ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮನೆಗೊಬ್ಬ ಮೋದಿ’ ಕೃತಿಯಲ್ಲಿ ಅನಂತಮೂರ್ತಿ ಬರಹ!

Last Updated 4 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಸದೃಢ ಭಾರತ ನಿರ್ಮಾಣಕ್ಕಾಗಿ ಮನೆಗೊಬ್ಬ ಮೋದಿ’ ಎಂಬ ಕೃತಿಯನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಹೆಸರಿನಲ್ಲಿ ಯಾರೋ ಅನಾಮಿಕರು ಹೊರ­ತಂದಿದ್ದು, ಅದರಲ್ಲಿ ಗಿರೀಶ ಕಾರ್ನಾಡ್‌, ಎಸ್‌.ಎಲ್‌. ಭೈರಪ್ಪ, ಯು.ಆರ್‌. ಅನಂತಮೂರ್ತಿ, ಬರಗೂರು ರಾಮ­ಚಂದ್ರಪ್ಪ, ಎಂ.ಚಿದಾ­ನಂದ­ಮೂರ್ತಿ ಮತ್ತಿತರರು ಲೇಖನ ಬರೆದಿದ್ದಾರೆ ಎನ್ನುವಂತೆ ಬಿಂಬಿಸಲಾಗಿದೆ.

ಸಾರ್ವಜನಿಕರಲ್ಲಿ ತಪ್ಪು ಅಭಿಪ್ರಾಯ  ಬಿಂಬಿಸುವಂತಹ ಇಂತಹ ಕುಚೋದ್ಯದ ಕೆಲಸವನ್ನು ಕೆಲವರು ಮಾಡಿದ್ದು, ಆ ಕೃತಿಯನ್ನು ಅಂಚೆ ಮೂಲಕ ಹಿರಿಯ ಸಾಹಿತಿಗಳಿಗೆ ರವಾನೆ ಮಾಡಲಾಗಿದೆ. ಹಾಗೆ ಅಂಚೆಯಲ್ಲಿ ಬಂದ ಕೃತಿಯೊಂದು ಚಿದಾನಂದಮೂರ್ತಿ ಅವರ ಮೂಲಕ ‘ಪ್ರಜಾವಾಣಿ’ಗೆ ಲಭ್ಯವಾಗಿದೆ.

ಪುಸ್ತಕದ ಮುಖಪುಟದಲ್ಲಿ ಮೋದಿ ಅವರ ಚಿತ್ರವಿದ್ದು, ಎಚ್‌.ಎಚ್‌. ಮಹದೇವ್‌ ಎಂಬುವವರು ಈ ಕೃತಿಯ ಸಂಪಾದಕರು ಎನ್ನುವಂತೆ ಬಿಂಬಿಸ­ಲಾಗಿದೆ. ಮುಖಪುಟದಲ್ಲಿ ಸಾಮಾನ್ಯವಾಗಿ ಪ್ರಕಾಶನ ಸಂಸ್ಥೆ ಹೆಸರು ಹಾಕುವ ಸ್ಥಳದಲ್ಲಿ ‘ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಬೆಂಗಳೂರು’ ಎಂದು ಬರೆಯಲಾಗಿದೆ. ಅದೇ ಒಳಪುಟದಲ್ಲಿ ಸ್ವಪ್ನ ಪುಸ್ತಕ ಪ್ರಕಾಶನ, ಗಾಂಧಿನಗರ, ಬೆಂಗಳೂರು’ ಎಂದು ಮುದ್ರಿಸಲಾಗಿದೆ.

‘ಧರ್ಮ ಹಾಗೂ ದೇಶಕ್ಕಾಗಿ ಹೋರಾಡಿ ಮಡಿದ ವಿಜಯನಗರದ ಸಾಮ್ರಾಟ ಕೃಷ್ಣದೇವರಾಯ ಹಾಗೂ ಹಿಂದೂ ಧರ್ಮರಕ್ಷಕ ಛತ್ರಪತಿ ಶಿವಾಜಿ ಮಹಾರಾಜರ ದಿವ್ಯ ಸ್ಮರಣೆಗೆ ಈ ಕೃತಿ ಅರ್ಪಿತ’ ಎಂದು ಬರೆಯಲಾಗಿದೆ. ಎಲ್ಲಕ್ಕಿಂತ ಹೆಚ್ಚಿನ ಕುಚೋದ್ಯದ ಸಂಗತಿ ಎಂದರೆ ವಿಷಯ ಸೂಚಿಯಲ್ಲಿನ ವಿವರ. ‘ಅಂದಿನಿಂದ ಇಂದಿನವರೆಗೆ ಕಾಂಗ್ರೆಸ್‌ ಆಡಳಿತ’ ಲೇಖನವನ್ನು ಕಾರ್ನಾಡರು ಬರೆದಿರುವಂತೆ ಬಿಂಬಿಸಲಾಗಿದೆ.

‘ಹಂತ ಹಂತವಾಗಿ ಇಸ್ಲಾಂ ರಾಷ್ಟ್ರವಾಗುತ್ತಿರುವ ಭಾರತ – ಎಸ್‌.ಎಲ್‌. ಭೈರಪ್ಪ, ಭ್ರಷ್ಟ ರಾಜ್ಯಪಾಲ ಎಚ್‌.ಆರ್‌. ಭಾರದ್ವಾಜ್‌– ಯು.ಆರ್‌. ಅನಂತಮೂರ್ತಿ ಮತ್ತು ಸಂತೋಷಕುಮಾರ್‌ ಹೆಗ್ಡೆ, ಕಡುಭ್ರಷ್ಟ ಮುಖ್ಯಮಂತ್ರಿ – ದಿನೇಶ್‌ ಅಮಿನ್‌ಮಟ್ಟು, ವೀರಶೈವ–ಲಿಂಗಾಯತ: ಜಾತಿಯೇ, ಧರ್ಮವೇ, ಒಂದು ಚಿಂತನೆ– ಚಿದಾನಂದಮೂರ್ತಿ, ದ್ರಾವಿಡಾರ್ಯ, ದ್ರಾವಿಡ ಬ್ರಾಹ್ಮಣ – ಬರಗೂರು ರಾಮಚಂದ್ರಪ್ಪ ಮತ್ತು ಗೌರಿ ಲಂಕೇಶ್‌ ಎಂಬ ವಿವರ (ಬರಹ–ಲೇಖಕರು) ವಿಷಯ ಸೂಚಿಯಲ್ಲಿದೆ.

ಜಾತಿ ಹಾಗೂ ಕುಟುಂಬ ಪಕ್ಷ: ಜೆಡಿಎಸ್‌ – ವೈಎಸ್‌ವಿ ದತ್ತ, ನೋವಿನ ಹಾಡು – ದಲಿತ ಕವಿ ಎಚ್‌.ಎಚ್‌. ಮಹದೇವ ಎಂದು ಬರೆಯಲಾಗಿದೆ. ಗಣ್ಯರನ್ನು ಗೇಲಿಮಾಡುವ ಉದ್ದೇಶ­ದಿಂದಲೇ ಈ ರೀತಿ ಮಾಡಲಾಗಿದೆ ಎಂದು ಶಂಕಿಸಲಾಗಿದೆ. ವಿಷಯ ಸೂಚಿಯಲ್ಲಿ ಈ ವಿವರಗಳಿದ್ದರೂ ಬರಹಗಳಲ್ಲಿ ಅವರ ಪ್ರಸ್ತಾಪ ಇಲ್ಲ.

ಚಂದ್ರಶೇ‘ಕ’ರ  ಪಾಟೀಲ್‌ ಎನ್ನುವವರು ಈ ಕೃತಿಗೆ ಮುನ್ನಡಿ ಬರೆದಿದ್ದು, ಲೇಖನದ ತುಂಬಾ ಕಾಗುಣಿತ ದೋಷಗಳು ಹೇರಳವಾಗಿವೆ. ‘ಕೆಲವು ನಂಬಲಾಗದ, ನುಂಗಲಾಗದ ಸತ್ಯಗಳನ್ನು ಈ ಪಾಪಿ ಬರೆದಿದ್ದಾನೆ’ ಎಂಬ ವಾಕ್ಯ ಅದರಲ್ಲಿದೆ. ‘ಆ ಪಾಪಿ’ ಯಾರು ಎಂಬ ಮಾಹಿತಿ ಇಲ್ಲ. ‘ವಿಮಾನ ನಿಲ್ದಾಣಕ್ಕೆ ತಮಿಳುನಾಡಿನ, ತಮಿಳು ಭಾಷಿಕನ ಹೆಸರು ನಾಮಕರಣ ಮಾಡಲಾಗಿದೆ’ ಎಂದು ತಿಳಿಸಲಾಗಿದೆ.

ಕೊನೆಯ ಪುಟದಲ್ಲಿ ವಿಜಯದ ಸಂಕೇತ ತೋರುತ್ತಿರುವ ಮೋದಿ ಅವರ ಮತ್ತೊಂದು ಚಿತ್ರವಿದ್ದು ಅದರ ಕೆಳಗೆ ‘ನಮೋ ನಮಃ’ ಎಂದು ಮುದ್ರಿಸಲಾಗಿದ್ದು, ಅದರ ಅಡಿಯಲ್ಲಿ ‘ಇಟ್ಟಾಲ್ಲಿ (ಇಟಲಿ?) ಕಾಂಗ್ರೆಸ್‌ ಸೋಲ್ಲಿಸಿ (ಸೋಲಿಸಿ?) ಭಾರತವನು ಗೆಲ್ಲಿಸಿ’ ಎಂದು ದಪ್ಪಕ್ಷರದಲ್ಲಿ ಬರೆಯಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT