ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಾದರಿ ಕ್ಷೇತ್ರ, ಪ್ರವಾಸಿ ಕೇಂದ್ರವಾಗಿಸುವ ಕನಸು’

Last Updated 15 ಏಪ್ರಿಲ್ 2014, 6:44 IST
ಅಕ್ಷರ ಗಾತ್ರ

ಹಾವೇರಿ: ವಿದ್ಯಾರ್ಥಿ ದಿಸೆಯಿಂದ ರಾಜಕೀಯ ಕ್ಷೇತ್ರಕ್ಕೆ ಪದಾರ್ಪಣೆ, ಎನ್‌ಎಸ್‌ಯುಐ ರಾಜ್ಯ, ರಾಷ್ಟ್ರೀಯ ಘಟಕದ ಅಧ್ಯಕ್ಷ, ರಾಷ್ಟ್ರೀಯ ಯುವ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ, ಎರಡು ಬಾರಿ ಎಂಎಲ್‌ಸಿ, ಸರ್ಕಾರದ ಮುಖ್ಯ ಸಚೇತಕ, ಕ್ರೀಡಾ ಮತ್ತು ಯುವಜನ ಸೇವಾ ಸಚಿವಾಲಯದ ನೆಹರೂ ಯುವ ಕೇಂದ್ರದ ಮಹಾನಿರ್ದೇಶಕ ಹಾಗೂ ಈ ಹುದ್ದೆ ಅಲಂಕರಿಸಿದ ಪ್ರಥಮ ಕನ್ನಡಿಗ ಎಂಬ ಹೆಗ್ಗಳಿಕೆಗೆ ಸಲೀಂ ಪಾತ್ರರಾಗಿದ್ದಾರೆ.ಕ್ರಿಯಾಶೀಲ ಯುವ ರಾಜಕಾರಣಿ ಎನಿಸಿಕೊಂಡ ಬೆರಳೆಣಿಕೆ ರಾಜಕಾರಣಿ ಗಳಲ್ಲಿ ಸಲೀಂ ಅಹ್ಮದ್‌ ಮೇಲ್ಪಂಕ್ತಿ ಯಲ್ಲಿದ್ದಾರೆ.

ದೇಶದಲ್ಲಿಯೇ ಹಾವೇರಿ ಮತ ಕ್ಷೇತ್ರವನ್ನು ಮಾದರಿ ಕ್ಷೇತ್ರ ಮಾಡಬೇಕೆಂಬ ಮಹತ್ವಕಾಂಕ್ಷೆ ಯೊಂದಿಗೆ ಎರಡನೇ ಬಾರಿಗೆ ಹಾವೇರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಅದೃಷ್ಟ ಪರೀಕ್ಷೆಗೆ ಮುಂದಾಗಿರುವ ಸಲೀಂ  ತಮ್ಮ ಕನಸು, ಕ್ಷೇತ್ರದ ಜತೆಗಿನ ಸಂಬಂಧ, ಮತದಾರರ ಜತೆಗಿನ ಒಡನಾಟದ ಕುರಿತು  ‘ಪ್ರಜಾವಾಣಿ’ಯೊಂದಿಗೆ ಹಂಚಿಕೊಂಡ ಅನಿಸಿಕೆಗಳ ಆಯ್ದ ಭಾಗಗಳು ಇಲ್ಲಿವೆ.

ಪ್ರಜಾವಾಣಿ: ಮತ್ತೊಂದು ಬಾರಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದೀರಿ, ಈ ಬಾರಿ ಮತದಾರರಿಗೆ ಏನನ್ನು ಹೇಳಿ ಮತ ಕೇಳುತ್ತಿದ್ದೀರಿ?
ಸಲೀಂ ಅಹ್ಮದ್‌: ಅಂಕಿ, ಸಂಖ್ಯೆಗಳ ಆಟದಲ್ಲಿ ತಾವು ಸ್ಪರ್ಧಿಸಿದ ಮೊದಲ ಚುನಾವಣೆಯಲ್ಲಿ  ಸೋತಿರಬಹುದು. ಆದರೆ, ಕ್ಷೇತ್ರದ ಮತದಾರರು ನನ್ನನ್ನು ಪ್ರೀತಿ, ವಿಶ್ವಾಸದಿಂದ ಕಂಡಿದ್ದಾರೆ. 3.42 ಲಕ್ಷಕ್ಕೂ ಹೆಚ್ಚು ಅಂದರೆ ಶೇ 39 ರಷ್ಟು ಮತಗಳನ್ನು ನೀಡಿ ನನ್ನ ನಿರೀಕ್ಷೆಗೂ ಮೀರಿ ಬೆಂಬಲಿಸಿದ್ದಾರೆ. ಅವರ ಬೆಂಬಲ, ಪ್ರೀತಿ, ವಿಶ್ವಾಸವೇ ನನ್ನನ್ನು ಎರಡನೇ ಬಾರಿಗೆ ಸ್ಪರ್ಧಿಸುವಂತೆ ಮಾಡಿದೆ. ಕಳೆದ ಬಾರಿ ಕ್ಷೇತ್ರದ ಜನರ ಮತ ಪಡೆದು ಆಯ್ಕೆಯಾದ ಸಂಸದರು, ಜನರ ಕಷ್ಟಗಳಿಗೆ ಸ್ಪಂದಿಸುವುದಿರಲಿ, ಅವರ ಮುಖವನ್ನು ತೋರಿಸಲು ಕ್ಷೇತ್ರಕ್ಕೆ ಬಂದಿಲ್ಲ. ಅಂತಹ ಸಂಸದ ನಾನಾಗು ವುದಿಲ್ಲ. ಜಿಲ್ಲೆಯ ಅಭಿವೃದ್ಧಿಗೆ ನನ್ನದೇ ಆದ ಕನಸುಗಳಿವೆ. ಅವುಗಳನ್ನು ಸಾಕಾರ ಮಾಡಲು ತಮ್ಮ ಮತವನ್ನು ನನಗೆ ಕೊಡುವ ಮೂಲಕ ನನಗೊಂದು ಅವ ಕಾಶ ನೀಡುವಂತೆ ಕೇಳಿಕೊಳ್ಳುತ್ತಿದ್ದೇನೆ.

ಪ್ರ: ಟಿಕೆಟ್‌ ತರಲು ತೀವ್ರ ಪೈಪೋಟಿ ನಡೆಸಿರುವುದು, ಕೊನೆಗಳಿಗೆಯಲ್ಲಿ ಟಿಕೆಟ್‌ ನೀಡಿರುವುದು ಹಿನ್ನಡೆ ಯಾಗಲಿದೆಯೇ?
ಸ.ಅ.: ಕಾಂಗ್ರೆಸ್‌ ಶತಮಾನ ಇತಿಹಾಸ ಇರುವ ದೊಡ್ಡ ಪಕ್ಷ. ಬೇರೆ ಪಕ್ಷಗಳು ಅಭ್ಯರ್ಥಿಗಳಿಗಾಗಿ ಹುಡುಕಾಟ ನಡೆಸಿದರೆ, ಕಾಂಗ್ರೆಸ್‌ನಲ್ಲಿ ಅರ್ಹ ಆಕಾಂಕ್ಷಿಗಳು ದೊಡ್ಡ ಸಾಲು ಇರುತ್ತದೆ. ಅದರಂತೆ ಹಾವೇರಿ ಕ್ಷೇತ್ರಕ್ಕೆ ನಾನು ಹಾಗೂ ಗದುಗಿನ ಡಿ.ಆರ್‌.ಪಾಟೀಲರು ಕೂಡಾ ಆಕಾಂಕ್ಷಿಗಳಾಗಿದ್ದೆವು. ಆದರೆ, ಟಿಕೆಟ್‌ ಪಡೆಯಲು ನಮ್ಮಿಬ್ಬರಲ್ಲಿ ನಡುವೆ ಯಾವುದೇ  ಪೈಪೋಟಿ ಇರಲಿಲ್ಲ. ಪಕ್ಷ ಯಾರಿಗೆ ಟಿಕೆಟ್‌ ನೀಡಿ ದರೂ ಕೆಲಸ ಮಾಡುವ ಜಾಯಮಾನ ನಮ್ಮ (ಕಾಂಗ್ರೆಸ್‌ನ)ದು. ಡಿ.ಆರ್‌. ಪಾಟೀಲರು ಗದಗ ಜಿಲ್ಲೆಯಲ್ಲಿ ತಾವೇ ಅಭ್ಯರ್ಥಿ ಎನ್ನುವ ರೀತಿಯಲ್ಲಿ ಪ್ರಚಾರ ನಡೆಸಿದ್ದಾರೆ. ಇನ್ನೂ ಟಿಕೆಟ್‌ ನೀಡುವುದು ಅಭ್ಯರ್ಥಿಗೆ ವಿಳಂಬವೇ ಹೊರತು ಕಾರ್ಯಕರ್ತರಿಗೆ, ಮುಖಂಡರಿಗೆ ಅಲ್ಲ. ಏಕೆಂದರೆ, ಕಾಂಗ್ರೆಸ್‌ನಲ್ಲಿ ಪಕ್ಷವೇ ಮುಖ್ಯ ಹೊರತು ವ್ಯಕ್ತಿಯಲ್ಲ. ಲೋಕಸಭಾ ಚುನಾವಣೆ ಘೋಷಣೆಯಾಗುತ್ತಿದ್ದಂತೆ ಪಕ್ಷದ ಕಾರ್ಯಕರ್ತರು, ಮುಖಂಡರು, ಶಾಸಕರು ಪಕ್ಷದ ಪರ ಪ್ರಚಾರ ಆರಂಭಿಸಿರುವುದು ಎಲ್ಲರಿಗೂ ಗೊತ್ತಿ ರುವ ಸಂಗತಿ. ಹೀಗಾಗಿ ಈ ಎರಡೂ ಕಾರಣಗಳು  ಯಾವುದೇ  ಹಿನ್ನಡೆ ಯನ್ನುಂಟು ಮಾಡುವ ಪ್ರಮೆಯೇ ಇಲ್ಲ.

ಪ್ರ:ಕೆಜೆಪಿ–ಬಿಜೆಪಿ ಒಂದಾಗಿರುವುದು ತಮಗೆ ತೊಡಕುಂಟಾಗಲಿದೆ ಎನ್ನುತ್ತಾರಲ್ಲ?
ಸ.ಅ.: ಕಾಂಗ್ರೆಸ್‌ ವ್ಯಕ್ತಿಗಳ ಪಕ್ಷವಲ್ಲ, ಕಾರ್ಯಕರ್ತರ ಪಕ್ಷ. ಇಲ್ಲಿ ಬೇರೆ ಪಕ್ಷಗಳು ಒಡೆದು ಹೋದವು, ಕೂಡಿ ಕೊಂಡವು ಎಂಬುದರ ಬಗ್ಗೆ ತಲೆ ಕೆಡಿಸಿ ಕೊಳ್ಳುವುದಿಲ್ಲ. ನಿಜವಾಗಿಯೂ ತೊಡಕು ಆಗುವುದು ಬಿಜೆಪಿ ಅಭ್ಯರ್ಥಿಗೆ ಹೊರತು ನನಗಲ್ಲ. ಬಿಜೆಪಿ ಒಡೆದು ಕೆಜೆಪಿ ಏಕಾಯಿತು? ಮತ್ತೆ ಅವೆರಡು ಒಂದಾಗಿ ಬಿಜೆಪಿ ಆಗಿದ್ದು ಏಕೆ ಎಂಬುದನ್ನು ಮತದಾರರು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಆ ಪಕ್ಷಗಳಲ್ಲಿ ಯಾವುದೇ ತತ್ವ ಸಿದ್ಧಾಂತಗಳಿಲ್ಲ. ಜನಪರ ಕಾಳಜಿಯಂತೂ ಮೊದಲೇ ಇಲ್ಲ. ಅವುಗಳಿಗೆ ಅಧಿಕಾರ ದಾಹವೇ ಮುಖ್ಯ ಎಂಬುದಕ್ಕೆ ಅವು ಇಬ್ಭಾಗ ವಾಗಿರುವ ವೇಗದಲ್ಲಿ ಒಂದಾಗಿರುವುದೇ ಸಾಕ್ಷಿ.

ಪ್ರ: ನೀವು ಹೊರಗಿನವರು ಕ್ಷೇತ್ರದ ಜನತೆಗೆ ಪರಿಚಯವೇ ಇಲ್ಲ ಎಂಬ ಆರೋಪಗಳಿವೆಯಲ್ಲ?
ಸ.ಅ.: ಈ ಆರೋಪವನ್ನು ವಿರೋಧ ಪಕ್ಷಗಳು ಮಾಡುತ್ತಿವೆ ಹೊರತೂ ಕ್ಷೇತ್ರದ ಮತದಾರರಲ್ಲ. ಕಳೆದ 18 ವರ್ಷಗಳಿಂದ ನಾನು, ನನ್ನ ಕುಟುಂಬ ಹಾವೇರಿಯ ಮತದಾರರಾಗಿದ್ದೇವೆ. ಅಮೇರಿಕದಲ್ಲಿಯೇ 10 ವರ್ಷ ವಾಸಿಸಿದರೆ ಅಲ್ಲಿನ ನಾಗರಿಕತ್ವ ನೀಡ ಲಾಗುತ್ತದೆ. 18 ವರ್ಷದಿಂದ ಇಲ್ಲಿನ ಮತದಾರನಾದ ನಾನು ಹೇಗೆ ಹೊರಗಿನವನಾಗುತ್ತೇನೆ ಎಂಬುದನ್ನು ವಿರೋಧ ಪಕ್ಷಗಳೇ ಹೇಳಬೇಕು.

ಅದು ಅಲ್ಲದೇ ಎರಡು ಬಾರಿ ವಿಧಾನ ಪರಿಷತ್‌ ಸದಸ್ಯನಾಗಿದ್ದ ಸಂದರ್ಭದಲ್ಲಿ ಬಂದ ಅನುದಾನವನ್ನು ಈ ಕ್ಷೇತ್ರದ ಅಭಿವೃದ್ಧಿಗೆ ಬಳಕೆ ಮಾಡಿದ್ದೇನೆ. ಇನ್ನೂ ಕ್ಷೇತ್ರದ ಜನತೆಗೆ ಪರಿಚಯ ಇಲ್ಲದಿದ್ದರೇ, ಕಳೆದ ಲೋಕಸಭಾ ಚುನಾವಣೆಯಲ್ಲಿ 3.42 ಲಕ್ಷ  ಮತದಾರರು ನನಗೆ ಮತ ನೀಡುತ್ತಿದ್ದರೇ ಎಂಬುದನ್ನು ಆರೋಪ ಮಾಡುವವವರು ಅರ್ಥ ಮಾಡಿ ಕೊಳ್ಳಬೇಕು. ನನ್ನ ಜನ್ಮಭೂಮಿ ಬೆಂಗಳೂರು,  ಕರ್ಮಭೂಮಿ ಹಾವೇರಿ.

ಪ್ರ: ತಮಗೆ ಗೆಲುವಿನ ವಿಶ್ವಾಸ ವಿದೆಯೇ ಇದ್ದರೇ, ಅದಕ್ಕಿರುವ ಪೂರಕ ಅಂಶಗಳಾವವು?
ಸ.ಅ: ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ನಂತರ ಕ್ಷೇತ್ರದಲ್ಲಿ ಸುತ್ತಾಡು ವಾಗ ಜನರು ತೋರಿಸುವ ಪ್ರೀತಿ, ಅಪಾರ ಬೆಂಬಲ ನನ್ನ ಗೆಲುವಿನ ವಿಶ್ವಾಸ ಇಮ್ಮಡಿಸಿದೆ. ಕ್ಷೇತ್ರದ ಮತದಾರರು ಈ ಬಾರಿ ಕೈ ಬಿಡುವುದಿಲ್ಲ ಎಂಬ ಅಚಲ ವಿಶ್ವಾಸ ನನ್ನಲ್ಲಿದೆ. ಅದು ಅಲ್ಲದೇ ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳ ಪೈಕಿ ಏಳು ಜನ ಕಾಂಗ್ರೆಸ್‌ ಶಾಸಕರಿ ದ್ದಾರೆ. ಅವರಲ್ಲಿ ಒಬ್ಬರು ಸಚಿವರಿ ದ್ದಾರೆ. ಅವರೆಲ್ಲರೂ ಪಕ್ಷದ ಮುಖಂಡ ರೊಡನೆ ಸೇರಿ ಹಗಲಿರುಳೆನ್ನದೇ ಶ್ರಮವಹಿಸಿ ನನ್ನ ಪರ ಕೆಲಸ ಮಾಡುತ್ತಿ ದ್ದಾರೆ. ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವ ಕಾಂಗ್ರೆಸ್‌ ಸರ್ಕಾರ ಕಳೆದ 10 ತಿಂಗಳಿನಿಂದ ಜನಪರ ಯೋಜನೆಗಳ ಮೂಲಕ ಜನಪ್ರಿಯತೆ ಪಡೆದಿದೆ. ಕೇಂದ್ರ ಸರ್ಕಾರದ ಹತ್ತು ವರ್ಷದ ಸಾಧನೆಗಳು ನನ್ನ ಗೆಲುವಿಗೆ ಶ್ರೀರಕ್ಷೆಯಾಗಲಿವೆ.

ಪ್ರ: ಸಂಸದರಾದರೆ ಕ್ಷೇತ್ರದ ಅಭಿವೃದ್ಧಿಗೆ ತಮ್ಮ ಆದ್ಯತೆಗಳೇನು?
ಸ.ಅ.: ಕ್ಷೇತ್ರದಲ್ಲಿ ನಾಲ್ಕು ನದಿಗಳು ಹರಿಯುತ್ತವೆ. ನೈಸರ್ಗಿಕ ಸಂಪನ್ಮೂಲ ಗಳಲ್ಲೊಂದಾದ ನೀರು ಹೇರಳವಾಗಿ ದೊರೆತರೂ, ಜಿಲ್ಲೆಯ ಜನರಿಗೆ ಶುದ್ಧ ಹಾಗೂ ಸಮರ್ಪಕ ಕುಡಿಯುವ ನೀರು ಸಿಗುತ್ತಿಲ್ಲ. ಅದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವುದು, ಸಮಗ್ರ ನೀರಾವರಿಗೆ ಯೋಜನೆ ತರುವುದು, ಬಹುದಿನಗಳಿಂದ ನನೆಗುದಿಗೆ ಬಿದ್ದಿರುವ ರೇಲ್ವೆ ಯೋಜನೆಗಳಿಗೆ ಪುನಶ್ಚೇತನ ನೀಡುವುದರ ಜತೆಗೆ ಆದಷ್ಟು ಬೇಗ ಕಾರ್ಯಗತಗೊಳಿಸುವುದು. ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಯನ್ನು ಅಂತರರಾಷ್ಟ್ರೀಯ ಗುಣಮಟ್ಟದಲ್ಲಿ ಉನ್ನತೀಕರಿಸುವುದು, ಯುವ ಜನರಿಗೆ ಉದ್ಯೋಗ ಹಾಗೂ ರೈತ ಬೆಳೆದ ಕೃಷಿ ಉತ್ಪನ್ನಗಳಿಗೆ ಅನುಕೂಲವಾಗುವ ಉದ್ಯಮಗಳ ಸ್ಥಾಪನೆಗೆ ಒತ್ತು ನೀಡುವುದು, ಕೋಮು ಸಾಮರಸ್ಯಕ್ಕೆ ಹೆಸರು ಪಡೆದ ಜಿಲ್ಲೆಯನ್ನು ಭಾವೈಕ್ಯದ ಪ್ರವಾಸಿ ಕೇಂದ್ರವನ್ನಾಗಿ ಅಭಿವೃದ್ಧಿ ಪಡಿಸುವುದು ನನ್ನ ಆದ್ಯತೆಗಳಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT