ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಹಾದಾಯಿ ನ್ಯಾಯಮಂಡಳಿ ಕಣ್ಣೊರೆಸುವ ತಂತ್ರ’

Last Updated 16 ಡಿಸೆಂಬರ್ 2013, 5:39 IST
ಅಕ್ಷರ ಗಾತ್ರ

ಬೆಳಗಾವಿ: ‘ಮಹಾದಾಯಿ ನದಿ ತಿರುವು ಯೋಜನೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಮಹಾದಾಯಿ ನ್ಯಾಯಮಂಡಳಿ ರಚಿಸಿರುವುದು ಕಣ್ಣೊರೆಸುವ ತಂತ್ರವಾಗಿದೆ. ಮುಂಬರುವ ಲೋಕಸಭೆ ಚುನಾವಣೆ ದೃಷ್ಟಿಯಲ್ಲಿ ಇಟ್ಟುಕೊಂಡು ಮತ ಗಿಟ್ಟಿಸುವ ರಾಜಕೀಯ ಉದ್ದೇಶದಿಂದ ಇದನ್ನು ರಚಿಸಲಾಗಿದೆ’ ಎಂದು ಕಳಸಾ– ಬಂಡೂರಿ ಮಲಪ್ರಭಾ ಜೋಡಣಾ ಯುವ ಹೋರಾಟ ಕೇಂದ್ರ ಸಮಿತಿ ಅಧ್ಯಕ್ಷ ವಿಜಯ ಕುಲಕರ್ಣಿ ಆರೋಪಿಸಿದರು.

‘ಈ ಯೋಜನೆಗೆ ಚಾಲನೆ ನೀಡಿ 54 ವರ್ಷಗಳು ಗತಿಸಿವೆ. ಕಾವೇರಿ ಹಾಗೂ ಕೃಷ್ಣಾಕೊಳ್ಳದ ನ್ಯಾಯಮಂಡಳಿ ರಚನೆ ಗೊಂಡ ಹಲವು ದಶಕಗಳು ಕಳೆದರೂ ಇನ್ನೂ ಇತ್ಯರ್ಥ ಗೊಂಡಿಲ್ಲ. ಹೀಗಿರುವಾಗ ಕುಡಿಯುವ ನೀರಿನ ಯೋಜನೆಗೆ ನ್ಯಾಯಮಂಡಳಿ ರಚಿಸುವ ಅಗತ್ಯ ಏನಿತ್ತು. ಚುನಾವಣೆ ಬಂದಾಗ ಸರ್ಕಾರವು ಕಾಮಗಾರಿ ಪೂರ್ಣಗೊಳಿಸುವ ಬಗ್ಗೆ ಮಾತನಾಡುತ್ತಿದೆ’ ಕುಲಕರ್ಣಿ ಅವರು ಭಾನುವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

‘ಈ ಯೋಜನೆಗೆ ವಿವಾದ ಇತ್ಯರ್ಥಗೊಳಿಸಲು ಸುಪ್ರೀಂ ಕೋರ್ಟ್‌ ಮೂರು ಬಾರಿ ಕರ್ನಾಟಕ ಹಾಗೂ ಗೋವಾ ರಾಜ್ಯಕ್ಕೆ ಪೂರಕ ದಾಖಲೆಗಳನ್ನು ನೀಡುವಂತೆ ಸೂಚಿಸಿದರೂ ಯಾರೂ ಕೊಟ್ಟಿಲ್ಲ. ಹೀಗಾಗಿ ಬಳಿಕ ಅದು ಪ್ರಧಾನಿ ಮಧ್ಯಸ್ಥಿಕೆ ವಹಿಸಿ ಕುಡಿಯುವ ನೀರಿನ ಯೋಜನೆಗೆ ಚಾಲನೆ ನೀಡಬೇಕು ಎಂದು ಸೂಚಿಸಿದೆ. ಈಗ ಕೇಂದ್ರ ಹಾಗೂ ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರವೇ ಇದೆ. ಹೀಗಾಗಿ ಪ್ರಧಾನಿ ಮನಮೋಹನ್‌ ಸಿಂಗ್‌ ಅವರು ಮಧ್ಯಸ್ಥಿಕೆ ವಹಿಸಿ ಕೂಡಲೇ ಈ ಯೋಜನೆಯ ಕಾಮಗಾರಿಗೆ ತಾತ್ಕಾಲಿಕವಾಗಿ ಚಾಲನೆ ನೀಡಬೇಕು. ಇಲ್ಲದಿದ್ದರೆ ಬೆಳಗಾವಿ, ಧಾರವಾಡ, ಗದಗ ಹಾಗೂ ಬಾಗಲಕೋಟೆ ಜಿಲ್ಲೆಗಳ 10 ತಾಲ್ಲೂಕುಗಳಲ್ಲಿ 24 ಗಂಟೆ ನೀರು ಕೊಡುವ ವ್ಯವಸ್ಥೆಯನ್ನು ಪ್ರಧಾನಿ ಮಾಡಬೇಕು’ ಎಂದು ಕುಲಕರ್ಣಿ ಒತ್ತಾಯಿಸಿದರು.

‘ಮಹಾದಾಯಿ ಕಣಿವೆಯ 6 ಹಳ್ಳಗಳ ನೀರನ್ನು ಬಳಸಿಕೊಂಡರೆ ಮಲಪ್ರಭಾ ಜಲಾಶಯಕ್ಕೆ 37.70 ಟಿಎಂಸಿ ನೀರು ಹರಿದು ಬಂದು ಭರ್ತಿಯಾಗುತ್ತದೆ. ಬಂಡೂರಿಯಿಂದ 4.23 ಟಿಎಂಸಿ ಹಾಗೂ ಕಳಸಾ ಹಳ್ಳದಿಂದ 3.33 ಟಿಎಂಸಿ ನೀರು ಸೇರಿದಂತೆ ಒಟ್ಟು 7.56 ಟಿಎಂಸಿ ನೀರು ಲಭಿಸುತ್ತಿತ್ತು. ಈ ಯೋಜನೆ ವಿಳಂಬ ಆಗಿರುವುದರಿಂದ ಬೇಸಿಗೆಯಲ್ಲಿ ಕುಡಿಯುವ ನೀರಿಗಾಗಿ ಪರದಾಡುವಂತಾಗುತ್ತದೆ. ಹೀಗಾಗಿ ಕೂಡಲೇ ಈ ಯೋಜನೆಯ ಕಾಮಗಾರಿಯನ್ನು ಪೂರ್ಣ ಗೊಳಿಸಬೇಕು. ಇಲ್ಲದಿದ್ದರೆ ಗುದ್ದಲಿ– ಸಲಿಕೆ ತೆಗೆದುಕೊಂಡು ರೈತರೇ ಕಾಮಗಾರಿ ಆರಂಭಿಸಲು ಸಿದ್ಧರಿದ್ದೇವೆ. ಪ್ರಧಾನಿಗಳು ಈ ಯೋಜನೆ ಬಗ್ಗೆ ತಾತ್ಸಾರ ತಾಳಿದರೆ, ಇನ್ನೊಂದು ‘ನರಗುಂದ ಬಂಡಾಯ’ವನ್ನು ಎದುರಿಸಬೇಕಾದೀತು’ ಎಂದು ಅವರು ಎಚ್ಚರಿಸಿದರು.

‘ಸಂವಿಧಾನದ 262ನೇ ಕಲಂ ಅಡಿ ರಾಜ್ಯ ಸರ್ಕಾರವು ನದಿ ನೀರಿನ ಜೋಡಣೆಯ ಕುಡಿಯುವ ನೀರಿನ ಯೋಜನೆಯ ಪ್ರಸ್ತಾವವನ್ನು ಕೇಂದ್ರಕ್ಕೆ ಸಲ್ಲಿಸಬೇಕು. 263ನೇ ಕಲಂ ಅಡಿ ಪ್ರಧಾನಿ ಮಧ್ಯಸ್ಥಿಕೆ ವಹಿಸಿ ಈ ಯೋಜನೆಗೆ ಅನುಮತಿ ನೀಡಬೇಕು. ಆದರೆ, ರಾಜಕೀಯ ಕಾರಣಗಳಿಗಾಗಿ ಯೋಜನೆಗೆ ಅಡೆ ತಡೆಗಳು ಬರುತ್ತಿವೆ’ ಎಂದು ಅಭಿಪ್ರಾಯ ಪಟ್ಟರು.

‘ಮಹಾದಾಯಿ ನದಿ ತಿರುವು ಕುಡಿಯುವ ನೀರಿನ ಯೋಜನೆಗೆ ಸುಪ್ರೀಂ ಕೋರ್ಟ್‌ ತಡೆಯಾಜ್ಞೆ ನೀಡಿಲ್ಲ. ಅಲ್ಲದೇ 2013ರೊಳಗೆ ಎಲ್ಲ ನದಿ ಜೋಡಣೆ ಯೋಜನೆಗಳನ್ನು ಮುಗಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚನೆಯನ್ನೂ ನೀಡಿದೆ’ ಎಂದು ಸ್ಪಷ್ಟಪಡಿಸಿದ ಅವರು, ‘ರಾಜಕಾರಣಿಗಳಿಂದಾಗಿಯೇ ಮಹದಾಯಿ ನ್ಯಾಯಾಧಿಕರಣ ರಚನೆಯಾಗಿದೆ. ರಾಜ್ಯದ ಒಬ್ಬ ಸಂಸದರಿಗೂ ಮಹಾದಾಯಿ ಯೋಜನೆ ಬಗ್ಗೆ ಆಸಕ್ತಿಯೂ ಇಲ್ಲ; ಮಾಹಿತಿಯೂ ಇಲ್ಲ’ ಎಂದು ಆರೋಪಿಸಿದರು.

‘ಮಹಾದಾಯಿ ಕಣಿವೆ ಪ್ರದೇಶಕ್ಕೆ ಭೇಟಿ ನೀಡುವ ನ್ಯಾಯಾಧಿಕರಣ ತಂಡವನ್ನು ಭೇಟಿ ಮಾಡಲು ನಮಗೆ ಅವಕಾಶ ನೀಡಿದರೆ, ಯೋಜನೆ ಮಹತ್ವದ ಕುರಿತು ಮಾಹಿತಿ ನೀಡುತ್ತೇವೆ. ನ್ಯಾಯಮಂಡಳಿವನ್ನು ಗೌರವಿಸುತ್ತೇವೆ. ಆದರೆ, ಇದರಿಂದ ರಾಜ್ಯಕ್ಕೆ ನ್ಯಾಯ ಸಿಗುತ್ತದೆ ಎಂಬ ವಿಶ್ವಾಸ ನಮಗೆ ಇಲ್ಲ’ ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.

ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ಅಶೋಕ ಪೂಜಾರಿ, ‘ಕಳಸಾ– ಬಂಡೂರಿ ಯೋಜನೆ ಪೂರ್ಣಗೊಳಿಸಲು ರಾಜ್ಯ ಸರ್ಕಾರ ಪ್ರಾಮಾಣಿಕ ಪ್ರಯತ್ನ ನಡೆಸಿಲ್ಲ; ಕೇಂದ್ರ ಸರ್ಕಾರವೂ ಈ ವಿಷಯದಲ್ಲಿ ಮಲತಾಯಿ ಧೋರಣೆ ಅನುಸರಿಸಿದೆ. ಈ ಯೋಜನೆಗೆ ಕೇಂದ್ರ ಸರ್ಕಾರದಿಂದ ಒಪ್ಪಿಗೆ ಸಿಗಬೇಕಾಗಿದೆ. ಹೀಗಾಗಿ ಬೆಳಗಾವಿಯ ಕನ್ನಡ ಸಾಹಿತ್ಯ ಭವನದಲ್ಲಿ ಡಿ. 22ರಂದು ಈ ಯೋಜನೆಗಾಗಿ ಹೋರಾಟ ನಡೆಸಿದ ವಿವಿಧ ಸಂಘಟನೆಗಳ ಸಭೆ ನಡೆಸಿ ಕೇಂದ್ರ ಕ್ರಿಯಾ ಸಮಿತಿ ರಚಿಸಲಾಗು ವುದು. ಒಂದು ನಿರ್ದಿಷ್ಟ ದಿನಾಂಕವನ್ನು ನಿಗದಿಪಡಿಸಿ ಸಂಸತ್ತಿನ ಎದುರು ಧರಣಿ ನಡೆಸಿ ಪ್ರಧಾನಿಗೆ ನಮ್ಮ ಹೋರಾಟದ ಕೂಗನ್ನು ತಲುಪಿಸಲಾಗುವುದು. ಇದರಲ್ಲಿ ಪಾಲ್ಗೊಳ್ಳುವಂತೆ ರಾಜ್ಯದ ಸಂಸದರು ಹಾಗೂ ಶಾಸಕರನ್ನು ಆಹ್ವಾನಿಸಲಾಗು ವುದು’ ಎಂದು ತಿಳಿಸಿದರು. ರೈತ ಮುಖಂಡರಾದ ಕಲ್ಯಾಣ ರಾವ್‌ ಮುಚಳಂಬಿ, ಟಿ.ಟಿ. ಮುರಕಟ್ನಾಳ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT