ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಂಡೇಲಾ ಜೀವನ ಯುವಜನರಿಗೆ ಮಾದರಿ’

Last Updated 10 ಡಿಸೆಂಬರ್ 2013, 5:30 IST
ಅಕ್ಷರ ಗಾತ್ರ

ಬಳ್ಳಾರಿ: ಮಹಾನ್ ಮಾನವತಾವಾದಿ, ದಕ್ಷಿಣ ಆಫ್ರಿಕಾದ ನೆಲ್ಸನ್ ಮಂಡೇಲಾ ಅವರ ಜೀವನ ಯುವಜನತೆಗೆ ಸ್ಫೂರ್ತಿದಾಯಕವೂ, ಮಾದರಿಯೂ ಆಗಿದೆ  ಎಂದು ನಿವೃತ್ತ ಉಪನ್ಯಾಸಕ ಪಿ. ಸತ್ಯನಾರಾಯಣರಾವ್‌ ಅಭಿಪ್ರಾಯಪಟ್ಟರು.

ನಗರದ ಗಾಂಧಿಭವನದ ಆವರಣದಲ್ಲಿರುವ ಹುತಾತ್ಮರ ಸ್ಮಾರಕದ ಬಳಿ ಭಾನುವಾರ ಮಲ್ಲಸಜ್ಜನ ವ್ಯಾಯಾಮ ಶಾಲೆ, ಮೇಡಂ ಕ್ಯೂರಿ ವಿಜ್ಞಾನ ಅಕಾಡೆಮಿ, ನಮ್ಮ ಬಳ್ಳಾರಿ ಡಾಟ್ ಕಾಮ್‌, ಪ್ರಸವ ಮತ್ತು ಸ್ರೀರೋಗ ವಿಜ್ಞಾನ ಸೊಸೈಟಿ ವತಿಯಿಂದ ಆಯೋಜಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಅವರು ನೆಲ್ಸನ್ ಮಂಡೇಲಾ ಅವರಿಗೆ ನುಡಿನಮನ ಸಲ್ಲಿಸಿದರು.

ಗಾಂಧೀಜಿಯವರ ಅಹಿಂಸಾವಾದದ ಜತೆಗೆ ಭಗತ್ ಸಿಂಗ್ ಅವರ ಕ್ರಾಂತಿಕಾರಿ  ವ್ಯಕ್ತಿತ್ವ ಹೊಂದಿದ್ದ ಮಂಡೇಲಾ, ವರ್ಣಭೇದ ನೀತಿಯನ್ನು ವಿರೋಧಿಸಿ ಹೋರಾಡಿ 27 ವರ್ಷಗಳ ಕಾಲ ಜೈಲು ವಾಸ ಅನುಭವಿಸಿದ್ದರು ಎಂದು ಅವರು ಹೇಳಿದರು.

ಜೀವನದ ಬಹು ಭಾಗವನ್ನು ಸೆರೆಮನೆಯಲ್ಲೇ ಕಳೆದು, ಬದುಕನ್ನೇ ಹೋರಾಟಕ್ಕಾಗಿ ಸಮರ್ಪಿಸಿ­ಕೊಂಡಿದ್ದ ಮಂಡೇಲಾ ಅವರ ತತ್ವಾದರ್ಶಗಳನ್ನು ಯುವಪೀಳಿಗೆ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಅವರು ತಿಳಿಸಿದರು.

ಮಹಾತ್ಮಾ ಗಾಂಧೀಜಿ ಅವರಿಂದ ಪ್ರಭಾವಿತ­ರಾಗಿದ್ದ ಮಂಡೇಲಾ ಅವರಿಗೆ ಭಾರತ ಸರ್ಕಾರವು ಅತ್ಯುನ್ನತ ಗೌರವವಾದ ‘ಭಾರತ ರತ್ನ’ ನೀಡಿ ಗೌರವಿಸಿರುವುದು ಸಮಂಜಸವಾಗಿದೆ ಎಂದು ಮಲ್ಲಸಜ್ಜನ ವ್ಯಾಯಾಮ ಶಾಲೆಯ ಅಧ್ಯಕ್ಷ ಡಾ. ಟೇಕೂರ್ ರಾಮನಾಥ್ ಹೇಳಿದರು.

ಭಾರತದಲ್ಲಿ ಜಾತೀಯತೆ ಇರುವಂತೆಯೇ ಆಫ್ರಿಕಾ­ದಲ್ಲಿ ವರ್ಣಭೇದ ನೀತಿ ಇತ್ತು. ಅದರ ವಿರುದ್ಧ ಸಿಡಿದೆದ್ದ ನೆಲ್ಸನ್ ಮಂಡೇಲಾ ದಕ್ಷಿಣ ಆಫ್ರಿಕಾದ ಗಾಂಧಿ­ಯಾಗಿ ಹೊರಹೊಮ್ಮಿದರು ಎಂದು ವ್ಯಾಯಾಮ ಶಾಲೆಯ ಕಾರ್ಯದರ್ಶಿ ಟಿ.ಜಿ. ವಿಠ್ಠಲ್ ಸ್ಮರಿಸಿದರು.

ದಕ್ಷಿಣ ಆಫ್ರಿಕಾದಲ್ಲಿ ಶೋಚನೀಯ ಸ್ಥಿತಿ ಎದುರಿಸುತ್ತಿದ್ದ ಮಹಿಳೆಯರಿಗೆ ವಿಶೇಷ ಗೌರವ ದೊರೆಯುವಲ್ಲಿ ಮಂಡೇಲಾ ಅವರ ಶ್ರಮ ಅನನ್ಯ ಎಂದು ಡಾ. ಕೆ.ಎನ್.ಎಂ.ಆಶಾರಾಣಿ ಹೇಳಿದರು.

ಗಾಯಕಿ ಎಸ್.ಲಕ್ಷ್ಮಿ ಅವರು ಮಂಡೇಲಾ ಅವರಿಗೆ ಗೀತನಮನ ಸಲ್ಲಿಸಿದರು. ಮೇಡಂ ಕ್ಯೂರಿ ವಿಜ್ಞಾನ ಅಕಾಡೆಮಿಯ ಅಧ್ಯಕ್ಷ ಎಸ್.ಮಂಜುನಾಥ ಕಾರ್ಯಕ್ರಮ ನಿರೂಪಿಸಿದರು. ಟಿಪ್ಪು ಸುಲ್ತಾನ್ ಫೆಡರೇಷನ್ ಅಧ್ಯಕ್ಷ ಕಪ್ಪಗಲ್‌ ರಸೂಲ್‌ಸಾಬ್, ನಮ್ಮ ಬಳ್ಳಾರಿ ಡಾಟ್ ಕಾಮ್‌ನ ಬಿ.ಬಸವರಾಜ್, ಎಚ್.ಎಂ. ಗುರುಸಿದ್ಧಮೂರ್ತಿ, ಎಸ್. ಅರ್ಜುನ್‌, ಎಸ್.ಶಿವಲೀಲಾ, ಎಸ್. ಶಿಲ್ಪಾ ಅಗಲಿದ ಚೇತನಕ್ಕೆ ಶ್ರದ್ಧಾಂಜಲಿ ಸಲ್ಲಿಸಿದರು.

ರಾಜ್ಯ ಮಟ್ಟಕ್ಕೆ ಆಯ್ಕೆ
ಕೊಟ್ಟೂರು: ಜಿಲ್ಲಾ ಮಟ್ಟದ ಗಣಿತ ಒಲಿಂಪಿಯಾಡ್‌ ಪರೀಕ್ಷೆ­ಯಲ್ಲಿ ಸಮೀಪದ ಹರಾಳು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೆಲ್ಕುದ್ರಿ ಲಿಂಗರಾಜು ಉತ್ತೀರ್ಣನಾಗಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾನೆ,

ಕೊಟ್ಟೂರು: ಕೊಟ್ಟೂರಿನ ಬಾಲಕಿಯರ ಸರಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿನಿ  ಪಿ. ಸ್ನೇಹಾ ಜಿಲ್ಲಾ ಮಟ್ಟದ ಗಣಿತ ಒಲಿಂಪಿಯಾಡ್‌ ಪರೀಕ್ಷೆ­ಯಲ್ಲಿ ಉತ್ತೀರ್ಣಳಾಗಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT