ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಾನವ ಹಕ್ಕುಗಳ ಜಾಗೃತಿ ಅಗತ್ಯ’

Last Updated 11 ಡಿಸೆಂಬರ್ 2013, 5:37 IST
ಅಕ್ಷರ ಗಾತ್ರ

ಧಾರವಾಡ: ‘ಭಾರತೀಯರ ಬದುಕಿನಲ್ಲಿ ಮಾನವ ಹಕ್ಕುಗಳ ಕಲ್ಪನೆ ಹೊಸದೇನಲ್ಲ. 12 ನೇ ಶತಮಾನದಲ್ಲಿಯೇ ಬಸವಣ್ಣ ಸಮಾನತೆ, ಸಹಬಾಳ್ವೆ, ಸ್ವಾತಂತ್ರ್ಯ, ಅಸ್ಪೃಶ್ಯತಾ ನಿವಾರಣೆ ಕುರಿತು ಪ್ರತಿಪಾದನೆ ಮಾಡಿದ್ದರಲ್ಲದೇ ಅದನ್ನು ಅನುಷ್ಠಾನಕ್ಕೆ ತರಲು ಪ್ರಯತ್ನಿಸಿದ್ದರು. ಅವರೊಬ್ಬ ಮಾನವ ಹಕ್ಕುಗಳ ದೊಡ್ಡ ಪ್ರತಿಪಾದಕರು’ ಎಂದು ಹಿರಿಯ ವಕೀಲ ಎಂ.ಸಿ.ಬಂಡಿ ಅಭಿಪ್ರಾಯಪಟ್ಟರು.

ಇಲ್ಲಿನ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಹಯೋಗದಲ್ಲಿ ‘ಮಾನವ ಹಕ್ಕುಗಳ ದಿನ’ದ ಅಂಗವಾಗಿ ಮಂಗಳವಾರ ಆಯೋ­ಜಿಸಿದ್ದ ಕಾನೂನು ಜಾಗೃತಿ ಕಾರ್ಯ­ಕ್ರಮದಲ್ಲಿ ಮಾತನಾಡಿದ ಅವರು, ‘ಬಸವಣ್ಣನವ­ರಂತೆ ಮಹಾತ್ಮಾ ಗಾಂಧಿ, ಅಂಬೇಡ್ಕರ ಅವರು ಕೂಡಾ ಮನುಷ್ಯ ಸಮಾಜದಲ್ಲಿ ಘನತೆಯಿಂದ ಬದುಕಲು ಅಗತ್ಯವಾದ ಹಕ್ಕುಗಳ ಕುರಿತು ಪ್ರತಿಪಾದಿಸಿದ್ದಾರೆ.

ಮಾನವ ಹಕ್ಕುಗಳು ಎಂದರೆ ಯಾರೂ ಬದಲಾಯಿಸಲಾರದ, ಆತನ ಹುಟ್ಟಿನೊಂದಿಗೆ ಬಂದಂಥ ಹಕ್ಕುಗಳು. ಇವು­ಗಳನ್ನು ನಮ್ಮ ಸಂವಿಧಾನದಲ್ಲಿ ಮೂಲ ಹಕ್ಕುಗ­ಳಾಗಿ ಮತ್ತು ನಿರ್ದೇಶನ ತತ್ವಗಳಡಿ ಅಳವಡಿಸ­ಲಾಗಿದೆ. ಯಾವುದೇ ಹಕ್ಕಿಗೆ ಚ್ಯುತಿ ಬಂದಾಗ ನ್ಯಾಯಾಲಯದ ಮೊರೆ ಹೋಗು­ವುದು ಮೂಲ ಹಕ್ಕು ಎಂದೇ ಪರಿಗಣಿಸಲಾಗಿದೆ’ ಎಂದರು.

‘ಬದಲಾಗುತ್ತಿರುವ ಸಂದರ್ಭದಲ್ಲಿ ಮೂಲ ಹಕ್ಕುಗಳ ಉಲ್ಲಂಘನೆ ಎಲ್ಲೆಡೆ ಕಂಡು ಬರುತ್ತಿದೆ. ಇದರ ವಿರುದ್ಧ ಜಾಗೃತಿ ಅವಶ್ಯ. ನಮ್ಮ ಹಕ್ಕುಗಳ ಕುರಿತು ನಾವು ಜಾಗೃತರಾದಷ್ಟು ನಾವು ಹೆಚ್ಚು ಸಾಂಸ್ಕೃತಿಕವಾಗಿ ಮುಂದುವರಿಯಲು, ನಾಗರಿಕ­ರಾಗಲು ಸಾಧ್ಯ. ಜೊತೆಗೆ ಇನ್ನೊಬ್ಬರ ಬದುಕನ್ನು ಸುಂದರಗೊಳಿಸಲು ಸಾಧ್ಯ. ಈ ನಿಟ್ಟಿನಲ್ಲಿ ಯುವ­ಪೀಳಿಗೆ ಜವಾಬ್ದಾರಿ ಹೆಚ್ಚಿನದು’ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾಧಿಕಾರಿ ಸಮೀರ್‌ ಶುಕ್ಲಾ, ‘ಸಮಾಜದಲ್ಲಿ ಶೋಷಣೆ ಹೋಗಲಾಡಿಸಲು ಮತ್ತು ಮನುಷ್ಯ ಘನತೆ­ಯಿಂದ ಬದುಕಲು ಹಕ್ಕುಗಳು ಅಗತ್ಯ. ಇಂದಿನ ಸಮಾಜದಲ್ಲಿ ಹಕ್ಕುಗಳ ಉಲ್ಲಂಘನೆ ಆಗುತ್ತಿದೆ. ಕಾನೂನಿನಡಿಯಲ್ಲಿ ಶಿಕ್ಷಿಸುವ ಮೂಲಕ ಮತ್ತು ಜನರಲ್ಲಿ ಜಾಗೃತಿ ಮೂಡಿಸುವ ಮೂಲಕ ಅದನ್ನು ತಡೆಯಲು ಸಾಧ್ಯವಿದೆ’ ಎಂದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ನ್ಯಾಯಾಧೀಶ ಎಂ.ರಮೇಶರಾವ್, ‘ಹಕ್ಕುಗಳ ಉಲ್ಲಂಘನೆ ಆದ ನಂತರ ಪರಿಹಾರ ನೀಡುವುದಕ್ಕಿಂತ, ಉಲ್ಲಂಘನೆ ಆಗ­ದಂಥ ವಾತಾವರಣ ನಿರ್ಮಾಣ ಮಾಡು­ವುದು ಅಗತ್ಯ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಕಾನೂನಿನ ಪ್ರಾಥಮಿಕ ಅರಿವು ಹೊಂದಿರಬೇಕಾದದ್ದು ಅವಶ್ಯಕ’ ಎಂದರು.

ಜಿಲ್ಲಾ ಪಂಚಾಯ್ತಿ ಸಿಇಒ ಪಿ.ಎ.ಮೇಘಣ್ಣ­ವರ, ಪೊಲೀಸ್‌ ಆಯುಕ್ತ ಬಿ.ಎ.ಪದ್ಮನಯನ, ಎಸ್‌ಪಿ ಬಿ.ಎಸ್‌.ಲೋಕೇಶ­ಕುಮಾರ, ವಕೀಲರ ಸಂಘದ ಅಧ್ಯಕ್ಷ ವಿ.ಡಿ.­ಕಾಮರೆಡ್ಡಿ, ಹೊಸಮನಿ ಸಿದ್ದಪ್ಪ.ಎಚ್. ವಕೀಲರಾದ ಬಿ.ಎ.ಸಂಗಟಿ, ಪ್ರಫುಲ್ಲಾ ನಾಯಕ, ಜಿಲ್ಲೆಯ ವಿವಿಧ ನ್ಯಾಯಾಲುಗಳ ನ್ಯಾಯಾಧೀಶರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT