಂದುಗಳು ಬಾಯ್ತೆರೆದು ಉತ್ತರ ಕೊಡುವುದನ್ನು ಕಲಿಯಬೇಕಾಗಿದೆ’ ಎಂದು ಆರ್ಷ ಗುರುಕುಲ ಹುಬ್ಬಳ್ಳಿ ಶಾಖೆಯ ಚಿದ್ರೂಪಾನಂದ ಸರಸ್ವತಿ ಸ್ವಾಮೀಜಿ ಮಾರ್ಮಿಕವಾಗಿ ನುಡಿದರು. ಒಂದು ದಶಕದ ಹಿಂದಿನ ನೆನಪನ್ನು ಮೆಲಕು ಹಾಕಿದ ಅವರು ‘ಅಂದು ಪೋಪ್‌ ಇಟಲಿಯಿಂದ ಭಾರತಕ್ಕೆ ಬಂದಾಗ ರೆಡ್‌ಕಾರ್ಪೆಟ್‌ ಹಾಸಿ ಪೋಪ್‌ರನ್ನು ಸಂಸತ್ತಿಗೆ ಕರೆದುಕೊಂಡು ಹೋಗಲಾಯಿತು. ಆ ಸಂದರ್ಭದಲ್ಲಿ ಪೋಪ್‌ ಒಂದು ನೂರು ವರ್ಷದ ಒಳಗಾಗಿ ಭಾರತದ ಪ್ರತಿ ಮನೆಯಲ್ಲಿ ಶಿಲುಬೆ ನೆಡುವಂತೆ ಮಾಡುತ್ತೇವೆ ಎಂದಿದ್ದರು. ಆಗ ಗುರುಗಳಾದ ದಯಾನಂದ ಸರಸ್ವತಿ ಸ್ವಾಮೀಜಿ ಗೀತೆಯನ್ನು ಪ್ರಚುರಗೊಳಿಸವಂತೆ ತಿಳಿಸಿದರು. ಅಂದಿನಿಂದ ಗುರುಗಳ ಆದೇಶದಂತೆ ಗೀತೆಯ ಸಂದೇಶವನ್ನು ಸಮಾಜಕ್ಕೆ ತಿಳಿಸುವ ಕೆಲಸ ಮಾಡಲಾಗುತ್ತಿದೆ’ ಎಂದರು.

ವಿಶ್ವಕ್ಕೆ ಗೀತೆಯ ಸಾರ ತಿಳಿಯಲಿ: ಕರ್ಕಿ ಜ್ಞಾನೇಶ್ವರಿ ಪೀಠದ ಸಚ್ಚಿದಾನಂದ ಜ್ಞಾನೇಶ್ವರಿ ಸ್ವಾಮೀಜಿ ಮಾತನಾಡಿ ಭಗವದ್ಗೀತೆಯು ಸ್ತೋತ್ರವಾಗಿ ವ್ಯಕ್ತಿಯಲ್ಲಿ ಪ್ರವಹಿಸಿದಾಗ ದೌರ್ಬಲ್ಯಗಳು ನಾಶವಾಗುತ್ತವೆ ಎಂದರು. ಸ್ವಾದಿ ದಿಗಂಬರ ಜೈನಮಠದ ಭಟ್ಟಾಕಲಂಕ ಭಟ್ಟಾರಕ ಸ್ವಾಮೀಜಿ ಮಾತನಾಡಿ ಗೀತಾ ಅಭಿಯಾನ ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದಲ್ಲಿ ನಡೆದು ಇಡೀ ವಿಶ್ವಕ್ಕೆ ಗೀತೆಯ ಸಾರ ತಿಳಿಯುವಂತಾಗಬೇಕು ಎಂದರು.

‘ಗೀತೆ ಮಾನವೀಯತೆಯನ್ನು ತಯಾರಿಸುವ ಫ್ಯಾಕ್ಟರಿಯಾಗಿದೆ. ಗೀತೆಯನ್ನು ಓದುವ ಮಕ್ಕಳಲ್ಲಿ ಸ್ಮರಣಶಕ್ತಿ ಹೆಚ್ಚುತ್ತದೆ’ ಎಂದು ಕಾರವಾರ ರಾಮಕೃಷ್ಣಾಶ್ರಮದ ಭವೇಶಾನಂದ ಸ್ವಾಮೀಜಿ ನುಡಿದರು. ಭಗವದ್ಗೀತಾ ಅಭಿಯಾನದ ಜೊತೆಗೆ ಯೋಗ ಶಿಬಿರ ಸಂಯೋಜಿಸಿದ್ದ ಸ್ವಾಮಿ ವಿವೇಕಾನಂದ ಯೋಗ ಅನುಸಂದಾನ ಸಂಸ್ಥಾನದ ಕುಲಾಧಿಪತಿ ಎಚ್‌.ಆರ್‌. ನಾಗೇಂದ್ರ ಮಾತನಾಡಿ, ಮನದೊಳಗಿನ ಕುರುಕ್ಷೇತ್ರದಲ್ಲಿ ಧುರ್ಯೋಧನ ಗೆದ್ದರೆ ರೋಗಗಳು ಮನೆ ಮಾಡುತ್ತವೆ. ಧುರ್ಯೋಧನನನ್ನು ದೂರ ಮಾಡಿದರೆ ರೋಗಮುಕ್ತ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದರು.

ದೀವಗಿಯ ರಮಾನಂದರು, ಸಾಲಗಾಂವದ ಸದ್ಗುರು ಗೌರಮ್ಮಾಜಿ ಆಶ್ರಮದ ವಿರೂಪಾಕ್ಷೇಶ್ವರ ಸ್ವಾಮೀಜಿ, ಹಳಿಯಾಳ ಯಡೂಗಾ ಸಿದ್ಧಾರೂಢ ಮಠದ ಮಾತಾಜಿ ನಿರ್ಮಲಾ ತಾಯಿ, ಸಂಸದ ಅನಂತಕುಮಾರ್ ಹೆಗಡೆ, ಶಾಸಕರಾದ ವಿಶ್ವೇಶ್ವರ ಹೆಗಡೆ ಕಾಗೇರಿ, ಶಿವರಾಮ ಹೆಬ್ಬಾರ್‌, ಉದ್ಯಮಿ ವಿಜಯ ಸಂಕೇಶ್ವರ, ಎಂಇಎಸ್‌ ಶಿಕ್ಷಣ ಸಂಸ್ಥೆ ಅಧ್ಯಕ್ಷ ಜಿ.ಎಂ.ಹೆಗಡೆ ಮುಳಖಂಡ, ಟಿಎಸ್‌ಎಸ್‌ ಅಧ್ಯಕ್ಷ ಶಾಂತಾರಾಮ ಹೆಗಡೆ, ಮಠದ ವಿ.ಎನ್‌.ಹೆಗಡೆ ಬೊಮ್ಮನಳ್ಳಿ, ಜಿ.ಎನ್‌.ಹೆಗಡೆ ಹಿರೇಸರ ಉಪಸ್ಥಿತರಿದ್ದರು.

ಗೀತೆಗೆ ರಾಗ ಸಂಯೋಜಿಸಿದ ಗಾಯಕಿ ರಾಧಾ ದೇಸಾಯಿ ಅವರನ್ನು ಸನ್ಮಾನಿಸಲಾಯಿತು. 10 ಸಹಸ್ರಕ್ಕೂ ಅಧಿಕ ಸಂಖ್ಯೆಯಲ್ಲಿ ಸೇರಿದ್ದ ಬೃಹತ್‌ ಜನಸಮೂಹದ ನಡುವೆ ಪ್ರಧಾನ ಪಾತ್ರಧಾರಿಗಳಾಗಿ ಮಾತೆಯರು ಭಗವದ್ಗೀತೆಯ 13ನೇ ಅಧ್ಯಾಯದ ಎಲ್ಲ ಶ್ಲೋಕಗಳನ್ನು ಪಠಿಸಿದರು. ಸಿದ್ದಾಪುರ ಅಂಧರ ಶಾಲೆಯ ಮಕ್ಕಳು ನಿರರ್ಗಳವಾಗಿ ಶ್ಲೋಕ ಹೇಳಿದ್ದು ಪ್ರಶಂಸೆಗೆ ಪಾತ್ರವಾಯಿತು.

ಜಿಲ್ಲಾ ಭಗವದ್ಗೀತಾ ಅಭಿಯಾನ ಸಮಿತಿಯ ಅಧ್ಯಕ್ಷ ಮುರಳೀಧರ ಪ್ರಭು ಸ್ವಾಗತಿಸಿದರು. ಆರ್‌.ಎಸ್‌.ಹೆಗಡೆ ಕಾರ್ಯಕ್ರಮ ನಿರೂಪಿಸಿದರು. ಅಭಿಯಾನದ ಅಂಗವಾಗಿ ಆಯೋಜಿಸಿದ್ದ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.
ಸಹಸ್ರ ಸಂಖ್ಯೆಯಲ್ಲಿ ಸೇರಿದ್ದ ಜನಸ್ತೋಮಕ್ಕೆ ಶಾಲೆ–ಕಾಲೇಜು ವಿದ್ಯಾರ್ಥಿಗಳು ಅಚ್ಚುಕಟ್ಟಾಗಿ ಊಟ ಬಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT