ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಭತ್ತವನ್ನು ಬಗ್ಗು ಬಡಿದ ಉಚಿತ ಅಕ್ಕಿ’

Last Updated 23 ಡಿಸೆಂಬರ್ 2013, 9:17 IST
ಅಕ್ಷರ ಗಾತ್ರ

ಮೂಡುಬಿದಿರೆ: ‘ಸರ್ಕಾರ ನೀಡುವ ಉಚಿತ ಅಕ್ಕಿ ಭತ್ತವನ್ನು ಬಗ್ಗು ಬಡಿಯುತ್ತಾ ಇದೆ. ಇತ್ತೀಚಿನ ದಿನಗಳಲ್ಲಿ ಅಕ್ಕಿ ಎನ್ನುವುದು ರಾಜಕೀಯ ದಾಳವಾಗಿಬಿಟ್ಟಿದೆ. ಒಂದು ರೂಪಾಯಿಗೆ ತಮಿಳುನಾಡಿನಲ್ಲಿ ನೀಡುತ್ತಿದ್ದ ಅಕ್ಕಿಯನ್ನು ಇಂದು ಉಚಿತವಾಗಿ ನೀಡುತ್ತಿದ್ದಾರೆ.

ಅದೇ ಪರಿಸ್ಥಿತಿ ರಾಜ್ಯದಲ್ಲೂ ಬರಬಹುದು...’ ಎಂದು ಬೆಂಗಳೂರಿನ ಸಹಜ ಸಮೃದ್ಧ ಸಾವಯವ ಕೃಷಿಕರ ಬಳಗದ ನಿರ್ದೇಶಕ ಕೃಷ್ಣಪ್ರಸಾದ್‌ ಇಲ್ಲಿ ಹೇಳಿದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪ್ರಾಯೋಜಕ್ವದಲ್ಲಿ ಮೂಡುಬಿದಿರೆಯಲ್ಲಿ ಭಾನುವಾರ ನಡೆದ ಕೃಷಿ ಮೇಳದಲ್ಲಿ ‘ಬರಿದಾಗುತ್ತಿರುವ ಭತ್ತದ ಕಣಜ’ ಕುರಿತು ಅವರು ಮಾತನಾಡಿದರು.

ಭತ್ತ ಇತ್ತು ಎಂಬುದನ್ನು ನೆನಪು ಮಾಡಿಕೊಳ್ಳಬೇಕಾದ ಪರಿಸ್ಥಿತಿ ಬಂದಿದೆ. ಭತ್ತ ಎನ್ನುವುದು ಬೆಳೆ ಅಲ್ಲ. ಅದು ಒಂದು ಹುಲ್ಲು. ಯಾವುದೇ ಪರಿಸರದಲ್ಲಿ ಬೆಳೆಯುವ ಶಕ್ತಿ ಅದಕ್ಕೆ ಇದೆ. ಕರ್ನಾಟಕದಲ್ಲಿ ಅಪರೂಪದ ಭತ್ತದ ಕಣಜ ಇತ್ತು. ವರದಾ ನದಿ ಪ್ರದೇಶದಲ್ಲಿ ನೆರೆಗೂಳಿ ಎಂಬ ತಳಿಯ ಭತ್ತ ಅದ್ಭುತವಾದ ಶಕ್ತಿ ಹೊಂದಿತ್ತು. ಸಾಗರ, ಸೊರಬ, ಬನವಾಸಿ ಪ್ರದೇಶಗಳಲ್ಲಿ ಇಂದಿಗೂ ಸರ್ಕಾರದ ಭತ್ತ ಹೋಗುತ್ತಿಲ್ಲ. ಅಲ್ಲಿನ ಜನ ನೂರಾರು ವರ್ಷಗಳ ಕಾಲ ಒಡಲು ತುಂಬಿದ ಭತ್ತವನ್ನು ಬಿಡಲು ತಯಾರಿಲ್ಲ ಎಂದು ಅವರು ಹೇಳಿದರು.

ಹೊಳೆನರಸೀಪುರ, ಅರಕಲಗೂಡು ಪ್ರದೇಶದಲ್ಲಿ ಬೆಳೆಯುವ ರಾಜಮುಡಿ ಅಕ್ಕಿ ಮೈಸೂರು ರಾಜರ ಪ್ರೀತಿಯನ್ನೂ ಗಳಿಸಿತ್ತು. ಅದರಿಂದ ಮಾಡಿದ್ದ ಅನ್ನ ಎರಡು ದಿನವಾದರೂ ಕೆಡುತ್ತಿರಲಿಲ್ಲ ಎಂದರು.

ಭತ್ತ ಸಾಲಗಾರರ ಕೃಷಿಯಾಗಬಾರದು. ಅದು ಕೈ ಹಿಡಿದು ಮುನ್ನಡೆಸಬೇಕು. ನಂಬರ್‌ ಭತ್ತ ಬೆಳೆದು ಸಾಲ ಮೈಮೇಲೆ ಎಳೆಕೊಳ್ಳಬಾರದು ಎಂದೂ ರೈತರಿಗೆ ಸಲಹೆ ನೀಡಿದರು.

ಭತ್ತದ ಕೃಷಿ ದುಬಾರಿ ಆಗುತ್ತಿದೆ. ಇದಕ್ಕೆ ಕಾರಣ ಕೃಷಿ ನೀತಿಯ ಬದಲಾವಣೆಯೇ ಆಗಿದೆ. ಭತ್ತಕ್ಕೆ ಪರ್ಯಾಯವೇ ಇಲ್ಲ. ಬೆಂಗಳೂರಿನಲ್ಲಿ ಶೇ 25 ಮಂದಿ ಮಧುಮೇಹದಿಂದ ಬಳಲುತ್ತಿದ್ದಾರೆ. ಇದಕ್ಕೆ ಇಂದಿನ ಪಾಲಿಶ್‌ ಅಕ್ಕಿಯೇ ಕಾರಣ. ಆದ್ದರಿಂದ ಅಕ್ಕಿಯನ್ನು ಮಾರುಕಟ್ಟೆಯಲ್ಲಿ ದಾಳವಾಗಿ ಬಳಸಬೇಕು. ಅಕ್ಕಿಯ ಗುಣವನ್ನೂ ಔಷಧೀಯ ಅಂಶಗಳನ್ನೂ ಪ್ರಚುರಪಡಿಸಬೇಕು. ದೇಸಿ ಭತ್ತದ ಪರಂಪರೆ ಇಟ್ಟುಕೊಂಡು ಕೃಷಿ ಮಾಡಬೇಕು ಎಂದು ಅವರು ಸಲಹೆ ನೀಡಿದರು.

ಅನ್ನ ಸಂಸ್ಕೃತಿ ಇರಲೇ ಬೇಕು. ದೇಸಿ ಅನ್ನವನ್ನು ನೀಡಿದರೆ ಅಮೃತವನ್ನು ನೀಡಿದಂತೆ ಆಗುತ್ತದೆ ಎಂದರು.

ಶಿರ್ವದ ಮಲ್ಲಿಗೆ ಸ್ವಸಹಾಯ ಸಂಘದ ಸದಸ್ಯ ರಾಘವೇಂದ್ರ ನಾಯಕ್‌ ಮಾತನಾಡಿ, ಬೆಳೆಯಲ್ಲಿ ಪರಿವರ್ತನೆ ಮಾಡ­ಬೇಕು. ಇತರರ ಕೃಷಿಯಿಂದ ಪ್ರಭಾವಿತರಾಗಬೇಕು ಎಂದರು. ಭತ್ತದಲ್ಲಿ ಯಾಂತ್ರೀಕೃತ ಕೃಷಿ ಕುರಿತು ಮಾತನಾಡಿದ ಶ್ರೇಷ್ಠ ಕೃಷಿ ಪ್ರಶಸ್ತಿ ಪುರಸ್ಕೃತ ಸೀತಾರಾಮ ಎಂ.ಶೆಟ್ಟಿ ಪಾಲಡ್ಕ, ಕೇವಲ ಸಾವಯವ ಕೃಷಿಯಿಂದಲೇ ಉತ್ತಮ ಬೆಳೆ ಸಾಧ್ಯವಿಲ್ಲ. ತಂತ್ರಜ್ಞಾನವನ್ನು ಬಳಸಿ ಉತ್ತಮ ಇಳುವರಿ ಪಡೆದುಕೊಳ್ಳಬಹುದು ಎಂದರು.

ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಮಾತನಾಡಿ, ಕೃಷಿಕ­ರಲ್ಲಿ ಬದಲಾವಣೆ ಆಗಿದೆ. ರೈತರು ಸರ್ಕಾರದ ಸವಲತ್ತು­ಗಳನ್ನೂ ಪರಿಣಾಮಕಾರಿಯಾಗಿ ಬಳಸಬೇಕು ಎಂದರು.

ಬ್ರಹ್ಮಾವರ ವಲಯ ಸಂಶೋಧನಾ ಕೇಂದ್ರದ ಸಹ ಸಂಶೋಧನಾ ನಿರ್ದೇಶಕ ಡಾ.ಎಂ.ಹನುಮಂತಪ್ಪ, ಕೃಷಿ ಅಧಿಕಾರಿ ಬಾಬು ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT