ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮತ ಜಾಗೃತಿ’ಗೆ ಮುರುಘಾ ಶರಣರ ಸಂಚಾರ

Last Updated 14 ಏಪ್ರಿಲ್ 2014, 9:53 IST
ಅಕ್ಷರ ಗಾತ್ರ

ಚಿತ್ರದುರ್ಗ: ಮುರುಘಾ ಮಠದ ಶಿವಮೂರ್ತಿ ಶರಣರು ಈ ಬಾರಿ ಮತದಾನ ಜಾಗೃತಿ ಅಭಿಯಾನ ಕೈಗೊಂಡಿದ್ದಾರೆ.
ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಸುತ್ತಾಡುತ್ತ ಮತದಾನದ ಮಹತ್ವವನ್ನು ಸಾರ್ವಜನಿಕರಿಗೆ ಮನವರಿಕೆ ಮಾಡಿಕೊಡುತ್ತಿರುವ ಶರಣರೊಂದಿಗೆ ‘ಪ್ರಜಾವಾಣಿ’ ನಡೆಸಿದ ಸಂವಾದದ ಆಯ್ದ ಭಾಗ ಇಲ್ಲಿದೆ.

* ಮತದಾನ ಜಾಗೃತಿ ಅಭಿಯಾನಕ್ಕೆ ಪ್ರೇರಣೆ ಏನು?
ಪ್ರತಿ ಚುನಾವಣೆಯಲ್ಲಿ ಮತದಾನದ ಪ್ರಮಾಣ ಕ್ಷೀಣಿಸುತ್ತಿದೆ. ಅಕ್ಷರ ಬಲ್ಲವರೇ ಮತದಾನ ಮಾಡಲು ಸಿನಿಕತನ ಪ್ರದರ್ಶಿಸುತ್ತಿದ್ದಾರೆ. ಇದು ಯುವ ಮತದಾರರ ಮೇಲೂ ಪರಿಣಾಮ ಬೀರುತ್ತಿರುವುದನ್ನು ನಾನು ಸೂಕ್ಷ್ಮವಾಗಿ ಗಮನಿಸಿದ್ದೆ. ಇದರ
ಜೊತೆಗೆ ಅಕ್ಷರ ಬಾರದವರು ಹಣಕ್ಕಾಗಿ

ಮತ ಮಾರಾಟ ಮಾಡಿಕೊಳ್ಳುತ್ತಿರುವ ವಿಚಾರವೂ ನನ್ನನ್ನು ಬಹಳವಾಗಿ ಕಾಡಿತ್ತು. ಈ ಎಲ್ಲವನ್ನೂ ಪರಿಗಣಿಸಿ, ಮತದಾನ ಜಾಗೃತಿಗೆ ಸ್ವತಃ ನಾನೇ ಬೀದಿಗಿಳಿದು ಪ್ರಚಾರಕ್ಕೆ ಮುಂದಾದೆ.

* ಎಲ್ಲೆಲ್ಲಿ ಪ್ರಚಾರ ಮಾಡಿದ್ದೀರಿ ?
ಕೆಲವು ತಿಂಗಳಿನಿಂದ ‘ಮತದಾನ ಜಾಗೃತಿ ಅಭಿಯಾನ’  ಮಾಡುತ್ತಿದ್ದೇನೆ. ನಮ್ಮ  ಮಠದಲ್ಲಿ ನಡೆಯುವ  ಸಾಮೂ­ಹಿಕ ವಿವಾಹ, ಯುಗಾದಿ ನಂತರದ ಚಂದ್ರದರ್ಶನದ ದಿನ, ನಮ್ಮ ಸಂಸ್ಥೆಯ ಶಾಲಾ–ಕಾಲೇಜುಗಳು, ವಿಶೇಷವಾಗಿ ಲಕ್ಷಗಟ್ಟಲೆ
ಜನ ಸೇರುವ ಜಾತ್ರೆಗಳಲ್ಲಿ ಮತ ಜಾಗೃತಿ ಅಭಿಯಾನ ನಡೆಸಿದ್ದೇನೆ. ಕಡೂರು, ರಾಣೆಬೆನ್ನೂರು, ಹಾವೇರಿ ಜಿಲ್ಲೆಗಳಲ್ಲೂ ಪಾದಯಾತ್ರೆ ಮಾಡಿ ಪ್ರಚಾರ ಮಾಡಿದ್ದೇನೆ. ಈಚೆಗೆ ಮನೆ ಮನೆಗೆ ಭೇಟಿ ನೀಡಿ ಮತ ಚೀಟಿಗಳನ್ನು ನೀಡಿದ್ದೇನೆ.

ರಾಜ್ಯಮಟ್ಟದ ಪತ್ರಿಕೆಗಳು, ಸ್ಥಳೀಯ ಪತ್ರಿಕೆಗಳಲ್ಲಿ ಮತದಾನದ ಬಗ್ಗೆ ಸಾಕಷ್ಟು ಬರೆದಿದ್ದೇನೆ. ಸ್ವತಃ ನಮ್ಮ ಮಠದಿಂದ ಮತದಾನ ಜಾಗೃತಿ ಕುರಿತು ಕರಪತ್ರ­ಗಳನ್ನು ಮುದ್ರಿಸಿ, ಭಕ್ತರ ನೆರವಿನೊಂದಿಗೆ ಹಂಚಿದ್ದೇವೆ. ಇಡೀ ಅಭಿಯಾನ ನನಗೆ ಸಮಾಧಾನ ನೀಡಿದೆ. ಜನರಲ್ಲಿ ಮತದಾನದ ಬಗ್ಗೆ ನಿಜವಾಗಿಯೂ ಅರಿವು ಮೂಡಿಸುವ ಅಗತ್ಯವಿದೆ ಎಂದು ಗೊತ್ತಾಗಿದೆ.

* ಏನಾದರೂ ವಿಶೇಷ ಅನುಭವ ?
ವಾರದ ಹಿಂದೆ ಕಡೂರು ತಾಲ್ಲೂಕಿ­ನಲ್ಲಿ ಜಾತ್ರೆಗಾಗಿ ನನ್ನನ್ನು ಆಹ್ವಾನಿಸಿ­ದ್ದರು. ರಥೋತ್ಸವದ ವೇಳೆ ಎತ್ತರದ ವೇದಿಕೆ
ಹತ್ತಿ, ಮೈಕ್ ಹಿಡಿದು, ಮತ­ದಾನ ಜಾಗೃತಿ ಕುರಿತು ಮಾತನಾಡಿದೆ. ಲಕ್ಷಾಂತರ ಭಕ್ತ ಸಮೂಹ, ಕೈ ಮೇಲೆತ್ತಿ ‘ಮತದಾನ ಸಂಕಲ್ಪ’ದ ಸಂಜ್ಞೆ ತೋರಿ­ದರು. ಇದು ಮರೆಯಲಾರದ ಘಟನೆ.

ಪ್ರತಿ ತಿಂಗಳ 5ರಂದು ಶ್ರೀಮಠದಲ್ಲಿ ನಡೆದ ಸಾಮೂಹಿಕ ವಿವಾಹದಲ್ಲಿ ಪಾಲ್ಗೊಂಡವರಿಗೆ ‘ಹಣಕ್ಕಾಗಿ ಮತ ಮಾರಿಕೊಳ್ಳದಂತೆ’ ಪ್ರತಿಜ್ಞೆ ಮಾಡಿಸಿ­ದ್ದೇವೆ. ಆರಂಭದಲ್ಲಿ ಸ್ವಲ್ಪ ಕೊಸರಾಡಿದ ಮಂದಿ, ಪ್ರತಿಜ್ಞಾ ವಿಧಿ ಬೋಧಿಸಿದ ಮೇಲೆ, ಈ ಬಾರಿ ಹಣ ಮುಟ್ಟುವುದಿಲ್ಲ­ವೆಂದು ಪ್ರತಿಜ್ಞೆ ಮಾಡಿದರು. ಯುವಕ– ಯುವತಿಯರ ಜೊತೆ ಹಲವು ಹಂತಗ­ಳಲ್ಲಿ ಮಾಡಿದ ಪಾದಯಾತ್ರೆ, ನಂತರ­ದಲ್ಲಿ ಅವರಲ್ಲಿ ಉಂಟಾದ ಬದಲಾ­ವಣೆ, ನೀಡಿದ ಪ್ರತಿಕ್ರಿಯೆ ನಿಜಕ್ಕೂ ಅದ್ಭುತವಾಗಿತ್ತು.

ಈಚೆಗೆ ಸ್ವೀಪ್ ಸಮಿತಿಯೊಂದಿಗೆ ಮುಂಜಾನೆಯೇ ವಿದ್ಯಾನಗರದಲ್ಲಿರುವ ಮನೆ ಮನೆಗೆ ತೆರಳಿ ‘ಮತದಾನ ಜಾಗೃತಿ ಅರಿವು ಮೂಡಿಸಿದೆವು. ಜನರ ಪ್ರತಿ­ಕ್ರಿಯೆಯಿಂದ ನಾನು ‘ಥ್ರಿಲ್’ ಆದೆ. ಧಾರ್ಮಿಕ ಗುರುಗಳೊಬ್ಬರು ಮನೆ ಬಾಗಿಲಿಗೆ ಬಂದಿರುವುದು ಜನರಿಗೂ ಖುಷಿಯಾಯ್ತು. ಈ ಬಡಾವಣೆಯಲ್ಲಿ ಕಳೆದ ವರ್ಷ ಕಡಿಮೆ ಮತದಾನ­ವಾಗಿತ್ತು. ಅದಕ್ಕಾಗಿ ಈ ಪ್ರದೇಶ ಆಯ್ಕೆ ಮಾಡಿಕೊಂಡಿದ್ದೆವು.

ನಾನು ಯಾವುದೇ ಕಾರ್ಯಕ್ರಮ­ದಲ್ಲಿ ಭಾಗವಹಿಸಿದ್ದರೂ, ಹತ್ತು ನಿಮಿಷ­ವನ್ನು ಮತದಾನ ಜಾಗೃತಿಗೆ ಮೀಸಲಿಡು­ತ್ತೇನೆ.

* ನಿಜಕ್ಕೂ ಈ ‘ಜಾಗೃತಿ’ ಪರಿಣಾಮ ವಾಗುತ್ತದೆ ಎನ್ನಿಸಿದೆಯೇ ?
ಕಳೆದ ಚುನಾವಣೆಯಲ್ಲಿ ಮತದಾನ ಜಾಗೃತಿ ಪ್ರಯತ್ನ ಮಾಡಿದ್ದೆವು. ಸ್ವಲ್ಪ ಮಟ್ಟಿಗೆ ಯಶಸ್ಸು ಸಿಕ್ಕಿತ್ತು. ಆದರೆ ಈ ವರ್ಷ ಖಂಡಿತವಾಗಿ ಮತದಾನದ ಪ್ರಮಾಣ ಹೆಚ್ಚಾಗುವ ವಿಶ್ವಾಸವಿದೆ. ಮುಂದಿನ ಚುನಾವಣೆಗಳಲ್ಲಿ ಜಿಲ್ಲಾ­ವಾರು ವೇಳಾಪಟ್ಟಿ ತಯಾರಿಸಿಕೊಂಡು ಪ್ರಚಾರ ಕೈಗೊಳ್ಳುತ್ತೇವೆ. ಆಯಾ ಜಿಲ್ಲೆಯಲ್ಲಿರುವ ಮಠದ ಭಕ್ತರು, ಶಾಖಾ ಮಠಗಳನ್ನು ಜಾಗೃತಿಗಾಗಿ ಬಳಸಿಕೊಳ್ಳುತ್ತೇವೆ.

* ಇತರ ಮಠಾಧೀಶರಿಗೆ ನಿಮ್ಮ ಸಲಹೆ  ?
ಮತ ‘ದಾನ’ವಲ್ಲ, ಅದು ಒಂದು ‘ಹಕ್ಕು’ ಎನ್ನುವುದನ್ನು ಎಲ್ಲ ಧರ್ಮ­ಗುರು­ಗಳು ತಮ್ಮ ಭಕ್ತ ಸಮೂಹಕ್ಕೆ ತಿಳಿಸುವ ಕೆಲಸ ಮಾಡಬೇಕು. ಸ್ವಾಮೀಜಿ­ಗಳ ಮಾತು ಕೇಳುವ ಭಕ್ತರು ಖಂಡಿತಾ ತಪ್ಪದೇ ಮತದಾನ ಮಾಡು­ತ್ತಾರೆ. ಶೈಕ್ಷ­ಣಿಕ ಸಂಸ್ಥೆಗಳನ್ನು ನಡೆಸುವ ಮಠ­ಗಳು ವಿದ್ಯಾರ್ಥಿಗಳಿಗೆ ಮತದಾನ ಕುರಿತು ಅರಿವು ಮೂಡಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT