ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಭೂ ಮಾಫಿಯಾಕ್ಕೆ ಜನಪ್ರತಿನಿಧಿಗಳಿಂದಲೇ ಬೆಂಬಲ’

Last Updated 5 ಡಿಸೆಂಬರ್ 2013, 7:10 IST
ಅಕ್ಷರ ಗಾತ್ರ

ಕುಶಾಲನಗರ: ಜಿಲ್ಲೆಯಲ್ಲಿ 65 ಸಾವಿರ ಸರ್ಕಾರಿ ಭೂಮಿ ಇದ್ದು, ಶ್ರೀಮಂತರ ಪಾಲಾಗಿದೆ. ಭೂಮಾಫಿಯಾ ವ್ಯಾಪಕವಾಗಿದ್ದು ಇದಕ್ಕೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳೇ  ಕೈಜೋಡಿಸುತ್ತಿದ್ದಾರೆ. ಇದರಿಂದ ಕುಶಾಲನಗರದ ವ್ಯಾಪ್ತಿಯಲ್ಲಿ ತುಂಡು ಭೂಮಿಯ ಬೆಲೆ ಗಗನಕ್ಕೇರಿದೆ ಎಂದು ಪ್ರಗತಿಪರ ಸಂಘಟನೆಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಪಿ.ಆರ್. ಭರತ್ ಹೇಳಿದರು. 

ಪಟ್ಟಣದ ಮಹಾಲಕ್ಷ್ಮೀ ರೆಸಿಡೆನ್ಸಿ ಸಭಾಂಗಣದಲ್ಲಿ ಅಹಿಂದ ಹೋಬಳಿ ಘಟಕವು ಬುಧವಾರ ಏರ್ಪಡಿಸಿದ್ದ ನಿವೇಶನ ರಹಿತರ ಭೂ ಹೋರಾಟ ಸಮಿತಿ ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಕಾರ್ಪೋರೇಟ್ ಕಂಪನಿಗಳು ರೆಸಾರ್ಟ್ ಮತ್ತು ಹೋಟೆಲ್ ಉದ್ಯಮ ಆರಂಭಿಸಲು ಬೇಕಾದ ಸ್ಥಳವನ್ನು ದಾನಮಾಡಲು ಸ್ಥಳೀಯ ಮತ್ತು ರಾಜ್ಯ ಸರ್ಕಾರಗಳು ಹುನ್ನಾರ ನಡೆಸುತ್ತಿವೆ. ದೊಡ್ಡ ಭೂಮಾಫಿಯಾಕ್ಕೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಸಹಕಾರ ನೀಡುತ್ತಿರುವುದರಿಂದಾಗಿ ನಿವೇಶನ ರಹಿತರಿಗೆ ತುಂಡು ಭೂಮಿಯೂ ದೊರೆಯುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ದೇಶದಲ್ಲಿ ದುಡಿಯುವ ಜನ ಸರ್ಕಾರದಿಂದ ಏನನ್ನಾದರೂ ಪಡೆದಿದ್ದರೆ ಅದು ಹೋರಾಟದ ಮೂಲಕವೇ ಹೊರತು, ಸರ್ಕಾರ ಅವರ ಬೇಡಿಕೆಗಳನ್ನು ತಾನಾಗಿಯೇ ಪೂರೈಸಿಲ್ಲ ಎಂದರು.

ಕಾಂಗ್ರೆಸ್ ನಗರ ಘಟಕ ಅಧ್ಯಕ್ಷ ಜೋಸೆಫ್ ವಿಕ್ಟರ್ ಸೋನ್ಸ್ ಮಾತನಾಡಿ, ಸಂಸದರನ್ನು ಭೇಟಿ ಮಾಡಿ ನಿವೇಶನ ರಹಿತರ ಸಮಸ್ಯೆ ಬಗೆಹರಿಸಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು. ಅಹಿಂದ ಹೋಬಳಿ ಘಟಕದ ಅಧ್ಯಕ್ಷ ಹಮೀದ್ ಮಾತನಾಡಿ ಕುಶಾಲನಗರ, ಮುಳ್ಳುಸೋಗೆ, ಗುಡ್ಡೆಹೊಸೂರು ವ್ಯಾಪ್ತಿಯಲ್ಲಿ ಉಳ್ಳವರಿಂದಲೇ ಒತ್ತುವರಿಯಾಗಿರುವ ನೂರಾರು ಎಕರೆ ಪೈಸಾರಿ ಜಾಗಗಳನ್ನು ತೆರವುಗೊಳಿಸಿ ಬಡವರಿಗೆ ನಿವೇಶನ ಹಂಚುವಂತೆ ಒತ್ತಾಯಿಸಿ ಹೋರಾಟ ರೂಪಿಸಲಾಗುವುದು ಎಂದರು.

ಕೂಡಿಗೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಹಮೀದ್, ಪ್ರಗತಿಪರ ಸಂಘಟನೆಗಳ ತಾಲ್ಲೂಕು ಮುಖಂಡರಾದ ರಾಧಾ ಪುಟ್ಟರಾಜು, ಸ್ಥಳೀಯ ಅಹಿಂದ ಮುಖಂಡರಾದ ಅಜೀಜ್, ರಿಯಾಜ್, ಹೋಬಳಿ ಕಾರ್ಯದರ್ಶಿ ರಾಮಕೃಷ್ಣ, ಮೋಣು, ರಿಯಾಜ್, ಈಚು, ಶಾಹಿದ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT