ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಭ್ರಷ್ಟಮುಕ್ತ ವ್ಯವಸ್ಥೆ ಕಲ್ಪಿಸುವೆ’

Last Updated 12 ಏಪ್ರಿಲ್ 2014, 6:53 IST
ಅಕ್ಷರ ಗಾತ್ರ

ಮುಂಜಾನೆ ಪಕ್ಷಕ್ಕೆ ಸೇರಿಸಿಕೊಂಡು ಸಂಜೆ ಹೊರಗೆ ಹಾಕಿದ ಬಿಜೆಪಿ ನಾಯಕರಿಗೆ ಸಡ್ಡು ಹೊಡೆದು ಧಾರವಾಡ ಲೋಕಸಭಾ ಕ್ಷೇತ್ರದಿಂದ  ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್‌ ಪಕ್ಷೇತರರಾಗಿ ಕಣಕ್ಕೆ ಇಳಿದಿದ್ದಾರೆ.

ಬಿಜೆಪಿಯದು ಪೊಳ್ಳು ಹಿಂದುತ್ವ ಎನ್ನುತ್ತಲೇ ತಮ್ಮ ಉಗ್ರ ಸೈದ್ಧಾಂತಿಕ ವಾದವನ್ನು ಮುತಾಲಿಕ್‌ ಒಂದಷ್ಟು ಸಡಿಲಗೊಳಿಸಿದ್ದಾರೆ. ಹಿಂದುತ್ವಕ್ಕೆ ಅವರೀಗ ‘ಭಾರತೀಯತೆ’ಯ ರೂಪು ನೀಡಿದ್ದಾರೆ. ಅವರ ಹೇಳಿಕೆಯಂತೆ ಹಿಂದುತ್ವ ಎನ್ನುವುದು ಜಾತಿ ಅಥವಾ ಧರ್ಮದ ಸೂಚಕವಲ್ಲ. ಭಾರತೀಯತೆಯನ್ನು ಒಪ್ಪಿಕೊಂಡಿರುವ ಎಲ್ಲರೂ (ಎಲ್ಲಾ ಧರ್ಮೀಯರು) ಅದರಲ್ಲಿ ಸೇರಿದ್ದಾರೆ. ‘ಸರ್ವೇ ಜನೋ ಸುಖೀನೋ ಭವಂತು’ ಅವರ ಹೊಸ ಮಂತ್ರ. ತಮ್ಮ ಹೋರಾಟದ ಬದುಕನ್ನು ರಾಜಕೀಯ ರಂಗಕ್ಕೆ ವಿಸ್ತರಿಸುವ ಕನಸೇ ಅವರ ಈ ವಿಶಾಲ ದೃಷ್ಟಿಗೆ ಕಾರಣ ಎಂಬುದು ಮುತಾಲಿಕ್‌ ಆಪ್ತರ ಅನಿಸಿಕೆ.

‘ಬಿಜೆಪಿವರು ಮನೆಗೆ ಕರೆದು ಅವಮಾನ ಮಾಡಿದರು’ ಎಂದು ಹೇಳುತ್ತಲೇ ದಾಯಾದಿ ಕಲಹದಿಂದ ಸೃಷ್ಟಿಯಾದ ಅನುಕಂಪವನ್ನೇ

ಮತವಾಗಿ ಪರಿವರ್ತಿಸಿಕೊಳ್ಳಲು ಮುಂದಾಗಿರುವ ಶ್ರೀರಾಮಸೇನೆಯ ಈ ಆಧುನಿಕ ವಿಭೀಷಣ, ಧಾರವಾಡ ಹಾಗೂ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಕ್ರಮವಾಗಿ ಪ್ರಹ್ಲಾದ ಜೋಶಿ ಹಾಗೂ ಅನಂತಕುಮಾರ್ ವಿರುದ್ಧ ಕಣಕ್ಕೆ ಇಳಿದಿದ್ದಾರೆ.

ಒಂದೆಡೆ 10 ವರ್ಷಗಳ ಅವಧಿಯಲ್ಲಿ ಕೇಂದ್ರದ ಯುಪಿಎ ಸರ್ಕಾರದ ವೈಫಲ್ಯವನ್ನು ಪ್ರಚಾರದ ವೇಳೆ ಬಿಂಬಿಸುತ್ತಿರುವ ಮುತಾಲಿಕ್‌, ಇನ್ನೊಂದೆಡೆ ಬಿಜೆಪಿಯವರಿಂದ ತಮ್ಮ ಸ್ವಾಭಿಮಾನಕ್ಕಾದ ಧಕ್ಕೆ, 40 ವರ್ಷಗಳ ‘ಹೋರಾಟ’ದ ಬದುಕನ್ನು ಮತದಾರರ ಮುಂದೆ ಪ್ರಸ್ತಾಪಿಸಿ ಅವರ ಅಂತಃಕರಣ ತಟ್ಟುವ ಪ್ರಯತ್ನದಲ್ಲಿದ್ದಾರೆ. ಧಾರವಾಡ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಗ್ರಾಮೀಣ ಭಾಗದಲ್ಲಿ ಸಂಘಟನೆಗೆ ಇರುವ ನೆಲೆ ಹಾಗೂ ನಗರ ಪ್ರದೇಶದಲ್ಲಿನ ಬೆಂಬಲ ಗೆಲುವಿನ ದಡ ಮುಟ್ಟಿಸಲಿದೆ ಎಂಬುದು ಮುತಾಲಿಕ್‌ ಅವರ ವಿಶ್ವಾಸ. ಮತಯಾಚನೆಗಾಗಿ ಬಿಡುವಿಲ್ಲದ ಓಡಾಟದ ನಡುವೆಯೂ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದರು.

* ಸ್ವಾತಂತ್ರ್ಯಾನಂತರ ಇಲ್ಲಿಯವರೆಗೆ ಕ್ಷೇತ್ರದಲ್ಲಿ ನೋಡಿದ ಭ್ರಷ್ಟ ವ್ಯವಸ್ಥೆಯನ್ನು ತೆಗೆದು ಹಾಕಿ, ಹೋರಾಟದಿಂದಲೇ ಬದುಕು ರೂಪಿಸಿಕೊಂಡ ನಿಸ್ವಾರ್ಥ ವ್ಯಕ್ತಿಯನ್ನು ಗೆಲ್ಲಿಸಲು ಮತದಾರರು ನನಗೆ ಮತ ಹಾಕಬೇಕಿದೆ.

* ಡೋಂಗಿ ಹಿಂದುತ್ವ ಹೇಳುವವರು (ಬಿಜೆಪಿ) ಹಾಗೂ ಭ್ರಷ್ಟಾಚಾರವನ್ನು ಸಾಂಸ್ಥೀಕರಣಗೊಳಿಸಿದವರೊಂದಿಗೆ (ಕಾಂಗ್ರೆಸ್‌) ನಾನು ಹೋರಾಟಕ್ಕಿಳಿದಿದ್ದೇನೆ. ಆದ್ದರಿಂದ ನನ್ನ ನೇರ ಎದುರಾಳಿ ವೈಚಾರಿಕ ಸಂಘರ್ಷವೇ ಆಗಿದೆ ಹೊರತು ಯಾವುದೇ ವ್ಯಕ್ತಿ ಅಲ್ಲ. 

* ಕುಡಿಯುವ ನೀರಿನ ಹಾಹಾಕಾರವೇ ಧಾರವಾಡ ಲೋಕಸಭಾ ಕ್ಷೇತ್ರದಲ್ಲಿದೆ. ಜೊತೆಗೆ ಕ್ಯಾಪಿಟೇಶನ್ ಲಾಬಿ ಶಿಕ್ಷಣ ಕ್ಷೇತ್ರವನ್ನು ಆವರಿಸಿದೆ. ಉದ್ಯೋಗ ಆಧಾರಿತ ಕೈಗಾರಿಕೆಗಳು ಇಲ್ಲದ ಕಾರಣ ಇಲ್ಲಿನ ಶಿಕ್ಷಿತ ಯುವಜನತೆ ಬೇರೆಡೆಗೆ ಗುಳೇ ಹೋಗುತ್ತಿದ್ದಾರೆ. ರಸ್ತೆ, ಚರಂಡಿಯಂತಹ ಮೂಲ ಸೌಕರ್ಯ ಕಲ್ಪಿಸಲು ಹಾಗೂ ಸರ್ಕಾರದ ಯೋಜನೆಗಳನ್ನು ಫಲಾನುಭವಿಗಳಿಗೆ ತಲುಪಿಸಲು ಭ್ರಷ್ಟಾಚಾರ ಅಡ್ಡಿಯಾಗಿದೆ. ವರ್ಷದ 365ದಿನ 24 ಗಂಟೆಯೂ ಉಚಿತವಾಗಿ ಶುದ್ಧ ನೀರನ್ನು ಪೂರೈಕೆ ಮಾಡಲಾಗುವುದು. ಟ್ಯೂಷನ್ ಹಾಗೂ ಡೊನೇಶನ್ ಮುಕ್ತ ಶಿಕ್ಷಣಕ್ಕಾಗಿ ಹೋರಾಟ, ಉದ್ಯೋಗಾಧಾರಿತ ಕೈಗಾರಿಕೆಗಳಿಗೆ ಒತ್ತು. ಜನಪ್ರತಿನಿಧಿಗಳು–ಅಧಿಕಾರಿಗಳು ಹಾಗೂ ಗುತ್ತಿಗೆದಾರರ ನಡುವಿನ ಅಪವಿತ್ರ ಮೈತ್ರಿಗೆ ಕಡಿವಾಣ ಹಾಕಲಾಗುವುದು. ವಿವಿಧ ಕ್ಷೇತ್ರಗಳಲ್ಲಿನ ವೃತ್ತಿಪರರನ್ನು ಗುರುತಿಸಿ ಅವರ ನೇತೃತ್ವದಲ್ಲಿ ಸಮಿತಿ ರಚಿಸಿ ಕ್ಷೇತ್ರದ ಸಮಸ್ಯೆಗಳ ನಿವಾರಣೆಗೆ ಕ್ರಮ ಕೈಗೊಳ್ಳುವೆ.

* ಸ್ವಚ್ಛ ಆಡಳಿತ, ಭ್ರಷ್ಟಮುಕ್ತ ವ್ಯವಸ್ಥೆ ಕಲ್ಪಿಸುವುದಾಗಿ ಹೊಸ ಮತದಾರರಿಗೆ ಹೇಳುವೆ. ಕುಟುಂಬ, ಆಸ್ತಿ, ಸ್ವಂತ ಉದ್ಯಮ ಇಲ್ಲದ ನಾನು ಕ್ಷೇತ್ರದ ಅಭಿವೃದ್ಧಿಗೆ ಪ್ರಮಾಣಿಕವಾಗಿ ಶ್ರಮಿಸುವುದಾಗಿ ಅವರ ಮನವೊಲಿಸುವೆ.

* ಚುನಾವಣೆಯಲ್ಲಿ ಶೇ.100ರಷ್ಟು ಗೆಲುವಿನ ಅವಕಾಶವಿದೆ. ಕಾಂಗ್ರೆಸ್–ಬಿಜೆಪಿ ಜಗಳದಲ್ಲಿ ನನ್ನ ಗೆಲುವು ಸುಲಭವಾಗಲಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT