ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮೂಲಸೌಕರ್ಯಕ್ಕೆ ಆದ್ಯತೆ ನೀಡಿ’

ಯಾದಗಿರಿ:ಜಿಲ್ಲಾ ಉಸ್ತುವಾರಿ ಸಚಿವರ ಸಭೆ
Last Updated 25 ಸೆಪ್ಟೆಂಬರ್ 2013, 6:52 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲೆಯಲ್ಲಿ ಇತ್ತೀಚಿಗೆ ಅತಿವೃಷ್ಟಿಯಿಂದ ಹಾನಿಗೆ ಒಳಗಾದಲ್ಲಿ ಮೂಲಸೌಕರ್ಯಕ್ಕೆ ಸಂಬಂಧಿಸಿದ ಕಾಮಗಾರಿಗಳನ್ನು ಆದ್ಯತೆಯ ಮೇಲೆ ಕೈಗೆತ್ತಿಕೊಂಡು ಪೂರ್ಣಗೊಳಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಬಾಬು­ರಾವ ಚಿಂಚನಸೂರ ಸೂಚಿಸಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣ­ದಲ್ಲಿ ಮಂಗಳವಾರ ಮಧ್ಯಾಹ್ನ ವಿವಿಧ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಹಾನಿಗೆ ಒಳಗಾದ ರಸ್ತೆ, ಕೆರೆಗಳು, ಕುಡಿಯುವ ನೀರಿನ ಯೋಜನೆಗಳು, ಸೇತುವೆಗಳು ಸೇರಿದಂತೆ ಮೂಲ ಸೌಲಭ್ಯಕ್ಕೆ ಸಂಬಂಧಪಟ್ಟ ಕಾಮಗಾರಿ­ಗ­ಳನ್ನು ಆದ್ಯತೆ ಮೇಲೆ ಕೈಗೊಳ್ಳಬೇಕು. ತಮ್ಮ ಇಲಾಖೆ ವ್ಯಾಪ್ತಿಯಲ್ಲಿ ಇರುವ ಅನುದಾನವನ್ನು ಬಳಕೆ ಮಾಡಬೇಕು ಎಂದು ಸೂಚಿಸಿದರು.

ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಆದ ಬೆಳೆಹಾನಿಗೆ ಸಂಬಂಧಪಟ್ಟಂತೆ ಕೃಷಿ ಇಲಾಖೆ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಜಂಟಿ ಸಮೀಕ್ಷೆ ನಡೆಸಿ ತಕ್ಷಣ ವರದಿ ಸಲ್ಲಿಸಬೇಕು. ಆ ವರದಿ ಆಧಾರದಲ್ಲಿ ಸರ್ಕಾರದಿಂದ ಅವಶ್ಯಕ ಪರಿಹಾರ ಮಂಜೂರಾತಿ ಮಾಡಲು ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.

ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಮನೆ ಹಾನಿ ಪ್ರಕರಣಗಳಲ್ಲಿ ಅರ್ಹ ಫಲಾ­ನುಭವಿಗಳಿಗೆ ಪರಿಹಾರ ವಿತರಿಸಬೇಕು. ಲೋಕೋಪಯೋಗಿ ಇಲಾಖೆಯಿಂದ ಮತ್ತು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಕಾಮಗಾರಿಗಳನ್ನು ಪರಿಣಾಮ­ಕಾರಿ­ಯಾಗಿ ಹಮ್ಮಿಕೊಳ್ಳಬೇಕು. ಅದರಂತೆ ಈ ಇಲಾಖೆಗಳಿಂದ ವಿವಿಧ ಗ್ರಾಮ­ಗಳಲ್ಲಿ ಕೈಗೊಳ್ಳಲಾಗುವ ಕಾಮಗಾರಿ­ಗಳ ಬಗ್ಗೆ ಪರಿಶೀಲನೆ ಸಹ ನಡೆಸಲಾ­ಗುವುದು ಎಂದ ಅವರು, ತೊಂದರೆ­ಯಲ್ಲಿರುವ ಗ್ರಾಮಗಳ ಜನರಿಗೆ ಶುದ್ಧ ಕುಡಿಯುವ ನೀರಿನ ಸೌಲಭ್ಯವನ್ನು ಕಲ್ಪಿಸುವಂತೆ ಹೇಳಿದರು.

ಜಿಲ್ಲೆಯಲ್ಲಿ ರೂ. 50 ಕೋಟಿ ವಿಶೇಷ ಅನುದಾನ ಹಾಗೂ ರೂ. 300 ಕೋಟಿ ವಿಶೇಷ ಅನುದಾನದಡಿ ಮಂಜೂರಾಗಿರುವ ಕಾಮಗಾರಿ­ಗಳ­ನ್ನು ತೀವ್ರಗತಿಯಲ್ಲಿ ಕೈಗೆತ್ತಿಕೊಂಡು ಪೂರ್ಣಗೊಳಿಸಬೇಕು. ಯಾದಗಿರಿ ನಗರದಲ್ಲಿನ  ಕೆರೆ ಉದ್ಯಾನ ಅಭಿವೃದ್ಧಿ, ನಗರದ ಬೆಟ್ಟದ ಕಾಮಗಾರಿ ಸೇರಿ­ದಂತೆ ಇತರೆ ಕಾಮಗಾರಿಗಳನ್ನು ಆದಷ್ಟು ಬೇಗನೆ ಪೂರ್ಣಗೊಳಿಸ­ಬೇಕು. ನಿರ್ಲಕ್ಷ್ಯ ತೋರುವ ಅಧಿಕಾರಿ­ಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮಕೈ­ಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಜಿಲ್ಲಾಧಿಕಾರಿ ಎಫ್.ಆರ್. ಜಮಾ­ದಾರ್ ಮಾತನಾಡಿ, ರೂ. 50 ಕೋಟಿ ಹಾಗೂ ರೂ. 300 ಕೋಟಿ ವಿಶೇಷ  ಅನುದಾನದ ಅಡಿಯಲ್ಲಿ ಕಾಮಗಾರಿ­ಗಳನ್ನು ಕೈಗೆತ್ತಿಕೊಳ್ಳುವಂತೆ ಸಂಬಂಧ­ಪಟ್ಟ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಅತಿವೃಷ್ಟಿ­ಯಿಂದ ಆದ ಬೆಳೆ ಹಾನಿಗೆ ಸಂಬಂ­ಧಿಸಿದ ಜಂಟಿ ಸಮೀಕ್ಷೆ ನಡೆಸುವಂತೆ ಕೃಷಿ ಇಲಾಖೆ ಅಧಿಕಾರಿಗಳಿಗೆ ಸೂಚಿಸ­ಲಾಗಿದ್ದು, ಮನೆ ಹಾನಿಗೆ ಸಂಬಂಧಿಸಿ­ದಂತೆ ಪರಿಹಾರವನ್ನು ತಕ್ಷಣ ವಿತರಿಸು­ವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಎಸ್.ಎ. ಜಿಲಾನಿ, ಸಚಿವರ ಆಪ್ತ­ಕಾರ್ಯದರ್ಶಿ ಧರ್ಮಪ್ಪ, ಜಿಲ್ಲಾ­ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT