ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮನೋವೈಕಲ್ಯ ಕಾಯಿಲೆ ಅಲ್ಲ; ಬೆಳವಣಿಗೆ ದೋಷ’

Last Updated 9 ಡಿಸೆಂಬರ್ 2013, 8:31 IST
ಅಕ್ಷರ ಗಾತ್ರ

ಶಿರಸಿ: ‘ಮನೋವೈಕಲ್ಯ ಕಾಯಿಲೆ ಅಲ್ಲ, ಅದು ಮೆದುಳಿನ ಬೆಳವಣಿಗೆಯ ದೋಷವಾಗಿದೆ, ಬಾಲ್ಯದಲ್ಲೇ ಅದನ್ನು ಗುರುತಿಸಿ ತರಬೇತಿ ನೀಡಿದರೆ ಅಂತಹ ಮಕ್ಕಳಿಗೆ ಸ್ವತಂತ್ರವಾಗಿ ಬದುಕಲು ಅವಕಾಶ ಮಾಡಿಕೊಡಬಹುದು’ ಎಂದು ರಾಜ್ಯ ಮಾನಸಿಕ ಆರೋಗ್ಯಪಡೆಯ ಅಧ್ಯಕ್ಷ, ಮನೋವೈದ್ಯ ಡಾ.ಅಶೋಕ ಪೈ ಹೇಳಿದರು.

ಇಲ್ಲಿನ ಅಜಿತ ಮನೋಚೇತನಾ ಕೇಂದ್ರ ನಡೆಸುತ್ತಿರುವ ವಿಕಾಸ ಮಕ್ಕಳ ಶಾಲೆ ವಾರ್ಷಿಕೋತ್ಸವ, ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು. ‘ಮಾನಸಿಕ ದೋಷವುಳ್ಳ ಮಕ್ಕಳನ್ನು ಪಾಲಕರು ಚಿಕ್ಕಂದಿನಲ್ಲಿ ಗುರುತಿಸಿ ಸೂಕ್ತ ತರಬೇತಿ ನೀಡಬೇಕು. ಶೇ 70ರಷ್ಟು ಪ್ರಕರಣಗಳಲ್ಲಿ ಪಾಲಕರು ಮಕ್ಕಳು ಹದಿಹರೆಯಕ್ಕೆ ಕಾಲಿಟ್ಟ ನಂತರ ವೈದ್ಯರ ಬಳಿ ಕರೆತರುತ್ತಾರೆ. ಈ ಹಂತದಲ್ಲಿ ಗುಣಪಡಿಸುವುದು ಕಷ್ಟಸಾಧ್ಯ. ಚಿಕ್ಕ ವಯಸ್ಸಿನಲ್ಲಿ ತರಬೇತಿ ನೀಡಿದರೆ 25ನೇ ವಯಸ್ಸಿಗೆ ಕಾಲಿಡುವ ಹೊತ್ತಿಗೆ ಅಂತಹ ಮಕ್ಕಳನ್ನು ಸ್ವತಂತ್ರ ಜೀವನ ನಡೆಸುವ ಹಂತಕ್ಕೆ ತರಲು ಸಾಧ್ಯವಿದೆ’ ಎಂದರು.

‘ವಿಶ್ವ ಆರೋಗ್ಯ ಸಂಸ್ಥೆ ವರದಿ ಪ್ರಕಾರ ಏಷ್ಯಾ ಉಪಖಂಡದಲ್ಲಿ ಶೇ 2 ಚಿತ್ತವಿಕಲತೆ, ಶೇ 4 ಚಿತ್ತಚಾಂಚಲ್ಯ, ಶೇ 4 ವ್ಯಕ್ತಿತ್ವ ದೋಷ, ಶೇ 2 ವರ್ತನೆ ವ್ಯತ್ಯಾಸದಂತಹ ವಿಶೇಷ ಅಗತ್ಯವುಳ್ಳ ಜನರಿದ್ದಾರೆ. ಭಾರತದಲ್ಲಿ ಇಂತಹ ತೊಂದರೆಯಿಂದ ಬಳಲುತ್ತಿರುವ ಒಟ್ಟು ಜನಸಂಖ್ಯೆಯ ಶೇ 12ರಷ್ಟು ಜನರಿಗೆ ಚಿಕಿತ್ಸೆಯ ಅವಶ್ಯಕತೆ ಇದೆ. ಆದರೆ ಕೇವಲ 4 ಸಾವಿರ ಮನೋವೈದ್ಯರು ದೇಶದಲ್ಲಿದ್ದಾರೆ. ಮನಃಶಾಸ್ತ್ರದ ನರ್ಸಿಂಗ್‌ ಕೋರ್ಸ್‌ ಮಾಡಿದವರು 300ಕ್ಕೂ ಮಿಕ್ಕಿ ಇಲ್ಲ. ಪ್ರತಿ 28 ಲಕ್ಷ ಜನರಿಗೆ ಒಬ್ಬರಷ್ಟು ಮಾತ್ರ ನರ್ಸ್‌ ಲಭ್ಯತೆ ಇದೆ’ ಎಂದರು.

‘ಪ್ರತಿ ಜಿಲ್ಲೆಯಲ್ಲಿ 60 ಜನಕ್ಕೆ ಪುನಶ್ಚೇತನ ಕೇಂದ್ರ ಹಾಗೂ ಚಿಕಿತ್ಸಾ ಕೇಂದ್ರ ತೆರೆಯಬೇಕು ಎಂಬ ರಾಜ್ಯ ಆರೋಗ್ಯ ಕಾರ್ಯಪಡೆಯ ಶಿಫಾರಸಿಗೆ ಸರ್ಕಾರ ಸ್ಪಂದಿಸಿದೆ. ಆದರೆ ಕಾರ್ಯನಿರ್ವಹಣೆಗೆ ಮನೋವೈದ್ಯರ ಕೊರತೆ ಎದುರಾಗಿದ್ದು, ಸಾಮಾಜಿಕ ಕಳಕಳಿ ಇರುವ ಸಂಸ್ಥೆಗಳು ಆಸಕ್ತಿ ತೋರಿದರೆ ನೆರವು ನೀಡಲಾಗುವುದು’ ಎಂದರು.

‘ಸಮಾಜ ಕಲ್ಯಾಣ ಇಲಾಖೆ ಅಡಿಯಲ್ಲಿ 137 ಬುದ್ಧಿಮಾಂದ್ಯ ಮಕ್ಕಳ ಶಾಲೆಯಿದೆ. ಆದರೆ ಬೆರಳೆಣಿಕೆಯ ಶಾಲೆಗಳು ಉತ್ತಮ ಕಾರ್ಯನಿರ್ವಹಣೆ ಮಾಡುತ್ತಿವೆ. 17 ವರ್ಷಗಳಿಂದ ಶಾಲೆ ನಡೆಸುತ್ತಿರುವ ಅಜಿತ ಮನೋಚೇತನಾ ಕಾರ್ಯ ಶ್ಲಾಘನೀಯವಾಗಿದೆ’ ಎಂದರು.

ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಯ ಹಿರಿಯ ಶಸ್ತ್ರಚಿಕಿತ್ಸಾ ತಜ್ಞೆ ಡಾ.ವಿಜಯಲಕ್ಷ್ಮಿ ದೇಶಮಾನೆ ಮಾತನಾಡಿ, ‘ಬುದ್ಧಿಮಾಂದ್ಯ ಮಕ್ಕಳ ಕೆಲಸ ದೇವರ ಕೆಲಸವಾಗಿದ್ದು, ಈ ಕ್ಷೇತ್ರದಲ್ಲಿ ಸಂಘಟನಾತ್ಮಕ ಕೆಲಸದ ಅವಶ್ಯಕತೆ ಇದೆ’ ಎಂದರು.

ಈ ಸಂದರ್ಭದಲ್ಲಿ ಮಹಾದೇವ ಭಟ್ಟ ಕಿವುಡ ಮಕ್ಕಳ ಶಾಲೆಯ ಮುಖ್ಯ ಶಿಕ್ಷಕಿ ಪ್ರೇಮಲತಾ ನಾಯ್ಕ ಅವರನ್ನು ಸನ್ಮಾನಿಸಲಾಯಿತು. ಮನೋವೈದ್ಯ ಡಾ.ಶ್ರೀನಿವಾಸ ಕುಲಕರ್ಣಿ, ಹಿಂದೂ ಸೇವಾ ಪ್ರತಿಷ್ಠಾನದ ಸುರೇಶ, ಟ್ರಸ್ಟ್‌ ಅಧ್ಯಕ್ಷ ಸುಧೀರ ಭಟ್ಟ, ಕಾರ್ಯದರ್ಶಿ ಅನಂತ ಅಶೀಸರ, ದಾನಿ ಕೃಷ್ಣಮೂರ್ತಿ ಪೈ,  ಪಿ.ಎಚ್‌.ನಾಯ್ಕ ಉಪಸ್ಥಿತರಿದ್ದರು.

ಭಗವದ್ಗೀತಾ ಶ್ಲೋಕ ಪಠಣ ಕೇಂದ್ರವನ್ನು ಶಾಂತಾರಾಮ ಸಿದ್ದಿ ಉದ್ಘಾಟಿಸಿದರು. ‘ಭಗವದ್ಗೀತೆ ಮತ್ತು ಮನಃಶಾಸ್ತ್ರ’ ಕುರಿತು ನಾರಾಯಣ ಹೆಗಡೆ ಉಪನ್ಯಾಸ ನೀಡಿದರು. ಉದಯ ಸ್ವಾದಿ ಸ್ವಾಗತಿಸಿದರು. ವಿ.ಎಂ.ಭಟ್ಟ ಕಾರ್ಯಕ್ರಮ ನಿರೂಪಿಸಿದರು.

ವಿಕಾಸ ಶಾಲೆಯ ಮಕ್ಕಳು ಒನಕೆ ಓಬವ್ವನಾಗಿ, ಸ್ವಾಮಿ ವಿವೇಕಾನಂದ, ಸಂನ್ಯಾಸಿ, ಬೇಟೆಗಾರನಾಗಿ ಛದ್ಮವೇಷದಲ್ಲಿ ಕಾಣಿಸಿಕೊಂಡು ಗಮನ ಸೆಳೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT