ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಭರತನಾಟ್ಯ ಪರಂಪರೆ ಮುಂದುವರಿಯಲಿ’

ಉಳ್ಳಾಲ ಮೋಹನ ಕುಮಾರ್‌ಗೆ ಅಭಿನಂದನೆ
Last Updated 14 ಡಿಸೆಂಬರ್ 2013, 7:05 IST
ಅಕ್ಷರ ಗಾತ್ರ

ಮಂಗಳೂರು: ‘ಭರತನಾಟ್ಯ ಕ್ಷೇತ್ರದಲ್ಲಿ ಶಾಸ್ತ್ರೀಯ ಪರಂಪರೆಯ ಹೊರಗೆ ಕಾಲಿಡಬೇಡಿ, ಅದೇ ರೀತಿ ಹಳೆಯ ಪರಿ­ಕಲ್ಪನೆಗೇ ಜೋತು ಬೀಳುವ ಕೆಲಸ­ವನ್ನೂ ಮಾಡಬೇಡಿ. ಈ ಬಂಧದೊಳಗೆ ಭರತನಾಟ್ಯ ಪರಂಪರೆಯನ್ನು ಮುಂದು­ವರಿಸಿಕೊಂಡು ಹೋಗಿ’ ಎಂದು ತಮ್ಮ ಶಿಷ್ಯ ಪರಂಪರೆಗೆ ಹಿರಿಯ ನೃತ್ಯಗುರು ಉಳ್ಳಾಲ ಮೋಹನ ಕುಮಾರ್‌ ಕಿವಿ­ಮಾತು ಹೇಳಿದರು.

ಉಳ್ಳಾಲ ಮೋಹನ ಕುಮಾರ್‌ 80 ವರ್ಷ ಪೂರ್ಣಗೊಳಿಸಿದ ಸಂದರ್ಭ­ದಲ್ಲಿ, ಶುಕ್ರವಾರ ಪುರಭವನದಲ್ಲಿ ನಡೆ­ದ ‘ಮೋಹನಾಭಿವಂದನಂ’ ಕಾರ್ಯ­ಕ್ರಮದಲ್ಲಿ ಅವರ ಶಿಷ್ಯಂದಿರು ಸೇರಿ ಸಮರ್ಪಿಸಿದ  ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು. ‘ನಾನು ಈಗಲೂ ಕಲೆಯ ವಿದ್ಯಾರ್ಥಿ.

ನೃತ್ಯ ಪರಂಪರೆ ಉಳಿಯ­ಬೇಕು ಎನ್ನುವ ಆಶಯದಿಂದ ನಾನು ವಿದ್ಯಾರ್ಥಿಗಳೊಡನೆ ನಿಷ್ಠುರವಾಗಿ ನಡೆ­ದು­ಕೊಂಡಿದ್ದೇನೆ. ಅದನ್ನು ಸಕಾರಾತ್ಮಕ ಧೋರಣೆಯಿಂದ ಸ್ವೀಕರಿಸಿ ನೃತ್ಯ­ಪರಂಪರೆಯನ್ನು ಮುಂದುವರಿಸುತ್ತಾ ಇದ್ದಾರೆ. ಅದನ್ನೆಲ್ಲಾ ನೋಡುವ ಭಾಗ್ಯ ನನ್ನದಾಗಿರುವುದಕ್ಕೆ ಖುಷಿಯಾಗುತ್ತಿದೆ’ ಎಂದು ಹೇಳಿದರು.

‘ಬೇಡರ ನೃತ್ಯ, ನವಿಲು ನೃತ್ಯಗಳನ್ನೇ ಶಾಸ್ತ್ರೀಯ ನೃತ್ಯ ಎಂದು ಪರಿ­ಗಣಿ­ಸು­ತ್ತಿದ್ದ ಕಾಲದಲ್ಲಿ ವೈಜಯಂತಿ ಮಾಲಾ­ರಂತಹವರು ಶಾಸ್ತ್ರೀಯ ನೃತ್ಯ ಮಾಡು­ವುದನ್ನು ನೋಡಿ ಬೆರಗಾಗಿದ್ದೆವು. ನನ್ನ ಸಹಪಾಠಿ ಪ್ರೇಮ್‌ನಾಥ್‌ ಮಾಷ್ಟ್ರು, ಮುರಳೀಧರ್‌ ಮತ್ತು ನಾನು ತಮಿಳು­ನಾಡಿನ ರಾಜರತ್ನಪಿಳ್ಳೈ ಅವರ ಬಳಿ ಹೋಗಿ ಶಾಸ್ತ್ರೀಯ ನೃತ್ಯವನ್ನು ಕಲಿತೆವು. ಯಕ್ಷಗಾನ ಬಹು ಜನ­ಪ್ರಿಯವಾಗಿರುವ ಈ ಪ್ರದೇಶದಲ್ಲಿ ಭರತನಾಟ್ಯವನ್ನು ಜನಪ್ರಿಯ­ಗೊಳಿ­ಸುವುದು ಸುಲಭ­ವಾಗಿ­ರಲಿಲ್ಲ.

ಆದರೂ ಅದನ್ನೆಲ್ಲ ಮೀರಿ ಇಂದು ಪಂದನಲ್ಲೂರು ಶೈಲಿಯ ಭರತ­ನಾಟ್ಯಂ ಕರಾವಳಿ ಪ್ರದೇಶ­ದಲ್ಲಿ ಜನ­ಪ್ರಿಯವಾಗಿರು­ವು­ದನ್ನು ಕಂಡಾಗ ಮನಸ್ಸು ತುಂಬಿ ಬರುತ್ತದೆ’ ಎಂದು ಹೇಳಿದ ಅವರು ಜೀವನದಲ್ಲಿ ಈ ಸಾಧನೆ ಮಾಡಲು ಹೆಗಲಿಗೆ ಹೆಗಲು ಕೊಟ್ಟು ದುಡಿದ ಪತ್ನಿ ಸಬಿತಾ ಅವರನ್ನು ಅಭಿನಂದಿಸುತ್ತಾ ಗದ್ಗದಿತರಾದರು.

ಸುಮಾರು 30ಕ್ಕೂ ಹೆಚ್ಚು ಶಿಷ್ಯ­ವರ್ಗ­ದವರು ಒಟ್ಟಾಗಿ ಮೋಹನ ಕುಮಾರ್‌ ಅವರನ್ನು ಅಭಿನಂದಿಸಿದರು. ಶಾಲು ಹೊದೆಸಿ ಪೇಟತೊಡಿಸಿ, ಬೆಳ್ಳಿ ಬಟ್ಟಲು ಮತ್ತು ಲೋಟ ಹಾಗೂ ಅವರ ಪ್ರೀತಿಯ ಜುಬ್ಬಾ ಪೈಜಾಮಾ­ವನ್ನು ನೀಡಿ ಗೌರವಿಸಲಾಯಿತು. ಮುತ್ತೈದೆ­ಯರು ಮೋಹನ ಕುಮಾರ್‌ ಮತ್ತು ಸಬಿತಾ ದಂಪತಿಯನ್ನು ಆರತಿ ಬೆಳಗಿ ವಂದಿಸಿದರು.

ಅಭಿನಂದನಾ ಭಾಷಣ ಮಾಡಿದ ಮಾಜಿ ಶಾಸಕ ಕುಂಬ್ಳೆ ಸುಂದರ ರಾವ್‌, ಶುದ್ಧ ಶಾಸ್ತ್ರೀಯ ಕಲಿಕೆಗೆ ಉಳ್ಳಾಲ ಮೋಹನ ಕುಮಾರ್‌ ಆದ್ಯತೆ ನೀಡಿ­ದ್ದಾರೆ. ಆ ಮೂಲಕ ಕರಾವಳಿಯಲ್ಲಿ ಪಂದನಲ್ಲೂರು ಶೈಲಿಯನ್ನು ಜನಪ್ರಿಯ­ಗೊಳಿಸಿದ್ದಾರೆ. ಶಿಷ್ಯಂದಿರನ್ನು ತಮ್ಮ ಮಕ್ಕಳ ಹಾಗೆ ಪರಿಗಣಿಸಿ ಪಾಠ ಮಾಡಿ­ರುವುದರಿಂದ ಇಂದು ಅಪಾರವಾದ ಶಿಷ್ಯವರ್ಗದಿಂದ ಅಭಿನಂದನೆ ಸ್ವೀಕರಿ­ಸುತ್ತಿ­ದ್ದಾರೆ ಎಂದು ಹೇಳಿದರು.

ಡಾ. ಬಿ. ಎಂ. ಹೆಗ್ಡೆ ಅಧ್ಯಕ್ಷತೆ ವಹಿಸಿ­ದ್ದರು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು. ಟಿ. ಖಾದರ್, ಶಾಸಕ ಗಣೇಶ್‌ ಕಾರ್ಣಿಕ್‌, ಕನ್ನಡ ಸಾಹಿತ್ಯ ಪರಿಷತ್‌ ಮಾಜಿ ಅಧ್ಯಕ್ಷ ಹರಿ­ಕೃಷ್ಣ ಪುನರೂರು, ಹಿರಿಯ ನೃತ್ಯಗುರು ಪ್ರೊ. ಎಂ. ಆರ್‌. ಕೃಷ್ಣ­ಮೂರ್ತಿ ಮತ್ತು ಮುರಳೀಧರ್‌ ರಾವ್‌, ಜಯಲಕ್ಷ್ಮಿ ಆಳ್ವ, ಸಹಪಾಠಿ ಪ್ರೇಮ್‌ನಾಥ್‌ ಮಾಷ್ಟ್ರು, ಕುದ್ಕಾಡಿ ವಿಶ್ವನಾಥ ರೈ ಮತ್ತಿತರರು ಉಳ್ಳಾಲ ಮೋಹನ ಕುಮಾರ್‌ ಅವರನ್ನು ಅಭಿನಂದಿಸಿದರು.

ಸನಾತನ ನಾಟ್ಯಾಲಯದ ಚಂದ್ರ­ಶೇಖರ ಶೆಟ್ಟಿ ಸ್ವಾಗತಿಸಿದರು. ಬ್ರಿಟನ್‌, ಅಮೆರಿಕ, ದುಬೈ, ಬೆಂಗಳೂರು, ಗೋವಾ, ಮುಂಬೈ ಮುಂತಾದ ಕಡೆ­ಗಳಿಂದ ಶಿಷ್ಯಂದಿರು ಬಂದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT